Friday, June 21, 2024

ಸತ್ಯ | ನ್ಯಾಯ |ಧರ್ಮ

ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ತಟ್ಟಿತೇ ಸ್ವಕ್ಷೇತ್ರದ ಪ್ರತಿಭಟನೆಗಳ ಕಾವು.?

ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಉದ್ದೇಶಗಳಿಗೆ ನಡೆದ ಪ್ರತಿಭಟನೆಯಲ್ಲಿ ನೇರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರರೇ ಉತ್ತರದಾಯಿ ವ್ಯಕ್ತಿಯಾಗಿ ನಿಲ್ಲುತ್ತಾರೆ. ಆದರೆ ಈ ಬಗ್ಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ ರೀತಿಯಿಂದ ಕ್ಷೇತ್ರದ ಮತ್ತು ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕುರುವಳ್ಳಿ ಬಂಡೆ ಕಾರ್ಮಿಕರ ಪ್ರತಿಭಟನೆ ; ಮಾಜಿ ಸಚಿವರ ಉಪವಾಸ ಸತ್ಯಾಗ್ರಹ
ಮೊದಲನೆಯದಾಗಿ ತಮ್ಮ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕುರುವಳ್ಳಿ ಗ್ರಾಮ ಪಂಚಾಯಿತಿಯ ಕಲ್ಲು ಬಂಡೆ ಕಾರ್ಮಿಕರ ಪ್ರತಿಭಟನೆ ಬಗ್ಗೆ ಈ ವರೆಗೂ ಸಚಿವ ಜ್ಞಾನೇಂದ್ರ ಪೂರಕವಾಗಿ ಸ್ಪಂದಿಸಿಲ್ಲ. ಹಾಗಾಗಿ ನಿನ್ನೆಯ ದಿನ ಸ್ವತಃ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇಡೀ ದಿನದ ಉಪವಾಸ ಸತ್ಯಾಗ್ರಹದ ನಡೆಸಿ ಪ್ರತಿಭಟನೆಯಲ್ಲಿ ಕೂತು ಬಂಡೆ ಕಾರ್ಮಿಕರ ಬೇಡಿಕೆಗಳ ಪರ ದನಿಗೂಡಿಸಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಪೀಪಲ್ ಮೀಡಿಯಾ ಸಂಪರ್ಕಿಸಿದಾಗ “ಸ್ಥಳೀಯ ಆಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಏಕಾಏಕಿ ಕಲ್ಲು ಬಂಡೆ ಕಾಮಗಾರಿ ನಿಲ್ಲಿಸುವಂತೆ ಕಾನೂನು ತಂದಿದೆ. ಜೊತೆಗೆ ಯಾವುದೇ ಮುನ್ಸೂಚನೆ ಸಹ ನೀಡದೇ ಬಂಡೆ ಕಾರ್ಮಿಕರ ಸಾಮಗ್ರಿ, ವಾಹನಗಳು ಕ್ವಾರಿಯಲ್ಲಿ ಇರುವಾಗಲೇ ಜೆಸಿಬಿ ವಾಹನದ ಮೂಲಕ ಟ್ರಂಚ್ ತಗೆಸಿ ಯಾವುದೇ ವಾಹನಗಳನ್ನು ಒಳ ಹೋಗಲು, ಒಳಗಿರುವ ವಾಹನ ಹೊರ ಬಾರದಂತೆ ಮಾಡಿದ್ದಾರೆ. ಇದು ಅಮಾನವೀಯ.” ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

“ಈ ಬಗ್ಗೆ ಎರಡು ದಿನಗಳಿಂದ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಮಾತ್ರ ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ. ಕಾನೂನಿನ ಕಡೆ ಕೈ ತೋರಿಸಿ ಇ-ಟೆಂಡರ್ ಅಂತೆಲ್ಲ ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಇ-ಟೆಂಡರ್ ಕರೆದು ಟೆಂಡರ್ ಪ್ರಕ್ರಿಯೆ ಮುಗಿಸಿ, ಕೆಲಸ ಹಿಡಿಯಲು ಇನ್ನೂ ಕೆಲವು ತಿಂಗಳೇ ಕಳೆಯಲಿವೆ. ಅಲ್ಲಿಯವರೆಗೂ ಕಲ್ಲು ಕ್ವಾರಿ ಉದ್ಯೋಗವನ್ನೇ ನಂಬಿಕೊಂಡ ಇಲ್ಲಿನ ಕೆಲಸಗಾರರ ಹೊಟ್ಟೆಪಾಡಿನ ಗತಿ ಏನು? ಸ್ಥಳೀಯ ಶಾಸಕ, ಸಚಿವ ಜ್ಞಾನೇಂದ್ರ ನೋಡಿದರೆ ಇದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಓಡಾಡ್ತಿದ್ದಾರೆ. ಕ್ಷೇತ್ರದ ಜನರ ಹಿತ ಕಾಪಾಡಬೇಕಾದ ವ್ಯಕ್ತಿಯ ಬೇಜವಾಬ್ದಾರಿತನ ಇಲ್ಲಿ ಎದ್ದು ಕಾಣ್ತಿದೆ. ಜೊತೆಗೆ ಇದರಲ್ಲಿ ಬಿಜೆಪಿ ಪಕ್ಷ ರಾಜಕೀಯ ಕೂಡಾ ನಡೆಸುತ್ತಿದೆ” ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.

ಶುಕ್ರವಾರ ಇಡೀ ದಿನ ಉಪವಾಸದ ಮೂಲಕ ಸತ್ಯಾಗ್ರಹ ಮಾದರಿಯ ಪ್ರತಿಭಟನೆ ನಡೆಸಿದ ಕಿಮ್ಮನೆ ರತ್ನಾಕರ್ ಅವರಿಗೆ ಜಿಲ್ಲಾಧಿಕಾರಿ ಕರೆ ಮಾಡಿ, ಪ್ರತಿಭಟನೆ ವಾಪಸ್ ತಗೆದುಕೊಳ್ಳಲು ಒತ್ತಾಯಿಸಿದ್ದರು. ಆದರೆ ಕಿಮ್ಮನೆ ರತ್ನಾಕರ್ ಜಿಲ್ಲಾಧಿಕಾರಿಗಳಿಗೆ ಅಕ್ಟೋಬರ್ 19 ನೇ ತಾರೀಕಿಗೆ ಗಡುವು ನೀಡಿ, “ಬಂಡೆ ಕಾರ್ಮಿಕರ ಸಾಮಗ್ರಿ ಹಿಂತಿರುಗಿಸಿ, ಅವರ ಉದ್ಯೋಗಕ್ಕೆ ಪರ್ಯಾಯ ವ್ಯವಸ್ಥೆ ಮಾಡದೇ ಇದ್ದರೆ 19 ರಂದು ಪರಿಣಾಮಕಾರಿಯಾಗಿ ಪ್ರತಿಭಟನೆ ನಡೆಸಲಾಗುವುದು” ಎಂದು ಹೇಳಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಇದಕ್ಕೆ ಕಾನೂನಿನ ತೊಡಕಿದ್ದು ಪೂರಕವಾಗಿ ಸ್ಪಂದಿಸಿಲ್ಲ.

ಮಾಜಿ ಸಚಿವ ಕಿಮ್ಮನೆ ರತ್ನಾಕರ್

ಇಲ್ಲಿನ ಖಾಸಗಿ ಬಂಡೆ ಮಾಲಿಕರ ಜೊತೆಗೆ ಸೇರಿರುವ ಕೆಲ ಬಿಜೆಪಿ ನಾಯಕರು ಕಿಮ್ಮನೆ ರತ್ನಾಕರ್ ಅವರ ಹೋರಾಟ ರಾಜಕೀಯ ಪ್ರೇರಿತ ಎಂದು ಪ್ರತಿಭಟನೆ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಿಮ್ಮನೆ ರತ್ನಾಕರ್, ‘6 ಎಕರೆ ಬಂಡೆ ಕೆಲಸವನ್ನು ನಿಲ್ಲಿಸಿದರೆ ಸಹಜವಾಗಿಯೇ ಕಲ್ಲಿನ ದರ ಏರಿಕೆ ಕಾಣಲಿದೆ. ಬಿಜೆಪಿ ಪಕ್ಷದ ಈ ಒಳ ಹುನ್ನಾರ ಕೂಡಾ ಬಂಡೆ ಕಾರ್ಮಿಕರಿಗಷ್ಟೇ ಅಲ್ಲ, ಕಲ್ಲಿನ ಅಗತ್ಯ ಇರುವವರಿಗೂ ಬಿಜೆಪಿ ಕಡೆಯಿಂದ ತೊಂದರೆ ಕೊಡುವ ಕೆಲಸವಾಗಲಿದೆ’ ಎಂದು ಹೇಳಿದ್ದಾರೆ. ಕಳೆದ ಮೂರು ದಿನಗಳ ಸತತ ಪ್ರತಿಭಟನೆ, ಒಂದು ದಿನದ ಕಿಮ್ಮನೆ ರತ್ನಾಕರ್ ಅವರ ಉಪವಾಸ ಸತ್ಯಾಗ್ರಹ ನಡೆದರೂ ಸಚಿವ ಆರಗ ಜ್ಞಾನೇಂದ್ರ ಮಾತ್ರ ಈ ಕಡೆಗೆ ಒಂದು ದಿನ ದಿನ ತಲೆ ಹಾಕದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಬೂತಾನ್ ಅಡಿಕೆ ಆಮದು, ಎಲೆಚುಕ್ಕೆ ರೋಗ ; ಅದ್ವಾನಗೊಂಡಿದೆ ಮಲೆನಾಡು ಅಡಿಕೆ ಬೆಳೆಗಾರರ ಸ್ಥಿತಿ
ಸರ್ಕಾರದ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಇತ್ತೀಚೆಗೆ ‘ಮಲೆನಾಡು ಜನಪರ ಒಕ್ಕೂಟ’ದ ಕಡೆಯಿಂದ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದಿತ್ತು. ಅಡಿಕೆ ಬೆಳೆಗೆ ಬೇಕಾದ ಬೆಂಬಲ ಬೆಲೆ, ಮಲೆನಾಡು ಭಾಗದ ರೈತರ ಹಿಡುವಳಿಯಲ್ಲಿರುವ ಜಮೀನುಗಳಿಗೆ ಅರಣ್ಯ ಇಲಾಖೆ ಕಡೆಯಿಂದ ಆಗುವ ನಿರಂತರ ಕಿರಿಕಿರಿಯ ವಿರುದ್ಧ, ಅಕ್ರಮ ಸಕ್ರಮ ಯೋಜನೆಯಡಿ ಭೂಮಂಜೂರಾತಿ ವಿಚಾರಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸ ನಡೆದಿತ್ತು. ಇದರ ಜೊತೆಗೆ ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ವ್ಯಾಪಕವಾಗಿ ಹರಡುತ್ತಿರುವ ರೋಗಗಳಾದ ಎಲೆಚುಕ್ಕೆ ರೋಗ, ಬೇರು ಹುಳು ರೋಗ, ಹಳದಿ ರೋಗದ ಬಗ್ಗೆ ಸರ್ಕಾರವನ್ನು ಎಚ್ಚರಿಸುವ ಕಾರ್ಯಕ್ಕೆ ‘ಮಲೆನಾಡು ಜನಪರ ಒಕ್ಕೂಟ’ ಮುಂದಾಗಿತ್ತು. ಇಷ್ಟೆಲ್ಲಾ ಗಂಭೀರ ಸಮಸ್ಯೆಗಳಿದ್ದರೂ ರೈತರ ಸಮಸ್ಯೆಗಳಿಗೆ ತಲೆ ಕೊಡಬೇಕಾದ ಸರ್ಕಾರ ಗಾಯದ ಮೇಲೆ ಬರೆ ಎಳೆಯುವ ಕೆಲಸಕ್ಕೆ ಕೈ ಹಾಕಿದೆ.

ಬಂಡೆ ಕಾರ್ಮಿಕರ ಪರ ನಡೆದ ಪ್ರತಿಭಟನೆ

ಅಡಿಕೆ ಬೆಳೆ ದೇಶದ ಒಂದಷ್ಟು ಭಾಗದ ಮಟ್ಟಿಗಾದರೂ ಮುಖ್ಯ ಬೆಳೆ ಅನ್ನಿಸಿಕೊಂಡರೂ ಸಧ್ಯ ಈಗಿರುವ ಬೇಡಿಕೆಯನ್ನು ಪೂರೈಸುವಷ್ಟು ದೇಶದಲ್ಲಿ ಉತ್ಪತ್ತಿಯಾಗುತ್ತದೆ. ಆದರೆ ಪ್ರತೀ ವರ್ಷ ಬರ್ಮಾ, ಬೂತಾನ್ ರಾಷ್ಟ್ರಗಳಿಂದ ಸಾವಿರಾರು ಟನ್ ಅಡಿಕೆ ಅಕ್ರಮವಾಗಿ ದೇಶದ ಒಳಗೆ ಬರುತ್ತಿತ್ತು. ಆ ಕಾರಣದಿಂದಲೇ ಅಡಿಕೆಯ ಬೆಲೆ ನಿರೀಕ್ಷಿತ ಮಟ್ಟಕ್ಕೆ ಏರಿಕೆ ಕಾಣದಾಗಿತ್ತು. ಈ ನಡುವೆ ಒಕ್ಕೂಟ ಬಿಜೆಪಿ ಸರ್ಕಾರ ದಕ್ಷಿಣ ಏಷ್ಯಾ ದೇಶಗಳ ಒಪ್ಪಂದದ ಅಡಿಯಲ್ಲಿ ಬೂತಾನ್ ದೇಶದಿಂದ 17,000 ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಸಹಿ ಹಾಕಿದೆ. ಮೊದಲೇ ಅಕ್ರಮ ಅಡಿಕೆ ದೇಶದ ಒಳಗೆ ಬಂದು ಅಡಿಕೆ ಬೆಳೆಗೆ ಪೆಟ್ಟು ಕೊಡುತ್ತಿರುವ ಈ ಹಂತದಲ್ಲಿ ಸರ್ಕಾರ ಅಧಿಕೃತವಾಗಿ ಅಡಿಕೆ ಆಮದು ಮಾಡಿಕೊಂಡರೆ ಅದು ಕೇವಲ 17,000 ಟನ್ ಅಲ್ಲ, ಅದರ ಮೂರು ನಾಲ್ಕು ಪಟ್ಟು ಅಡಿಕೆ ದೇಶದ ಒಳಗೆ ಬರುವುದರಲ್ಲಿ ಸಂಶಯವೇ ಇಲ್ಲ ಎಂಬುದು ಮಲೆನಾಡು ಭಾಗದ ರೈತರ ಅಭಿಪ್ರಾಯ.

ಮಲೆನಾಡು ಭಾಗದ ಊರುಗಳಾದ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಸೊರಬ, ಹೊಸನಗರ, ನ.ರಾ.ಪುರ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಚಿಕ್ಕಮಗಳೂರು ಭಾಗಕ್ಕೆ ಅಡಿಕೆ ಬೆಳೆ ಸಾಂಪ್ರದಾಯಿಕ ಮತ್ತು ಮುಖ್ಯ ಆದಾಯದ ಬೆಳೆ. ಇಲ್ಲಿನ ನೂರಕ್ಕೆ ನೂರರಷ್ಟು ರೈತ ಸಮುದಾಯ ನಂಬಿ ಜೀವನ ನಡೆಸುತ್ತಿರುವುದೇ ಅಡಿಕೆ ಬೆಳೆಯಿಂದ. ಮೇಲೆ ಉಲ್ಲೇಖಿಸಿದಂತೆ ಅಡಿಕೆಗೆ ಬಂದಿರುವ ಮಾರಣಾಂತಿಕ ಎಲೆ ಚುಕ್ಕೆ ರೋಗ ಈ ಭಾಗದ ರೈತರನ್ನ ಜರ್ಜರಿತಗೊಳಿಸಿದೆ. ಅಡಿಕೆ ಮರದಲ್ಲಿ ಬರೋ ಫಸಲು ಇರಲಿ, ಅಡಿಕೆ ಮರವನ್ನೇ ಉಳಿಸಿಕೊಳ್ಳಲು ಪರದಾಟ ಪಡುವಂತಾಗಿದೆ‌. ಸರ್ಕಾರ ಈ ಎಲೆಚುಕ್ಕೆ ರೋಗಕ್ಕೆ ಮುಖ್ಯ ಕಾರಣ ಏನು? ಅದಕ್ಕೆ ಪರಿಹಾರ ಏನು ಎಂಬ ಬಗ್ಗೆ ಇಲ್ಲಿಯವರೆಗೂ ಸಂಶೋಧನೆ ನಡೆಸಿಲ್ಲ. ಆದರೆ ಈ ಭಾಗದ ಪ್ರತೀ ತಾಲ್ಲೂಕು ಕೇಂದ್ರಗಳಲ್ಲೂ ಅಡಿಕೆ ಸಂಶೋಧನಾ ಕೇಂದ್ರ ಎಂಬ ಕೆಲಸಕ್ಕೆ ಬಾರದ ಕೇಂದ್ರ ಮಾತ್ರ ಅದ್ಯಾವ ಸಂಶೋಧನೆ ನಡೆಸುತ್ತಿದೆಯೋ ಏನೋ.? ಇದರ ನಡುವೆ ಬೂತಾನ್ ದೇಶದಿಂದ 17,000 ಟನ್ ಅಡಿಕೆ ಆಮದು ಅನ್ನೋದು ಈ ಭಾಗದ ರೈತಾಪಿ ಉದ್ಯಮಕ್ಕೆ ಕೊನೆ ಮೊಳೆ ಹೊಡೆದಂತೆಯೇ ಸರಿ‌.

ಎಲೆಚುಕ್ಕೆ ರೋಗಕ್ಕೆ ತುತ್ತಾದ ಅಡಿಕೆ ತೋಟ

ಈ ಎಲ್ಲಾ ಅಂಶಗಳನ್ನು ಇಟ್ಟು ನಿನ್ನೆಯ ದಿನ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಶಿವಮೊಗ್ಗ ನಗರದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಡಿಕೆ ಆಮದು ಎನ್ನುವುದು ಈ ಭಾಗದ ರೈತರ ಕತ್ತು ಹಿಸುಕುವ ಕೆಲಸ. ಈಗಾಗಲೇ ಎಲೆಚುಕ್ಕೆ ರೋಗಕ್ಕೆ ತತ್ತರಿಸಿ ಹೋಗಿರುವ ರೈತ ಸಮುದಾಯಕ್ಕೆ ಅಡಿಕೆ ಆಮದು ಎನ್ನುವುದು ಸರ್ಕಾರವೇ ಪರೋಕ್ಷವಾಗಿ ಈ ಭಾಗದ ರೈತರಿಗೆ ವಿಷಪ್ರಾಶನ ಮಾಡಿದಂತೆ. ಈಗಾಗಲೇ ಎಲೆಚುಕ್ಕೆ ರೋಗ ತಗುಲಿ ಮನನೊಂದು ಮಲೆನಾಡು ಭಾಗದಲ್ಲಿ ಒಂದೆರಡು ಜೀವ ಆತ್ಮಹತ್ಯೆಗೆ ಶರಣಾಗಿದೆ. ಈ ಕಾರಣದಿಂದ ಇನ್ನು ಮುಂದೆ ಮಲೆನಾಡಿನಲ್ಲಿ ಸರಣಿ ಆತ್ಮಹತ್ಯೆ ಆದರೆ ಆಶ್ಚರ್ಯವಿಲ್ಲ ಎಂದು ನಿನ್ನೆ ನಡೆದ ಪ್ರತಿಭಟನೆಯಲ್ಲಿ ರೈತರು, ರೈತ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆ

ಗೃಹ ಸಚಿವ ಆರಗ ಜ್ಞಾನೇಂದ್ರ ಸಮರ್ಥನೆ
ಬಿಜೆಪಿ ಸರ್ಕಾರಕ್ಕೆ ನಿಜಕ್ಕೂ ಈ ಭಾಗದ ರೈತರ ಮೇಲೆ ಕಾಳಜಿ ಇದ್ದಿದ್ದರೆ ಇಂತಹ ಒಂದು ಅಮಾನುಷ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ. ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಪಕ್ಷಕ್ಕೆ ಅತಿ ಹೆಚ್ಚು ಬಹುಮತ ತಂದುಕೊಟ್ಟ ಭಾಗ ಇದು. ಆದರೆ ಅಡಿಕೆ ಆಮದು ಎನ್ನುವುದು ಈ ಭಾಗದ ರೈತರ ಸಂಪೂರ್ಣ ನಾಶಕ್ಕೆ ನಾಂದಿ ಹಾಡಿದಂತೆ. ಇಷ್ಟೆಲ್ಲಾ ಆದರೂ ಈ ಭಾಗದಿಂದ ಸರ್ಕಾರದಲ್ಲಿ ಉನ್ನತ ಹುದ್ದೆ ಅನುಭವಿಸುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳುವ ಮಾತಿನಿಂದ ಈ ಭಾಗದ ಜನ ಸ್ವಲ್ಪ ಗಂಭೀರವಾಗಿ ಯೋಚಿಸಲೇಬೇಕು. “ಭೂತಾನ್ ದೇಶದಿಂದ ಅಡಿಕೆ ಆಮದು ಆದರೆ ಇಲ್ಲಿನ ರೈತರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಭೂತಾನ್ ಚೈನಾ ಪಕ್ಕದ ರಾಷ್ಟ್ರ ಆಗಿರುವುದರಿಂದ ಆ ದೇಶದೊಂದಿಗೆ ಉತ್ತಮ ಸಂಬಂಧ ಇರಬೇಕು ಎಂಬ ದೃಷ್ಟಿಯಿಂದ ಸರ್ಕಾರ ಈ ಕೆಲಸ ಮಾಡಿದೆ” ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ಅಲ್ಲಾ ಸ್ವಾಮಿ ನಿಮ್ಮ ಮೋದಿಯನ್ನು ವಿಶ್ವಗುರು ಮಾಡಲು ಈ ಭಾಗದ ರೈತರ ಕೊರಳಿಗೆ ಯಾಕೆ ಉರುಳು ಹಾಕುತ್ತೀರಿ. ಅವರ ವರ್ಚಸ್ಸು ವೃದ್ಧಿಗೆ ಮಲೆನಾಡಿನ ರೈತರ ಬಾಳು ಬೀದಿಗೆ ಬರಬೇಕೇ ಎಂದು ರೈತ ಸಮುದಾಯ ಪ್ರಶ್ನೆ ಎತ್ತಿದೆ. ಇದು ಆರಗ ಜ್ಞಾನೇಂದ್ರರ ಬೇಜವಾಬ್ದಾರಿ ಮತ್ತು ಅವಿವೇಕದ ಸಮರ್ಥನೆ. ಮಲೆನಾಡು ಜನ ಸಧ್ಯದಲ್ಲೇ ಇದಕ್ಕೆ ತಕ್ಕ ಉತ್ತರ ಕೊಡಲಿದೆ ಎಂದು ಪ್ರತಿಭಟನೆ ನಿರತ ರೈತರು ಆಕ್ರೋಶ ಹೊರ ಹಾಕಿದ್ದಾರೆ. “ನಕ್ಸಲರು ಬಂದೂಕು ಹಿಡಿದ ಜಾಗದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರ್ಕಾರದ ಈ ನೀತಿಯಿಂದ ಮುಂದೆ ಅವರ ಮಕ್ಕಳು ಬಂದೂಕು ಹಿಡಿಯುವ ಸ್ಥಿತಿ ಬಂದರೆ ಅದಕ್ಕೆ ನೇರ ಹೊಣೆ ಆರಗ ಜ್ಞಾನೇಂದ್ರ ಹೊರಬೇಕಾಗುತ್ತದೆ” ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ವಕೀಲರಾದ ಕೆ.ಪಿ.ಶ್ರೀಪಾಲ್ ಆಕ್ರೋಶ ಹೊರಹಾಕಿದ್ದಾರೆ.

ಕೆ.ಪಿ.ಶ್ರೀಪಾಲ್, ವಕೀಲರು

ಆರಗ ಜ್ಞಾನೇಂದ್ರ ಪಕ್ಷವನ್ನು ಸಮರ್ಥಿಸಿಕೊಳ್ಳಲು ಈ ಮಟ್ಟಕ್ಕೆ ಇಳಿಯಬಾರದಿತ್ತು. ಜನಪ್ರತಿನಿಧಿ ಅನ್ನಿಸಿಕೊಳ್ಳುವವನು ಮೊದಲು ಜನರ ಹಿತದ ಬಗ್ಗೆ ಯೋಚಿಸಬೇಕು. ಅವರನ್ನು ಆ ಸ್ಥಾನಕ್ಕೆ ಎತ್ತಿ ಕೂರಿಸಿದ್ದು ಜನರೇ ಹೊರತು ಬೇರಾರೂ ಅಲ್ಲ. ಇದೇ ಬಿಜೆಪಿ ಪಕ್ಷದ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಒಕ್ಕೂಟ ಸರ್ಕಾರದ ಈ ನಿಲುವನ್ನು ಖಂಡಿಸಿದ್ದು ಇಲ್ಲಿ ನೆನೆಯಲೇಬೇಕು. ಕೇಂದ್ರ ಸರ್ಕಾರ ಅಡಿಕೆ ಆಮದು ನೀತಿಗೆ ಕೈ ಇಡಬಾರದಿತ್ತು. ಇದು ಈ ಭಾಗದ ರೈತರಿಗೆ ದೊಡ್ಡ ಆಪತ್ತು ತರಲಿದೆ ಎಂದು ಶಾಸಕ ಹರತಾಳು ಹಾಲಪ್ಪ ಅಭಿಪ್ರಾಯ ಪಟ್ಟಿದ್ದಾರೆ. ಇದೇ ಪಕ್ಷದ ಆರಗ ಜ್ಞಾನೇಂದ್ರ ಮಾತ್ರ ಪಕ್ಷದ ವರ್ಚಸ್ಸು ಉಳಿಸಿಕೊಳ್ಳಲು ಇಂತಹ ಹೇಳಿಕೆ ಕೊಟ್ಟಿರುವುದು ಮಾತ್ರ ಅಮಾನವೀಯ.

Related Articles

ಇತ್ತೀಚಿನ ಸುದ್ದಿಗಳು