Home ರಾಜ್ಯ ದಕ್ಷಿಣ ಕನ್ನಡ ವಿಧಾನಮಂಡಲದ ವಿವಿಧ ಪ್ರಕ್ರಿಯೆಗಳ ಡಿಜಿಟಲೀಕರಣ – ಯು.ಟಿ.ಖಾದರ್

ವಿಧಾನಮಂಡಲದ ವಿವಿಧ ಪ್ರಕ್ರಿಯೆಗಳ ಡಿಜಿಟಲೀಕರಣ – ಯು.ಟಿ.ಖಾದರ್

ಮಂಗಳೂರು: ವಿಧಾನ ಮಂಡಲದ ವಿವಿಧ ಪ್ರಕ್ರಿಯೆಗಳಿಗೆ ಕಾಗದರಹಿತ ವ್ಯವಸ್ಥೆ ಜಾರಿಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನ್ಯಾಷನಲ್ ಇ–ವಿಧಾನ್ ಆಪ್ಲಿಕೇಷನ್‌ (ನೇವಾ) ಬಳಸಿ ವಿಧಾನಮಂಡಲದ ಪ್ರಕ್ರಿಯೆಗಳ ಡಿಜಿಟಲೀಕರಣ ಕೈಗೊಳ್ಳುವ ಕುರಿತು ಸಂಸತ್ತು ಹಾಗೂ ಕರ್ನಾಟಕ ವಿಧಾನಮಂಡಲಗಳ ಸಚಿವಾಲಯಗಳು ಈಚೆಗೆ ಒಪ್ಪಂದಕ್ಕೆ ಸಹಿ ಹಾಕಿವೆ. ಆರು ತಿಂಗಳ ಒಳಗೆ ಇದು ಅನುಷ್ಠಾನಗೊಳ್ಳಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ವಿಧಾನಮಂಡಲದ ಪ್ರಕ್ರಿಯೆಗಳನ್ನು ಕಾಗದರಹಿತಗೊಳಿಸುವ ಬೇಡಿಕೆ ಹಿಂದಿನಿಂದಲೂ ಇದೆ. ಅದಕ್ಕಾಗಿ ಒಂದೋ, ನಾವೇ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಬೇಕಿತ್ತು ಅಥವಾ ವಿಧಾನಮಂಡಲದ ಅಗತ್ಯಗಳಿಗೆ ಅನುಗುಣವಾಗಿ ಕೆಲವೊಂದು ಮಾರ್ಪಾಡು ಮಾಡಿ ನ್ಯಾಷನಲ್ ಇ ವಿಧಾನ್ ಆ್ಯಪ್‌ ಅನ್ನೇ ಬಳಸುವ ಆಯ್ಕೆ ನಮ್ಮ ಮುಂದಿತ್ತು. ಈ ಎರಡೂ ಆಯ್ಕೆಗಳ ಅನುಕೂಲ ಹಾಗೂ ಅನನುಕೂಲಗಳ ಬಗ್ಗೆ ಚರ್ಚಿಸಿದ್ದೇವೆ. ನ್ಯಾಷನಲ್ ಇ–ವಿಧಾನ್ ಆಪ್ಲಿಕೇಷನ್‌ ಬಳಸುವ ಪ್ರಸ್ತಾವಕ್ಕೆ ಸರ್ಕಾರವೂ ಅನುಮೋದನೆ ನೀಡಿದೆ’ ಎಂದರು.

‘ನ್ಯಾಷನಲ್ ಇ–ವಿಧಾನ್ ಆಪ್ಲಿಕೇಷನ್‌ ಬಳಸಿದರೆ ಅದರ ಅನುಷ್ಠಾನದ ಶೇ 60ರಷ್ಟು ಪಾಲನ್ನು ಕೇಂದ್ರವು ನೀಡಲಿದೆ. ನಾವು ವಿಧಾನಸೌಧ ಹಾಗೂ ಬೆಳಗಾವಿಯ ಸುವರ್ಣ ವಿಧಾನ ಸೌಧಗಳೆರಡನ್ನೂ ಡಿಜಿಟಲೀಕರಣಗೊಳಿಸಲಿದ್ದೇವೆ. ವಿಧಾನ ಸಭೆಯ ಡಿಜಿಟಲೀಕರಣಕ್ಕೆ ₹ 72 ಕೋಟಿ ಹಾಗೂ ವಿಧಾನ ಪರಿಷತ್ತಿನ ಡಿಜಿಟಲೀಕರಣಕ್ಕೆ ₹ 52 ಕೋಟಿ ವೆಚ್ಚವಾಗಲಿದೆ. ಈ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ಪ್ರತ್ಯೇಕ ಸಮಿತಿಯನ್ನು ರೂಪಿಸಲಾಗುತ್ತದೆ. ವಿಧಾನಸಭಾ ಸಚಿವಾಲಯದಲ್ಲಿ ಈ ಹೊಸ ವ್ಯವಸ್ಥೆಯ ಅನುಷ್ಠಾನಕ್ಕೆ ಸಚಿವಾಲಯದ ಕಾರ್ಯದರ್ಶಿಯವರು ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದವರು ಕ್ರಮವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

You cannot copy content of this page

Exit mobile version