Home ಬ್ರೇಕಿಂಗ್ ಸುದ್ದಿ ದೌರ್ಜನ್ಯಕ್ಕೊಳಗಾದ ದಲಿತರ ಮೇಲೆ ಸುಳ್ಳು ಮೊಕದ್ದಮೆ ಖಂಡಿಸಿ – ಡಿಎಚ್‌ಎಸ್ ಪ್ರತಿಭಟನೆ

ದೌರ್ಜನ್ಯಕ್ಕೊಳಗಾದ ದಲಿತರ ಮೇಲೆ ಸುಳ್ಳು ಮೊಕದ್ದಮೆ ಖಂಡಿಸಿ – ಡಿಎಚ್‌ಎಸ್ ಪ್ರತಿಭಟನೆ

ಹಾಸನ : ಚನ್ನಂಗಿಹಳ್ಳಿ ದಲಿತ ಮಹಿಳೆಯರು ಮತ್ತು ಯುವಕನ ಮೇಲೆ ಹಲ್ಲೆ ನಡೆಸಿ ಜಾತಿ ದೌರ್ಜನ್ಯ ಎಸಗಿರುವವರನ್ನು ಬಂಧಿಸಿ, ದಲಿತರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಂಭಾಂಗಣದಲ್ಲಿ ಎಸ್.ಸಿ/ಎಸ್ ಟಿ ಕುಂದುಕೊರತೆ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ, ಸಭೆಯನ್ನು ಬಹಿಷ್ಕರಿಸಿ ಜಿಲ್ಲಾ ಪಂಚಾಯತ್ ಮುಂಭಾಗ ದಲಿತ ಹಕ್ಕುಗಳ ಸಮಿತಿ-ಕರ್ನಾಟಕ (ಡಿಎಚ್‌ಎಸ್) ವತಿಯಿಂದ ಪ್ರತಿಭಟನಾ ದರಣಿ ನಡೆಸಿ ಜಿಲ್ಲಾಧಿಕಾರಿಗಳು ಹಾಗು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದೆ ವೇಳೆ ಡಿ.ಎಚ್.ಎಸ್ ಜಿಲ್ಲಾ ಸಂಚಾಲಕರಾದ ಎಂ.ಜಿ. ಪೃಥ್ವಿ ಮತ್ತು ದಸಂಸ ಮುಖಂಡ ಮಂಜುನಾಥ್ ಮಾತನಾಡಿ, ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿಯ ಚನ್ನಂಗಿಹಳ್ಳಿ ಗ್ರಾಮದ ಕಮಲಮ್ಮ ಮತ್ತು ಆಕೆಯ ತಂಗಿ ರಾಜಮ್ಮ ಎಂಬ ದಲಿತ ಮಹಿಳೆಯರ ಮೇಲೆ ಅಣ್ಣೇಗೌಡ (ಕರಿಯಣ್ಣ) ಮತ್ತು ಆತನ ಮಗ ಹರೀಶ್ ಎಂಬುವವವರು ವ್ಯಕ್ಯ ದೊಣ್ಣೆ ಯಿಂದ ಹಲ್ಲೆ ನಡೆಸಿದ್ದಾನೆ. ತಾಯಿ ಮತ್ತು ಚಿಕ್ಕಮ್ಮನ ಮೇಲೆ ಹಲ್ಲೆ ನಡೆಸುತ್ತಿದ್ದನ್ನು ಬಿಡಿಸಲು ಹೋದ ಕಿರಣ್ ಕುಮಾರ್ ಎಂಬ ದಲಿತ ಯುವಕನ ಮೇಲೂ ಹಲ್ಲೆ ನಡೆಸಿ ಜಾತಿ ದೌರ್ಜನ್ಯ ನಡೆಸಲಾಗಿದೆ ಎಂದು ದೂರಿದರು. ಕಮಲಮ್ಮ ಎಂಬ ದಲಿತ ಮಹಿಳೆ ಅದೇ ಗ್ರಾಮದ ನಂಜೇಗೌಡರ ಜಮೀನನ್ನು ಗುತ್ತಿಗೆ ಪಡೆದಿದ್ದು, ದಿನಾಂಕ 22- 07- 2025 ರ ಸಂಜೆ 4.30 ಗಂಟೆಗೆ ಸಮಯದಲ್ಲಿ ದನ ಮೇಯಿಸಿಕೊಂಡು ಬರಲು ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ಆ ಜಮೀನಿನಲ್ಲಿ ಸೌದೆ ಹಾಕಿದ್ದ ಅಣ್ಣೇಗೌಡ(ಕರಿಯಣ್ಣ) ಎಂಬುವ ವ್ಯಕ್ತಿಯನ್ನು ಸೌದೆಯನ್ನು ಎತ್ತಿಕೊಳ್ಳಿ ಎಂದು ಕೇಳಿದಕ್ಕೆ ಅಣ್ಣೇಗೌಡನು ಕಮಲಮ್ಮನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿ, ಮನ ಬಂದಂತೆ ದೊಡ್ಡೆಯಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡಿದದ್ದನ್ನು ತಿಳಿದು ಕಮಲಮ್ಮನ ತಂಗಿ ರಾಜಮ್ಮ ಅಣ್ಣೇಗೌಡನ ಮನೆ ಬಳಿ ಹೋಗಿ ಪ್ರಶ್ನಿಸಿದ್ದಕ್ಕೆ ಕೀಳು ಜಾತಿಯವಳು ನನ್ನ ಮನೆಯ ಹತ್ತಿರ ಬಂದಿದ್ದೀಯ ಎಂದು ಅಣ್ಣೇಗೌಡನು ರಾಜಮ್ಮನ ಪಕಾಳಕ್ಕೆ ಬಲವಾಗಿ ಹೊಡೆದು ದೊಣ್ಣೆಯಿಂದ ಹಲ್ಲೆನಡೆಸಿದ್ದಾನೆ. ಅಣ್ಣೇಗೌಡರ ಮಗ ಹರೀಶ ಎಂಬುವವನೂ ಜೊತೆಗೆ ಸೇರಿಕೊಂಡು ಹೊಡೆದಿದ್ದಾನೆ. ಚಿಕ್ಕಮ್ಮನನ್ನು ಹೊಡೆಯುತ್ತಿದ್ದುನ್ನು ಕಂಡು ಜಗಳ ಬಿಡಿಸಲು ಹೋದ ಕಮಲಮ್ಮನ ಮಗನಾದ ಕಿರಣ್ ಕುಮಾರ್ ಎಂಬ ಯುವಕನ ಮೇಲೆಯೂ ಎರಗಿ ಹೊಡೆದಿದ್ದಾರೆ. ನಂತರ ಅಣ್ಣೇಗೌಡನಿಂದ ಹಲ್ಲೆಗೊಳಗಾಗಿ ನಿತ್ರಾಣಗೊಂಡಿದ್ದ ಕಮಲಮ್ಮನನ್ನುಅದೇ ದಿನ ಸಂಜೆ 7 ಗಂಟೆ ಸುಮಾರಿಗೆ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಆಸ್ಪತ್ರೆಯಲ್ಲಿ ಎಂ.ಎಲ್.ಸಿ. ಮಾಡಲಾಗಿದೆ ಎಂದರು.


ಮರುದಿನ ಕಮಲಮ್ಮನ ತಂಗಿ ರಾಜಮ್ಮ ಹಲ್ಲೆ ನಡೆಸಿರುವ ಬಗ್ಗೆ ಗೊರೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಗುರುವಾರ 24-07-2025 ಸಂಜೆ ಅಣ್ಣೇಗೌಡ(ಕರಿಯಣ್ಣ) ಮತ್ತು ಹರೀಶ್ ಎಂಬುವವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಆದರೆ, ಹಲ್ಲೆ ದೌರ್ಜನ್ಯ ನಡೆಸಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಬದಲು ಹಲ್ಲೆಗೊಳಗಾಗಿ ನೊಂದ ಮಹಿಳೆಯರು ಸೇರಿದಂತೆ 6 ದಲಿತರ ಮೇಲೆಯೇ ಸುಳ್ಳು ಕೇಸ್ ದಾಖಲಿಸಿರುವ ಪೊಲೀಸ್ ಇಲಾಖೆಯ ಕ್ರಮ ಖಂಡನೀಯ ಮತ್ತು ದಲಿತ ವಿರೋಧಿಯಾಗಿದೆ. ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳಲ್ಲಿ ಈ ರೀತಿಯ ಕೌಂಟರ್ ಕೇಸ್ ಮಾಡುವುದರಿಂದ ದೌರ್ಜನ್ಯ, ಅಪಮಾನ, ಅನ್ಯಾಯಕ್ಕೆ ಒಳಗಾದ ದಲಿತರಿಗೆ ಮಾಡುವ ದ್ರೋಹ ಹಾಗು ಅನ್ಯಾಯವೆಸಗಿದಂತಾಗುತ್ತದೆ.


ಈ ಬೆಳವಣಿಗೆಗಳಿಂದಾಗಿ ದಲಿತರ ಮೇಲೆ ಮೇಲೆ ದೌರ್ಜನ್ಯಗಳು ಹೆಚ್ಚಲು ಕಾರಣವಾಗಿದೆ ಎಂದು ಬೇಸರವ್ಯಕ್ತಪಡಿಸಿದರು. ಚನ್ನಂಗಿಹಳ್ಳಿಯ ದಲಿತರ ಮಹಿಳೆಯರ ಮೇಲೆ ದೌರ್ಜನ್ಯ ವೆಸಗಿದ ತಪ್ಪಿತಸ್ಥ ಅಣ್ಣೇಗೌಡ (ಕರಿಯಣ್ಣ) ಹಾಗು ಹರೀಶ್ ಎಂಬುವವರನ್ನು ಇದುವರೆಗೂ ಬಂಧಿಸದೇ ಇರುವುದು, ಅಲ್ಲದೇ ದೌರ್ಜನ್ಯಕ್ಕೊಳಗಾದ ದಲಿತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿರುವುದು ಪೊಲೀಸ್ ಇಲಾಖೆ ಮತ್ತು ಕಾನೂನು ವ್ಯವಸ್ಥೆಯ ವೈಫಲ್ಯವಾಗಿದೆ. ಆದ್ದರಿಂದ ಈ ಪ್ರಕರಣದಲ್ಲ ದಲಿತರ ಮೇಲೆ ದೌರ್ಜನ್ಯವೆಸಗಿದವರನ್ನು ಕೂಡಲೇ ಬಂಧಿಸ ಬೇಕು ಹಾಗು ನೊಂದ ದಲಿತರ ಮೇಲೆ ದಾಖಲಿಸಲಾಗಿರುವ ಸುಳ್ಳು ಮೊಕದ್ದಮೆಯನ್ನು ರದ್ದುಗೊಳಿಸಲು ಕೂಡಲೇ ಕ್ರಮ ಕೈಗೊಂಡು ನೊಂದ ದಲಿತರಿಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ದಸಂಸ ಮುಖಂಡ ಮಂಜುನಾಥ್, ಚನ್ನಂಗಿಹಳ್ಳಿಯ ಚಿಕ್ಕಯ್ಯ, ಸ್ವಾಮಿ, ಶೇಖರ್ ರಾಜಮ್ಮ, ಕಿರಣಕುಮಾರ್ ಹಾಗು ನೊಂದ ದಲಿತರ ಜೊತೆಗೆ ಕುರುವಂಕ ಗ್ರಾಮಸ್ಥರು ಭಾಗವಹಿಸಿದ್ದರು.

You cannot copy content of this page

Exit mobile version