ದೆಹಲಿ: ಭ್ರಷ್ಟಾಚಾರ ನಿಗ್ರಹ ಕಾಯ್ದೆಯ (Prevention of Corruption Act) ಸೆಕ್ಷನ್ 17ಎ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ಭಿನ್ನ ತೀರ್ಪು ನೀಡಿದೆ. ಸರ್ಕಾರಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಮುನ್ಸೂಚನೆ ಅಥವಾ ಪೂರ್ವಾನುಮತಿ ಕಡ್ಡಾಯವೇ ಎಂಬ ವಿಷಯದಲ್ಲಿ ನ್ಯಾಯಪೀಠವು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದೆ.
1988ರ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಅಸಾಂವಿಧಾನಿಕ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಅಭಿಪ್ರಾಯಪಟ್ಟರೆ, ವಿಭಾಗೀಯ ಪೀಠದ ಮತ್ತೊಬ್ಬ ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರು ಲೋಕಪಾಲ ಅಥವಾ ಲೋಕಾಯುಕ್ತದಂತಹ ಸ್ವತಂತ್ರ ಸಂಸ್ಥೆಗಳ ಮೂಲಕ ಅನುಮತಿಯನ್ನು ನಿರ್ಧರಿಸಬೇಕು ಎಂದು ಹೇಳಿದರು.
ನ್ಯಾಯಮೂರ್ತಿಗಳ ವಾದವೇನು?
2018ರ ತಿದ್ದುಪಡಿಯ ಮೂಲಕ ಜಾರಿಗೆ ತಂದ ಈ ನಿಯಮವು ಪ್ರಾಮಾಣಿಕರನ್ನು ರಕ್ಷಿಸುವ ಬದಲು ಭ್ರಷ್ಟ ಅಧಿಕಾರಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ವಾಸ್ತವವಾಗಿ ಪ್ರಾಮಾಣಿಕ ಅಧಿಕಾರಿಗಳಿಗೆ ಸೆಕ್ಷನ್ 17ಎ ಅಡಿಯಲ್ಲಿ ಪೂರ್ವಾನುಮತಿಯ ರಕ್ಷಣೆ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟರು. ಆದರೆ ಈ ನಿಯಮವನ್ನು ಅಸಾಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸುವುದು, “ಸ್ನಾನದ ನೀರಿನ ಜೊತೆ ಮಗುವನ್ನೂ ಹೊರಗೆಸೆದಂತೆ” ಆಗುತ್ತದೆ ಎಂದು ನ್ಯಾಯಮೂರ್ತಿ ವಿಶ್ವನಾಥನ್ ಅಭಿಪ್ರಾಯಪಟ್ಟರು.
ಏನಿದು ಸೆಕ್ಷನ್ 17ಎ?
ಜುಲೈ 2018ರಲ್ಲಿ ಜಾರಿಗೆ ಬಂದ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಸೆಕ್ಷನ್ 17ಎ ಪ್ರಕಾರ, ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಸರ್ಕಾರಿ ನೌಕರನು ತನ್ನ ಕರ್ತವ್ಯ ನಿರ್ವಹಣೆಯ ಭಾಗವಾಗಿ ಮಾಡಿದ ಶಿಫಾರಸುಗಳ ಕುರಿತು ಯಾವುದೇ “ವಿಚಾರಣೆ ಅಥವಾ ತನಿಖೆ” ನಡೆಸುವುದನ್ನು ನಿಷೇಧಿಸುತ್ತದೆ.
ಈ ಸೆಕ್ಷನ್ ಅನ್ನು ಪ್ರಶ್ನಿಸಿ ವಕೀಲ ಪ್ರಶಾಂತ್ ಭೂಷಣ್ ಪ್ರತಿನಿಧಿಸುವ ‘ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್’ (CPIL) ಎಂಬ ಎನ್‌ಜಿಒ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಾಲಯ ಈ ತೀರ್ಪು ನೀಡಿದೆ. ಸಕ್ಷಮ ಪ್ರಾಧಿಕಾರದಿಂದ ಅಥವಾ ಸರ್ಕಾರದಿಂದ ಅನುಮತಿ ಸಿಗದಿಿದ್ದರೆ, ಈ ನಿಯಮವು ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ದುರ್ಬಲಗೊಳಿಸಿದಂತೆಯೇ ಎಂದು ಭೂಷಣ್ ವಾದಿಸಿದರು.
ಈ ಸೆಕ್ಷನ್ ಸರ್ಕಾರವನ್ನೇ ನ್ಯಾಯಾಧೀಶರನ್ನಾಗಿ ಬದಲಾಯಿಸುತ್ತದೆ ಎಂದರು. ಸಿಬಿಐಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೇವಲ ಶೇ. 40ರಷ್ಟು ಪ್ರಕರಣಗಳಿಗೆ ಮಾತ್ರ ಸೆಕ್ಷನ್ 17ಎ ಅಡಿಯಲ್ಲಿ ತನಿಖೆಗೆ ಪೂರ್ವಾನುಮತಿ ಸಿಕ್ಕಿದೆ ಎಂದು ಅವರು ಕೋರ್ಟ್‌ಗೆ ತಿಳಿಸಿದರು.
