Home ಬೆಂಗಳೂರು ರೈತರೊಂದಿಗೆ ಚರ್ಚಿಸಿದ ನಂತರ ಹಾಲಿನ ದರ ಏರಿಕೆ ಕುರಿತು ನಿರ್ಧಾರ: ಸಚಿವ ಕೆ. ವೆಂಕಟೇಶ್‌

ರೈತರೊಂದಿಗೆ ಚರ್ಚಿಸಿದ ನಂತರ ಹಾಲಿನ ದರ ಏರಿಕೆ ಕುರಿತು ನಿರ್ಧಾರ: ಸಚಿವ ಕೆ. ವೆಂಕಟೇಶ್‌

0

ರೈತರ ಹಾಗೂ ಗ್ರಾಹಕರ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಹಾಲಿನ ಮಾರಾಟ ದರವನ್ನು ಹೆಚ್ಚಿಸುವ ಸಂಬಂಧ ಈಗಾಗಲೇ ಒಂದು ಸುತ್ತಿನ ಸಭೆ ನಡೆದಿದ್ದು, ಶೀಘ್ರವೇ ದರ ಹೆಚ್ಚಳದ ಬಗ್ಗೆ ಸಿಎಂ ಜತೆಗೆ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಇಲಾಖೆ ಸಚಿವ ಕೆ. ವೆಂಕಟೇಶ್‌ ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಅವರು ಡಾ| ಎಂ.ಜಿ. ಮುಳೆ, ಉಮಾಶ್ರೀ, ಹೇಮಲತಾ ನಾಯಕ್‌ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಹಾಲಿನ ದರವನ್ನು ಪ್ರತೀ ಲೀ.ಗೆ 10 ರೂ. ಹೆಚ್ಚಿಸಬೇಕೆಂದು ರೈತರು ಬೇಡಿಕೆ ಇರಿಸಿದ್ದಾರೆ. ಆದರೆ ಸರಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ. ದರ ಏರಿಕೆ ನಿಶ್ಚತ; ಆದರೆ, ಎಷ್ಟು, ಯಾವಾಗ ಎಂಬುದನ್ನು ಸದ್ಯವೇ ಸಿಎಂ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಉತ್ಪಾದನ ವೆಚ್ಚ ಏರಿಕೆ ಆಗುತ್ತಿರುವುದರಿಂದ ರೈತರ ಬೇಡಿಕೆ ಸಹಜವಾಗಿದೆ. ಆದರೆ ದರ ಹೆಚ್ಚಳದ ವೇಳೆ ಸರಕಾರವು ರೈತರ ಬೇಡಿಕೆ ಮತ್ತು ಗ್ರಾಹಕರ ಹಿತ -ಎರಡನ್ನೂ ಗಮನದಲ್ಲಿ ಇರಿಸಿಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ವಿವರಿಸಿದರು.

656 ಕೋಟಿ ರೂ. ಪ್ರೋತ್ಸಾಧನ ಬಾಕಿ

ಹೈನುಗಾರರಿಗೆ ಸರಕಾರವು ಪ್ರತೀ ಲೀಟರ್‌ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದ್ದು, 2023ರ ಎಪ್ರಿಲ್‌ನಿಂದ 2025ರ ಫೆಬ್ರವರಿ ಅಂತ್ಯದವರೆಗೆ ಒಟ್ಟು 2,661.70 ಕೋಟಿ ರೂ. ನೀಡಿದೆ. 9.45 ಲಕ್ಷ ಫ‌ಲಾನುಭವಿಗಳಿಗೆ ಒಟ್ಟು 656 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದು, ಈ ಬಗ್ಗೆ ಆರ್ಥಿಕ ಇಲಾಖೆಯ ಗಮನಕ್ಕೆ ತರಲಾಗಿದೆ. ಹಣ ಮಂಜೂರಾದ ಬಳಿಕ ಫ‌ಲಾನುಭವಿಗಳಿಗೆ ಪ್ರೋತ್ಸಾಹಧನ ಪಾವತಿಸಲಾಗುವುದು ಸಚಿವರು ಭರವಸೆ ನೀಡಿದರು.

ಈ ಪಾವತಿ ವಿಳಂಬದಿಂದ ರೈತರು ಸಂಕಷ್ಟದಲ್ಲಿರುವುದು ಸರಕಾರದ ಗಮನಕ್ಕೆ ಬಂದಿದೆ. ಪ್ರೋತ್ಸಾಹಧನ ನೀಡಲು ಹೆಚ್ಚುವರಿ ಅನುದಾನದ ಅಗತ್ಯ ಇದ್ದು, ಅದಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಜತೆಗೆ ಚರ್ಚೆ ನಡೆಸಲಾಗಿದೆ ಎಂದರು.

You cannot copy content of this page

Exit mobile version