ಬೆಳ್ತಂಗಡಿ, ಜು.31: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಶವಸಂಸ್ಕಾರಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ನಡೆಸುತ್ತಿರುವ ಶೋಧಕಾರ್ಯದ ಮೂರನೇ ದಿನದಂದು ಸಾಕ್ಷಿ-ದೂರುದಾರ ತೋರಿಸಿದ ಆರನೇ ಪಾಯಿಂಟ್‌ನಲ್ಲಿ ಮೃತದೇಹದ ಅವಶೇಷಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ದೂರುದಾರ ಗುರುತಿಸಿರುವ ಈ ಆರನೇ ಪಾಯಿಂಟ್ ನೇತ್ರಾವತಿ ಸ್ನಾನ ಘಟ್ಟದ ಸಮೀಪದಲ್ಲಿದ್ದು ಉತ್ಖನನದ ವೇಳೆ ಕೆಲವು ಎಲುಬಿನ ಚೂರುಗಳು ಸಿಕ್ಕಿರುವ ಬಗ್ಗೆ ಮಾಹಿತಿಗಳು ಹೊರಬರುತ್ತಿವೆ. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಎಸ್‌ಐಟಿ ತಂಡ ಇಂದು ಬೆಳಗ್ಗೆ 11:30ರ ಸುಮಾರಿಗೆ ಈಗಾಗಲೇ ದೂರುದಾರ ತೋರಿಸಿರುವ 13 ಸ್ಥಳಗಳಲ್ಲಿ ನೇತ್ರಾವತಿ ನದಿಯ ತೀರದ 6ನೇ ಜಾಗದಲ್ಲಿ ಅಗೆಯುವ ಕಾರ್ಯಾಚರಣೆ ನಡೆಸಿದ್ದಾರೆ. ಮೊದಲೆರಡು ದಿನಗಳಲ್ಲಿ ಯಾವುದೇ ಅವಶೇಷಗಳು ಲಭ್ಯವಾಗಿರಲಿಲ್ಲ. ಮೂರನೇ ದಿನವಾದ ಇಂದು, ಗುರುವಾರ ಆರನೇ ಪಾಯಿಂಟ್‌ನಲ್ಲಿ ಮೂರು ಅಡಿ ಆಳದಲ್ಲಿ ಕಳೇಬರದ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಹೊರಬರುತ್ತಿದೆ. ಈ ಬಗ್ಗೆ ಎಸ್‌ಐಟಿ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.
ಎಸ್‌ಐಟಿ ತಂಡದ ಜೊತೆಗೆ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರಿನ ಕೆಎಂಸಿ ವೈದ್ಯರ ತಂಡ, ಎಫ್.ಎಸ್.ಎಲ್. ತಂಡ, ಐ.ಎಸ್.ಡಿ. ಹಾಗೂ ಇತರ ಅಧಿಕಾರಿಗಳು ಇದ್ದರು.