Thursday, September 25, 2025

ಸತ್ಯ | ನ್ಯಾಯ |ಧರ್ಮ

ಧರ್ಮಸ್ಥಳ ಪ್ರಕರಣ : “ನ್ಯಾಯ ಸಮಾವೇಶ”ದ ಮುಖ್ಯಾಂಶಗಳು; ಹೋರಾಟದ ಆಗ್ರಹಗಳೇನು..?

“ಧರ್ಮಸ್ಥಳದಲ್ಲಿ ದಲಿತರ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಅಲ್ಲಿರುವ ವ್ಯವಸ್ಥೆ ಮನುಸ್ಮೃತಿಯ ಆಧಾರದ ಮೇಲೆ ನಿಂತಿದೆ. ಅತ್ಯಾಚಾರ ಮತ್ತು ಕೊಲೆಗಳನ್ನು ಖಂಡಿಸಿದರೆ ಜೀವಬೆದರಿಕೆ ಹಾಕಲಾಗುತ್ತಿದೆ,” ಎಂದು ಮಾಜೀ ಸಂಸದೆ ಸುಭಾಷಿಣಿ ಅಲಿ ಹೇಳಿದರು.

ಧರ್ಮಸ್ಥಳದಲ್ಲಿ ನಡೆದಿರುವ ದೌರ್ಜನ್ಯ, ಅತ್ಯಾಚಾರ ಮತ್ತು ಅಕ್ರಮಗಳ ವಿರುದ್ಧ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಹಾಗೂ ವಿವಿಧ ಹೋರಾಟಗಾರರು, ಸಾಹಿತಿಗಳು ಹಾಗೂ ಸಂಘಟನೆಗಳ ನಾಯಕರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ನ್ಯಾಯ ಸಮಾವೇಶದಲ್ಲಿ ಇವರು ಈ ಘಟನೆಗಳಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದರು ಮತ್ತು ಸರ್ಕಾರಕ್ಕೆ ತನಿಖೆ ನಡೆಸುವಂತೆ ಅವರು  ಆಗ್ರಹಿಸಿದರು.

“ನಾವು ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಹಾಸನದಲ್ಲಿ ಹೋರಾಟ ನಡೆಸಿದೆವು.ಕರ್ನಾಟಕದ ಪ್ರಗತಿಪರ, ಪ್ರಜಾಪ್ರಭುತ್ವವಾದಿ ಜನರು ಆತನಿಗೆ ಜಾಮೀನು ಸಿಗದಂತೆ ಮಾಡಿದರು. ಪ್ರಜ್ವಲ್ ರೇವಣ್ಣನನ್ನು ಜೈಲಿಗೆ ಕಳುಹಿಸಿದರು. ಹಾಸನದಲ್ಲಿ ಒಬ್ಬ ಅಪರಾಧಿಯಾದರೆ, ಧರ್ಮಸ್ಥಳದಲ್ಲಿ ಇಡೀ ವ್ಯವಸ್ಥೆ ಯೇ ಅಪರಾಧದಲ್ಲಿ ಭಾಗಿಯಾಗಿದೆ,” ಎಂದು ಅವರು ಹೇಳಿದರು.

ಹೋರಾಟಗಾರರಾದ ವಿಮಲಾ ಅವರು, “ಇದು ಅಧರ್ಮದ ವಿರುದ್ಧದ ಧರ್ಮಯುದ್ಧ. ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಯಲಿದೆ. ಧರ್ಮಸ್ಥಳದಲ್ಲಿ ನಡೆದ ದೌರ್ಜನ್ಯ, ಅತ್ಯಾಚಾರ ಮತ್ತು ಅಕ್ರಮಗಳಿಗೆ ಲೆಕ್ಕ ಚುಕ್ತಾ ಆಗಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ. 2025ರವರೆಗೆ ಧರ್ಮಸ್ಥಳದಲ್ಲಿ ನಡೆದ ಎಲ್ಲಾ ಸಾವುಗಳ ತನಿಖೆ ನಡೆಯಬೇಕು ಮತ್ತು ಎಸ್‌ಐಟಿ ತನಿಖೆಗೆ ಮುಕ್ತ ಅವಕಾಶ ನೀಡಬೇಕು,” ಎಂದು ಹೇಳಿದರು.

ಸಮಾವೇಶದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಎಸ್.ಜಿ. ಸಿದ್ದರಾಮಯ್ಯ ಅವರು, “ಈ ಹೋರಾಟವು ಧರ್ಮ, ದೇವರು ಅಥವಾ ದೇವಾಲಯದ ವಿರುದ್ಧ ಅಲ್ಲ, ಆದರೆ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಧರ್ಮಾಧಿಕಾರಿಯ ಮೇಲಿದೆ. ಭಕ್ತರ ಬಗ್ಗೆ ಅವರಿಗೆ ಕಾಳಜಿ ಇಲ್ಲವೇ?” ಎಂದು ಪ್ರಶ್ನಿಸಿದರು.

ಅಲ್ಲದೆ, ರಾಜಕಾರಣಿಗಳನ್ನು ಪ್ರಶ್ನಿಸಿದ ಅವರು, “ಹೆಣ್ಣುಮಕ್ಕಳನ್ನು ಕೊಂದವರು ಯಾರು? ಉತ್ತರ ಕೊಡಿ” ಎಂದು ಆಗ್ರಹಿಸಿದರು. ಹೆಗ್ಗಡೆ ಕೇವಲ ದೇವಸ್ಥಾನದ ಉಸ್ತುವಾರಿ ನೋಡಿಕೊಂಡು ಆದಾಯ ಪಡೆಯುತ್ತಿದ್ದಾರೆ ಹೊರತು, ಅವರಿಗೆ ದೇವರು ಅಥವಾ ಭಕ್ತರೊಂದಿಗೆ ಯಾವುದೇ ಸಂಬಂಧವಿಲ್ಲ,” ಎಂದು ಹೇಳಿದರು.

ವಕೀಲ ಬಾಲನ್‌ ಅವರು, “ಪದ್ಮಲತಾ ಪ್ರಕರಣ ಮತ್ತೆ ತೆರೆಯಲಿದೆ. ವೇದವಲ್ಲಿ, ಸೌಜನ್ಯ, ಮತ್ತು ಪದ್ಮಲತಾ ನ್ಯಾಯ ಸಿಗುವವರೆಗೂ ಉರಿಯುವ ಬೆಂಕಿಯಂತೆ ಇರುತ್ತಾರೆ. ‘ಉಪ್ಪು ತಿಂದವರು ನೀರು ಕುಡಿಯಲೇಬೇಕು,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಹಿತಿ ಮುಡ್ನಾಕೂಡು ಚಿನ್ನಸ್ವಾಮಿ, “ಹೆಗ್ಗಡೆಗೂ, ದೇವರಿಗೂ, ಅಲ್ಲಿಗೆ ಬರುವ ಹಿಂದೂ ಭಕ್ತರಿಗೂ ಸಂಬಂಧ ಇಲ್ಲ. ಅಲ್ಲಿ ಪೂಜೆ ಕೂಡಾ ಮಾಡಲ್ಲ. ಅಲ್ಲಿನ ಉಸ್ತುವಾರಿ ನೋಡಿಕೊಂಡು, ಅದರಿಂದ ಬರುವ ಆದಾಯವನ್ನು ತೆಗೆದುಕೊಳ್ಳುತ್ತಾರೆ. ಜನರಿಗೆ ಒಂದು ಕಾನೂನು ಆದರೆ, ಅವರಿಗೇ ಒಂದು ಕಾನೂನು,” ಎಂದು ಹೇಳಿದರು.

“ಎದ್ದೇಳು ಮಂಜುನಾಥ, ಕೊನೆಗಾಲ ಬರುತ್ತಿದೆ” ಎಂದು ಘೋಷಿಸಿದ ಅವರು, ಜಗದ್ಗುರುಗಳು ಮತ್ತು ದೇವಾಂಶ ಸಂಭೂತರು ಜನರಿಂದ ಆಯ್ಕೆಯಾದ ಸರ್ಕಾರದ ಮೇಲೆ ಧಾರ್ಮಿಕ ಸಂಸ್ಥಾನವನ್ನು ಹೇರಲು ಪಿತೂರಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಮಂತ್ರಿಗಳು ಯಾರು ಆಗಬೇಕು ಎಂದು ಅವರೇ ನಿರ್ಧರಿಸಿದರೆ, ಜನಸಾಮಾನ್ಯರು ಮತ ಯಾಕೆ ಹಾಕಬೇಕು?” ಎಂದು ದಲಿತ ನಾಯಕರು ಮಾವಳ್ಳಿ ಶಂಕರ್ ಪ್ರಶ್ನಿಸಿದರು.

ಚಿಂತಕ ಡಾ. ಸಿದ್ದನಗೌಡ ಪಾಟೀಲ ಅವರು, “ಅನ್ಯಾಯದ ವಿರುದ್ಧ ಹೋರಾಡಿದರೆ ಧರ್ಮ ಜಾತಿಯ ವಿರುದ್ಧ ಪಿತೂರಿ ಎಂದು ಸುಳ್ಳು ಆಪಾದನೆಗಳನ್ನು ಹೊರಿಸಿ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ. ಈ ರಾಜ್ಯದ ಎಲ್ಲ ಭಾಗಗಳಲ್ಲೂ ಧರ್ಮಸ್ಥಳ ಮತ್ತು ಅಣ್ಣಪ್ಪನ ಭಕ್ತರಿದ್ದಾರೆ. ಅವರೆಲ್ಲ ಭಕ್ತರು ಮತ್ತು ಮತೀಯರು. ಆದರೆ ಮತಾಂಧರು ಮಾತ್ರ SIT ಯನ್ನೂ ವಿರೋಧಿಸುತ್ತಿದ್ದಾರೆ. ನನ್ನ ಅಧ್ಯಯನದ ಪ್ರಕಾರ ಧರ್ಮಸ್ಥಳದಲ್ಲಿ ಸ್ಥಳೀಯರು ಭೂಮಿ ಮತ್ತು ಆಶ್ರಯ ಕಳೆದುಕೊಂಡಿದ್ದಾರೆ. ಅದಕ್ಕಾಗಿಯೂ ಈ ಹೋರಾಟವನ್ನು ಮುನ್ನಡೆಸಬೇಕು. ಎಸ್‌ಐಟಿ ಎಂದರೆ ಷಡ್ಯಂತ್ರವಲ್ಲ. ಷಡ್ಯಂತ್ರವನ್ನು ಬುಡಮೇಲು ಮಾಡುವ ತನಿಖಾ ತಂಡ,” ಎಂದು ಹೇಳಿ, ಮಾಧ್ಯಮಗಳಿಗೆ ಜನರ ಪರವಾಗಿರಲು, ನ್ಯಾಯದ ಪರವಾಗಿಲು, ಅನ್ಯಾಯವನ್ನು ಪ್ರಶ್ನಿಸಲು ಆಗ್ರಹಿಸಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕನ್ನಡಪರ ಹೋರಾಟಗಾರರು, ಲೇಖಕ ಜಾಣಗೆರೆ ವೆಂಕಟರಾಮಯ್ಯ ಅವರು, “ದೇವರಲ್ಲಿ ನಂಬಿಕೆ ಇರದ ಒಬ್ಬ ಆಷಾಢಭೂತಿ ಈ ಎಲ್ಲ ಅನ್ಯಾಯಗಳ ಪರ ನಿಂತಿದ್ದಾನೆ. ಇಷ್ಟೆಲ್ಲ ಕೊಲೆ ಅನ್ಯಾಯಗಳ ಹಿಂದಿರುವ ವ್ಯಕ್ತಿಯ ಬಗ್ಗೆ ದೇಶದ ಮುಕ್ಕಾಲು ಪಾಲು ಜನರಿಗೆ ಗೊತ್ತಿದೆ.  ಈ ಹೋರಾಟ ಇಂದಿನ ಪ್ರತಿಭಟನೆಯೊಂದಿಗೆ ನಿಲ್ಲುವುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ನಿರಂತರವಾಗಿರುತ್ತದೆ. ನ್ಯಾಯ ನಮ್ಮೊಂದಿಗಿರುವಾಗ ಹೆದರಬೇಕಾಗಿಲ್ಲ. ಸರಕಾರವೂ ದೇವಮಾನವರ ಬೆನ್ನಿಗೆ ನಿಲ್ಲುವುದೆಂಬ ಆತಂಕವೂ ನಮಗೆ ಬೇಡ,” ಎಂದು ಹೇಳಿದರು.

ಹಿರಿಯ ಹೋರಾಟಗಾರರಾದ ಕೆ. ನೀಲಾ ಗುಲ್ಬರ್ಗ, “ ಕೊಂದವರು ಯಾರು ಅನ್ನೋದನ್ನ ಮುಂದೊಂದು ದಿನ ನಮ್ಮ ನ್ಯಾಯವಾದಿಗಳು ಜನತೆಯ ಮುಂದೆ ತಂದು ನಿಲ್ಲಿಸ್ತಾರೆ. ಕರ್ನಾಟಕದಲ್ಲಿ ಜನತೆಯ ನ್ಯಾಯಾಲಯ ಆರಂಭವಾಗುತ್ತದೆ. ನಮ್ಮ ಉತ್ತರ ಕರ್ನಾಟಕದ ಹೇಮಾವತಿಯಲ್ಲಿ ಹರಿಯದ ನೆತ್ತರು ನೇತ್ರಾವತಿಯಲ್ಲಿ ಯಾಕೆ ಹರೀತಿದೆ. ಖಾವಂದರೇ, ಧರ್ಮಸ್ಥಳ ಎಂಬ ಊರನ್ನು ನಿಮಗೆ ಗುತ್ತಿಗೆ ನೀಡಿಲ್ಲ. ಕಾಮ್ರೇಡ್ ದೇವಾನಂದರು ಬಡ ರೈತನಾಗಿ ಚುನಾವಣೆಗೆ ನಿಂತಿದ್ದು ತಪ್ಪೇ? ಅವರ ಮಗಳನ್ನು ಬಂಧಿಸಿಟ್ಟು ಬರ್ಬರವಾಗಿ ಕೊಂದು ಹಾಕಿದರು. ಕಮ್ಯುನಿಸ್ಟರು ಧರ್ಮಸ್ಥಳದಲ್ಲಿ ಸಂವಿಧಾನ, ಪ್ರಜಾಪ್ರಭುತ್ವದ ಕುರಿತು ಜಾಗೃತಿ ಮೂಡಿಸಲು ಓಡಾಡಿದ್ದಕ್ಕೆ ಅಟ್ರಾಸಿಟ್ ಕೇಸ್ ಹಾಕ್ತಾರೆ,” ಎಂದು ಆತಂಕ ವ್ಯಕ್ತಪಡಿಸಿದರು.

ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆಯವರ ಹೆಸರನ್ನು ಬಳಸಿ ವರದಿ ಮಾಡದಂತೆ ಗ್ಯಾಗ್‌ ಆರ್ಡರ್‌ ತಂದಿದ್ದನ್ನು ಪ್ರಸ್ತಾಪಿಸಿದ ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್, “ಗಾಂಧೀಜಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. ಬ್ರಿಟಿಷರ ಹೆಸರು ಹೇಳದೇ ಹೋರಾಟ ಮಾಡಿ ಅಂತ ಗಾಂಧೀಜಿಗೆ ಹೇಳಿದ್ರೆ ಹೇಗಾದೀತು? ಹೋರಾಟವನ್ನು ಷಡ್ಯಂತ್ರ ಎಂದು ಕರೆಯುವುದಾದರೆ, ಈ ಫ್ರೀಡಂ ಪಾರ್ಕನ್ನು ಕೂಡ ಷಡ್ಯಂತ್ರ ಪಾರ್ಕ್ ಎಂದು ಕರೆಯಬೇಕಾದೀತು,” ಎಂದು ಟೀಕಿಸಿದರು.

ವಕೀಲ ಸೂರ್ಯ ಮುಕುಂದರಾಜ್‌ ಅವರು ಮಾತನಾಡುತ್ತಾ, “ಈ ಹೋರಾಟದಲ್ಲಿ ನಮಗೆ ಯಾವುದೇ ರೀತಿಯ ಜಾತಿ ಧರ್ಮ ಪಂಥಗಳ ಬೇಧಭಾವವಿಲ್ಲ. ಈ ಹೋರಾಟದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರುತ್ತೇವೆ. ಇಂತಹ ಪ್ರತಿಭಟನೆಗಳು ಹೋರಾಟಗಳು ಈ ಫ್ರೀಡಂ ಪಾರ್ಕಲ್ಲಿ ಇನ್ನು ಮುಂದೆಯೂ ನಡೆಯಬೇಕು,” ಎಂದು ಹೇಳಿದರು.

“ಎಸ್ಐಟಿ ತನಿಖೆಯನ್ನು ಹಳ್ಳ ಹಿಡಿಸಿದ್ರೆ ಸರ್ಕಾರವೂ ಹಳ್ಳ ಹಿಡಿಯುತ್ತೆ. ಇದೊಂದು ರಾಜಕೀಯ  ಹೋರಾಟ‌. ಹಿಂದೂಗಳ ಹತ್ಯೆ ಬಗ್ಗೆ ಮಾತನಾಡುವ ಬಿಜೆಪಿ, ಹಿಂದುತ್ವವಾದಿಗಳು ಈಗ ಯಾಕೆ ಸುಮ್ಮನಿದ್ದಾರೆ?” ಎಂದು ಹೋರಾಟಗಾರರಾದ ಜ್ಯೋತಿ ಎಸ್ ಹೇಳಿದರು.

ಸಮಾವೇಶದಲ್ಲಿ ರಾಜ್ಯದ ವಿವಿಧ ಕಡೆಗಳಿಂದ,ಸಂಘಟನೆಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page