Thursday, June 13, 2024

ಸತ್ಯ | ನ್ಯಾಯ |ಧರ್ಮ

ಶಿಕ್ಷಣ ಸಂಸ್ಥೆಗಳ ನಾಶ : ಜೆ ಎನ್‌ ಯುವಿನ ಉದಾಹರಣೆ

ಆರ್ ಎಸ್ ಎಸ್ ನ ಪ್ರತಿಗಾಮಿ ಕಾರ್ಯಸೂಚಿ ಜಾರಿಗೊಳಿಸುವುದನ್ನೇ ಆದ್ಯತೆ ಮಾಡಿಕೊಂಡ ಬಿಜೆಪಿ, ಅದಕ್ಕೆ ಗರಿಷ್ಠ ಬಳಸಿಕೊಂಡದ್ದು ಶಿಕ್ಷಣ ಕ್ಷೇತ್ರವನ್ನು. ಒಂದೆಡೆ, ಆರ್ ಎಸ್ ಎಸ್ ಒಲವು ಹೊಂದಿರುವವರನ್ನು ಮಾತ್ರ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಹುದ್ದೆಗಳಿಗೆ ನೇಮಿಸುವ ಭರದಲ್ಲಿ ಅದು  ಅಯೋಗ್ಯರನ್ನೆಲ್ಲ ಆ ಸ್ಥಾನಗಳಿಗೆ ನೇಮಿಸಿತು. ಇನ್ನೊಂದೆಡೆ, ಪಠ್ಯಪುಸ್ತಕಗಳನ್ನು ತನ್ನ ಕಾರ್ಯಸೂಚಿಗೆ ಅನುಗುಣವಾಗಿ ಬದಲಾಯಿಸಿ ಅವನ್ನು ಅರ್ಥಹೀನಗೊಳಿಸಿತು. ಇವರು ಮತ್ತೆ ಅಧಿಕಾರಕ್ಕೆ ಬಂದರೆ ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಕುಲಗೆಡಿಸುವುದರಲ್ಲಿ ಅನುಮಾನವಿಲ್ಲ. ಜೆ ಎನ್ ಯುವಿನ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಎಂದೇ ಬಿಜೆಪಿಯ ವಿರುದ್ಧ ಮತಚಲಾಯಿಸಿ ಶಿಕ್ಷಣ ಕ್ಷೇತ್ರವನ್ನು, ಆ ಮೂಲಕ ನಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಕಾಪಾಡಬೇಕಾಗಿದೆ- ಪುರುಷೋತ್ತಮ ಬಿಳಿಮಲೆ, ಜೆ.ಎನ್‌ ಯುವಿನ ನಿವೃತ್ತ ಪ್ರಾಧ್ಯಾಪಕರು

2014 ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಶಿಕ್ಷಣ ಸಂಸ್ಥೆಗಳ ಮೇಲೆ ಕಣ್ಣಿಟ್ಟಿತು ಮತ್ತು ಯಾವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಯಿತೋ ಆ ಉದ್ದೇಶಗಳನ್ನೇ ಬದಲಾಯಿಸಲು ಕೆಲಸ ಮಾಡಿತು. ಈ ಹಿನ್ನೆಲೆಯಲ್ಲಿ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯವನ್ನು ( ಜೆ ಎನ್ ಯು) ಏನು ಮಾಡಲಾಯಿತು ಎಂಬುದನ್ನು ಮುಂದೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. 

ಜೆ ಎನ್‌ ಯು ಹೀಗೆ ನಡೆದು ಬಂತು…

ಭಾರತದ ಸರಕಾರವು 1969 ರಲ್ಲಿ ವಿಶೇಷ ಅಧಿಸೂಚನೆ ಹೊರಡಿಸಿ ಜೆ ಎನ್‌ ಯುವನ್ನು ಸ್ಥಾಪಿಸಿತು. ಭಾರತ ದೇಶದ ಹಿಂದುಳಿದ ಪ್ರದೇಶಗಳ ಜನರು ರಾಜಧಾನಿಗೆ ಆಗಮಿಸಿ, ಉನ್ನತ ಶಿಕ್ಷಣವನ್ನು ಪಡೆದು ಅವರು ಇನ್ನಷ್ಟು ಪ್ರವರ್ಧಮಾನರಾಗುವಂತೆ ಮಾಡುವುದು ವಿವಿಯ ಪ್ರಧಾನ ಉದ್ದೇಶವಾಗಿತ್ತು. ಅದಕ್ಕಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಕಡಿಮೆ ವೆಚ್ಚದ ವಸತಿ ನಿಲಯಗಳನ್ನೂ ಸ್ಥಾಪಿಸಲಾಯಿತು. 2019 ರಲ್ಲಿ ಇಲ್ಲಿ 8,895 ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದಾರೆ. ಅದರಲ್ಲಿ ಸುಮಾರು 3,000 ಮಕ್ಕಳು ಹಿಂದುಳಿದ ಪ್ರದೇಶದ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರು. ವಿಶ್ವವಿದ್ಯಾಲಯದ ಅಧಿಕೃತ ಮಾಹಿತಿಯಂತೆ 2019-20 ರ ಅವಧಿಯಲ್ಲಿ ಶೇಕಡಾ 40 ಕ್ಕೂ ಹೆಚ್ಚು ಮಕ್ಕಳ ತಂದೆ ತಾಯಿಗಳು ಬಡತನದ ರೇಖೆಯಿಂದ ಕೆಳಗೆ ಇರುವವರು. ನ್ಯಾಶನಲ್ ಅಸೆಸ್ಮೆಂಟ್ ಮತ್ತು ಅಕ್ರಿಡಿಯೇಶನ್ ಕೌನ್ಸಿಲ್ ನವರು ಜೆ ಎನ್ ಯುವಿಗೆ ನಾಲ್ಕರಲ್ಲಿ 3.9 ಅಂಕ ನೀಡಿ ‘ಇದು ದೇಶದ ಅತ್ಯುತ್ತಮ ವಿವಿಗಳಲ್ಲಿ ಒಂದು’ ಎಂದು ಹೇಳಿತ್ತು.

ಪ್ರಖರ ಬೌದ್ಧಿಕ ಕೇಂದ್ರವಾಗಿ ಜೆ ಎನ್ ಯು

ತರಗತಿಗಳು ಮುಗಿದ ಮೇಲೆ ಬಹಿರಂಗ ಚರ್ಚೆಗಳು

ಶದ ಹಿಂದುಳಿದ ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಸಾಂಸ್ಕೃತಿಕ ಶಕ್ತಿಗಳ ವಿಶ್ಲೇಷಣೆ, ವಿವಿಧ ಬಗೆಯ ಶೋಷಣೆಗಳು, ಜಾತಿಗಳ ಕ್ರೌರ್ಯ, ಸಾಮಾಜಿಕ ಪರಿವರ್ತನೆಯ ಸ್ವರೂಪ, ಸಾಮಾಜಿಕ ಬಹಿಷ್ಕಾರಗಳು, ಚರಿತ್ರೆಯಲ್ಲಿ ದಲಿತರ ಸ್ಥಾನಮಾನ, ರಾಜ್ಯಗಳ ಸ್ವಾಯತ್ತೆಯ ಪ್ರಶ್ನೆ, ರಾಷ್ಟ್ರೀಯತೆಯ ನಿಜವಾದ ಅರ್ಥಗಳೇನು?  ಸಣ್ಣ ಭಾಷೆಗಳ ಸಬಲೀಕರಣ ಹೇಗೆ ಸಾಧ್ಯ? ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುತ್ತಲೇ ಜೆ ಎನ್ ಯು ಒಂದು ಪ್ರಖರ ಬೌದ್ಧಿಕ ಕೇಂದ್ರವಾಗಿ ಬೆಳೆಯಿತು. ಇಲ್ಲಿನ ಪಠ್ಯಕ್ರಮ ಮತ್ತು ಅಭ್ಯಾಸಗಳ ಕೇಂದ್ರದಲ್ಲಿ ಚಾರಿತ್ರಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾದ ಅಥವಾ ಅಂಚಿಗೆ ಸರಿಸಲಾದ ಜನರೇ ಇದ್ದರು. ಈ ಬಗೆಯ ಚರ್ಚೆಗಳು ರೂಪಿಸುವ ಭಾರತದ ಪರಿಕಲ್ಪನೆಯಲ್ಲಿ ಇತಿಹಾಸದ ಬಗೆಗೆ ಕಲ್ಪಿತ ಭ್ರಮೆಗಳಾಗಲೀ, ವರ್ತಮಾನದ ಕಟು ವಾಸ್ತವಗಳ ಕುರಿತಾಗಿ ದಿವ್ಯ ನಿರ್ಲಕ್ಷ್ಯವೂ ಇರುವುದಿಲ್ಲ. ವಿವಿಯ ಈ ಚೌಕಟ್ಟಿನಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಲ್ಲಿನ ಪ್ರಾಧ್ಯಾಪಕರು ಬರೆದ ಸಂಶೋಧನಾ ಲೇಖನಗಳಿಗೆ ಅಂತಾರಾಷ್ಟ್ರೀಯವಾದ ಮನ್ನಣೆ ದೊರಕಿದೆ.  ಯಾವ ಹಮ್ಮು ಬಿಮ್ಮು ಇಲ್ಲದೆ, ಯಾವುದೋ ದಾಬಾದೊಳಗೆ ಕುಳಿತು ಚಹಾ ಕುಡಿಯುತ್ತಾ ವಿವಿಧ ವಿಷಯಗಳ ಬಗೆಗೆ ಮುಕ್ತವಾಗಿ ಹರಟುವ ಇಲ್ಲಿನ ವಿದ್ವಾಂಸರು ವಿದ್ಯಾರ್ಥಿಗಳೊಡನೆ ಆಳವಾದ ಸಂವಾದ ನಡೆಸುತ್ತಾ ತಾವೂ ಬೆಳೆಯುತ್ತಾರೆ, ವಿದ್ಯಾರ್ಥಿಗಳನ್ನೂ ಬೆಳೆಸುತ್ತಾರೆ.

ಜೆ ಎನ್ ಯುವಿನಲ್ಲಿ ವಿಚಾರಗಳು ಹೊಸ ರೂಪವನ್ನು ಪಡೆದುಕೊಳ್ಳುತ್ತಲೇ ಇದ್ದುವು…

ಜೆ ಎನ್ ಯುವಿನಲ್ಲಿ ಪೋಸ್ಟರ್‌ ಗಳು ಮಾತಾಡುತ್ತವೆ

ಇಂಥ ಅನೌಪಚಾರಿಕತೆಯೇ ವಿಶ್ವವಿದ್ಯಾಲಯವನ್ನು ಬೌದ್ಧಿಕವಾಗಿ ಬೆಳೆಸಿದೆ. ಚರ್ಚೆ, ವಾಗ್ವಾದ, ಮತ್ತು ಆರೋಗ್ಯಕರ ಭಿನ್ನಮತಗಳ ಮೂಲಕ ಇಲ್ಲಿನ ಜಗತ್ತು ದಿನಾ ತೆರೆದುಕೊಳ್ಳುತ್ತದೆ.  ಈ ಕಾರಣಕ್ಕಾಗಿಯೋ ಏನೋ ಜಗತ್ತಿನಾದ್ಯಂತದಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರಲು ಇಚ್ಚಿಸುತ್ತಾರೆ. ಇಲ್ಲಿನ ಮಕ್ಕಳು ‘ನಾವು ಜೆ ಎನ್ ಯು ವಿನಲ್ಲಿ ಕಲಿತವರು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಒಂದು ದೇಶದ ಪ್ರಗತಿಯನ್ನು ಅದರ ಬೌದ್ಧಿಕ ಬೆಳವಣಿಗೆಯ ಮೂಲಕ ಗುರುತಿಸುವ ಕ್ರಮವಿದ್ದರೆ, ಅಂಥ ಕಡೆ ಜೆ ಎನ್ ಯುವಿಗೆ ಒಂದು ಸ್ಥಾನ ಇದ್ದೇ ಇರುತ್ತದೆ. ಒಂದು ಅಂದಾಜಿನ ಪ್ರಕಾರ ಜೆ ಎನ್ ಯುವಿನಲ್ಲಿ ವಿವಿಧ ಸಿದ್ಧಾಂತಗಳಿಗೆ ಸೇರಿದ ಸುಮಾರು 29 ಗುಂಪುಗಳಿವೆ. ಅವುಗಳಲ್ಲಿ ವಿವಿಧ ಚಿಂತನಾಕ್ರಮಗಳಿಗೆ ಸೇರಿದ, ಮಾರ್ಕ್ಸ್‌ವಾದಿಗಳು, ಅಂಬೇಡ್ಕರ್ ವಾದಿಗಳು, ಪೆರಿಯಾರ್‌ ವಾದಿಗಳು, ಗಾಂಧೀವಾದಿಗಳು, ಲೋಹಿಯಾವಾದಿಗಳೆಲ್ಲ ಇದ್ದಾರೆ. ಉದಾರವಾದಿಗಳಿದ್ದಾರೆ, ಮಾನವತಾವಾದಿಗಳಿದ್ದಾರೆ, ಬಲಪಂಥೀಯರಿದ್ದಾರೆ. ಕಾಲಕಾಲಕ್ಕೆ ನಡೆಯುವ ಚರ್ಚೆಗಳಲ್ಲಿ ಈ ಭಿನ್ನ ಗುಂಪಿನ ವಿದ್ವಾಂಸರು ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ಅಭಿಪ್ರಾಯಗಳನ್ನು ಖಚಿತವಾಗಿ ಮಂಡಿಸುತ್ತಾರೆ. ಇದರಿಂದ ವಿಶ್ವವಿದ್ಯಾಲಯದ ನಿಜವಾದ ಅರ್ಥ ನಿರಂತರವಾಗಿ ಸಾಕಾರಗೊಳ್ಳುತ್ತಲೇ ಹೋಗುತ್ತದೆ. ಇದು ಕಾರಣವಾಗಿ ನಿನ್ನೆ ಮೊನ್ನೆಯವರೆಗೆ ಜೆ ಎನ್ ಯುವಿನಲ್ಲಿ ವಿಚಾರಗಳು ಹೊಸ ರೂಪವನ್ನು ಪಡೆದುಕೊಳ್ಳುತ್ತಲೇ ಇದ್ದುವು.

ಸಾಯಿನಾಥ್‌ ಭಾಷಣಕ್ಕೆ ಕಿವಿಗೊಡುತ್ತಿರುವ ಜೆ ಎನ್‌ ಯು

ಜೆ ಎನ್‌ ಯುವಿಗೆ  ಖಳನಾಯಕನ ಸ್ಥಾನ!! 

ಆದರೆ, 2014ರಲ್ಲಿ ಎನ್‌ ಡಿ ಎ ಸರಕಾರ ಅಧಿಕಾರಕ್ಕೆ ಬಂದ ಆನಂತರ ಜೆ ಎನ್‌ ಯುವನ್ನು ಖಳನಾಯಕನ ಜಾಗದಲ್ಲಿ ನಿಲ್ಲಿಸಲಾಯಿತು. ವಿಶ್ವದ ಗಮನ ಸೆಳೆದ ಈ ವಿಶ್ವವಿದ್ಯಾಲಯವು ಬದಲಾದ ಸರಕಾರದ ಮೊದಲ ಬಲಿಪಶುವಾಯಿತು. ಅದು ಯಾವ ಮಟ್ಟಕ್ಕೆ ತಲುಪಿತೆಂದರೆ 2020ರ ಜನವರಿ ಐದರಂದು ಸಾಯಂಕಾಲ ಸುಮಾರು 40 ಜನ ಮುಸುಕು ತೊಟ್ಟ ಕಿಡಿಗೇಡಿಗಳು ಪೊಲೀಸರ ಕಣ್ಣೆದುರೇ ವಿಶ್ವವಿದ್ಯಾಲಯದ ಆವರಣಕ್ಕೆ ನುಗ್ಗಿ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ಹಲ್ಲೆ ನಡೆಸಿದರೂ, ಇವತ್ತಿನವರೆಗೆ ಸರಕಾರಕ್ಕೆ ಕಿಡಿಗೇಡಿಗಳನ್ನು ಬಂಧಿಸಲಾಗಲೇ ಇಲ್ಲ. ಬೌದ್ಧಿಕ ಚರ್ಚೆಗಳಿಗೆ ಹೆಸರಾಗಿದ್ದ ಜೆ ಎನ್‌ ಯುವಿಗೆ ಈ ಬಗೆಯ ದೈಹಿಕ ಕ್ರೌರ್ಯದ ವಿರುದ್ಧ ಹೋರಾಡುವುದು ಅಸಾಧ್ಯವಾಯಿತು. ವಿದ್ಯಾರ್ಥಿಗಳ ಮೇಲಣ ಅಮಾನುಷ ಹಲ್ಲೆಯನ್ನು ʼ ದೇಶದ್ರೋಹಿಗಳ ಮೇಲೆ ದೇಶಪ್ರೇಮಿಗಳು ತೋರಿದ ಸಹಜವಾದ ಪ್ರತಿಭಟನೆʼ ಎಂದು ಸಾರ್ವಜನಿಕರಿಗೆ ಬಣ್ಣಿಸಿ ಹೇಳಲಾಯಿತು. ವಿದ್ಯಾವಂತರೂ ಈ ಕಥನವನ್ನು ನಂಬಿದರು.

ಜೆ ಎನ್ ಯು ಈಗ ಬಹುಮಟ್ಟಿಗೆ ಮುಗಿದ ಕತೆ

 2014ರ ಆನಂತರ ಜೆ ಎನ್‌ ಯುವಿನ ಪ್ರವೇಶ ನಿಯಮಗಳಲ್ಲಿ ಬದಲಾವಣೆಗಳನ್ನು ತರಲಾಯಿತು. 2016ರಲ್ಲಿ ಅಲ್ಲಿಗೆ ಕುಲಪತಿಯಾಗಿ ಅಗಮಿಸಿದ ಪ್ರೊ. ಮಾಮಿದಾಳ ಜಗದೀಶ್‌ ಕುಮಾರ್‌ ಹೊಸ ಬಗೆಯ ಮೀಸಲಾತಿ ನಿಯಮಗಳನ್ನು ಜ್ಯಾರಿಗೆ ತಂದರು. ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಅವರು ನಿರ್ದಯವಾಗಿ ಹತ್ತಿಕ್ಕಿದರು. ರಾಷ್ಟ್ರೀಯತೆಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತಲು ವಿಶ್ವವಿದ್ಯಾಲಯದಲ್ಲಿ ಯುದ್ಧದ ಟ್ಯಾಂಕರ್‌ ಒಂದನ್ನು ಸ್ಥಾಪಿಸಲಾಗುವುದು ಎಂದು 2017ರಲ್ಲಿ ಘೋಷಿಸಿದರು. ಲೈಂಗಿಕ ಕಿರುಕುಳ ಪ್ರಕರಣಗಳನ್ನು ಪರಿಶೀಲಿಸುವ ಶಕ್ತಿಶಾಲೀ ಸಮಿತಿಯೊಂದನ್ನು (GSCASH) 2018ರಲ್ಲಿ ಅವರು ರದ್ದು ಮಾಡಿದರು. ವಿಶ್ವವಿದ್ಯಾಲಯದ ಪ್ರವೇಶ ಶುಲ್ಕವನ್ನು ಹೆಚ್ಚಿಸಲಾಯಿತು. ವಿದ್ಯಾರ್ಥಿ ನಿಲಯದಲ್ಲಿ ಶೇಕಡಾ 40ರಷ್ಟು ಶುಲ್ಕ ಹೆಚ್ಚಿಸಿದ್ದರಿಂದ ಬಡವರ ಕಷ್ಟ ಹೆಚ್ಚಾಯಿತು. ಸಮಾಜ ವಿಜ್ಞಾನಗಳಿಗೆ ಮಹತ್ವ ಕಡಿಮೆ ಆಯಿತು. ಅವರದೇ ಆದ ಕೆಲವು ಜನಗಳನ್ನು ಬಿಟ್ಟರೆ ಮಾಮಿದಾಳರಿಗೆ ವಿಶ್ವವಿದ್ಯಾಲಯದ ಇತರ ಪ್ರಾಧ್ಯಾಪಕರೊಂದಿಗೆ ಸಂವಾದವೇ ಇರಲಿಲ್ಲ.  ಅವರ ಅವಧಿಯಲ್ಲಿ ಇತರ ವಿಶ್ವವಿದ್ಯಾಲಯಗಳಲ್ಲಿ ಇರುವ ಎಂ ಬಿ ಎ ಮತ್ತು ಇಂಜಿನೀಯರಿಂಗ್‌ ಕೋರ್ಸುಗಳನ್ನು ಜೆ ಎನ್‌ ಯುವಿನಲ್ಲಿಯೂ ಆರಂಭಿಸಲಾಯಿತು. ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜ್ಯಾರಿಗೆ ತರುವುದರ ಮೂಲಕ ಜೆ ಎನ್‌ ಯುವನ್ನು ನಗರ ಕೇಂದ್ರಿತ ವಿಶ್ವವಿದ್ಯಾಲಯವನ್ನಾಗಿ ಮಾರ್ಪಡಿಸಲಾಯಿತು. 24 ಗಂಟೆ ತೆರೆದಿರುತ್ತಿದ್ದ ಗ್ರಂಥಾಲಯವನ್ನು ಸೀಮಿತ ಅವಧಿಗೆ ನಿಗದಿಪಡಿಸಲಾಯಿತು. ಪ್ರಾಧ್ಯಾಪಕರ ಪ್ರಶ್ನಿಸುವ ಹಕ್ಕನ್ನು ಕಸಿದುಕೊಂಡು ಅವರು ನ್ಯಾಯಾಲಯದ ಮೊರೆ ಹೋಗುವಂತೆ ಮಾಡಲಾಯಿತು. ಅಕೆಡೆಮಿಕ್‌ ಕೌನ್ಸಿಲ್‌ ಸಭೆಗಳಲ್ಲಿ ಅಧ್ಯಾಪಕರ ಧ್ವನಿಗಳನ್ನು ಹತ್ತಿಕ್ಕಲಾಯಿತು. ಹಿರಿಯ ಪ್ರಾಧ್ಯಾಪಕರ ಸೇವಾ ಜ್ಯೇಷ್ಠತೆಯನ್ನು ಕಡೆಗಣಿಸಿ, ಕಿರಿಯರನ್ನು ಆ ಸ್ಥಳದಲ್ಲಿ ಕುಳಿತುಕೊಳ್ಳಿಸಿ ಅಧಿಕಾರ ಸ್ಥಾಪನೆ ಮಾಡಲಾಯಿತು.  ಎಷ್ಟೋ ಪ್ರಾಧ್ಯಾಪಕರ ನಿವೃತ್ತಿವೇತನವನ್ನು ಏನೇನೋ ಕಾರಣ ನೀಡಿ ತಡೆ ಹಿಡಿಯಲಾಯಿತು. ಬಗೆ ಬಗೆಯ ಪೋಸ್ಟರ್‌ ಗಳ ಮೂಲಕ ಮಾತಾಡುತ್ತಿದ್ದ ವಿಶ್ವವಿದ್ಯಾಲಯದ ಗೋಡೆಗಳನ್ನು ಬರಿದುಗೊಳಿಸಲಾಯಿತು. ಹೀಗೆ ಮಾಡುವುದರ ಮೂಲಕ ಜೆ ಎನ್‌ ಯುವಿನ ಅನನ್ಯ ಗುಣಗಳನ್ನು ನಾಶ ಮಾಡಲಾಯಿತು. ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ಕೈಯಲ್ಲಿದ್ದ ವಿಶ್ವವಿದ್ಯಾಲಯವು ಅಧಿಕಾರಿಗಳ ಕೈ ಸೇರಿದಲ್ಲಿಗೆ ಜೆ ಎನ್‌ ಯುವಿನ ವರ್ಣರಂಜಿತ ಇತಿಹಾಸ ಕೊನೆಯಾಯಿತು. ಯಾವ ಕಾರಣಗಳಿಗಾಗಿ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿತ್ತೋ ಅದರಿಂದ ವಿವಿಯನ್ನು ಬೇರ್ಪಡಿಸಲಾಯಿತು. ಈಗ ಅದೊಂದು ಸಾಮಾನ್ಯ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿದೆ. ಅಲ್ಲಿ ಹೋಮ, ಹವನ, ಯಜ್ಞ, ಇತ್ಯಾದಿಗಳು ನಡೆಯುತ್ತಿವೆ.

ಜೆ ಎನ್ ಯು ಈಗ ಬಹುಮಟ್ಟಿಗೆ ಮುಗಿದ ಕತೆ. ಬುದ್ಧಿಜೀವಿಗಳನ್ನು ದ್ವೇಷಿಸುವ ಜನಗಳ ನಡುವೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಒಟ್ಟು ಸೇರಿ ಕಟ್ಟಿದ ವಿಶ್ವವಿದ್ಯಾಲಯವೊಂದು ಇತಿಹಾಸದ ಪುಟ ಸೇರಿದ್ದು ಅಚ್ಚರಿಯ ಸಂಗತಿಯೇನಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಆರೋಗ್ಯಪೂರ್ಣ ಭಿನ್ನ ಮತವನ್ನು ಮತ್ತು ಯೋಚಿಸುವ ಹಕ್ಕನ್ನು ಹತ್ತಿಕ್ಕುವುದು ದೇಶವನ್ನು ದುರ್ಬಲಗೊಳಿಸುತ್ತದೆ ಎಂಬ ಅಂಶವನ್ನು ಜೆ ಎನ್‌ ಯು ವಿರೋಧಿಗಳು ಇವತ್ತಲ್ಲ, ನಾಳೆಯಾದರೂ ಅರ್ಥಮಾಡಿಕೊಂಡಾರು ಎಂದು ನಾನು ನಂಬುತ್ತೇನೆ.

ಪುರುಷೋತ್ತಮ ಬಿಳಿಮಲೆ, ನಿವೃತ್ತ ಪ್ರಾಧ್ಯಾಪಕರು, ಜೆ.ಎನ್‌ ಯು, ನವದೆಹಲಿ.

ಇದನ್ನೂ ಓದಿ-https://peepalmedia.com/if-bjp-wins-karnataka-will-fall-under-rsss-arms/ http://ಬಿಜೆಪಿ ಗೆದ್ದರೆ ಆರ್‌ ಎಸ್‌ ಎಸ್‌ ತೆಕ್ಕೆಗೆ ಕರ್ನಾಟಕ

Related Articles

ಇತ್ತೀಚಿನ ಸುದ್ದಿಗಳು