Saturday, April 27, 2024

ಸತ್ಯ | ನ್ಯಾಯ |ಧರ್ಮ

ಕರ್ನಾಟಕದ ಗ್ರಾಮಜಗತ್ತಿನ ಬಹುರೂಪಿ ದೀಪಾವಳಿಗಳು

ಈ ವರ್ಷ ಕರ್ನಾಟಕದ ರೈತರಿಗೆ ಮಳೆಯೂ ಕಣ್ಣೀರೂ ಏಕೀಭವಿಸಿದ ವಾತಾವರಣ.

ಒಂದೆಡೆ ವಿಪರೀತ ಸುರಿದ ಮಳೆಗೆ ಶೇಂಗಾ ಬಳ್ಳಿಗಳಲ್ಲೆ ಮೊಳೆತಿವೆ. ಮೆಕ್ಕೆಜೋಳ ತೆನೆಯಲ್ಲಿಯೇ ಮೊಳೆತಿವೆ..ಕೆಲವು ಕಡೆಗಳಲ್ಲಿ ಈರುಳ್ಳಿಯನ್ನು ರಸ್ತೆಗೆ ಚೆಲ್ಲಲಾಗಿದೆ. ಈ ವರ್ಷದ ಆರಂಭಕ್ಕೆ ರೈತರು ಒಳ್ಳೆಯ ಮಳೆ ಎಂದು ಸಂಭ್ರಮಿಸಿದರು. ಈ ಅತಿಯಾದ ಮಳೆ ಸಂಭ್ರಮಿಸಿರುವವರನ್ನೆ ಅಳುವಂತೆ ಮಾಡಿದೆ. ಇದು ರೈತರು ನಿಸರ್ಗದ ಜತೆ ನಡೆಸುವ‌ ನಿರಂತರ ಜೂಜಾಟವಾಗಿದೆ. ಒಮ್ಮೆ ಗೆಲುವು, ಮತ್ತೊಮ್ಮೆ ಸೋಲು. ವಾತಾವರಣ ಹೀಗಿರುವಾಗ ಮತ್ತೊಂದು ದೀಪಾವಳಿ ಬಂದಿದೆ. ಹಳ್ಳಿಗಳಲ್ಲಿ ದೀಪಾವಳಿಯ ದೊಡ್ಡ ಸಂಭ್ರಮ ಇಲ್ಲದಿದ್ದರೂ ನೋವು ಮರೆಯಲಾದರೂ ದೀಪಾವಳಿ ಆಚರಿಸಿ ನಗು ಚಲ್ಲುವ ಪ್ರಯತ್ನ ಮಾಡುತ್ತಾರೆ. 

ಇದೀಗ ಗ್ರಾಮೀಣ ಭಾಗ ಮತ್ತು ನಗರದ ಮಧ್ಯಮವರ್ಗ ತನ್ನದೇ ರೀತಿಯಲ್ಲಿ ಸಂಭ್ರಮದ ಆಚರಣೆಗೆ ಅಣಿಯಾಗಿದೆ.  ಇದು ನಗರಕೇಂದ್ರಿತ ಶ್ರೀಮಂತ, ಮಧ್ಯಮವರ್ಗದ ಹಬ್ಬವೆನ್ನುವಂತೆ ಬಿಂಬಿತವಾಗುತ್ತದೆ. ಹೀಗಾಗಿಯೇ ದೀಪಾವಳಿ ಸಂದರ್ಭಕ್ಕೆ ದೊಡ್ಡ ವ್ಯಾಪಾರದ ವಹಿವಾಟು ಶುರುವಾಗುತ್ತದೆ. ಇದನ್ನೆಲ್ಲ ಆಚೆ ಸರಿಸಿ ನೋಡಿದರೆ ದೀಪಾವಳಿ ಮೂಲತಃ ಗ್ರಾಮೀಣ ಪ್ರದೇಶದ ಬಹುಸಂಸ್ಕೃತಿಯಲ್ಲಿ ಅರಳುವ ಒಂದು ವಿಧ್ಯಮಾನ. ಹೀಗೆ ಬಹುಸಂಸ್ಕೃತಿಯ ಬೇರುಗಳನ್ನು ಪರಿಶೀಲಿಸಿದರೆ ದೀಪಾವಳಿಯ ಸಾಂಸ್ಕೃತಿಕ ಲೋಕವೊಂದು ತೆರೆದುಕೊಳ್ಳುತ್ತದೆ.

ನಾವು ಯಾವುದೇ ಹಬ್ಬಗಳನ್ನು ಇಂದು ನಗರ ಕೇಂದ್ರಿತವಾಗಿ ನೋಡುತ್ತಿದ್ದೇವೆ. ಅದೆ ನಿಜದ ಸ್ವರೂಪ ಎಂದು ಬಿಂಬಿಸಲಾಗುತ್ತದೆ. ದೀಪಾವಳಿ ವಿಷಯದಲ್ಲೂ ಹಾಗೆ ಇದೆ. ಆದರೆ ಗ್ರಾಮೀಣ ಜಗತ್ತು ದೀಪಾವಳಿಯನ್ನು ಹೇಗೆ ಪರಿಭಾವಿಸಿದೆ ಎಂದು ಹುಡುಕಿದರೆ ಅಚ್ಚರಿಯಾಗುವಷ್ಟು ವೈವಿಧ್ಯವಿದೆ. ತುಂಬಾ ಫರಕುಗಳನ್ನು ಒಡಲೊಳಗಿಟ್ಟುಕೊಂಡಿದೆ. ಹಾಗೆ ನೋಡಿದರೆ ಜನಪದರ ದೀಪಾವಳಿ ಒಂದಲ್ಲ ಹಲವಿವೆ. ಕರ್ನಾಟಕದ ಪ್ರಾದೇಶಿಕ ಭಿನ್ನತೆಗಳ ಜತೆ, ಹಲವು ಸಮುದಾಯಗಳ ಜತೆ, ಬೇರೆ ಬೇರೆ ದೈವಗಳ ಜತೆ ವಿವಿಧ ಆಕಾರಗಳಲ್ಲಿ ಮೈದಾಳಿದೆ. ಹಾಗಾಗಿ ಇದನ್ನು ಗ್ರಾಮಜಗತ್ತಿನ ಬಹುರೂಪಿ ದೀಪಾವಳಿಗಳು ಎನ್ನಬಹುದು.

ಕೊಳ್ಳೇಗಾಲ ಮತ್ತು ಚಾಮರಾಜನಗರ ಭಾಗದ ಬೇಡಗಂಪಣ ಸಮುದಾಯದ ದೀಪಾವಳಿ ವಿಶಿಷ್ಠವಾಗಿದೆ. ಮದುವೆಯಾಗದ 101 ಹೆಣ್ಣು ಮಕ್ಕಳು ಮಲೆಮಾದೇಶ್ವರನಿಗೆ ʼಹಾಲರಿವೆ ಸೇವೆ’ ಎಂಬ ಆಚರಣೆಯನ್ನು ಮಾಡುತ್ತಾರೆ. ಇದು ಬೇಡಗಂಪಣರ ಮಹಿಳೆಯರಿಂದ ಮಾತ್ರ ಸಲ್ಲುತ್ತದೆ. ಇದಕ್ಕೊಂದು ಸೃಷ್ಟಿಪುರಾಣವಿದೆ. ಹಿಂದೆ ಶೇಷಣ್ಣೊಡೆಯ ಮಾದೇಶ್ವರ ಪೂಜೆಗೆ ಹಾಲರಿವೆ ಒಯ್ಯುವಾಗ, ಶೇಷನ ಪರೀಕ್ಷಿಸಲು ಮಾದೇಶ ಕಾಲಿನಿಂದ ಹಾಲರಿವೆ ಉರುಳಿಸುತ್ತಾನೆ. ಆಗ ಶೇಷಣ್ಣ ಮಾದೇಶ್ವರನಿಗೆ ಹಾಲಿಲ್ಲದಾಯಿತೆಂದು ಆತ್ಮಹತ್ಯೆಗೆ ಸಜ್ಜಾಗುತ್ತಾನೆ. ಕೂಡಲೇ ಮಾದೇಶ್ವರ ಭಕ್ತಿಗೆ ಮೆಚ್ಚಿ ಈ ಹಾಲರಿವೆಯಿಂದ ಹರಿದ ಹಾಲು ಹಳ್ಳವಾಗಲಿ, ದೀಪಾವಳಿಯಲ್ಲಿ ಬೇಡಗಂಪಣರ ಕೋರು ಮಹಿಳೆಯರು ಹಾಲರಿವೆ ಸೇವೆ ಮಾಡಲಿ ಎಂದನಂತೆ. ಈಗ ಶೇಷಣ್ಣೊಡೆಯನ ವಂಶಸ್ಥ ಮಹಿಳೆಯರು ಹಾಲರಿವೆ ಸೇವೆ ಮಾಡುತ್ತಾರೆ.

ಹಾಲಕ್ಕಿ ಒಕ್ಕಲಿಗರಲ್ಲಿ ಬಲಿಯ ಆಚರಣೆ ನಡೆಯುವುದು ದೀಪಾವಳಿಯಲ್ಲಿ. ಬಲಿ ಹಾಲಕ್ಕಿಗಳ ಮನೆಗೆ ಬೆಳ್ಳಿ ರಥದಲ್ಲಿ ಬಂದು, ಗೋವಿನ ಮೇಲೆ ಮರಳುತ್ತಾನೆ. ಮಳೆ ನಿಂತು, ಬೆಳೆ ಕೊಯ್ಲಾಗಿ ಹೊಲಗಳಿಂದ ಕಣಗಳಿಗೆ ಬರುತ್ತದೆ. ಪಶುಪಾಲಕರಿಗೆ ನಿರ್ಬಂಧಗಳು ಇಲ್ಲವಾಗುವ  ಈ ಕಾಲದಲ್ಲಿ ಬಲಿ ಆಚರಣೆ ಜೀವಪಡೆಯುತ್ತದೆ. ಹಾಗಾಗಿ ದೀಪಾವಳಿ ಕೆಲ ಸಮುದಾಯಗಳಿಗೆ ಮಾಂಸಾಹಾರಿ ಹಬ್ಬ. 

ಮಧ್ಯ ಕರ್ನಾಟಕದ ಬೇಡರು ದೀಪಾವಳಿಗೆ ಗುಗ್ಗರಿಹಬ್ಬ ಮಾಡುತ್ತಾರೆ. ಹೊಸಧಾನ್ಯ ಹುರುಳಿ ಜೋಳದೊಂದಿಗೆ ಬಾಳೆಹಣ್ಣು ಬೆಲ್ಲವನ್ನು ಸೇರಿಸಿ ವಿಶೇಷ ಆಹಾರವನ್ನು ಸಿದ್ದಪಡಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಅಪರೂಪದ ಆಚರಣೆಗಳು ದೀಪಾವಳಿಯೊಂದಿಗೆ ಬೆಸೆದುಕೊಂಡಿವೆ. ಬೆಳಗಾಂ ಬಿಜಾಪುರ ಭಾಗದ ಅಲೆಮಾರಿ ಕುರುಬರು ಕುರಿದಡ್ಡಿಗಳಲ್ಲಿ `ಹಾಲು ಬಿಂದಿಗೆ’ ಆಚರಣೆ ಮಾಡುತ್ತಾರೆ. ಕುರಿ ಕುಳ್ಳಿನ ಬೆಂಕಿಯಲ್ಲಿ ಕುರಿಹಾಲು ಕಾಯಿಸಿ ಉಕ್ಕುವ ದಿಕ್ಕಿಗೆ ಮಳೆ-ಬೆಳೆ ಹೆಚ್ಚೆಂದು ನಂಬುತ್ತಾರೆ. ಆ ದಿಕ್ಕಿಗೆ ಕುರಿಗಳೊಂದಿಗೆ ವಲಸೆ ಹೋಗುತ್ತಾರೆ. ಕುರಿಗಾರ ಸಮುದಾಯಗಳು ಕುರಿಯನ್ನು ಲಕ್ಷ್ಮಿ ಎಂದು ಭಾವಿಸುತ್ತಾರೆ. ಹಾಗಾಗಿ ಕುರಿಗಳನ್ನು ಪೂಜಿಸಿ ಓಡಿಸುವ ಆಚರಣೆಯೂ ಇದೆ. ಕುರಿದೊಡ್ಡಿಯನ್ನು ಹೊಲದ ಬೆಳೆಗಳಿಂದ ಅಲಂಕರಿಸಿ ವಿಶೇಷವಾಗಿ ಕುರಿಗಳಿಗೆ ಭಕ್ತಿಯನ್ನು ಅರ್ಪಿಸುವುದಿದೆ.

ಉತ್ತರಕರ್ನಾಟಕದ ಕೊಪ್ಪಳ ಕುಷ್ಟಗಿ ಭಾಗದಲ್ಲಿ ಕುಂಬಾರ ಮನೆಯ ಕರಿಬೂದಿಯಿಂದ ಮನೆ ಮುಂದೆ ಎರಡು ದೀಪಸ್ತಂಬ ಬರೆಯುವುದಿದೆ. ಇದಕ್ಕೆ ಕರಿಮಂಠ ಎಂದು ಕರೆಯುತ್ತಾರೆ. ಇದಕ್ಕಿರುವ ಮಿತ್ ಕುತೂಹಲವಾಗಿದೆ. ಒಮ್ಮೆ ಪತಿವ್ರತೆ ಲಕ್ಷ್ಮಿ ಪೂಜೆಗೆ ಅಡ್ಡಿಯಾಗದಿರಲೆಂದು ಕಾವಲಿಗೆ ಮಣ್ಣಿನ ಕರಿ ಮತ್ತು ಮಂಠ ಎಂಬ ಯೋಧರನ್ನು ನಿಲ್ಲಿಸುತ್ತಾಳೆ. ಇವಳ ಭಕ್ತಿ ಮೆಚ್ಚಿ ಸ್ವತಃ ಲಕ್ಷ್ಮಿಯೇ ಮನೆಗೆ ಬರುತ್ತಾಳೆ. ಆಗ ಕಾವಲಿನ ಕರಿ ಮಂಠರು ಲಕ್ಷ್ಮಿಯನ್ನು ತಡೆದಾಗ ಕೋಪಗೊಂಡು ಇವರನ್ನು ಸಂಹರಿಸುತ್ತಾಳೆ. ಇದನ್ನು ಕಂಡ ಪತಿವ್ರತೆ ಗೋಳಾಡಿ  ಲಕ್ಷ್ಮಿಯಿಂದ ಮರುಜೀವ ಪಡೆಯುತ್ತಾಳೆ. ಈ ನೆನಪಿಗೆ ಕರಿಮಂಠನ ಆಚರಣೆ ನಡೆದುಕೊಂಡುಬಂದಿದೆ. ಲಕ್ಷ್ಮಿ ಪೂಜೆಗೆ ಅಡ್ಡಿಯಾಗದು ಎಂದು ನಂಬುತ್ತಾರೆ.

ಅಂತೆಯೇ ಹುಲಿಜಂತಿಯಲ್ಲಿ ನಡೆವ ಕುರುಬರ ಮಾಳಪ್ಪನ ಮುಂಡಾಸು ಆಚರಣೆಯೊಂದಿದೆ. ದೀಪಾವಳಿ ಅಮವಾಸ್ಯೆಗೆ ಮಾಳಪ್ಪನ ಸಮಾದಿ. ಮೇಲೆ ಯಾವ ಕಡೆ ಮುಂಡಾಸ ಹೆಚ್ಚು ಬಿದ್ದಿರುತ್ತದೋ ಆ ಕಡೆ ಮಳೆ-ಬೆಳೆ ಹೆಚ್ಚೆಂದು ತಿಳಿಯುತ್ತಾರೆ. ಈ ಸಂದರ್ಭದ ಮಾಳಪ್ಪನ ಜಾತ್ರೆಗೆ ಗುರು ಬೀರಪ್ಪನ ಸಾಕುಮಗ ಬುಳ್ಳಪ್ಪ ಉಟಗಿ ಬರಮಲಿಂಗ, ಸೂನ್ಯಳ ವಿಠಲ, ಹುನೂರಿನ ಬೀರಪ್ಪ,  ಬೀರಪ್ಪನ ತಂಗಿ ಶೀಲವಂತೆ ಸಿರಿಕೋನ ಜೀರಂಕಲಗಿ ಬೀರಪ್ಪ ದೈವಗಳ ಪಲ್ಲಕ್ಕಿಗಳು ಆಗಮವಾಗುತ್ತವೆ. ಈ ಪಲ್ಲಕ್ಕಿಗಳ ಉತ್ಸವ ರೋಮಾಂಚನಕಾರಿಯಾಗಿರುತ್ತದೆ. ಇದೇ ದೀಪಾವಳಿಗೆ ಜತ್ತ ತಾಲೂಕಿನ ಉಮದಿ ಮಲಕಾರಿಸಿದ್ಧ ಹಾಗೂ ಮಂಗಳವೇಡ ತಾಲೂಕಿನ ಡೋಣಜದ ಮಹಾಸಿದ್ಧನ ಜಾತ್ರೆಗಳು ನಡೆಯುತ್ತವೆ.

ದೀಪಾವಳಿ ಪಾಡ್ಯಕ್ಕೆ ನಡೆವ ಭೀಮಾಂಬಿಕೆಯ ಜಾತ್ರೆಯಲ್ಲಿ ಬಂದವರಿಗೆಲ್ಲಾ ಸಂಗಟಿ ಸಾರಿನ  ಪ್ರಸಾದವನ್ನು ವಿತರಿಸುತ್ತಾರೆ. `ಸಂಗಟಿ ಉಂಡು ಸಂಕಟ ಕಳೆದುಕೊಳ್ಳಿರಿ’ ಎಂದು ಭೀಮವ್ವ ವಚನ ನೀಡಿದ್ದಾಳೆಂದು ಜನ ನಂಬುತ್ತಾರೆ. ತುಳುನಾಡಿನ ನಲಿಕೆ(ಪಾಣಾರ)ಸಮುದಾಯ ದೀಪಾವಳಿಯಲ್ಲಿ ಮಾಂಕಾಳಿ ಕುಣಿತ ನಡೆಸುತ್ತಾರೆ. ದೀಪಾವಳಿಯ ವೇಳೆ ಹೊಸ ಬತ್ತದಿಂದ ಮಡಿಯಲ್ಲಿ ತಯಾರಿಸಿದ ಅವಲಕ್ಕಿಯನ್ನು ನೈವೇದ್ಯವಾಗಿ ಅರ್ಪಿಸುವುದಿದೆ. ತನ್ನದಾಗಿದ್ದ ನಾಡಿನ ಬೆಳೆ ಭಾಗ್ಯಗಳನ್ನು ನೋಡಲು ಬರುವನೆನ್ನಲಾದ ಬಲೀಂದ್ರನಿಗೂ ಹೊಸ ಅವಲಕ್ಕಿಯ ಔತಣವನ್ನು ನೀಡುತ್ತಾರೆ.

ಲಂಬಾಣಿ ಮಹಿಳೆಯರಿಗೆ ದೀಪಾವಳಿ ವಿಶಿಷ್ಠವಾಗಿದೆ. ಇವರು ಲಕ್ಷ್ಮಿ ಪೂಜೆಗೆ ಮೊದಲು ಗೋಪೂಜೆ ಮಾಡುತ್ತಾರೆ. ಅಮವಾಸ್ಯೆಯ ರಾತ್ರಿ ಶೃಂಗರಿಸಿಕೊಂಡ ಯುವತಿಯರು ಹರಳೆಣ್ಣೆ ದೀಪದಿಂದ ತಾಂಡಾ ನಾಯಕನಿಗೆ ಬೆಳಗುತ್ತಾರೆ. ತಾಂಡಾದ ಮನೆಗಳಿಗೆ ಆರತಿ ಹೋದ ನಂತರ ಕಾಣಿಕೆಯಾಗಿ ಹಣವನ್ನು ಢಾಕಣಿ (ಪಣತಿ)ಯಲ್ಲಿ ಹಾಕುತ್ತಾರೆ. ಆಗ ಹುಡುಗಿಯರು ಮೇರಾ (ಆರತಿ) ಗೀತೆ ಹಾಡುತ್ತಾರೆ. `ಬಾಪು ತೋನ ಮೇರಾ/ವರ್ಷೆ ದಾಡೇರ ಕೋಟ ದವಾಳಿ/ಯಾರಿ ತೋನ ಮೇರಾ/ ವರ್ಷೆ ದಾಡೇರ ಕೋಟ ದವಾಳಿ/ಭೀಯಾ ತೋನ ಮೇರಾ/ವರ್ಷೆ ದಾಡೇರ ಕೋಟ ದವಾಳಿ’ ಎನ್ನುವಂತಹ ಹಾಡುಗಳಲ್ಲಿ ತಂದೆ, ತಾಯಿ ಸಹೋದರರ ಗುಣಗಾನ ಮಾಡುತ್ತಾರೆ.

ಉತ್ತರ ಕನ್ನಡ ಭಾಗದ ಮುಕರಿ ಸಮುದಾಯದ ಮಹಿಳೆಯರಿಗೆ ದೀಪಾವಳಿ ದೊಡ್ಡ ಹಬ್ಬ. ವಾರಗಟ್ಟಲೆ ಹಬ್ಬದ ತಯಾರಿ ಮಾಡುತ್ತಾರೆ. ದೀಪಾವಳಿಯ ನೀರು ಮೀಯುವ ದಿನ ನಸುಕಿನಲ್ಲಿ ಸ್ನಾನ ಮಾಡಿ, ಒಂದು ಹಲಗೆಯ ಮಣೆಯ ಮೇಲೆ ಕುಡಿ ಬಾಳೆಯನ್ನಿಟ್ಟು ಅದರ ಮೇಲೆ ಅಕ್ಕಿ ಹರಗಿ ಮೊಗ ಕಾಯಿಯನ್ನಿಟ್ಟು ಅದಕ್ಕೆ ಮಸಿಯಿಂದ ಮೀಸೆಯಿರುವ ಮುಖದಾಕೃತಿಯನ್ನು ಬಿಡಿಸಿ ಬಲೀಂದ್ರನೆಂದು ಪೂಜಿಸುತ್ತಾರೆ. ಮುಕರಿ ಅಜ್ಜಿಯರು ಮಕ್ಕಳಿಗೆ ಹಬ್ಬದ ಸಂಜೆ ಬಲೀಂದ್ರನ ಕತೆ, ಬಸ್ಯಾ ಹುಲಿ ಸವಾರಿ ಮಾಡಿದ ಕತೆ ಹೇಳುತ್ತಾಳೆ.

ಆಗೇರರ ಸಮುದಾಯ  ದೀಪಾವಳಿಯನ್ನು `ದೇಪಳಿಗ’ ಹಬ್ಬ ಎನ್ನುತ್ತಾರೆ. ಎಣ್ಣೆ ಸ್ನಾನ ಮಾಡುವ ಕಾರಣಕ್ಕೆ `ನೀರ ಮೀಯಾ ಹಬ್ಬ’ ಎಂದೂ ಕರೆಯುತ್ತಾರೆ. ದೇಪಳಿಗದ ಹಿಂದಿನ ದಿನ ಹೆಂಗಸರದು ‘ಅಡಕಲ’ದಲ್ಲಿ (ದೊಡ್ಡ ಮಣ್ಣಿನ ಮಡಕೆ) ನೀರು ತುಂಬುವ ಸಂಭ್ರಮ. ಅಡಕಲನ್ನು ತೊಳೆದು ಶೇಡಿ ಹಲಿ ಹೊಯ್ದು ಅಡಕಲ ಕೊರಳಿಗೆ ಹಿಂಡಲಕಾಯಿ ಬಳ್ಳಿ-ಹೂಮಾಲಿ ಸುತ್ತಿ ಅಲಂಕರಿಸುತ್ತಾರೆ. ನೀರಿಗೆ ಬೇವಿನ ಎಲೆ, ನೇರಳಿ ಚಕ್ಕೆ ಹಾಕುತ್ತಾರೆ. ಚತುರ್ದಶಿಯ ದಿವಸ ಎಣ್ಣೆ ಹಚ್ಚಿ ಸ್ನಾನ ಮಾಡುತ್ತಾರೆ.

ದೀಪವಾಳಿಯಲ್ಲಿ ಕಹಿ ಬಳಕೆಯೇ ಒಂದು ವಿಶೇಷ. ಹಿಂಡಲಕಾಯವನ್ನು ಕಾಲಿನಿಂದ ಮೆಟ್ಟಿ ಒಡೆದು ಬೀಜವನ್ನು ಹೆಣೆಗೆ ಇಟ್ಟುಕೊಳ್ಳುವುದರ ಜೊತೆಗೆ (ವಿಷ್ಣು ಬಲಿಚಕ್ರವರ್ತಿಯನ್ನು ಮೆಟ್ಟಿದ ಸಾಂಕೇತಿಕ ಆಚರಣೆ) ಕಹಿಬೇವು, ಓಮ (ಅಜವಾನ). ಜೀರಿಗೆ ಅರೆದು ಕಹಿ ಮದ್ದನ್ನು ಮಾಡಿ ಕುಡಿಯುತ್ತಾರೆ. ಮೊಗೆಕಾಯಿಯ ಕಡುಬು ಈ ಹಬ್ಬದ ವಿಶೇಷ ಖಾದ್ಯ. ಅಂಕೋಲ ಭಾಗದಲ್ಲಿ ಮಣ್ಣಿನ ಹೊಂಡೆ ರಚಿಸಿ ಅದನ್ನು ಬಲೀಂದ್ರನ ಕೋಟೆ ಎಂದು ಕರೆಯುತ್ತಾರೆ. ಮನೆಗಳ ಪೂಜಾ ಕೋಣೆಯಲ್ಲಿ ಬೋರಜ್ಜಿ ಮತ್ತು ಬಲೀಂದ್ರನ ಮಣ್ಣಿನ ಮೂರ್ತಿ ಮಾಡಿ ಆರಾಧಿಸಿವ ವಿಶಿಷ್ಠತೆ ಇದೆ.

ಬಾಗಲಕೋಟೆ ಜಿಲ್ಲೆಯ ಸಿರೂರಿನಲ್ಲಿ ಕರ್ನಾಟಕದಲ್ಲಿ ಬೇರೆಲ್ಲೂ ಕಾಣದ ಆಚರಣೆಯೊಂದಿದೆ. ಪಾಡ್ಯದ ಮಧ್ಯರಾತ್ರಿ ಕೆರೆಯಂಗಳದ ಸಾಮಫಡಿ(ಕುಸ್ತಿ ತಾಲೀಮಿನ ಸ್ಥಳ)ಗೆ ಕುಸ್ತಿ ಜಟ್ಟಿಗಳೆಲ್ಲಾ ಮೆರವಣಿಗೆಯಲ್ಲಿ ಬಂದು ಸಾಮು ತೆಗೆಯುತ್ತಾರೆ. ನಂತರ ಎರಡು ಗರಡಿಮನೆಯವರ ಮಧ್ಯೆ ಸ್ಪರ್ಧೆಯೂ ಏರ್ಪಡುತ್ತದೆ. ಹೀಗೆ ಸಾಮು ತೆಗೆಯುವಾಗ ಇದಕ್ಕೆ ಪೂರಕವಾದ ಜನಪದ ಗೀತೆಗಳನ್ನು ಹಾಡಲಾಗುತ್ತದೆ. ಮಲೆನಾಡಿದ ಒಕ್ಕಲಿಗರು ಮಾಡುವ ಮೇಳಿಪೂಜೆ ರೈತಾಪಿ ಬದುಕನ್ನು ಬಿಂಬಿಸುತ್ತದೆ. ಬೇಸಾಯದ ಎಲ್ಲಾ ಸಾಮಗ್ರಿಗಳನ್ನು ಒಪ್ಪವಾಗಿಟ್ಟು, ಬೆಳೆಯುವ ಎಲ್ಲಾ ಬೆಳೆಗಳನ್ನು ಜೋಡಿಸಿ ವಿಶಿಷ್ಠವಾಗಿ ಪೂಜೆ ಮಾಡಲಾಗುತ್ತದೆ. ಕೆಲವೆಡೆ ಸೆಗಣಿಯಿಂದ ದೇವಿ ಮೂರ್ತಿಮಾಡಿ ಆರಾಧಿಸುವ ಪದ್ದತಿ ಇದೆ. ಇದಕ್ಕವರು ಕೆರಕ ಎಂದು ಕರೆಯುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಾಲೆಮರದ ಕಂಬಕ್ಕೆ ಶೃಂಗಾರ ಮಾಡಿ ಪೂಜೆ ಮಾಡುವುದಿದೆ.

ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ದೀಪಾವಳಿಯನ್ನು ದೊಡ್ಡಹಬ್ಬ ಎಂದು ಕರೆಯುತ್ತಾರೆ. ಇದರಲ್ಲಿ ಗೋವುಗಳನ್ನು ಅಲಂಕರಿಸುತ್ತಾರೆ. ಎತ್ತುಗಳ ಕೊರಳಿಗೆ ನೋಟಿನ ಹಾರ, ಬೆಳ್ಳಿ ಬಂಗಾರದ ಸರಗಳನ್ನು ಹಾಕುವುದು ಮದುಮಗನಂತೆ ಬಾಸಿಂಗ ಕಟ್ಟಿ ಶೃಂಗಾರ ಮಾಡುವುದು, ಹೀಗೆ ಶೃಂಗರಿಸಿದ ಎತ್ತು ಆಕಳ ಜಾನುವಾರುಗಳನ್ನು ಪೂಜಿಸಿ ಊರಮುಂದೆ ತಂದು ಎಲ್ಲರೂ ಸಂಭ್ರಮಿಸುವುದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ದೀಪಾವಳಿಗೆ ಮಣ್ಣಿನ ಬೊಂಬೆಗಳನ್ನು ಮಾಡುವುದಿದೆ. ಇದರಲ್ಲಿ ಕೋಟೆಕೊತ್ತಲಗಳನ್ನು ಮಾಡಿ ಶಿವಾಜಿಯ ಪ್ರತಿಮೆ ಮಾಡುವುದಿದೆ. ಈ ಮಣ್ಣಿನ ಬೊಂಬೆಗಳು ವರ್ತಮಾನದ ವಿದ್ಯಮಾನಗಳನ್ನು ಆಧರಿಸಿಯೂ ಗೊಂಬೆಗಳನ್ನು ಮಾಡಲಾಗುತ್ತದೆ. ಹಾಗಾಗಿ ಚಿಕ್ಕೋಡಿ ಭಾಗದವರಿಗೆ ದೀಪಾವಳಿಯೆಂದರೆ ಮಣ್ಣಿನ ಗೊಂಬೆಗಳ ಹಬ್ಬವೇ ಆಗಿದೆ.

ಮೊದಲೆ ಹೇಳಿದಂತೆ ಕೆಲವು ಸಮುದಾಯಗಳಿಗೆ ದೀಪಾವಳಿ ಮಾಂಸಾಹಾರಿ ಹಬ್ಬ. ಕೊರಗ ಸಮುದಾಯಕ್ಕೆ ದೀಪಾವಳಿ ಹಿರಿಯರಿಗೆ ಹೆಡೆ ಅರ್ಪಿಸುವ ಹಬ್ಬ. ಸತ್ತ ವ್ಯಕ್ತಿಗಳ ಹೆಸರಲ್ಲಿ ಮಾಡಿದ ತಾಳಿಗಳನ್ನು ನೀರುತುಂಬಿದ ಮಡಕೆಗಳ ಕಂಠಕ್ಕೆ ಕಟ್ಟುವ ವಿಶಿಷ್ಠ ಆಚರಣೆ ಇದೆ. ಕೊರಗರು ಈ ಹಬ್ಬಕ್ಕೆ ಹಂದಿಯನ್ನು ಕೊಯ್ಯುವುದು, ಹಂದಿ ಮಾಂಸ ಮಾಡುವುದು ಕೂಡ ವಿಶೇಷ. ಗೊಂದಲಿಗ ಸಮುದಾಯವು ಈ ಹಬ್ಬದಲ್ಲಿ ಲಕ್ಷ್ಮಿಪೂಜೆಯನ್ನು ವಿಶೇಷವಾಗಿ ಮಾಡುತ್ತಾರೆ. ಗೊಂದಲಿಗ ಹೆಣ್ಣುಮಕ್ಕಳೆಲ್ಲಾ ಈ ಹಬ್ಬಕ್ಕೆ ಕಡ್ಡಾಯವಾಗಿ ಬರುತ್ತಾರೆ. ಅಂತೆಯೇ ಗ್ರಾಮದೇವಿಗೆ ಬಲಿಕೊಡುವ ಆಚರಣೆಯೂ ಈ ಹಬ್ಬದಲ್ಲಿ ನಡೆಯುತ್ತದೆ.

ಕರ್ನಾಟಕದ ಹಲವೆಡೆ ಗ್ರಾಮೀಣ ಭಾಗಗಳಲ್ಲಿ `ಅಂಟಿಗೆ ಪಿಂಟಿಗೆ’ ಹಬ್ಬ, ದೀಪಾವಳಿಗೆ ಪರ್ಯಾಯವಾದ ಜನಪದರ ಹಬ್ಬವೆಂಬಂತೆ ಕಾಣುತ್ತದೆ. ಇದು ದನಕಾಯುವ ಹುಡುಗರು ಮತ್ತು ದನ ಸಾಕುವವರ ನಡುವೆ ಬಾಂದವ್ಯ ಬೆಸೆವ ಸಂಕೇತಿಕತೆ ಕಾಣುತ್ತದೆ. ದನಕಾಯುವ ಹುಡುಗರು ಹುಲ್ಲು ಆಪು ರವದಿ ಸೇರಿಸಿ ಒಂದು ವಿಶಿಷ್ಠವಾದ ಆಣೀಪೀಣೀ ದೀಪ ತಯಾರಿಸಿ ಮನೆಮನೆಗಳಿಗೆ ಮರಳಿ ಅವರ ಮನೆಗಳ ದನಗಳಿಗೆ ಆರತಿ ಮಾಡುತ್ತಾ ಹಾಡು ಹೇಳುವುದಿದೆ. ಬಿಜಾಪುರ ಬೀದರ್ ಗುಲ್ಬರ್ಗಾ ದಾರವಾಡ ಬೆಳಗಾಂ ಮೊದಲಾದೆಡೆ ಈ ಆಚರಣೆ ಕಾಣುತ್ತದೆ.

 ಸಾಗರ, ಸೊರಬ, ಸಿದ್ದಾಪುರ, ಸಿರಸಿ ಭಾಗದಲ್ಲಿ ಹಲಸರ ಸಮುದಾಯವು ದೀಪಾವಳಿಯನ್ನು ಹಬ್ಬಹಾಡುವುದೆನ್ನುತ್ತಾರೆ. ಪಾಡ್ಯದಿಂದ ಮೂರು ದಿನಗಳವರೆಗೆ ರಾತ್ರಿ ಮನೆಮನೆಗೆ ದೀಪವನ್ನು ಮುಟ್ಟಿಸಿ ದವಸ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಈ ಗುಂಪನ್ನು ದೀವಳಿಗೆ ದಂಡು ಎನ್ನುತ್ತಾರೆ. ಅಂತೆಯೇ ಈ ಸಂದರ್ಭಕ್ಕೆ ಭಗವಂತಿಕೆ ಮೇಳಗಳು ಹೊಸ ಉತ್ಸಾಹಗಳೊಂದಿಗೆ ಪಾಲ್ಗೊಳ್ಳುತ್ತವೆ. ಹರಿಕಾಂತ ಸಮುದಾಯ ದೀಪಾವಳಿಯನ್ನು ಕೃಷಿಸ್ವಾಮಿ ಹಬ್ಬ ಎಂದು ಕರೆಯುತ್ತಾರೆ. ಇವರನ್ನು ಅಂಟಿಗೆ ಪಿಂಟಿಗೆಯವರು ಎಂದೂ ಕರೆಯುತ್ತಾರೆ. ಹೀಗೆ ಅಂಟಿಗೆ ಪಿಂಟಿಗೆ ಸಂಪ್ರದಾಯದ ಹಾಡು ಹೇಳುವುದು ಸ್ವಲ್ಪ ಫರಕುಗಳೊಂದಿಗೆ ಬೇರೆ ಬೇರೆ ಭಾಗಗಲ್ಲಿ ನೆಲೆಸಿದೆ. ತೀರ್ಥಹಳ್ಳಿ ಚಿಕ್ಕಮಗಳೂರು ಭಾಗದಲ್ಲಿ ಅಂಟಿಗೆ ಪಿಂಟಿಗೆ ಅಂದರೆ, ಶಿರಸಿ, ಸಿದ್ದಾಪುರ ಭಾಗದಲ್ಲಿ ಭಿಂಗಿ ಪದಗಳೆಂದೂ, ಹೊಸನಗರ ಸಾಗರದ ಕಡೆ ದೀಪನೀಡುವುದೆಂದೂ, ಶಿವಮೊಗ್ಗ ಸೊರಬ ಭಾಗದಲ್ಲಿ ಬಲ್ಲಾಳಿ ಪದಗಳೆಂದೂ ಭಿನ್ನವಾಗಿ ಗುರುತಿಸಲಾಗುತ್ತದೆ. ಈ ಸಂಪ್ರದಾಯವನ್ನು ಪ್ರಾದೇಶಿಕವಾಗಿ ಆಡೀಪೀಡೀ, ಆವಂಟಿಗ್ಯೋ ಪಾವಂಟಿಗ್ಯೋ ಅಂಟಿಸುಂಟಿ ಮುಂತಾಗಿ ಕರೆಯುತ್ತಾರೆ. ಬಹುಪಾಲು ಪಶುಪಾಲಕ ಜಾತಿಸಮುದಾಯಗಳು ಈ ಹಬ್ಬದಲ್ಲಿ ಭಾಗಿಯಾಗುತ್ತವೆ.

ಮಲೆನಾಡಿನ ಅಂಟಿಗೆ ಪಿಂಟಿಗೆ ತಂಡ

ಇಷ್ಟೆಲ್ಲಾ ದೀಪಾವಳಿ ವೈವಿದ್ಯವನ್ನೂ ಹೇಳಿದ ಮೇಲೂ, ಮತ್ತೊಂದು ಮಗ್ಗಲಿದೆ. ಕರ್ನಾಟಕದ ಸಾವಿರಾರು ಹಳ್ಳಿಗಳಿಗೆ ದೀಪಾವಳಿ ಹಬ್ಬ ಗೊತ್ತೇ ಇಲ್ಲ. ನನ್ನ ಬಾಲ್ಯದ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಾರಕನಾಳೆಂಬ 300 ಮನೆಗಳ ಗ್ರಾಮದಲ್ಲಿ ಒಂದು ಜಂಗಮರ ಮನೆಯಲ್ಲಿ ಮಾತ್ರ ದೀಪಾವಳಿ ಮಾಡುತ್ತಿದ್ದರು. ಇಡೀ ಊರು ಈ ಮನೆಯನ್ನು ಕೌತುಕದಿಂದ ನೋಡುತ್ತಿತ್ತು. ಅಂತೆಯೇ ಹಾರಕನಾಳು ಸಮೀಪದ ಕೊಟ್ಟೂರಿನಲ್ಲಿ ಕೃಷಿಮಾರುಕಟ್ಟೆಯ ದಲ್ಲಾಳಿ ಅಂಗಡಿಗಳಲ್ಲಿ ಅದ್ದೂರಿಯಾಗಿ ದೀಪಾವಳಿಯನ್ನು ಆಚರಿಸುತ್ತಾರೆ. ಆಗ ನಮ್ಮೂರಿನವರು ಕೃಷಿಸಾಲ ಪಡೆದ ದಲ್ಲಾಳಿ ಅಂಗಡಿಯವರ ದೀಪಾವಳಿ ಪೂಜೆಗೆ ತೆರಳುತ್ತಿದ್ದರು. ಲಕ್ಷ್ಮಿ ಪೂಜೆಯ ದಿನ ಹಳ್ಳಿಗರು ತಮ್ಮ ಟವಲ್ಲುಗಳಲ್ಲಿ ಪೂಜೆಯಲ್ಲಿ ಕೊಟ್ಟ ಹಣ್ಣು, ಸಿಹಿತಿಂಡಿಗಳನ್ನು ಕಟ್ಟಿಕೊಂಡು ಬರುತ್ತಿದ್ದರು. ಇದು ಹಾರಕನಾಳಿನ ಪಾಲಿನ ದೀಪಾವಳಿಯಾಗಿತ್ತು. ಇದನ್ನು ನೋಡಿದರೆ ಎಷ್ಟೋ ಹಳ್ಳಿಗಳಲ್ಲಿ ದೀಪಾವಳಿ ಎಂದರೆ ಹಣವಿದ್ದ ಶ್ರೀಮಂತರು ಮಾಡುವ ಲಕ್ಷ್ಮಿ ಪೂಜೆಯ ಹಬ್ಬವೆಂದೂ, ನಗರದವರು ಮಾಡುವ ಹಬ್ಬವೆಂದೂ ತಿಳಿದಿದ್ದಾರೆ. ಹೀಗೆ ದೀಪಾವಳಿಯನ್ನು ಗ್ರಾಮಜಗತ್ತಿನ ಹಾಜರಿಯ ವೈವಿದ್ಯ ಮತ್ತು ಗೈರುಹಾಜರಿಯ ನೆಲೆಯಲ್ಲಿ ಮರು ಪರಿಶೀಲಿಸುವ ಅಗತ್ಯವಿದೆ. ಒಂದಂತೂ ಸತ್ಯ ಜಗತ್ತು ಏಕರೂಪವಾಗುತ್ತಿರುವ ಹೊತ್ತಿನಲ್ಲಿ ದೀಪಾವಳಿ ತಮ್ಮ ಬಹುಸಂಸ್ಕೃತಿಯ ನೆಲೆಯಲ್ಲಿ ಬಹುತ್ವದ ಸಂಕೇತವಾಗಿ ಮುಖ್ಯವಾಗುತ್ತದೆ.

-ಅರುಣ್ ಜೋಳದಕೂಡ್ಲಿಗಿ

Related Articles

ಇತ್ತೀಚಿನ ಸುದ್ದಿಗಳು