ಮೈಸೂರು: ರಾಜ್ಯ ಸರ್ಕಾರದ ಬಜೆಟ್–2026ನ್ನು ಮಾರ್ಚ್ ಮೊದಲ ವಾರದಲ್ಲಿ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ದಿನಾಂಕವನ್ನು ಶೀಘ್ರವೇ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದರು.
ಬಜೆಟ್‌ಗೂ ಮುನ್ನ ಹಾಸನದಲ್ಲಿ ಸಾಧನಾ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದ ಸಿಎಂ, ನಾಳೆ ವಿಶೇಷ ಕ್ಯಾಬಿನೆಟ್ ಸಭೆ ಕರೆದಿದ್ದು, ಅಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ ಎಂದು ಹೇಳಿದರು. ತಾವು ದೆಹಲಿಗೆ ತೆರಳುತ್ತಿಲ್ಲ ಎಂದು ಕೂಡ ಸ್ಪಷ್ಟನೆ ನೀಡಿದರು.
ಅಧಿಕಾರ ಹಂಚಿಕೆ ವಿಚಾರ
ಅಧಿಕಾರ ಹಂಚಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, “ಈ ಕುರಿತು ನಾನು ಅಥವಾ ಡಿಕೆ ಶಿವಕುಮಾರ್ ಮಾತನಾಡಬೇಕು. ಶಾಸಕರಿಗೆ ಇದರ ಬಗ್ಗೆ ಏನು ಗೊತ್ತಿರುತ್ತದೆ? ಹೈಕಮಾಂಡ್ ಏನೇ ತೀರ್ಮಾನ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧರಾಗಿರುತ್ತೇವೆ” ಎಂದರು.
ರಾಹುಲ್ಗಾಂಧಿ ಭೇಟಿ
ತಮಿಳುನಾಡಿಗೆ ತೆರಳುವ ಮಾರ್ಗಮಧ್ಯೆ ಮೈಸೂರಿಗೆ ಆಗಮಿಸಿದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ ಆತ್ಮೀಯವಾಗಿ ಬರಮಾಡಿಕೊಂಡು ಶುಭ ಹಾರೈಸಿದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಹಂಚಿಕೊಂಡಿದ್ದಾರೆ.
ಮನರೇಗಾ ಕುರಿತು ತೀವ್ರ ಟೀಕೆ
ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಎಂ, “ಮನರೇಗಾ ಯೋಜನೆಯನ್ನು ರದ್ದು ಮಾಡುವ ಮೂಲಕ ಗ್ರಾಮೀಣ ಭಾರತದ ಕೋಟ್ಯಂತರ ಬಡಜನರ ಉದ್ಯೋಗ ಹಕ್ಕನ್ನು ಕಸಿದುಕೊಳ್ಳಲಾಗಿದೆ. ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧಿಯನ್ನು ಗುಂಡಿಟ್ಟು ಹತ್ಯೆಗೈದರೆ, ಇಂದಿನ ಸಂಘ ಪರಿವಾರ ಮತ್ತು ಬಿಜೆಪಿ ಪಕ್ಷ ನಿತ್ಯವೂ ಗಾಂಧಿ ಚಿಂತನೆಗಳನ್ನು ಕೊಲ್ಲುತ್ತಿದೆ” ಎಂದು ಆರೋಪಿಸಿದರು.
“ಇದಕ್ಕೆ ವಿರುದ್ಧವಾಗಿ ಧ್ವನಿ ಎತ್ತದೇ ಹೋದರೆ ಅದು ದೇಶದ್ರೋಹವಾಗುತ್ತದೆ. ಗಾಂಧಿ ಭಾರತದ ಉಳಿವಿಗಾಗಿ ಹಾಗೂ ಗ್ರಾಮ ಸ್ವರಾಜ್ಯಕ್ಕಾಗಿ ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧವಾಗಿದೆ” ಎಂದು ಹೇಳಿದರು.
‘ಮನರೇಗಾಉಳಿಸಿ’ ಹೋರಾಟ
ಬೆಂಗಳೂರು ಅರಮನೆ ಮೈದಾನದಲ್ಲಿ ಇಂದು ‘ಮನರೇಗಾ ಉಳಿಸಿ’ ಹೋರಾಟದ ರೂಪುರೇಷೆಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ ಸಿಎಂ, “ಮನರೇಗಾ ಮರುಜಾರಿಯಾಗುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂಕಲ್ಪ ಮಾಡಿದ್ದೇವೆ” ಎಂದು ಹೇಳಿದರು.
