ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯಿಂದ ಏನೋ ಸಾಧಿಸಿದಂತೆ ಹಾಗೂ ಶಿಕ್ಷಣ ವ್ಯವಸ್ಥೆಯು ಸಂಪೂರ್ಣವಾಗಿ ಬದಲಾವಣೆಯಾಗುತ್ತದೆ ಎಂದು ಭಾವಿಸುವುದು ಅಮಾಯಕತೆಯಾಗುತ್ತದೆ.
ಶಿಕ್ಷಣ ವ್ಯವಸ್ಥೆಯಲ್ಲಿ ಕುಸಿಯುತ್ತಿರುವ ಗುಣಮಟ್ಟ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗೆ ಸಚಿವ ಸ್ಥಾನದಲ್ಲಿ ಕುಳಿತ ವ್ಯಕ್ತಿ ಮಾತ್ರವೇ ಕಾರಣನಲ್ಲ, ಬದಲಿಗೆ ಪ್ರಸ್ತುತ ದೇಶವು ತೀವ್ರ ಆಡಳಿತಾತ್ಮಕ ವೈಫಲ್ಯದಿಂದ ಬಳಲುತ್ತಿದೆ. ದಶಕಗಳಿಂದ ದೇಶದಲ್ಲಿ ಬೇರೂರಿರುವ ರಾಜಕೀಯ ಶಕ್ತಿಗಳಿಗೆ ಪ್ರಾಮಾಣಿಕತೆಯಾಗಲಿ ಅಥವಾ ದಕ್ಷ ಆಡಳಿತಕ್ಕೆ ಅಗತ್ಯವಿರುವ ಕೌಶಲ್ಯಗಳಾಗಲಿ ಇಲ್ಲ ಎಂದು ರಾಜಕೀಯ ವಿಶ್ಲೇಷಕ ಸಂಜಯ್ ಕೆ. ಝಾ ‘ದಿ ವೈರ್’ ವೆಬ್‌ಸೈಟ್‌ನಲ್ಲಿ ಮಾಡಿದ ವಿಶ್ಲೇಷಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಲಡಾಖ್‌ನಲ್ಲಿ ಭಾರತದ ಭೂಮಿಯನ್ನು ಚೀನಾ ಆಕ್ರಮಿಸಿಕೊಳ್ಳುತ್ತಿದ್ದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೌನ ಪ್ರೇಕ್ಷಕರಂತೆ ನೋಡುತ್ತಿದ್ದಾರೆ, ಅಥವಾ ಭಾರತಕ್ಕೆ ನಷ್ಟವಾಗುತ್ತಿದ್ದರೂ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅಸಮರ್ಥರಾಗಿದ್ದಾರೆ ಎಂದು ಯಾರಾದರೂ ವಿಮರ್ಶಿಸಿದರೆ ಅದಕ್ಕಿಂತ ಅಮಾಯ ಕತೆ ಇನ್ನೊಂದಿಲ್ಲ. ಏಕೆಂದರೆ ದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರಕ್ಕೂ ಕರ್ತ, ಕರ್ಮ, ಕ್ರಿಯೆ ಎಲ್ಲವೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೇ ಆಗಿದ್ದಾರೆ.
ಅವರ ಕಣ್ಣಸನ್ನೆಯಲ್ಲೇ ಇಂತಹ ನಿರ್ಧಾರಗಳು ನಡೆಯುತ್ತವೆ ಮತ್ತು ಸಚಿವರು ಕೇವಲ ಅದನ್ನು ಜಾರಿಗೊಳಿಸುವ ಪಾತ್ರಧಾರಿಗಳು ಅಥವಾ ಚದುರಂಗದ ದಾಳಗಳಷ್ಟೇ. ಇತ್ತೀಚಿನ ವಿದ್ಯಾರ್ಥಿ ಚಳವಳಿಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆಯಲಾಗಿರುವುದೂ ಇದೇ ಸಾಲಿಗೆ ಸೇರುತ್ತದೆ. ಏಕೆಂದರೆ ಆ ಇಲಾಖೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮೋದಿ ಮತ್ತು ಅಮಿತ್ ಶಾ ಅವರೇ ಆಗಿದ್ದಾರೆ. ಈ ಜೋಡಿಯ ಆಧಿಪತ್ಯವೇ ರಾಜಕೀಯ ಹಾಗೂ ಆಡಳಿತಾತ್ಮಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ.
ದೇಶವು ಇಂತಹ ಪರಿಸ್ಥಿತಿಯಲ್ಲಿದ್ದರೂ, ದೇಶಕ್ಕೆ ಮೂವರು ಪ್ರಧಾನಿಗಳನ್ನು ನೀಡಿದ ಕುಟುಂಬದಿಂದ ಬಂದ ರಾಹುಲ್ ಗಾಂಧಿ ಅವರು ವಿಶ್ವಾಸಾರ್ಹ ಪ್ರಮುಖ ವಿರೋಧ ಪಕ್ಷದ ನಾಯಕನಾಗಿ ಏಕೆ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ದೇಶವು ಅವರನ್ನು ನೆಹರೂ ಅವರ ಉತ್ತರಾಧಿಕಾರಿ ಎಂದು ಅಂಗೀಕರಿಸುತ್ತಿಲ್ಲ. ಅವರು ನಡೆಸುವ ರಾಜಕೀಯವೇ ಅವರಿಗೆ ವಿಶ್ವಾಸಾರ್ಹ ವಿಪಕ್ಷ ನಾಯಕನ ಗುರುತಿಸುವಿಕೆಯನ್ನು ತಂದುಕೊಡುತ್ತಿಲ್ಲ. ಸಂವಿಧಾನದ ತತ್ವಗಳ ಬಗ್ಗೆ ಅವರಿಗೆ ಬದ್ಧತೆಯಿಲ್ಲದಿರುವುದರಿಂದ ಅವರ ರಾಜಕೀಯ ಮೌಲ್ಯ ಶೂನ್ಯವಾಗಿದೆ. ಅವರು ಇಷ್ಟೂ ಕಾಲ ತಮ್ಮ ಕುಟುಂಬದ ರಾಜಕೀಯ ಹಿನ್ನೆಲೆಯಿಂದ ಉಳಿದುಕೊಂಡಿದ್ದಾರೆಯೇ ಹೊರತು ತಮ್ಮ ವೈಯಕ್ತಿಕ ಸಾಮರ್ಥ್ಯದಿಂದಲ್ಲ.
ಒಬ್ಬ ಸಚಿವ ರಾಜೀನಾಮೆ ನೀಡಬೇಕೆಂದು ಆಗ್ರಹಿಸುವುದು ಮತ್ತು ಸಚಿವ ರಾಜೀನಾಮೆ ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಭಾವಿಸುವುದು ಸರಿಯಲ್ಲ. ಸಮಸ್ಯೆ ಹಾಗೂ ವ್ಯವಸ್ಥೆ ಹಾಗೆಯೇ ಉಳಿಯುತ್ತದೆ, ಕೇವಲ ವ್ಯಕ್ತಿಗಳು ಬದಲಾಗುತ್ತಾರೆ. ರಾಜೀನಾಮೆ ಕೊಡಿಸುವುದು ಕೇವಲ ಆತ್ಮತೃಪ್ತಿ ನೀಡುವ ವಿಷಯವಷ್ಟೇ. ಈಗ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ, ಅವರ ಜಾಗಕ್ಕೆ ಮತ್ತೊಬ್ಬರು ಬಂದಿದ್ದಾರೆ.
ಆದರೆ ಕೇಂದ್ರ ಸರ್ಕಾರದ ಆಶ್ರಯದಲ್ಲಿ ಅದೇ ಆರ್‌ಎಸ್‌ಎಸ್ ಶಿಕ್ಷಣ ನೀತಿ, ಬಂಡವಾಳಶಾಹಿ ಧೋರಣೆ, ನ್ಯೂನತೆಗಳಿಂದ ಕೂಡಿದ ವಿದೇಶಾಂಗ ನೀತಿ ಮತ್ತು ವಿಭಜನಾತ್ಮಕ ಕಾರ್ಯಸೂಚಿ ಮುಂದುವರಿಯುತ್ತಲೇ ಇರುತ್ತದೆ. ವಿಪಕ್ಷಗಳು ಎಂದಿನಂತೆ ಬಿಜೆಪಿಯ ಪ್ರಜಾಸತ್ತಾತ್ಮಕ ವಿರೋಧಿ ನೀತಿಗಳನ್ನು ವಿರೋಧಿಸುತ್ತಲೇ ಇರುತ್ತವೆ. ದೇಶದಲ್ಲಿ ದ್ವಂದ್ವಾಧಿಪತ್ಯ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.
ಇವುಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (CJP) ಆಂದೋಲನಗಳನ್ನು ಆರಂಭಿಸುತ್ತದೆಯೇ ಅಥವಾ ವಿಪಕ್ಷಗಳೊಂದಿಗೆ ತನ್ನ ಚಟುವಟಿಕೆಗಳನ್ನು ಸಮನ್ವಯಗೊಳಿಸಿಕೊಳ್ಳುತ್ತದೆಯೇ ಎಂಬುದು ಉತ್ತರವಿಲ್ಲದ ಪ್ರಶ್ನೆಗಳಾಗಿಯೇ ಉಳಿಯುತ್ತವೆ.
