ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಸ್ವತಂತ್ರ ಅಧಿಕಾರ ಕಷ್ಟ: ಕರ್ನಾಟಕ ರಾಜಕಾರಣ ಬೇರೆ ರಾಜ್ಯಗಳಿಂದ ಭಿನ್ನ – ಎಚ್‌ಡಿಕೆ

ಹಾಸನ: ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವಂತಹ ರಾಜಕೀಯ ವಾತಾವರಣ ಇಲ್ಲ. ಇಲ್ಲಿನ ರಾಜಕಾರಣಕ್ಕೂ ಇತರೆ ರಾಜ್ಯಗಳ ರಾಜಕಾರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಜನರು ಬದಲಾವಣೆಗೆ ಮತ ನೀಡಿದ್ದಾರೆ. ಇದೇ ರೀತಿಯ ಬದಲಾವಣೆ ಕರ್ನಾಟಕದಲ್ಲೂ 2028ರ ಚುನಾವಣೆಯಲ್ಲಿ ಸಂಭವಿಸಬಹುದು ಎಂಬ ಚರ್ಚೆಗಳು ಜನಸಾಮಾನ್ಯರ ನಡುವೆ ನಡೆಯುತ್ತಿವೆ. ಆದರೆ ಅಂತಿಮವಾಗಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು.

ಶೃಂಗೇರಿ ಕ್ಷೇತ್ರದ ಮರುಎಣಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ವೋಟ್ ಚೋರಿ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುವುದಕ್ಕೆ ಯಾವುದೇ ಅರ್ಥವಿಲ್ಲ. ಆ ವಿಚಾರದಲ್ಲಿ ಚರ್ಚೆ ಮಾಡುವ ನೈತಿಕತೆಯೂ ಅವರಿಗೆ ಇಲ್ಲ” ಎಂದು ಟೀಕಿಸಿದರು.

ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ನ ರಾಜಕೀಯ ನಡೆಗಳನ್ನು ವರ್ಷಗಳಿಂದ ನೋಡಿದ್ದೇನೆ. ಯಾವ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಚರಣ್ ಸಿಂಗ್, ವಿ.ಪಿ. ಸಿಂಗ್, ಚಂದ್ರಶೇಖರ್ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಸರ್ಕಾರಗಳ ಸಂದರ್ಭದಲ್ಲಿಯೂ ಕಾಂಗ್ರೆಸ್ ಹೇಗೆ ನಡೆದುಕೊಂಡಿತ್ತು ಎಂಬುದನ್ನು ದೇಶ ಕಂಡಿದೆ ಎಂದು ಆರೋಪಿಸಿದರು.

ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ಸೇರಿ ಸರ್ಕಾರ ರಚಿಸಲಿವೆ ಎಂಬ ವರದಿಗಳನ್ನು ಅವರು ಊಹಾಪೋಹಗಳೆಂದು ತಳ್ಳಿ ಹಾಕಿದರು. “ನನ್ನ ರಾಜಕೀಯ ಅನುಭವದ ಪ್ರಕಾರ ಅಂತಹ ಸಾಧ್ಯತೆ ಕಾಣುತ್ತಿಲ್ಲ. ರಾಜ್ಯಪಾಲರು ಕಾನೂನು ತಜ್ಞರ ಸಲಹೆ ಪಡೆದು ಸ್ಪಷ್ಟ ಬಹುಮತದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಿದ್ದಾರೆ” ಎಂದರು.

ತಮಿಳುನಾಡಿನ ರಾಜಕೀಯ ಬೆಳವಣಿಗೆ ಕುರಿತು ಮಾತನಾಡಿದ ಕುಮಾರಸ್ವಾಮಿ, “ಒಂದು ತಿಂಗಳ ಹಿಂದೆಯೇ ಅಲ್ಲಿ ಬದಲಾವಣೆಯ ವಾತಾವರಣ ಇದೆ ಎಂದು ಸ್ನೇಹಿತರಿಗೆ ಹೇಳಿದ್ದೆ. ಐವತ್ತು ವರ್ಷಗಳಿಂದ ಎರಡು ದ್ರಾವಿಡ ಪಕ್ಷಗಳ ಆಡಳಿತವನ್ನು ಜನರು ನೋಡಿದ್ದಾರೆ. ಹೊಸ ವ್ಯವಸ್ಥೆಯ ನಿರೀಕ್ಷೆ ಜನರಲ್ಲಿ ಮೂಡಿತ್ತು” ಎಂದರು.

ಸಿನಿಮಾ ಕ್ಷೇತ್ರದ ಪ್ರಭಾವ ತಮಿಳುನಾಡಿನ ರಾಜಕಾರಣದಲ್ಲಿ ಹಳೆಯದ್ದೇ ಆಗಿದ್ದು, ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂಬ ಮನೋಭಾವದಿಂದ ಜನರು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು. ಮಾಧ್ಯಮಗಳಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವರದಿಗಳು ಹರಿದಾಡುತ್ತಿದ್ದರೂ, ವಿಜಯ್ ಅವರ ಸಾಧನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಅದು ಎಲ್ಲರಿಗೂ ಅಚ್ಚರಿ ತಂದಿದೆ ಎಂದು ಅಭಿಪ್ರಾಯಪಟ್ಟರು.

ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ತಮಿಳುನಾಡು ಸರ್ಕಾರದ ವಾರ್ಷಿಕ ಬಜೆಟ್ ಸುಮಾರು ₹3.40 ಲಕ್ಷ ಕೋಟಿ. ಆದರೆ ಘೋಷಿಸಲಾಗುತ್ತಿರುವ ಉಚಿತ ಯೋಜನೆಗಳಿಗೆ ₹6 ಲಕ್ಷ ಕೋಟಿ ಅಗತ್ಯವಾಗಬಹುದು. ಅಷ್ಟು ಹಣವನ್ನು ಹೇಗೆ ಹೊಂದಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕು. ದೇವರೇ ಕಾಪಾಡಬೇಕು” ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು