Home ಬ್ರೇಕಿಂಗ್ ಸುದ್ದಿ ಧರ್ಮಸ್ಥಳ ಅಪರಿಚಿತ ಬುರುಡೆ ಪ್ರಕರಣ ತನಿಖೆ ಪೂರ್ಣ: 7,005 ಪುಟಗಳ ಅಂತಿಮ ವರದಿ ಬೆಳ್ತಂಗಡಿ ನ್ಯಾಯಾಲಯಕ್ಕೆ...

ಧರ್ಮಸ್ಥಳ ಅಪರಿಚಿತ ಬುರುಡೆ ಪ್ರಕರಣ ತನಿಖೆ ಪೂರ್ಣ: 7,005 ಪುಟಗಳ ಅಂತಿಮ ವರದಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ

0

ಬೆಳ್ತಂಗಡಿ: ರಾಜ್ಯಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ಧರ್ಮಸ್ಥಳ ಪೊಲೀಸ್ ಠಾಣೆಯ ಅಪರಿಚಿತ ಬುರುಡೆ ಪ್ರಕರಣ (ಮೊಕದ್ದಮೆ ಸಂಖ್ಯೆ: 39/2025) ಸಂಬಂಧ ವಿಶೇಷ ತನಿಖಾ ದಳ (SIT) ತನಿಖೆಯನ್ನು ಪೂರ್ಣಗೊಳಿಸಿ, ಬೆಳ್ತಂಗಡಿ ನ್ಯಾಯಾಲಯಕ್ಕೆ 7,005 ಪುಟಗಳ ಬೃಹತ್ ಅಂತಿಮ ವರದಿಯನ್ನು ಸಲ್ಲಿಸಿದೆ.

ಎಸ್‌ಐಟಿ ಅಧಿಕಾರಿಗಳ ತಂಡವು ಸೋಮವಾರ ಮಧ್ಯಾಹ್ನ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಶಾಂಕ್ ನಾಗೇಂದ್ರ ಭಟ್ ಅವರ ನ್ಯಾಯಾಲಯಕ್ಕೆ ಹಾಜರಾಗಿ, ಒಟ್ಟು 12 ಕಡತಗಳಲ್ಲಿ ಸಿದ್ಧಪಡಿಸಲಾದ ಸಮಗ್ರ ತನಿಖಾ ವರದಿಯನ್ನು ಸಲ್ಲಿಸಿತು. ಈ ವರದಿಯಲ್ಲಿ ಈ ಹಿಂದೆ ಸಲ್ಲಿಸಲಾಗಿದ್ದ 3,923 ಪುಟಗಳ ವರದಿ ಹಾಗೂ ಹೊಸದಾಗಿ ಸಿದ್ಧಪಡಿಸಿದ 3,082 ಪುಟಗಳ ವರದಿ ಸೇರಿ ಒಟ್ಟು 7,005 ಪುಟಗಳ ಅಂತಿಮ ಚಾರ್ಜ್‌ಶೀಟ್ ಒಳಗೊಂಡಿದೆ.

ಪ್ರಕರಣದ ತನಿಖೆಯ ವೇಳೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 215ರ ಅಡಿಯಲ್ಲಿ ಸುಳ್ಳು ಸಾಕ್ಷ್ಯ (Perjury) ನೀಡಿದ ಆರೋಪದ ಕುರಿತು ಕಳೆದ ವರ್ಷದ ನವೆಂಬರ್ 20ರಂದು ಎಸ್‌ಐಟಿ ನ್ಯಾಯಾಲಯಕ್ಕೆ ಪ್ರತ್ಯೇಕ ವರದಿಯನ್ನೂ ಸಲ್ಲಿಸಿತ್ತು. ಈ ಸಂಬಂಧ ಪ್ರಮುಖ ಆರೋಪಿ ಹಾಗೂ ಮಾಜಿ ‘ಮಾಸ್ಕ್ ಮ್ಯಾನ್’ ಎಂದು ಗುರುತಿಸಲ್ಪಟ್ಟ ಸಿ.ಎನ್. ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ., ವಿಠಲ್ ಗೌಡ ಹಾಗೂ ಸುಜಾತಾ ಭಟ್ ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ಧ ದೋಷಾರೋಪ ಮಾಡಲಾಗಿದೆ.

ಅಂತಿಮ ವರದಿ ಸಲ್ಲಿಕೆ ವೇಳೆ ಎಸ್‌ಐಟಿ ಎಸ್‌ಪಿ ಸಿ.ಎ. ಸೈಮನ್, ಇನ್ಸ್‌ಪೆಕ್ಟರ್‌ಗಳಾದ ಕುಸುಮಾಧರ್, ಮಂಜುನಾಥ್ ಹಾಗೂ ತನಿಖಾ ತಂಡದ ಇತರ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿ.ಎನ್. ಚಿನ್ನಯ್ಯ ಕೂಡ ನ್ಯಾಯಾಲಯದ ಕಲಾಪದಲ್ಲಿ ಹಾಜರಾಗಿದ್ದನು.

2025ರ ಆಗಸ್ಟ್ 23ರಂದು ಎಸ್‌ಐಟಿ ತಂಡದಿಂದ ಬಂಧನಕ್ಕೊಳಗಾಗಿದ್ದ ಚಿನ್ನಯ್ಯ ಸೇರಿದಂತೆ ಆರೋಪಿಗಳ ವಿರುದ್ಧದ ತನಿಖೆ ಇದೀಗ ಅಧಿಕೃತವಾಗಿ ಪೂರ್ಣಗೊಂಡಿದ್ದು, ಪ್ರಕರಣದ ಮುಂದಿನ ವಿಚಾರಣೆ ಹಾಗೂ ನ್ಯಾಯಾಂಗ ಪ್ರಕ್ರಿಯೆಯತ್ತ ಎಲ್ಲರ ಗಮನ ನೆಟ್ಟಿದೆ.

You cannot copy content of this page

Exit mobile version