ಕಠ್ಮಂಡು: ನೇಪಾಳ (Nepal) ಮತ್ತು ಟಿಬೆಟ್‌ನ ಹಿಮಾಲಯ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹ (Flashfloods) ಹಾಗೂ ಭೂಕುಸಿತದಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಭೋತೆ ಕೋಸಿ ಮತ್ತು ತ್ರಿಶೂಲಿ ನದಿಗಳಲ್ಲಿ ನೀರಿನ ರಭಸ ಹೆಚ್ಚಾಗಿ ಗ್ರಾಮಗಳು, ಪಟ್ಟಣಗಳು, ಮನೆಗಳು, ರಸ್ತೆಗಳು, ಸೇತುವೆಗಳು ಹಾಗೂ ವಿದ್ಯುತ್ ಸ್ಥಾವರಗಳು ಕೊಚ್ಚಿಹೋಗಿವೆ.
ಪ್ರವಾಹದ ಭೀಕರತೆಯನ್ನು ತೋರಿಸುವ ವೈಮಾನಿಕ ದೃಶ್ಯಗಳು ಇದೀಗ ಹೊರಬಂದಿದ್ದು, ಸಂಪೂರ್ಣ ಗ್ರಾಮಗಳೇ ಮಣ್ಣು ಮತ್ತು ಕೆಸರಿನ ರಾಶಿಯಾಗಿ ಮಾರ್ಪಟ್ಟಿರುವುದು ಕಂಡುಬಂದಿದೆ. ರಕ್ಷಣಾ ಕಾರ್ಯಾಚರಣೆಯ ವೇಳೆ ನೇಪಾಳ ಸೇನೆ ಈ ದೃಶ್ಯಗಳನ್ನು ಸೆರೆಹಿಡಿದಿದೆ.
165ಕ್ಕೂ ಹೆಚ್ಚು ಮಂದಿ ಸಾವು
ನೇಪಾಳ ಮತ್ತು ಟಿಬೆಟ್‌ನಲ್ಲಿ ಪ್ರವಾಹದಿಂದ ಕನಿಷ್ಠ 165 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರೂ ಇದ್ದಾರೆ.
ನೇಪಾಳದಲ್ಲಿ ಮಾತ್ರ 162 ಮಂದಿ ಮೃತಪಟ್ಟಿದ್ದು, 403 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 142 ಮಂದಿ ಭಾರತೀಯ ಪ್ರಜೆಗಳು ಎನ್ನಲಾಗಿದೆ. ಆಸ್ಟ್ರೇಲಿಯಾ, ಬ್ರಿಟನ್, ಮಲೇಷ್ಯಾ, ನೆದರ್ಲೆಂಡ್ಸ್, ಪೋರ್ಚುಗಲ್, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಪ್ರಜೆಗಳೂ ನಾಪತ್ತೆಯಾಗಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ ತಿಳಿಸಿದೆ.
ಟಿಬೆಟ್‌ನ ಗೈರಾಂಗ್ ಪ್ರದೇಶದಲ್ಲೂ ಭೂಕುಸಿತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. 265 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
