Wednesday, January 29, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಬೇಗುದಿಯಲ್ಲಿ ದೇವೇಗೌಡರ ಪಾಲೆಷ್ಟು? ಜೆಡಿಎಸ್‌ಗೆ ಲಾಭವೆಷ್ಟು? – ಮಾಚಯ್ಯ ಎಂ ಹಿಪ್ಪರಗಿ

“..ಒಂದಂತೂ ಸತ್ಯ. ಬಿಜೆಪಿ ಆಂತರಿಕ ಕಲಹಗಳಿಂದ ಬೆಂದುಹೋಗುತ್ತಿರುವಷ್ಟೂ ಕಾಲ, ಜೆಡಿಎಸ್‌ ಪಕ್ಷಕ್ಕೆ ತನ್ನ ಅಸ್ತಿತ್ವದ ದೊಡ್ಡ ಪ್ರಶ್ನೆಗಳು ಎದುರಾಗುವುದಿಲ್ಲ. ಯಾಕೆಂದರೆ ತನ್ನ ಅಡಿಪಾಯವೇ ಅಲ್ಲಾಡುತ್ತಿರುವಾಗ, ಜೆಡಿಎಸ್‌ ಪಕ್ಷವನ್ನು ಆಪೋಷನ ತೆಗೆದುಕೊಳ್ಳುವ ತ್ರಾಣ ಬಿಜೆಪಿಗಾದರೂ ಹೇಗೆ ಬರುತ್ತೆ?..” ಚಿಂತಕರಾದ ಮಾಚಯ್ಯ ಹಿಪ್ಪರಗಿ ಅವರ ಬರಹದಲ್ಲಿ

ಬಿಜೆಪಿ ಈಗ ಅಕ್ಷರಶಃ ಒಡೆದ ಮನೆ. ಒಂದುಕಡೆ ಯತ್ನಾಳ್‌ ಬಣ ವಿಜಯೇಂದ್ರನ ವಿರುದ್ಧ ಅಖಾಡಕ್ಕಿಳಿದಿದ್ದರೆ, ಮತ್ತೊಂದೆಡೆ ಮೈನಿಂಗ್‌ ದೋಸ್ತಿಗಳಾದ ರಾಮುಲು-ರೆಡ್ಡಿ ಪರಸ್ಪರ ಕಾದಾಟಕ್ಕೆ ನಿಂತಿದ್ದಾರೆ. ಆರಂಭದಲ್ಲಿ ಸಣ್ಣಗೆ ಶುರುವಾದ ಯತ್ನಾಳ್‌ ಬಂಡಾಯ ದಿನೇದಿನೆ ಹಿಗ್ಗುತ್ತಲೇ ಸಾಗುತ್ತಿದ್ದು, ಹೊಸಹೊಸ ಸ್ಟ್ರಾಟಜಿಯನ್ನೂ ಒಳಗೊಳ್ತಿದೆ. ದಿಢೀರ್‍‌ ಅವತರಿಸಿದ ‘ತಟಸ್ಥರ’ ಹೆಸರಿನ ಒಂದು ಗುಂಪು, ಒಳಗಿಂದೊಳಗೇ ಯತ್ನಾಳ್‌ ಬಣಕ್ಕೆ ಕುಮ್ಮಕ್ಕು ಕೊಡುತ್ತಿದ್ದು, ವಿಜಯೇಂದ್ರನ ವಿರುದ್ಧ ತಮ್ಮ ಹಗೆ ತೀರಿಸಿಕೊಳ್ಳಲು ಮುಂದಾಗ್ತಾ ಇರೋದು ಲೇಟೆಸ್ಟ್‌ ಸುದ್ದಿ. ಆ ತಟಸ್ಥರ ಗುಂಪಿನಲ್ಲಿ ಬಸವರಾಜ ಬೊಮ್ಮಾಯಿ, ಆರ್ ಅಶೋಕ್, ಅಶ್ವತ್ಥ ನಾರಾಯಣ, ಡಿ ವಿ ಸದಾನಂದ ಗೌಡ, ಕೆ ಸುಧಾಕರ್, ಸಿ ಟಿ ರವಿ ತರಹದ ಘಟಾನುಘಟಿ ನಾಯಕರಿದ್ದಾರೆ. ಇವರೆಲ್ಲರೂ ಯಡಿಯೂರಪ್ಪನವರ ಕುಟುಂಬದ ವಿರುದ್ಧ ಹರಿಹಾಯ್ತಾ ಇರೋದು ಈಗ ರಹಸ್ಯವಾಗುಳಿದಿಲ್ಲ. ಹಾಗಾಗಿ `ತಟಸ್ಥ’ ಹೆಸರಿನಲ್ಲಿ ವಿಜಯೇಂದ್ರನಿಗೆ ತಲೆನೋವಾಗುತ್ತಿದ್ದಾರೆ. ಈ ಎಲ್ಲಾ ಅಲ್ಲೋಲಕಲ್ಲೋಲದ ಪ್ರೈಮ್‌ ಸೂತ್ರಧಾರರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಹಾಗೂ ಸೆಂಟ್ರಲ್‌ ಮಿನಿಸ್ಟರ್‍‌ ಪ್ರಹ್ಲಾದ್‌ ಜೋಷಿ ಅನ್ನೋದು ಎಲಿಮೆಂಟರಿ ಸತ್ಯ!

ನೋ ಡೌಟ್, ಇದು ಸಂಪೂರ್ಣವಾಗಿ ಬಿಜೆಪಿಯ ಆಂತರಿಕ ಕಲಹ. ಪಕ್ಷದ ಮೇಲೆ ಯಡಿಯೂರಪ್ಪನವರ ಕುಟುಂಬದ ಪ್ರಭಾವವನ್ನು ನಿಶ್ಯೇಷವಾಗಿ ನಾಶಗೊಳಿಸಬೇಕೆನ್ನುವ ಪ್ರಯತ್ನ ಇವತ್ತು ನಿನ್ನೆಯದಲ್ಲ. ಹಾಗಾಗಿ ಬಿಜೆಪಿಯ ಒಡಕಿನಲ್ಲಿ ನಮಗೆ ಬಿಜೆಪಿಗರ ಪ್ರತಿಷ್ಠೆಯ ಮೇಲಾಟಗಳೇ ಎದ್ದು ಕಾಣುತ್ತವೆ. ಆದರೆ ಬಿಜೆಪಿ ಬೇಗುದಿಗೆ ಬಿಜೆಪಿಯ ವ್ಯಾಪ್ತಿಯನ್ನೂ ಮೀರಿದ ಮತ್ತೊಂದು ಚಾಚಿಕೆಯಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಬಿಜೆಪಿ ಹೀಗೆ ಆಂತರಿಕ ಕಲಹದಿಂದ ನುಜ್ಜುಗುಜ್ಜಾಗುವುದರಿಂದ ಹೆಚ್ಚಿನ ಲಾಭ ಯಾರಿಗೆ? ಕಾಂಗ್ರೆಸಿಗೆ ಅಂತ ನಾವೆಲ್ಲ ಸುಲಭವಾಗಿ ಅಂದಾಜಿಸಬಹುದು. ಆದರೆ ಕಾಂಗ್ರೆಸಿಗಿಂತಲೂ ಹೆಚ್ಚು ಅನುಕೂಲ ಇರೋದು ಜೆಡಿಎಸ್‌ಗೆ!

ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಮೈತ್ರಿಗೆ ಮುಂದಾದಾಗ, ಬಹಳಷ್ಟು ರಾಜಕೀಯ ವಿಶ್ಲೇಷಕರು ಇದರಿಂದ ಜೆಡಿಎಸ್‌ ಪಕ್ಷ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ, ಬೇರೆಬೇರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಹೇಗೆಲ್ಲಾ ಅವನತಿ ಹೊಂದಿದವು ಮತ್ತು ಬಿಜೆಪಿ ಅಲ್ಲಿ ಹೇಗೆ ಬಲಿಷ್ಠವಾಗುತ್ತಾ ಬಂತು ಅನ್ನೋ ರಾಜಕೀಯ ಚರಿತ್ರೆಗಳು ಆ ಅಭಿಪ್ರಾಯಕ್ಕೆ ಪೂರಕವಾಗಿದ್ದವು. ದೇವೇಗೌಡರಂತಹ ರಾಜಕೀಯ ಚತುರರಿಗೆ ಇದರ ಅರಿವಿರಲಿಲ್ಲ ಎಂದು ಹೇಳಲಾಗದು. ಆದರೂ ಅವರು ರಿಸ್ಕ್‌ಗೆ ಮುಂದಾದರು. ಅದಕ್ಕೆ ಅವರದೇ ಆದ ಕಾರಣಗಳಿರಬಹುದು. ಆದರೆ ಬಿಜೆಪಿಯಿಂದ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳೋದು ಎಂಬ ಲೆಕ್ಕಾಚಾರಗಳಿಂದಲೇ ಗೌಡರು ಆ ಮೈತ್ರಿಗೆ ಮುಂದಡಿಯಿಟ್ಟಿದ್ದರು ಅನ್ನೋದಕ್ಕೆ ಅವತ್ತೇ ನಮಗೆ ಸಾಕಷ್ಟು ಸುಳಿವುಗಳು ಗೋಚರಿಸಿದ್ದವು. ಅಂತಹ ಒಂದು ಸುಳಿವು ವಿ ಸೋಮಣ್ಣ!

ಯತ್ನಾಳ್‌ ತರಹವೇ ಯಡಿಯೂರಪ್ಪನವರ ಕುಟುಂಬದ ವಿರುದ್ಧ ಹರಿಹಾಯ್ತಾ ಬಂದ ಮತ್ತೋರ್ವ ಬಿಜೆಪಿ ನಾಯಕ ಸೋಮಣ್ಣ. ಒಂದು ಹಂತದಲ್ಲಿ ಬಿಜೆಪಿಯನ್ನು ತೊರೆದೇ ಬಿಡ್ತೀನಿ ಅಂತ ಡೆಡ್‌ಲೈನ್‌ ಕೂಡಾ ಹಾಕಿದ್ದರು. ಆದರೆ, ಅಂತಹ ಸೋಮಣ್ಣನನ್ನು ಮನೆಗೆ ಕರೆಸಿಕೊಂಡು ಸಮಾಧಾನ ಮಾಡಿ; ತಮ್ಮ ಕೋಟಾದಡಿ ಸಿಗಬೇಕಿದ್ದ ತುಮಕೂರು ಕ್ಷೇತ್ರವನ್ನು ಸೋಮಣ್ಣನಿಗೇ ಬಿಟ್ಟುಕೊಟ್ಟು; ಮಾಧುಸ್ವಾಮಿ ಮೂಲಕ ಯಡಿಯೂರಪ್ಪ ಹುಟ್ಟುಹಾಕಿದ್ದ ಲೋಕಲ್‌ ಬಂಡಾಯದ ಹೊರತಾಗಿಯೂ ಸೋಮಣ್ಣನನ್ನು ಗೆಲ್ಲಿಸಿಕೊಂಡು ಬಂದು; ಕೊನೆಗೆ ಮೋದಿ ಸಂಪುಟದಲ್ಲಿ ಸೆಂಟ್ರಲ್‌ ಮಿನಿಸ್ಟರ್‍‌ ಕೂಡಾ ಮಾಡಿದ್ದು ಇದೇ ದೇವೇಗೌಡರು! ಯಾಕೆಂದರೆ ದೇವೇಗೌಡರಿಗೆ ಚೆನ್ನಾಗಿ ಗೊತ್ತಿತ್ತು; ಎಲ್ಲಿಯವರೆಗೆ ಬಿಜೆಪಿಯೊಳಗೆ ಯಡಿಯೂರಪ್ಪನ ಕುಟುಂಬಕ್ಕೆ ಇನ್‌ಸೆಕ್ಯುರಿಟಿ ಇರುತ್ತದೋ ಅಲ್ಲಿಯವರೆಗೆ ಆ ಪಕ್ಷ ಬಲಾಢ್ಯವಾಗಲು ಸಾಧ್ಯವಿಲ್ಲ; ಅಲ್ಲಿ ಆಂತರಿಕ ಕಲಹಗಳು ಭುಗಿಲೇಳುತ್ತಲೇ ಇರುತ್ತವೆ ಅಂತ. ಆ ಕಾರಣಕ್ಕೇ ಯಡಿಯೂರಪ್ಪನವರನ್ನು ನಿಯಂತ್ರಿಸುವ ಮೂಗುದಾರದಂತೆ ಬಳಸಲು, ಅದೇ ಲಿಂಗಾಯತ ಸಮುದಾಯದ ಬಂಡಾಯಗಾರ ವಿ ಸೋಮಣ್ಣನವರನ್ನು ದೇವೇಗೌಡರು ಬಹಳ ಮುತುವರ್ಜಿವಹಿಸಿ ಸಲಹುತ್ತಾ ಬಂದರು.

ಒಂದಂತೂ ಸತ್ಯ. ಬಿಜೆಪಿ ಆಂತರಿಕ ಕಲಹಗಳಿಂದ ಬೆಂದುಹೋಗುತ್ತಿರುವಷ್ಟೂ ಕಾಲ, ಜೆಡಿಎಸ್‌ ಪಕ್ಷಕ್ಕೆ ತನ್ನ ಅಸ್ತಿತ್ವದ ದೊಡ್ಡ ಪ್ರಶ್ನೆಗಳು ಎದುರಾಗುವುದಿಲ್ಲ. ಯಾಕೆಂದರೆ ತನ್ನ ಅಡಿಪಾಯವೇ ಅಲ್ಲಾಡುತ್ತಿರುವಾಗ, ಜೆಡಿಎಸ್‌ ಪಕ್ಷವನ್ನು ಆಪೋಷನ ತೆಗೆದುಕೊಳ್ಳುವ ತ್ರಾಣ ಬಿಜೆಪಿಗಾದರೂ ಹೇಗೆ ಬರುತ್ತೆ? ಈ ಆಯಾಮವೇ ಈಗ ಬಿಜೆಪಿ ಬೇಗುದಿಯಲ್ಲಿ ದೇವೇಗೌಡರ ಪಾತ್ರವನ್ನು ಗುಮಾನಿಯಿಂದ ನೋಡುವಂತೆ ಮಾಡುತ್ತಿದೆ.

ಸೋಮಣ್ಣ, ಯಡಿಯೂರಪ್ಪನವರ ವಿರುದ್ಧ ಗುಟುರು ಹಾಕುತ್ತಲೇ ಇದ್ದವರು. ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡುವಾಗ, ಆ ಸ್ಥಾನಕ್ಕೆ ತಾನೂ ಪ್ರಬಲ ಆಕಾಂಕ್ಷಿ ಎಂದು ತೊಡೆ ತಟ್ಟಿದ್ದಂತವರು. ಅಂತಹ ಸೋಮಣ್ಣ, ಇದೀಗ ಯಡಿಯೂರಪ್ಪ-ವಿಜಯೇಂದ್ರನ ವಿರುದ್ಧ ಬಿಜೆಪಿಯೊಳಗೆ ವ್ಯವಸ್ಥಿತ ಮತ್ತು ಪ್ರಬಲ ಪ್ರತಿರೋಧ ಉಲ್ಬಣಿಸಿರುವ ಸಮಯದಲ್ಲಿ ಒಂದೇಒಂದು ಮಾತು ಆಡದಂತೆ ಸೈಲೆಂಟ್‌ ಆಗಿರ್ತಾರೆ ಅನ್ನೋದೆ ತುಂಬಾ ಅಸಹಜವಾಗಿ ಕಾಣುತ್ತೆ. ಯತ್ನಾಳ್‌ ಎಂಬ ಕಿಡಿಗೆ ನಾನಾ ಕೋನಗಳಿಂದ ತಿದಿ ಊದಲಾಗ್ತಿದೆ. ಬಿ ಎಲ್ ಸಂತೋಷ್, ಬೊಮ್ಮಾಯಿ, ಪ್ರಹ್ಲಾದ್ ಜೋಷಿ ಮೊದಲಾದವರು ಯತ್ನಾಳ್‌ ಬೆನ್ನಿಗೆ ಇರೋದು ಈಗ ಬಹಿರಂಗ ರಹಸ್ಯ. ಗೌಡರ ಆಣತಿಯಂತೆ ಅಂತದ್ದೆ ಒಂದು ಕೆಲಸವನ್ನು ಸೋಮಣ್ಣ ಕೂಡಾ ಮಾಡ್ತಾ ಇದಾರಾ? ಅನ್ನೋ ಪ್ರಶ್ನೆಯನ್ನು ಸೋಮಣ್ಣನ ಈ ಅಸಹಜ ಮೌನ ಹುಟ್ಟುಹಾಕ್ತಿದೆ.

ಊಹೆ ಮತ್ತು ಗುಮಾನಿಯ ಹೊರತಾಗಿ ಈ ವಿಶ್ಲೇಷಣೆಗೆ ಹೆಚ್ಚೇನು ಪುರಾವೆಗಳಿಲ್ಲ. ಆದರೆ ಕೊಲೆಯೋ, ಕಳ್ಳತನವೋ ನಡೆದಾಗ ಪೊಲೀಸರು ಶುರು ಮಾಡುವ ತನಿಖೆಯ ರೀತಿ ಹೇಗಿರುತ್ತದೆಂದರೆ ಆ ಕೊಲೆಯಿಂದ, ಕಳ್ಳತನದಿಂದ ಯಾರಿಗೆ ಹೆಚ್ಚು ಲಾಭ ಅನ್ನೋದರಿಂದ ತನಿಖೆ ಆರಂಭವಾಗುತ್ತದೆ. ಈ ನಿಟ್ಟಿನಲ್ಲಿ ಬಿಜೆಪಿಯೊಳಗಿನ ಈ ಆಂತರಿಕ ಕಲಹಗಳಿಂದ ಜೆಡಿಎಸ್‌ ಹೆಚ್ಚು ಸುರಕ್ಷಿತ ಅನ್ನೋದನ್ನ ನಾವು ತೊಡೆದುಹಾಕಲಾಗುವುದಿಲ್ಲ.

ಬಿಜೆಪಿ ಭಿನ್ನಮತದಲ್ಲಿ ಜೆಡಿಎಸ್‌ನ ಛಾಯೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಮೈತ್ರಿಯಿಂದಾಗಿ ಹಳೇಮೈಸೂರು ಭಾಗದಲ್ಲಿ ಬಿಜೆಪಿ ದೊಡ್ಡ ಲುಕ್ಸಾನು ಅನುಭವಿಸುತ್ತಿರುವುದು ಮಾತ್ರ ಸತ್ಯ. ಈಗಾಗಲೇ, ತಮ್ಮ ಮಗನನ್ನೇ ಕಣಕ್ಕಿಳಿಸಬೇಕೆಂಬ ಕುಮಾರಸ್ವಾಮಿಯರ ಹಠಕ್ಕೆ ಸಿ ಪಿ ಯೋಗೇಶ್ವರ್‍‌ರನ್ನು ಕಳೆದುಕೊಂಡಿರುವ ಬಿಜೆಪಿಗೆ, ಇದೀಗ ಹಾಸನದಲ್ಲಿ ಪ್ರಭಾವಿ ಬಿಜೆಪಿ ನಾಯಕ ಎನಿಸಿರುವ, ಆ ಪಕ್ಷದ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬನಾದ ಪ್ರೀತಂ ಗೌಡ ಕೂಡಾ ಗುಡ್‌ಬೈ ಹೇಳಿ ಕಾಂಗ್ರೆಸ್‌ ಸೇರಲು ಮುಂದಾಗಿದ್ದಾರೆ ಅನ್ನೋ ವರ್ತಮಾನಗಳು ಕೇಳಿಬರುತ್ತಿವೆ. ಕುಮಾರಸ್ವಾಮಿಯವರ ಅತಿಯಾದ ಹಸ್ತಕ್ಷೇಪ ಮತ್ತು ಒಕ್ಕಲಿಗ ನಾಯಕತ್ವವನ್ನು ತಮ್ಮ ಕುಟುಂಬದೊಳಗೇ ಉಳಿಸಿಕೊಳ್ಳುವ ಅವರ ರಾಜಕೀಯ ಲೆಕ್ಕಾಚಾರಗಳಿಂದ ಬಿಜೆಪಿಯೊಳಗಿನ ಒಕ್ಕಲಿಗ ನಾಯಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಅವರಲ್ಲಿ ಪ್ರೀತಂ ಗೌಡ ಕೂಡಾ ಒಬ್ಬರು. ಮುಡಾ ಹಗರಣ ಮುಂದಿಟ್ಟುಕೊಂಡು ಬಿಜೆಪಿ ನಡೆಸಿದ ಮೈಸೂರು ಪಾದಯಾತ್ರೆ ಸಂದರ್ಭದಲ್ಲಿ ಬಿಜೆಪಿಗೆ ಬೆದರಿಕೆ ಹಾಕಿ, ಆ ಪಾದಯಾತ್ರೆಯಿಂದ ಪ್ರೀತಂ ಗೌಡನನ್ನು ದೂರ ಇಡುವಂತೆ ಮಾಡಿದ್ದ ಕುಮಾರಸ್ವಾಮಿಯವರು, ಅಕಸ್ಮಾತ್ತಾಗಿ ಆತ ಕಾಣಿಸಿಕೊಂಡಾಗ ತಮ್ಮ ಕಾರ್ಯಕರ್ತರ ಮೂಲಕ ಧಿಕ್ಕಾರ ಕೂಗಿಸಿ, ಅರ್ಧಕ್ಕೇ ಹೊರನಡೆಯುವಂತೆ ಮಾಡಿದ್ದರು. ಪ್ರೀತಂ ಗೌಡ ಒಕ್ಕಲಿಗ ನಾಯಕನಾಗಿ ಬಿಜೆಪಿಯೊಳಗೆ ಬೆಳೆಯುತ್ತಿರೋದೆ ಇದಕ್ಕೆ ಕಾರಣ. ಕುಮಾರಸ್ವಾಮಿಯವರ ಈ ನಿರಂತರ ಹಸ್ತಕ್ಷೇಪದಿಂದ ಬೇಸತ್ತಿರುವ ಪ್ರೀತಂ ಗೌಡ ಬಿಜೆಪಿ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಇದಂತೂ ಬಿಜೆಪಿ ಆಂತರಿಕ ಮೂಲಗಳೇ ಖಾತ್ರಿಪಡಿಸಿರುವ ಸುದ್ದಿ. ಕಾಲಾಯ ತಸ್ಮೈ ನಮಃ…….

  • ಮಾಚಯ್ಯ ಎಂ ಹಿಪ್ಪರಗಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page