ಬೆಂಗಳೂರು ಜು. 15: ದಲಿತ ಚಳವಳಿ ಮಕಾಡೆ ಮಲಗಿರುವಾಗ, ದಲಿತ ಮುಖ್ಯಮಂತ್ರಿ ಹಾಸ್ಯಾಸ್ಪದ ಎನ್ನಿಸುತ್ತದೆ. ಪಂಚಮ ಪತ್ರಿಕೆ ಆರ್ಥಿಕ ಮುಗ್ಗಟ್ಟಿನಿಂದ ನಿಂತಿಲ್ಲ, ಪರಸ್ಪರ ಪ್ರೀತಿ, ವಿಶ್ವಾಸ ಇಲ್ಲದೇ ನಿಂತಿರುವುದು. 1985 ರಲ್ಲಿ ಪಂಚಮ ನಿಂತಿತು. ಇಂದು ಸ್ವತಂತ್ರವಾಗಿ ಬರೆಯಲು ಯೋಗ್ಯತೆ ಇಲ್ಲದ, ಸಾಧ್ಯವಾಗದ ಪತ್ರಿಕೆಗಳು ಇವೆ. ಆಗ ಸತ್ಯ ಬರೆಯುವ ನೈತಿಕ ಅಂತಸ್ಥೈರ್ಯ ಪಂಚಮಕ್ಕೆ ಇತ್ತು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕನ್ನಡ ಭವನದಲ್ಲಿ ಜರುಗಿದ ಪಂಚಮ ಪತ್ರಿಕೆಯ ಸಂಪುಟಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಂಚಮ ಪತ್ರಿಕೆಯ ಪ್ರಕಾಶಕರಾಗಿದ್ದ ಎಚ್. ಗೋವಿಂದಯ್ಯ ಅಭಿಪ್ರಾಯಪಟ್ಟರು.
ಅವರು ಮುಂದುವರೆದು ಮಾತನಾಡುತ್ತಾ, ದಲಿತ ಚಳವಳಿಯ ಹೆಣದ ಮೇಲೆ ಇಂದು ಅಣಬೆಯಂತೆ ಡಿಎಸ್‌ಎಸ್ ಬಣಗಳು ಹುಟ್ಟಿಕೊಂಡಿವೆ. ಇದು ನಾಚಿಕೆಗೇಡಿನ ಸಂಗತಿ. ಭ್ರಷ್ಟ ರಾಜಕಾರಣಿಗಳ ಬಾಲಂಗೋಚಿಗಳಾಗಿ ದಲಿತ ಬಣಗಳು ಇಂದು ತಿರುಗುತ್ತಿವೆ. ಪ್ರಜ್ಞಾವಂತರಿಗೆ ತಲೆತಗ್ಗಿಸುವ ಕಾಲವಿದು. ಈಗಲಾದರೂ ದಲಿತ ಚಳವಳಿಕಾರರು ತಮ್ಮ ತಪ್ಪುಗಳನ್ನು ತಾವೇ ಕ್ಷಮಿಸುಕೊಂಡು, ಒಂದಾಗಿ ಮುನ್ನಡೆಯಬೇಕೆಂದು ಡಿಎಸ್‌ಎಸ್‌ನ ಪಾಕ್ಷಿಕ ಪತ್ರಿಕೆಯಾಗಿದ್ದ “ಪಂಚಮ” ಬಯಸುತ್ತದೆ ಎಂದು ಎಚ್. ಗೋವಿಂದಯ್ಯ ಬಲವಾಗಿ ಆಶಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ. ಬಿ.ಎಸ್. ಮಂಜುನಾಥ ಸ್ವಾಮಿ, ಇಂಧೂದರ ಹೊನ್ನಾಪುರ, ಶಿವಾಜಿ ಗಣೇಶನ್, ರಾಮದೇವ ರಾಕೆ, ಇಂದಿರಾ ಕೃಷ್ಣಪ್ಪ, ಡಾ. ರವಿಕುಮಾರ ಭಾಗಿ ಸೇರಿದಂತೆ ಪ್ರಮುಖರು ಹಾಜರಿದ್ದರು.
