Home ರಾಜ್ಯ ಎಸ್‌ಐಆರ್‌ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪು ಕಾನೂನುಬಾಹಿರ, ಅಸಂವಿಧಾನಿಕ: ಬೆಂಗಳೂರಿನಲ್ಲಿ ಮಾಜಿ ನ್ಯಾಯಮೂರ್ತಿ ಗೋಪಾಲಗೌಡ ಗುಡುಗು

ಎಸ್‌ಐಆರ್‌ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪು ಕಾನೂನುಬಾಹಿರ, ಅಸಂವಿಧಾನಿಕ: ಬೆಂಗಳೂರಿನಲ್ಲಿ ಮಾಜಿ ನ್ಯಾಯಮೂರ್ತಿ ಗೋಪಾಲಗೌಡ ಗುಡುಗು

0

“ಸ್ವತಂತ್ರ ಭಾರತದ 78 ವರ್ಷಗಳ ಇತಿಹಾಸದಲ್ಲೇ ಭಾರತೀಯ ಪ್ರಜಾಪ್ರಭುತ್ವವನ್ನು ಇಂದು ಹತ್ಯೆ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸಂಪೂರ್ಣವಾಗಿ ಕಾನೂನುಬಾಹಿರ, ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ,” ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ವಿರೋಧಿಸಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ದೇಶದಾದ್ಯಂತ ಬೀದಿಗಿಳಿದು ಹೋರಾಡುತ್ತಿರುವ ವಿದ್ಯಾರ್ಥಿಗಳು, ಯುವಜನರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ ಅವರು, 2026ರ ಮೇ 27 ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ತಕ್ಷಣವೇ ಹಿಂಪಡೆಯಬೇಕು (Recall) ಎಂದು ಆಗ್ರಹಿಸಿದರು.

ವೇದಿಕೆಯನ್ನು ನಟ-ಕಾರ್ಯಕರ್ತ ಪ್ರಕಾಶ್ ರಾಜ್ ಅವರೊಂದಿಗೆ ಹಂಚಿಕೊಂಡ ನ್ಯಾ. ಗೋಪಾಲಗೌಡರು, ಪ್ರಕಾಶ್ ರಾಜ್ ಅವರನ್ನು ಬದ್ಧ ಸಮಾಜವಾದಿ, ಚಿಂತಕ ಮತ್ತು ಜನಪರ ಚಳವಳಿಗಳ ಪ್ರಮುಖ ಧ್ವನಿ ಎಂದು ಶ್ಲಾಘಿಸಿದರು. “ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶನಾಗಿ ನಾನು ಇಂದು ನಿಮ್ಮ ಮುಂದೆ ನಿಂತು ಈ ಹೋರಾಟಕ್ಕೆ ನನ್ನ ಐಕ್ಯಮತ್ಯವನ್ನು ಸಾರುತ್ತಿದ್ದೇನೆ. 2026ರ ಮೇ 27 ರಂದು ಬಂದ ತೀರ್ಪನ್ನು ನಾನು ಒಪ್ಪುವುದಿಲ್ಲ. ನನ್ನ ಪ್ರಕಾರ ಆ ತೀರ್ಪು ಕಾನೂನುಬಾಹಿರ, ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ. ಆ ತೀರ್ಪನ್ನು ನ್ಯಾಯಾಲಯ ಕೂಡಲೇ ವಾಪಸ್ ಪಡೆಯಬೇಕು,” ಎಂದು ಗುಡುಗಿದರು.

ಸಿಇಸಿ ಮತ್ತು ಕೇಂದ್ರ ನಾಯಕತ್ವದ ವಿರುದ್ಧ ನೇರ ದಾಳಿ:

ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಸಾಂವಿಧಾನಿಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಆಡಳಿತ ಯಂತ್ರವೇ ನಾಶಮಾಡುತ್ತಿದೆ ಎಂದು ಆರೋಪಿಸಿದರು. “ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವವರ ಪೂರ್ಣ ಕೃಪಾಕಟಾಕ್ಷದೊಂದಿಗೆ, ಮುಖ್ಯ ಚುನಾವಣಾ ಆಯುಕ್ತರ ಕೈಯಿಂದಲೇ ಇಂದು ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ. ನಾನು ಇಲ್ಲಿ ಯಾರ ಹೆಸರನ್ನೂ ಪ್ರತ್ಯೇಕವಾಗಿ ಹೇಳಲು ಬಯಸುವುದಿಲ್ಲ, ಏಕೆಂದರೆ ಈ ದೇಶದ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ,” ಎಂದು ಎಚ್ಚರಿಸಿದರು.

ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ಗಂಗಾ, ಯಮುನಾ ಹಾಗೂ ಕಾವೇರಿ ನದಿಗಳ ನಿರಂತರ ಹರಿವಿಗೆ ಹೋಲಿಸಿದ ಅವರು, “ಈ ಜಗತ್ತಿನಲ್ಲಿ ಯಾರೊಬ್ಬರೂ ನಿಮ್ಮ ಈ ಶಕ್ತಿಯನ್ನು ತಡೆಯಲು ಸಾಧ್ಯವಿಲ್ಲ. ನೀವೇ ಈ ದೇಶದ ಭವಿಷ್ಯ, ಮುಂದೊಂದು ದಿನ ನೀವೇ ಈ ದೇಶದ ಆಡಳಿತದ ಚುಕ್ಕಾಣಿ ಹಿಡಿಯಲಿದ್ದೀರಿ,” ಎಂದು ಹುರಿದುಂಬಿಸಿದರು.

You cannot copy content of this page

Exit mobile version