Home ರಾಜ್ಯ ನನಗೆ ಮಸ್ಕ್ ಆಗ್ಲಿ, ಸೊರೊಸ್ ಆಗ್ಲಿ ಫಂಡ್ ಮಾಡಿಲ್ಲ; ನಾನು ಸರ್ಕಾರ ಬದಲಾಯಿಸೋಕೆ ಬಂದಿಲ್ಲ: ಬೆಂಗಳೂರು...

ನನಗೆ ಮಸ್ಕ್ ಆಗ್ಲಿ, ಸೊರೊಸ್ ಆಗ್ಲಿ ಫಂಡ್ ಮಾಡಿಲ್ಲ; ನಾನು ಸರ್ಕಾರ ಬದಲಾಯಿಸೋಕೆ ಬಂದಿಲ್ಲ: ಬೆಂಗಳೂರು ಪ್ರತಿಭಟನೆಯಲ್ಲಿ ಧ್ರುವ್ ರಾಠಿ ಸ್ಪಷ್ಟನೆ

0

“ನಾನು ಇಲ್ಲಿಗೆ ಸರ್ಕಾರ ಬದಲಾಯಿಸುವುದಕ್ಕಾಗಲಿ ಅಥವಾ ಆಡಳಿತ ಉರುಳಿಸುವುದಕ್ಕಾಗಲಿ ಬಂದಿಲ್ಲ. ನನಗೆ ಎಲಾನ್ ಮಸ್ಕ್ ಆಗಲಿ, ಜಾರ್ಜ್ ಸೊರೊಸ್ ಆಗಲಿ ಯಾರೂ ಹಣ ಕೊಟ್ಟಿಲ್ಲ. ನನ್ನ ಸ್ವಂತ ಖರ್ಚಿನಲ್ಲೇ ಬೆಂಗಳೂರಿಗೆ ಬಂದಿದ್ದೇನೆ,” ಎಂದು ಖ್ಯಾತ ಯೂಟ್ಯೂಬರ್ ಹಾಗೂ ಸಾಮಾಜಿಕ ಕಾರ್ಯಕರ್ತ ಧ್ರುವ್ ರಾಠಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಜೆಪಿ (CJP) ಆಯೋಜಿಸಿದ್ದ ‘ಜನತಾ ನ್ಯಾಯಾಲಯ’ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಈ ರ‍್ಯಾಲಿಯಲ್ಲಿ ಮೊದಲ ಬಾರಿಗೆ ನೇರವಾಗಿ ಪ್ರತಿಭಟನೆಯ ವೇದಿಕೆ ಏರಿದ ಧ್ರುವ್ ರಾಠಿ, ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“ಇದು ಇಡೀ ದೇಶದ ಸಮಸ್ಯೆ”:

ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಪ್ರಸ್ತಾಪಿಸಿದ ರಾಠಿ, “ಬಹುಶಃ ಪ್ರಧಾನಿಯವರು ‘ಈ ವ್ಯಕ್ತಿಗೆ ಏನು ತೊಂದರೆ?’ ಎಂದು ಯೋಚಿಸುತ್ತಿರಬಹುದು. ಆದರೆ ಇದು ಕೇವಲ ನನ್ನ ಸಮಸ್ಯೆಯಲ್ಲ, ಇಡೀ ದೇಶದ ಮತ್ತು ಪ್ರತಿಯೊಬ್ಬ ಪ್ರಜೆಯ ಸಮಸ್ಯೆ,” ಎಂದರು. “ನೀವು ಬಿಜೆಪಿಗೆ ವೋಟ್ ಹಾಕಿ, ಕಾಂಗ್ರೆಸ್‌ಗೆ ಹಾಕಿ ಅಥವಾ ಬೇರೆ ಯಾವುದೇ ಪಕ್ಷಕ್ಕೆ ಹಾಕಿ; ಆದರೆ ಮತದಾನದ ಹಕ್ಕು ಮತ್ತು ನ್ಯಾಯಸಮ್ಮತ ಚುನಾವಣೆ ಪ್ರತಿಯೊಬ್ಬ ನಾಗರಿಕನ ಹಕ್ಕು. ದೇಶದ ಎಲ್ಲರಿಗೂ ಮತದಾನದ ಹಕ್ಕು ಸಿಗಬೇಕು ಎಂದು ನಂಬುವ ಪ್ರತಿಯೊಬ್ಬರೂ ಈ ಹೋರಾಟವನ್ನು ಬೆಂಬಲಿಸಬೇಕು,” ಎಂದು ಕರೆ ನೀಡಿದರು.

SIR ಅಕ್ರಮಗಳ ಉದಾಹರಣೆ:

ಮತದಾರರ ಪಟ್ಟಿಯ ಲೋಪದೋಷಗಳ ಕುರಿತು ಮಾತನಾಡಿದ ರಾಠಿ, ಹಲವು ರಾಜ್ಯಗಳ ಅಂಕಿಅಂಶಗಳನ್ನು ಮುಂದಿಟ್ಟರು:

  • ಪಶ್ಚಿಮ ಬಂಗಾಳ: ಚುನಾವಣೆಗೆ ಮುನ್ನ ಸುಮಾರು 70 ಸಾವಿರ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿ, ಚುನಾವಣೆ ಮುಗಿದ ಬಳಿಕ ಮತ್ತೆ ಸೇರಿಸಲಾಗಿದೆ. ಚುನಾವಣೆ ನಡೆಯುವಾಗ ಈ ಮತದಾರರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.
  • ಬಿಹಾರ: ಸುಮಾರು 65 ಲಕ್ಷ ಮತದಾರರ ಹೆಸರುಗಳನ್ನು ಏಕಾಏಕಿ ತೆಗೆದುಹಾಕಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರವಷ್ಟೇ ಆಯೋಗ ಹೆಸರುಗಳನ್ನು ಬಹಿರಂಗಪಡಿಸಿದೆ ಎಂದು ದೂರಿದರು.
  • ಉತ್ತರ ಪ್ರದೇಶ & ಗೋವಾ: ಯುಪಿಯಲ್ಲಿ 14 ಲಕ್ಷ ಹೆಸರುಗಳನ್ನು ಪಟ್ಟಿಗೆ ಸೇರಿಸಲಾಗಿದ್ದರೂ ಅವರ ವಿವರಗಳನ್ನು ಪಾರದರ್ಶಕವಾಗಿ ಸಾರ್ವಜನಿಕಗೊಳಿಸಿಲ್ಲ. ಗೋವಾದಲ್ಲಿ ಅಧಿಕಾರಿಗಳ ತಂತ್ರಾಂಶ ದೋಷದಿಂದ ನೂರಾರು ಮತದಾರರ ಹೆಸರು ಸೇರ್ಪಡೆಗೆ ಅಡ್ಡಿಯಾಗಿತ್ತು ಎಂದು ಉಲ್ಲೇಖಿಸಿದರು.

ಕರ್ನಾಟಕದ ನಾಗರಿಕ ಸಂಘಟನೆಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ಕಳೆದ 10 ದಿನಗಳಲ್ಲಿ ಸಂಘಟನೆಗಳು ಜಿಲ್ಲೆಗಳಿಗೆ ತೆರಳಿ, ಜೀವಂತವಾಗಿದ್ದರೂ ‘ಮೃತಪಟ್ಟಿದ್ದಾರೆ’ ಎಂದು ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ನೈಜ ಮತದಾರರನ್ನು ವೇದಿಕೆಗೆ ಕರೆತಂದು ದಾಖಲೆ ಸಮೇತ ಸಾಬೀತುಪಡಿಸಿವೆ ಎಂದರು. ಭಾಷಣದ ಕೊನೆಯಲ್ಲಿ ಸಭಿಕರೊಂದಿಗೆ ‘ವೋಟ್ ಚೋರ್, ಗದ್ದಿ ಛೋಡ್’ (ಮತಗಳ ಕಳ್ಳರೇ, ಕುರ್ಚಿ ಬಿಡಿ) ಎಂಬ ಘೋಷಣೆ ಕೂಗಿದ ರಾಠಿ, ಸಿಇಸಿ ಜ್ಞಾನೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ವೇದಿಕೆಯಲ್ಲಿ ನಟ-ಕಾರ್ಯಕರ್ತ ಪ್ರಕಾಶ್ ರಾಜ್ ಹಾಗೂ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಉಪಸ್ಥಿತರಿದ್ದರು.

You cannot copy content of this page

Exit mobile version