ತೂಗು ಸೇತುವೆಯ ಭರವಸೆ ಮಾತ್ರ ತೂಗುತ್ತಿದೆ; ಬಂಟೋಡಿ-ಕಟ್ಟಿನಹೊಳೆ ಜನರ ಬದುಕು ಮಾತ್ರ ಅಪಾಯದಲ್ಲೇ!

ಚಕ್ರಾ ಹಿನ್ನೀರಿನಿಂದ ಮತ್ತೆ ದ್ವೀಪವಾದ ಕಟ್ಟಿನಹೊಳೆ; ಒಂದು ವರ್ಷದ ಹಿಂದಿನ ಭರವಸೆ ಇನ್ನೂ ಕಡತದಲ್ಲೇ?
ಕೊಡಚಾದ್ರಿ ತಪ್ಪಲಿನ ಚಕ್ರಾ ಹಿನ್ನೀರಿನ ಅಪಾಯಕಾರಿ ಬದುಕಿನ ಕಥೆ ಇದು

ಹೊಸನಗರ: ಚಕ್ರಾ ಅಣೆಕಟ್ಟಿನ ಹಿನ್ನೀರು ಹೆಚ್ಚಾದರೆ ಸಾಕು. ಸಂಪೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿನಹೊಳೆ ಹಾಗೂ ಬಂಟೋಡಿ ಭಾಗದ ಜನರ ಬದುಕು ಮತ್ತೆ ಹಳೆಯ ಸ್ವಾತಂತ್ರ್ಯ ಪೂರ್ವದ ದಿನಗಳಿಗೆ ಮರಳುತ್ತದೆ. ಮಳೆಗಾಲದಲ್ಲಿ ಹೊರ ಜಗತ್ತಿನ ಸಂಪರ್ಕಕ್ಕೆ ತೆಪ್ಪ, ಉಕ್ಕಡವೇ ಆಧಾರ. ಮಳೆಗಾಲದಲ್ಲಿ ನದಿ ದಾಟುವುದು ಇಲ್ಲಿ ಬದುಕಿನ ಭಾಗವಲ್ಲ; ಪ್ರತಿದಿನದ ಅಪಾಯದ ಜೀವ ಕೈಯಲ್ಲಿ ಹಿಡಿದು ನಡೆಯುವ ಪ್ರಯಾಣ.

2025ರ ಸೆಪ್ಟೆಂಬರ್ 13ರಂದು ನಡೆದ ಆ ದುರ್ಘಟನೆ ಇಂದಿಗೂ ಕಟ್ಟಿನಹೊಳೆ ಗ್ರಾಮಸ್ಥರ ಕಣ್ಣಮುಂದಿದೆ. ಕೊಡಚಾದ್ರಿ ತಪ್ಪಲಿನ ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಚಕ್ರಾ ಅಣೆಕಟ್ಟಿನ ಹಿನ್ನೀರಿನ ಆಚೆಗಿನ ಕಟ್ಟಿನಹೊಳೆ ಗ್ರಾಮದ ಯುವಕ ಪೂರ್ಣೇಶ್ ನದಿ ದಾಟುವಾಗ ಆಕಸ್ಮಿಕವಾಗಿ ಉಕ್ಕಡ ಮಗುಚಿ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದರು.

ಅಂದು ಪೂರ್ಣೇಶ್ ಅವರ ಶವ ಪತ್ತೆಯಾಗಿರಲಿಲ್ಲ. ಮರುದಿನ ಈಶ್ವರ್ ಮಲ್ಪೆ ಅವರನ್ನು ಕರೆಸಿ ಸುಮಾರು 40 ಅಡಿ ಆಳದಿಂದ ಶವವನ್ನು ಹೊರತೆಗೆಯಲಾಗಿತ್ತು. ಘಟನೆ ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿತ್ತು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರು ಕುಟುಂಬಕ್ಕೆ ಸಾಂತ್ವನ ಹೇಳಿ, ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ತಿಳಿಸಿದ್ದರು. ಬಳಿಕ ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರದ ಚೆಕ್ ನೀಡಲಾಯಿತು.

ಆದರೆ ಅದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ ನೀಡಲಾಗಿದ್ದ ಮತ್ತೊಂದು ಪ್ರಮುಖ ಭರವಸೆ ಮಾತ್ರ ಇನ್ನೂ ಈಡೇರಿಲ್ಲ.

ನೀರು ಇಳಿದ ಬಳಿಕ ಸೇತುವೆ ನಿರ್ಮಾಣ ಎಂದಿದ್ದರು
ಹಿನ್ನೀರು ಕಡಿಮೆಯಾದ ಬಳಿಕ ನದಿ ದಾಟಲು ಶಾಶ್ವತ ಪರಿಹಾರ ಕಲ್ಪಿಸುವುದಾಗಿ, ಸೇತುವೆಗೆ ಅಗತ್ಯವಿರುವ ಪಿಲ್ಲರ್ ವ್ಯವಸ್ಥೆ ಹಾಗೂ ಸಾಗಾಟದ ವ್ಯವಸ್ಥೆ ಮಾಡಿಸಿ ತೂಗು ಸೇತುವೆ ನಿರ್ಮಿಸುವುದಾಗಿ ಭರವಸೆ ನೀಡಲಾಗಿತ್ತು.

ಹತ್ತಿರದ ಕಣಕಿ ಗ್ರಾಮದಲ್ಲಿ ಹೊಸ ಸೇತುವೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಬಳಕೆಗೆ ಯೋಗ್ಯವಾಗಿರುವ ಹಳೆಯ ತೂಗು ಸೇತುವೆಯನ್ನು ಕಟ್ಟಿನಹೊಳೆಗೆ ಸ್ಥಳಾಂತರಿಸುವ ಸಾಧ್ಯತೆಯನ್ನೂ ಪರಿಶೀಲಿಸುವುದಾಗಿ ಶಾಸಕರು ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳಿಗೆ ಸೂಚಿಸುವುದಾಗಿ ತಿಳಿಸಿದ್ದರು.

ಆದರೆ ತಿಂಗಳುಗಳು ಉರುಳಿದವು. ಹಿನ್ನೀರು ಇಳಿಯಿತು. ಬೇಸಿಗೆ ಬಂತು. ಮತ್ತೆ ಮಳೆಗಾಲವೂ ಬಂತು.
ಸೇತುವೆ ಮಾತ್ರ ಬರಲಿಲ್ಲ.
ಕಾಮಗಾರಿ ಆರಂಭವಾದರೆ ಎರಡು–ಮೂರು ತಿಂಗಳಲ್ಲಿ ಪೂರ್ಣಗೊಳ್ಳಬಹುದಾದ ಕೆಲಸಕ್ಕೂ ಇನ್ನೂ ಚಾಲನೆ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಮತ್ತೆ ದ್ವೀಪವಾದ ಕಟ್ಟಿನಹೊಳೆ
ಈಗ ಮತ್ತೆ ಮಳೆಗಾಲ ಆರಂಭವಾಗಿದೆ. ಚಕ್ರಾ ಅಣೆಕಟ್ಟಿನ ಹಿನ್ನೀರು ಏರಿಕೆಯಾಗುತ್ತಿದ್ದಂತೆ ಕಟ್ಟಿನಹೊಳೆ ಭಾಗ ಮತ್ತೊಮ್ಮೆ ಹೊರ ಜಗತ್ತಿನಿಂದ ಬಹುತೇಕ ಪ್ರತ್ಯೇಕಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ತೂಗು ಸೇತುವೆಯ ಕನಸು ಕಂಡಿದ್ದ ಗ್ರಾಮಸ್ಥರು ಮತ್ತೆ ತೆಪ್ಪದ ಮೊರೆ ಹೋಗಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಕುಟುಂಬಗಳಿಗೆ ಪ್ರತಿದಿನ ನದಿ ದಾಟುವುದು ಅನಿವಾರ್ಯ. ಮಕ್ಕಳು ಶಾಲೆಗೆ ಹೋಗಬೇಕು, ಜನರು ಕೂಲಿ ಕೆಲಸಕ್ಕೆ ತೆರಳಬೇಕು, ಅನಾರೋಗ್ಯ ಬಂದರೆ ಆಸ್ಪತ್ರೆಗೆ ಹೋಗಬೇಕು. ಆದರೆ ಈ ಎಲ್ಲ ಅಗತ್ಯಗಳಿಗೂ ಮಳೆಗಾಲದಲ್ಲಿ ಅಪಾಯಕಾರಿ ಉಕ್ಕಡ ಅಥವಾ ತೆಪ್ಪವನ್ನೇ ಅವಲಂಬಿಸಬೇಕಾದ ಪರಿಸ್ಥಿತಿ.

ಒಮ್ಮೆ ಉಕ್ಕಡ ಮಗುಚಿ ಒಂದು ಜೀವ ಬಲಿಯಾದರೂ, ಆ ಘಟನೆ ಶಾಶ್ವತ ಪರಿಹಾರಕ್ಕೆ ಕಾರಣವಾಗಲಿಲ್ಲ ಎಂಬ ನೋವು ಗ್ರಾಮಸ್ಥರದ್ದು.

ಚಕ್ರಾ ಕಟ್ಟಿದ್ದು ರಾಜ್ಯಕ್ಕೆ ಬೆಳಕು ಕೊಡಲು; ಇವರ ಮನೆಗಳಲ್ಲಿ ಮಾತ್ರ ಕತ್ತಲೆ?
ಚಕ್ರಾ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ರಾಜ್ಯಕ್ಕೆ ವಿದ್ಯುತ್ ಒದಗಿಸುವ ಉದ್ದೇಶಕ್ಕಾಗಿ ಇಲ್ಲಿನ ಜನರು ತಮ್ಮ ಕೃಷಿ ಭೂಮಿ, ಮನೆ-ಮಠ, ಬದುಕಿನ ನೆಲವನ್ನು ತ್ಯಾಗ ಮಾಡಿದ್ದಾರೆ.

ಆದರೆ ಅಣೆಕಟ್ಟಿನಿಂದ ರಾಜ್ಯಕ್ಕೆ ಬೆಳಕು ದೊರೆಯುತ್ತಿದ್ದರೂ, ಅಣೆಕಟ್ಟಿನ ಹಿನ್ನೀರಿನಿಂದ ಸುತ್ತುವರಿದಿರುವ ಈ ಗ್ರಾಮಗಳ ಜನರಿಗೆ ಇಂದಿಗೂ ಸುರಕ್ಷಿತ ಸಂಚಾರದ ವ್ಯವಸ್ಥೆ ಸಿಗದಿರುವುದು ವಿಪರ್ಯಾಸ.

ರಾಜ್ಯಕ್ಕೆ ವಿದ್ಯುತ್ ನೀಡಲು ಭೂಮಿ ತ್ಯಾಗ ಮಾಡಿದವರೇ ಇಂದು ನದಿಯ ಆಚೆ–ಈಚೆ ಹೋಗಲು ತೆಪ್ಪದ ಮೇಲೆ ಅವಲಂಬಿತರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಚುನಾವಣೆ ಬಂದಾಗ ಮಾತ್ರ ನೆನಪಾಗುವ ಊರೇ?
ಸ್ಥಳೀಯರ ಪ್ರಶ್ನೆ ಸರಳವಾಗಿದೆ.
2025ರ ಸೆಪ್ಟೆಂಬರ್‌ನಲ್ಲಿ ದುರಂತ ಸಂಭವಿಸಿದಾಗ ಜನಪ್ರತಿನಿಧಿಗಳು ಸ್ಥಳಕ್ಕೆ ಬಂದರು. ಸಂತಾಪ ವ್ಯಕ್ತಪಡಿಸಿದರು. ಪರಿಹಾರದ ಭರವಸೆ ನೀಡಿದರು. ಸೇತುವೆಯ ಭರವಸೆಯನ್ನೂ ನೀಡಿದರು.

ಆದರೆ ದುರಂತದ ನಂತರದ ದಿನಗಳಲ್ಲಿ ಆ ಭರವಸೆಯ ಅನುಷ್ಠಾನವನ್ನು ಪರಿಶೀಲಿಸುವವರು ಯಾರು?
ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು, ಅಧಿಕಾರಿಗಳು ಅಥವಾ ರಾಜಕೀಯ ಪಕ್ಷಗಳ ಮುಖಂಡರು.. ಯಾರಾದರೂ ಈ ಸಮಸ್ಯೆಯನ್ನು ಮತ್ತೆ ಗಂಭೀರವಾಗಿ ಸರ್ಕಾರದ ಗಮನಕ್ಕೆ ತಂದಿದ್ದಾರೆಯೇ ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಮೂಡಿದೆ.

ಚುನಾವಣೆ ಬಂದಾಗ ಮತದಾರರ ಮನೆ ಬಾಗಿಲಿಗೆ ತೆರಳುವ ರಾಜಕೀಯ ವ್ಯವಸ್ಥೆಗೆ, ಚುನಾವಣೆ ಮುಗಿದ ನಂತರ ಅದೇ ಮತದಾರರ ಜೀವದ ಪ್ರಶ್ನೆಯಾಗಿರುವ ಸೇತುವೆಯ ನೆನಪು ಏಕೆ ಉಳಿಯುವುದಿಲ್ಲ ಎಂಬುದು ಸ್ಥಳೀಯರ ಅಸಮಾಧಾನ.

ಪ್ರತಿವರ್ಷವೂ ಇದೇ ಕಥೆ
ಇದು ಕೇವಲ 2026ರ ಸಮಸ್ಯೆಯಲ್ಲ. ಮಳೆಗಾಲ ಬಂದಾಗಲೆಲ್ಲ ಬಂಟೋಡಿ ಮತ್ತು ಕಟ್ಟಿನಹೊಳೆ ಭಾಗದ ಜನರು ಇದೇ ಆತಂಕವನ್ನು ಎದುರಿಸುತ್ತಿದ್ದಾರೆ.

ಮಳೆ ಹೆಚ್ಚಾದರೆ ಹಿನ್ನೀರು ಏರುತ್ತದೆ. ಹಿನ್ನೀರು ಏರಿದರೆ ದಾರಿ ಬಂದ್. ದಾರಿ ಬಂದ್ ಆದರೆ ತೆಪ್ಪ ಅಥವಾ ಉಕ್ಕಡವೇ ಗತಿ.

ಪ್ರತಿವರ್ಷವೂ ಸಮಸ್ಯೆ ಮರುಕಳಿಸುತ್ತಿದೆ. ಆದರೆ ಪರಿಹಾರ ಮಾತ್ರ ಮರೀಚಿಕೆ.

ಈ ಬಾರಿ ಕೂಡ ಮಳೆಗಾಲ ಎದುರಾಗಿದೆ. ನೀರು ಮತ್ತೆ ಏರುತ್ತಿದೆ. ಹೀಗಾಗಿ ಕಳೆದ ವರ್ಷ ನೀಡಿದ ತೂಗು ಸೇತುವೆಯ ಭರವಸೆಯನ್ನು ಗ್ರಾಮಸ್ಥರು ಮತ್ತೆ ನೆನಪಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ತೂಗು ಸೇತುವೆ ಯಾವಾಗ?
ದುರ್ಗಮ ಪ್ರದೇಶದಲ್ಲಿ ವಾಸಿಸುವ ನೂರಾರು ಜನರ ಸುರಕ್ಷಿತ ಸಂಚಾರಕ್ಕಾಗಿ ತೂಗು ಸೇತುವೆ ನಿರ್ಮಾಣ ಅಥವಾ ಹಳೆಯ ಸೇತುವೆಯನ್ನು ಸ್ಥಳಾಂತರಿಸುವ ಯೋಜನೆಗೆ ತಕ್ಷಣ ಚಾಲನೆ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಒಂದು ಜೀವ ಕಳೆದುಕೊಂಡ ನಂತರ ನೀಡಿದ ಭರವಸೆ ಇನ್ನೊಂದು ಮಳೆಗಾಲದಲ್ಲೂ ಕಾರ್ಯರೂಪಕ್ಕೆ ಬರದಿರುವುದು ಆಡಳಿತ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎತ್ತುವಂತಾಗಿದೆ.

ಭರವಸೆ ನೀಡಿ ಒಂದು ವರ್ಷ ಸಮೀಪಿಸುತ್ತಿದ್ದರೂ ಕಾಮಗಾರಿ ಆರಂಭವಾಗದಿದ್ದರೆ, ಮುಂದಿನ ಮಳೆಗಾಲದಲ್ಲೂ ಕಟ್ಟಿನಹೊಳೆ ಜನರು ಇದೇ ಅಪಾಯದ ದಾರಿಯಲ್ಲೇ ನಡೆಯಬೇಕೇ?

ಸ್ವಾತಂತ್ರ್ಯ ಬಂದು 79 ನೇ ವರ್ಷದಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಬುದ್ಧಿವಂತರ ಕ್ಷೇತ್ರ ಎಂಬ “ಕುಖ್ಯಾತಿ” ಪಡೆದ ಕ್ಷೇತ್ರದಲ್ಲಿ ಇವತ್ತಿಗೂ ನದಿ ದಾಟಲು ತೆಪ್ಪದ ಆಶ್ರಯ ಪಡೆಯುತ್ತಿರುವುದು ದುರಂತ. ಇಲ್ಲೇ ಕೆಲವೇ ಕಿಲೋಮೀಟರ್ ಅಂತರದಲ್ಲಿ ಸಿಗಂದೂರಿಗೆ ನಿರ್ಮಿಸಿದ ಸೇತುವೆಯನ್ನೇ ಪ್ರಪಂಚ ಗೆದ್ದು ಸಾಧಿಸಿದಂತೆ ಮೆರೆಯುವ ರಾಜಕಾರಣಿಗಳು ಈಗ ಈ ಊರಿನ ಶೋಚನೀಯ ಸ್ಥಿತಿಯನ್ನು ಹೊರ ಪ್ರಪಂಚದಿಂದ ಮರೆ ಮಾಚುವುದೇಕೆ.?

ಒಂದು ಸೇತುವೆ ಎಂದರೆ ಕೇವಲ ಕಾಂಕ್ರೀಟ್ ಮತ್ತು ಕಬ್ಬಿಣದ ರಚನೆಯಲ್ಲ. ಅದು ಶಾಲೆಗೆ ಹೋಗುವ ಮಗುವಿನ ಸುರಕ್ಷತೆ, ಆಸ್ಪತ್ರೆಗೆ ಹೋಗುವ ರೋಗಿಯ ಜೀವ, ಕೂಲಿಗೆ ತೆರಳುವ ಕಾರ್ಮಿಕನ ಬದುಕು ಮತ್ತು ಇಡೀ ಗ್ರಾಮದ ಹೊರಜಗತ್ತಿನ ಸಂಪರ್ಕ.

ಕಟ್ಟಿನಹೊಳೆ ಜನರಿಗೆ ಈಗ ಬೇಕಿರುವುದು ಮತ್ತೊಂದು ಭರವಸೆಯಲ್ಲ. ಜೀವ ಉಳಿಸುವ ಸೇತುವೆ.

~ ಪ್ರಗತ್ ಕೆ ಆರ್

Related Articles

ಇತ್ತೀಚಿನ ಸುದ್ದಿಗಳು