ಆಕಾರವೇ ಕಾಣುತ್ತಿಲ್ಲ; ಏನಿದು ಚಲನೆ?
ಹೊಗೆ, ಬೆಂಕಿ,ಬಣ್ಣದ ಪುಡಿಗಳು. ಉದ್ದನೆಯ
ಏನೋ ಒಂದು ಮುಸಮುಸ
ಸದ್ದೊರಡಿಸುತ್ತಿದೆ!!
ನಿಧಾನಕ್ಕೆ ಮೂಡಿದ ರೇಖೆಗಳು
ಬಟ್ಟೆಗಳನ್ನು ಸುಡುತ್ತಿವೆ
ಮೃಚ್ಛದ ಕಟ್ಟೆಯಲ್ಲಿ ದವಸಗಳು
ಸೀದು ಒತ್ತಿದ ಕಮಟು ನಾತ
ಆಗಲೇ ಮೂಡಿದ್ದು ಮುಳ್ಳುಗಳು…..
ಪುರಾತನದಲ್ಲಿ ಜನಿಸಿದ ಮುಳ್ಳು
ಕಾಲದ ಆತ್ಮವನ್ನೇ ಚುಚ್ಚಿದಾಗ
ಸುರಿದ ರುಧಿರ ನಿಂತೇ ಇಲ್ಲ
ಇಲ್ಲಿ ಕೈಯ್ಯಾಡಿದ ವರ್ಣದ ಪಾವಕ ಸುಟ್ಟಿದ್ದು ಮಾತ್ರ
ಮನುಷ್ಯರನ್ನೇ ಹುಡುಕಿ…..
ಸನಾತನದ ಮೊಗ ರವರವ ಉರಿಸುತ್ತಲೇ ಬಂದಿದೆ ದೇವರನ್ನು! ಅರ್ಕಪೆರೆ
ಎಲ್ಲವೂ ಇಲ್ಲಿ
ಮತಗಳಾಗುವಾಗ
ದೇವರ ಮೊಗ ಸತ್ತಿತು
ಕಂದಮ್ಮಗಳ ನಗುವಿನ ಮೇಲೆ
ಸತ್ತದೇವರ ದಿಬ್ಬಣ ಹೊರಟಾಗ
ಕಾಲಿಗೆ ತಡಕಿದ್ದು ಅಸಹಾಯಕರ ಕಳೇಬರಗಳು
ಧರ್ಮಕ್ಕೆ ರಂಗು ಮೂಡಿದ್ದು
ಆಕ್ರಂದನ ಹೆಚ್ಚಿದಾಗಲೆ…
ಮಮತೆಯ ಜೋಗುಳಗಳನ್ನು
ಹೊಸಕಿದವರು ಕಳೆಗುಂದಿಲ್ಲ….
ಹಸುಗೂಸುಗಳನ್ನೇ ಅರೆದು
ಗಂಧವಿಟ್ಟವರಿಗೆ ಉಸಿರು ನಿಲ್ಲಿಸುವ ಶ್ರದ್ಧೆ!!!
ಇಲ್ಲೊಬ್ಬ ಸೂಫಿ ಹೂ ಹೊತ್ತು
ಬಂದಾಗ ಸಿದ್ದರು ಸ್ವಾಗತಿಸಿದರು ಶರಣಾದಿದಾಸರೇ ಆಸರೆ
ಮೌನದಲಿ ಗೋಡೆಗಳು ಬೀಳುವಾಗಲೆ ಹವನದ ಅನಲ
ಅಡ್ಡವಾಗಿ ಜಂತೆಬಿಗಿದದ್ದು
ಇಲ್ಲಿಂದ ಮುಂದೆ ಬೆಳ್ಳಗಿನ ಹಗ್ಗ
ಹೊಲೆಯುತ್ತಲೇ ಇದೆ ಉಸಿರಿನ
ಕೊರಳುಗಳನ್ನು….ಸಾಗಿಸಾಗಿ
ಭಿನ್ನ ಬಗೆಗಳಾಗಿ ಸೀಳಿಕೊಂಡು
ಮದ್ದುಗುಂಡುಗಳ ಕೈತೋಟ
ನಗೆಯಮೊಗವು ಅರಳಲು
ನಾವೀಗ ದೇವರ ಮೊಗ ಕಸಿದು
ಕೈಕೈ ಹಿಡಿದು ನಡೆಯೋಣ
ಸಿಡಿಸಿಡಿದು ನರಳಿದ ನಮ್ಮವರೆಲ್ಲ ಈ ನೆಲಕೆ ಶೋಭೆ.
ಗೀತಾ ಎನ್ ಸ್ವಾಮಿ
ತಿಪಟೂರಿನ ಕಲ್ಪತರು ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ.
ಇದನ್ನೂ ಓದಿ-ಗಣಪತಿ: ಬಂಡಾಯದ ದಳಪತಿ!