ಹೆದರದೆ ನಿಂತರೆ ಎಂತಹ ಶಕ್ತಿಯೂ ತಲೆಬಾಗುತ್ತದೆ: ಪ್ರಧಾನ್‌ ರಾಜೀನಾಮೆ ನಂತರ ಅಭಿಜಿತ್ ದಿಪ್ಕೆ ಮೊದಲ ಪ್ರತಿಕ್ರಿಯೆ

ದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಸಿತ್ ದಿಪ್ಕೆ ಪ್ರತಿಕ್ರಿಯಿಸಿದ್ದು, “ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯು ನೀವು ಯಾರಿಗೂ ಹೆದರದೆ, ಈ ಸರ್ಕಾರದ ಮುಂದೆ ತಲೆಬಾಗದೆ ನಿಂತರೆ ಯಾರಿಂದ ಬೇಕಾದರೂ ರಾಜೀನಾಮೆ ಪಡೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದ್ದಾರೆ.

ಮಾತು ಮುಂದುವರಿಸಿದ ಅಭಿಸಿತ್ ದಿಪ್ಕೆ, “ಯಾರಿಗೂ ಹೆದರುವ ಅಗತ್ಯವಿಲ್ಲ. ಇದು ಪ್ರಜಾಪ್ರಭುತ್ವ. ಅವರು ರಾಜೀನಾಮೆ ನೀಡಿದ್ದಾರೆ, ಆದರೆ ನಮ್ಮ ಇನ್ನೂ ಎರಡು ಬೇಡಿಕೆಗಳು ಬಾಕಿಯಿವೆ. ನಾವು ಸುಮ್ಮನೆ ಹಿಂತಿರುಗುವುದಿಲ್ಲ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ ನಿಜ, ಆದರೆ ಪರೀಕ್ಷಾ ಅಕ್ರಮಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ಸಿಗಲೇಬೇಕು. ಮತ್ತು ಎರಡನೆಯದಾಗಿ, ಜುಲೈ 20 ರಂದು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನೆನಪಿಡಿ, ಕಾಕ್ರೋಚ್ ಜೊತೆ ಆಟವಾಡಬೇಡಿ” ಎಂದು ಎಚ್ಚರಿಸಿದ್ದಾರೆ.

ಮಧ್ಯಾಹ್ನ 3:30 ಕ್ಕೆ ನಮ್ಮನ್ನು ಕರೆಸಲಾಗಿದೆ: ಸೌರವ್ ದಾಸ್

ಸರ್ಕಾರದೊಂದಿಗಿನ ಮುಂದಿನ ಸುತ್ತಿನ ಮಾತುಕತೆಯ ಕುರಿತು ಮಾಹಿತಿ ನೀಡಿದ ಕಾಕ್ರೋಚ್ ಜನತಾ ಪಾರ್ಟಿಯ ಮುಖ್ಯ ವಕ್ತಾರ ಸೌರವ್ ದಾಸ್, “ನಮ್ಮನ್ನು ಮಧ್ಯಾಹ್ನ 3:30 ಕ್ಕೆ ಮಾತುಕತೆಗೆ ಕರೆಸಲಾಗಿದೆ. ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ, ಅವುಗಳನ್ನು ಲಿಖಿತ ರೂಪದಲ್ಲಿ ನೀಡುವವರೆಗೆ ನಾವು ಎಲ್ಲೂ ಹೋಗುವುದಿಲ್ಲ. ಇದು ನಮಗೆ ಸಿಕ್ಕ ದೊಡ್ಡ ಗೆಲುವು” ಎಂದು ತಿಳಿಸಿದ್ದಾರೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ರಾಜೀನಾಮೆ ಪತ್ರದಲ್ಲಿ, “ನಾನು ನಾಲ್ಕಕ್ಕೂ ಹೆಚ್ಚು ದಶಕಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಶ್ರಮಿಸಿದ್ದೇನೆ. ಸಮರ್ಥ, ಒಳಗೊಳ್ಳುವಿಕೆಯ ಮತ್ತು ಭವಿಷ್ಯದ ದೃಷ್ಟಿಕೋನ ಹೊಂದಿರುವ ಶಿಕ್ಷಣ ವ್ಯವಸ್ಥೆಯು ಬಲವಾದ ರಾಷ್ಟ್ರಕ್ಕೆ ಅಡಿಪಾಯ ಎಂಬುದು ನನ್ನ ನಂಬಿಕೆ” ಎಂದಿದ್ದಾರೆ.

ಪ್ರಧಾನ್ ಮುಂದುವರಿದು, “ದೇಶದ ಯುವಜನತೆಯ ಆಕಾಂಕ್ಷೆಗಳು, ಭಾವನೆಗಳು ಮತ್ತು ನ್ಯಾಯಯುತ ನಿರೀಕ್ಷೆಗಳನ್ನು ನಾನು ಗೌರವಿಸುತ್ತೇನೆ. ಪ್ರಧಾನಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶದ ಸೇವೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಬರೆದಿದ್ದಾರೆ.

ನೀಟ್ ಯುಜಿ ಪರೀಕ್ಷೆಯಲ್ಲಿ ಅಕ್ರಮ ಕಂಡುಬಂದಿತ್ತು: ಧರ್ಮೇಂದ್ರ ಪ್ರಧಾನ್

ತಮ್ಮ ಪತ್ರದಲ್ಲಿ ಪರೀಕ್ಷಾ ವಿವಾದವನ್ನು ಉಲ್ಲೇಖಿಸಿರುವ ಅವರು, “ಮೇ 3, 2026 ರಂದು ನಡೆದ ನೀಟ್ ಯುಜಿ ಪರೀಕ್ಷೆಯಲ್ಲಿ ಲೋಪದೋಷಗಳು ಕಂಡುಬಂದ ತಕ್ಷಣವೇ ಸರ್ಕಾರವು ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತು, ಪರೀಕ್ಷೆಯನ್ನು ರದ್ದುಗೊಳಿಸಿ ಹೊಸ ದಿನಾಂಕವನ್ನು ಪ್ರಕಟಿಸಿತು. ಅಲ್ಲದೆ, ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಮಾದರಿಯಲ್ಲಿ (CBT) ನಡೆಸಲು ನಿರ್ಧರಿಸಲಾಯಿತು” ಎಂದು ಸ್ಪಷ್ಟಪಡಿಸಿದ್ದಾರೆ.

“ಈ ಅವಧಿಯಲ್ಲಿ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಮರುಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಸರ್ಕಾರಿ ಯಂತ್ರಗಳು ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಜೂನ್ 21, 2026 ರಂದು ಮರುಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು” ಎಂದಿದ್ದಾರೆ.

ಮೊದಲ ದಿನದಿಂದಲೂ ಜವಾಬ್ದಾರಿ ವಹಿಸಿಕೊಂಡಿದ್ದೆ: ಧರ್ಮೇಂದ್ರ ಪ್ರಧಾನ್

“ಮೊದಲ ದಿನದಿಂದಲೂ ನಾನು ಘಟನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ ಮತ್ತು ಎಂದಿಗೂ ಪರಿಸ್ಥಿತಿಯಿಂದ ಹಿಂದೆ ಸರಿದಿಲ್ಲ. ಪರೀಕ್ಷಾ ಮಾಫಿಯಾದಿಂದಾಗಿ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯಕ್ಕೆ ಧಕ್ಕೆಯಾಗಬಾರದು ಎಂಬುದು ನನ್ನ ದೃಢ ಸಂಕಲ್ಪವಾಗಿತ್ತು. ಜುಲೈ 16 ರಂದು ಪ್ರಕಟವಾದ ಫಲಿತಾಂಶಗಳು ತೃಪ್ತಿಕರವಾಗಿದ್ದು, ಬಡ ಹಿನ್ನೆಲೆಯ ವಿದ್ಯಾರ್ಥಿಗಳು ಕೂಡ ಯಶಸ್ಸು ಗಳಿಸಿದ್ದಾರೆ. ಆದರೆ ಈ ನಡುವೆ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಕೆಲವರು ವಿದ್ಯಾರ್ಥಿಗಳನ್ನು ಹಾದಿತಪ್ಪಿಸಲು ಯತ್ನಿಸಿದ್ದು ನನಗೆ ತೀವ್ರ ನೋವುಂಟು ಮಾಡಿದೆ” ಎಂದು ಪ್ರಧಾನ್ ಹೇಳಿದ್ದಾರೆ.

“ಪ್ರಧಾನಿ ಮೋದಿ ಅವರ ಮಾರ್ಗದರ್ಶನ ಮತ್ತು ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ. ಸಂಪುಟದ ಸಹೋದ್ಯೋಗಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಧನ್ಯವಾದಗಳು. ದೇಶದ ಸೇವೆಯೇ ನನ್ನ ಜೀವನದ ಮೊದಲ ಆದ್ಯತೆಯಾಗಿದ್ದು, ಸದಾ ಅದಕ್ಕಾಗಿ ಬದ್ಧನಾಗಿರುತ್ತೇನೆ” ಎಂದು ಅವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು