Home ಬ್ರೇಕಿಂಗ್ ಸುದ್ದಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಿಐಟಿಯು ಬೆಂಬಲ – ಧರ್ಮೇಶ್

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಿಐಟಿಯು ಬೆಂಬಲ – ಧರ್ಮೇಶ್

ಹಾಸನ : ವೇತನ ಪರಿಷ್ಕರಣೆ ಹಾಗೂ 38 ತಿಂಗಳ ಹಿಂದಿನ ಬಾಕಿ ಹಣ ಕೊಡಲು ಹಿಂದೆ ಸರಿದ ರಾಜ್ಯ ಸರಕಾರದ ನಡೆ ಖಂಡಿಸಿ ಜುಲೈ 30 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ ಸಾಮೂಹಿಕ ಉಪವಾಸ ಸತ್ಯಾಗ್ರಹ ಹಾಗೂ ಆಗಸ್ಟ್ 5 ರಿಂದ ಸಾರಿಗೆ ನೌಕರರ ಅನಿರ್ಧಿಷ್ಟವಧಿ ಮುಷ್ಕರ ಹಮ್ಮಿಕೊಂಡಿರುವುದಾಗಿ ಸಿಐಟಿಯು ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯದರ್ಶಿ ಧರ್ಮೇಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಬರಬೇಕಾಗದ 38 ತಿಂಗಳ ಹಿಂಬಾಕಿಯನ್ನು ಸರಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ನಿಯಮದಂತೆ 2024ರ ಜನವರಿ 1ರಿಂದ ವೇತನ ಪರಿಷ್ಕರಣೆ ಬಾಕಿ ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಗಸ್ಟ್ 5 ರಿಂದ ಸಾರಿಗೆ ನೌಕರರು ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ, ಕೆ.ಎಸ್.ಆರ್.ಟಿ.ಸಿ. ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಅನಿರ್ದಿಷ್ಟಾವದಿ ಮುಷ್ಕರ ನಡೆಸುತ್ತಿದ್ದಾರೆ. ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳಿಗಾಗಿ ನಡೆಯುತ್ತಿರುವ ಈ ಮುಷ್ಕರವನ್ನು ಸಿಐಟಿಯು ಸಂಪೂರ್ಣವಾಗಿ ಬೆಂಬಲಿಸಿ ಭಾಗವಹಿಸುತ್ತದೆ ಎಂದರು. 2020ರ ಜನವರಿ 1 ರಂದು ಅಂದಿನ ಬಿಜೆಪಿ ಸರಕಾರ ಒಡಂಬಡಿಕೆಯತೆ ವೇತನ ಪರಿಷ್ಕರಣೆ ನಡೆಸಿ ಶೇ15ರಷ್ಟು ವೇತನ ಹೆಚ್ಚಳ ಮಾಡಲು ಒಪ್ಪಿಗೆ ನೀಡಿತ್ತು.ಆದರೆ ಆ ಸರಕಾರ ಇರುವವರೆಗೂ ಇದನ್ನು ಜಾರಿಗೆ ತರಲಿಲ್ಲ. ತದನಂತರ ಬಂದ ಕಾಂಗ್ರೆಸ್ ಸರಕಾರ ವೇತನ ಪರಿಷ್ಕರಣೆಯನ್ನು ಜಾರಿಗೆ ತಂದರು, ಅದುವರೆಗಿನ ಸುಮಾರು 38 ತಿಂಗಳ ಹಿಂಬಾಕಿ 1800 ಕೋಟಿ ರೂಗಳನ್ನು ಇದುವರೆಗೂ ನೌಕರರಿಗೆ ನೀಡಿಲ್ಲ. ಸರಕಾರದ ಈ ಧೋರಣೆಯನ್ನು ಖಂಡಿಸಿ ಹಲವು ಬಾರಿ ಮನವಿ ನೀಡಿದರೂ ಇಲ್ಲ,ಸಲ್ಲದ ಸಬೂಬು ಹೇಳಿ ಮುಂದೂಡುತ್ತಲೆ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರ, ಜುಲೈ 4 ರಂದು ನಡೆದ ತ್ರಿಪಕ್ಷಿಯ ಸಭೆಯಲ್ಲಿ ಹಿಂಬಾಕಿ ನೀಡಲು ಸಾಧ್ಯವಿಲ್ಲ ಎಂಬ ಮಾತು ಹೇಳಿದೆ. ಇದನ್ನು ಸಿಐಟಿಯು ತೀವ್ರವಾಗಿ ಖಂಡಿಸುತ್ತದೆ. ಸಾರಿಗೆ ನೌಕರರು ಕರೋನ ಸಂದರ್ಭದಲ್ಲಿಯೂ ಹಗಲು, ಇರುಳು ಎನ್ನದೆ, ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಇದರಿಂದ ನಿಗಮಕ್ಕೂ ಒಳ್ಳೆಯ ಹೆಸರು ಬಂದಿದೆ. ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದರೆ ಸಾರಿಗೆ ನೌಕರರನ್ನು ಮಾತ್ರ ಮಲತಾಯಿ ಮಕ್ಕಳಂತೆ ನೋಡುತ್ತಿದ್ದಾರೆ ಎಂದು ದೂರಿದರು. ಕರ್ನಾಟಕ ರಸ್ತೆ ಸಾರಿಗೆ ನೌಕರರ ಮುಷ್ಕರ ಅತ್ಯಂತ ನ್ಯಾಯಯುತವಾಗಿದ್ದು, ಈ ಮುಷ್ಕರಕ್ಕೆ ಸಿಐಟಿಯು ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಹಾಗೂ ಜುಲೈ 5 ರಂದು ಸಾರಿಗೆ ನಿಗಮದ ಹಾಸನ ವಿಭಾಗೀಯ ಕಚೇರಿ ಮುಂದೆ ಸಿಐಟಿಯು ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಪ್ರತಿಭಟನಾ ಸಭೆ ನಡೆಸಲಿದೆ. ಹಾಗೂ ಸಾರಿಗೆ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೆ ಯಾವುದೇ ಒತ್ತಡಗಳಿಗೆ ಮಣಿಯದೆ ಮುಷ್ಕರದಲ್ಲಿ ಭಾಗವಹಿಸಿ ಮುಷ್ಕರ ಯಶಸ್ವಿಗೊಳಿಸಬೇಕೆಂದು ಸಿಐಟಿಯು ಕರೆ ನೀಡುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಆರ್.ಟಿ.ಸಿ. ಪರಿಶಿಷ್ಟ ಜಾತಿ, ಪಂಗಡದ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಂಜುನಾಥ್, ಸಿಐಟಿಯು ಕ.ರಾ.ರ.ಸಾ ಜಿಲ್ಲಾ ಉಪಾಧ್ಯಕ್ಷ ವೈ.ಎಸ್. ಜಂಠಿ ಕಾರ್ಯದರ್ಶಿ ವಿ.ಜೆ. ಮಂಜೇಗೌಡ, ಮುಖಂಡ ಮುರಳೀಧರ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version