Home ಇನ್ನಷ್ಟು ಕೋರ್ಟು - ಕಾನೂನು ಹೈಕೋರ್ಟಿನಲ್ಲಿ ತುಳುನಾಡಿನ ಕೋಟಿ-ಚೆನ್ನಯ್ಯ ಅವಳಿ ವೀರರ ಚರ್ಚೆ! ಬೆಳ್ತಂಗಡಿ ಪೊಲೀಸರ ಎಫ್ಐಆರ್ ಗೆ ತಡೆ!

ಹೈಕೋರ್ಟಿನಲ್ಲಿ ತುಳುನಾಡಿನ ಕೋಟಿ-ಚೆನ್ನಯ್ಯ ಅವಳಿ ವೀರರ ಚರ್ಚೆ! ಬೆಳ್ತಂಗಡಿ ಪೊಲೀಸರ ಎಫ್ಐಆರ್ ಗೆ ತಡೆ!

0

ಭೂಮಿಯ ಹಕ್ಕಿಗಾಗಿ ಹೋರಾಟ ಮಾಡಿದ್ದ ತುಳುನಾಡಿನ ಕ್ರಾಂತಿಕಾರಿ ಅವಳಿ ವೀರರಾದ ಕೋಟಿ-ಚೆನ್ನಯ್ಯರನ್ನು ಕೊಂದವರ ಬಗ್ಗೆ ಬರೆಯುವುದು ಎಫ್ಐಆರ್ ಮಾಡುವ ಪ್ರಕರಣ ಹೇಗಾಗುತ್ತದೆ? ಹಿರಿಯ ವಕೀಲ ಎಸ್ ಬಾಲನ್ ಅವರು ಹೈಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿ ಇಂತದ್ದೊಂದು ಚರ್ಚೆ ಹುಟ್ಟಿಸಿದೆ.

ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಲೋಕೇಶ್ ಪೂಜಾರಿಯವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕೋಟಿಚೆನ್ನಯ್ಯರ ಪಾಡ್ದನದ ಕತೆಯ ಕುರಿತು ಬರೆದುಕೊಂಡಿದ್ದರು. “ತನ್ನ ಪ್ರಾಣ ಉಳಿಸಿದ ‘ಕೋಟಿ ಚೆನ್ನಯ್ಯರ ತಾಯಿ ದೇಯಿ ಬೈದ್ಯತಿ’ಗೆ ಮೋಸ ಮಾಡಿದವರು ಯಾರು ? ಕೋಟಿಯನ್ನು ಮರೆಯಲ್ಲಿ ನಿಂತು, ಬಾಣ ಬಿಟ್ಟು ಕೊಂದವರು ಯಾರು ? ಕೋಟಿ – ಚೆನ್ನಯ್ಯರನ್ನು ಹತ್ಯೆ ಮಾಡಿದ ಆ ಕ್ರೂರ ರಕ್ತದ ಅನ್ಯಮತೀಯ ಮುಂಡಾಸುದಾರಿಯನ್ನು ಸಮರ್ಥನೆ ಮಾಡಿದವರಿಗೆ ಅವಳಿ ವೀರರ ಶಾಪ ತಟ್ಟುತ್ತದೆ. ಕೋಟಿ-ಚೆನ್ನಯ್ಯರ ಕುಲಬಾಂಧವರೇ,
ನಿಮಗೆ, ನಿಮ್ಮ ಕುಲಕ್ಕೆ ಆದ ಅನ್ಯಾಯಗಳ ನೆನಪಿರಲಿ” ಎಂದು ಲೋಕೇಶ್ ಪೂಜಾರಿಯವರು ಫೋಸ್ಟ್ ಹಾಕಿದ್ದರು. ಈ ಸಂಬಂಧ ಸಂಬಂಧಪಡದ ವ್ಯಕ್ತಿಯೊಬ್ಬರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿತ್ತು.

ಲೋಕೇಶ್ ಪೂಜಾರಿ ವಿರುದ್ದದ ಎಫ್ಐಆರ್ ರದ್ದುಗೊಳಿಸಬೇಕು ಮತ್ತು ತಡೆಯಾಜ್ಞೆ ನೀಡಬೇಕು ಎಂದು ಹಿರಿಯ ವಕೀಲ ಎಸ್ ಬಾಲನ್ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಕೋಟಿ ಚೆನ್ನಯ್ಯ ಇತಿಹಾಸವನ್ನು ಸುಧೀರ್ಘವಾಗಿ ಉಲ್ಲೇಖಿಸಲಾಗಿದೆ.

“ಕೋಟಿ–ಚೆನ್ನಯ್ಯರ ಕಾಲಮಾನವನ್ನು ಸಾಮಾನ್ಯವಾಗಿ ಕ್ರಿ.ಶ. 16ನೇ ಶತಮಾನ ಎಂದು ಪರಿಗಣಿಸಲಾಗುತ್ತದೆ. ಜನಪದ ಪರಂಪರೆ, ಪಾಡ್ದನಗಳು ಮತ್ತು ನಂತರದ ಐತಿಹಾಸಿಕ ಅಧ್ಯಯನಗಳ ಆಧಾರದ ಮೇಲೆ ಅವರು ಸುಮಾರು ಕ್ರಿ.ಶ. 1556 ರಿಂದ 1591ರ ನಡುವೆ ಬದುಕಿದ್ದರೆಂದು ಅನೇಕ ಸಂಶೋಧಕರು ಉಲ್ಲೇಖಿಸುತ್ತಾರೆ. ಅದರ ಬಗ್ಗೆ ಖಾತ್ರಿ ಇಲ್ಲ. ಅವರ ಜೀವನಕಥೆ ತುಳುನಾಡಿನ ಜನಪದ ಮಹಾಕಾವ್ಯವಾದ “ಕೋಟಿ–ಚೆನ್ನಯ್ಯ ಪಾಡ್ದನ”ದಲ್ಲಿ ಸಂರಕ್ಷಿತವಾಗಿದೆ. ಅವರು ಇಂದಿನ ದಕ್ಷಿಣ ಕನ್ನಡ–ಉಡುಪಿ ಪ್ರದೇಶಗಳಲ್ಲಿದ್ದ ತುಳುನಾಡಿನಲ್ಲಿ ಜನಿಸಿ, ಸಾಮಾಜಿಕ ಸಮಾನತೆ ಮತ್ತು ಶೌರ್ಯಕ್ಕಾಗಿ ಹೆಸರಾದ ಅವಳಿ ಕ್ರಾಂತಿಕಾರಿ ವೀರರೆಂದು ಗೌರವಿಸಲ್ಪಡುತ್ತಾರೆ. ಕೋಟಿ-ಚೆನ್ನಯ್ಯರು ಮೇಲ್ವರ್ಗವಾದ ಭೂಮಾಲಕರ ವಿರುದ್ದ ಹೋರಾಡಿದ್ದರು. ಭೂಮಿಯ ಹಕ್ಕು ಕೇಳಿದ್ದಕ್ಕಾಗಿ ಅವರನ್ನು ಕೊಲೆ ಮಾಡಲಾಯಿತು ಎಂದು ಜನಪದ ಕತೆ ಹೇಳುತ್ತದೆ. ‘ಮುಂಡಾಸುಧಾರಿ’ ಎನ್ನುವುದು ಭೂಮಾಲಕ ವರ್ಗದ ಸಂಕೇತ. ಈಗ ಕೋಟಿ- ಚೆನ್ನಯ್ಯರನ್ನು ‘ದೈವ’ ಎಂದು ಜನ ಆರಾಧಿಸುತ್ತಾರೆ” ಎಂದು ಬಾಲನ್ ಅವರು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಸುದೀರ್ಘವಾಗಿ ಕೋಟಿ-ಚೆನ್ನಯ್ಯರ ಕ್ರಾಂತಿಯ ಕತೆಯನ್ನು ಉಲ್ಲೇಖಿಸಿದ್ದಾರೆ.

“ಕೋಟಿ ಚೆನ್ನಯ್ಯರನ್ನು ಕೊಂದವರು ಯಾರು ಎಂದು ಇಡೀ ತುಳುನಾಡಿಗೆ ಗೊತ್ತಿದೆ. ಆದರೂ ಲೋಕೇಶ್ ಪೂಜಾರಿ ಆ ಸಮುದಾಯದ ಹೆಸರು ಹಾಕಿಲ್ಲ.‌ ಹೆಸರು ಹಾಕಿದ್ದರೂ ಅದು ಜನಪದೀಯ ಕತೆಗಳಲ್ಲಿ ಉಲ್ಲೇಖ ಇರುವುದರಿಂದ ಅಪರಾಧವಲ್ಲ. ಅವಳಿ ವೀರರನ್ನು ಕೊಂದವರ ಹೆಸರು ಹಾಕದೇ ಇದ್ದರೂ ಆ ಬರಹ ಸಮುದಾಯಗಳನ್ನು ಎತ್ತಿಕಟ್ಟುವ ಕೃತ್ಯ ಎಂದು ಹೇಗಾಗುತ್ತದೆ ? ದೂರುದಾರರು ಕೂಡಾ ಯಾವ ಯಾವ ಸಮುದಾಯಗಳನ್ನು ಎತ್ತಿಕಟ್ಟಲಾಗಿದೆ ? ಯಾವ ಸಮುದಾಯಕ್ಕೆ ನೋವಾಗಿದೆ ಎಂದು ಹೇಳಿಲ್ಲ. ಎಫ್ಐಆರ್ ದಾಖಲಿಸಲು ಬೇಕಾಗುವ ಮೂಲ ಪರಿಕರಗಳೇ ದೂರಿನಲ್ಲಿ ಇಲ್ಲ” ಎಂದು ಅರ್ಜಿಯಲ್ಲಿ ಬಾಲನ್ ವಿವರಿಸಿದ್ದರು.

ನ್ಯಾಯಾಲಯದಲ್ಲಿ ವಾದ ಮಂಡಿಸಿದ ಎಸ್ ಬಾಲನ್ ಸಹೋದ್ಯೋಗಿ ವಕೀಲರಾದ ರಕ್ಷಿತಾ ಸಿಂಗ್ “ಕೋಟಿ ಚೆನ್ನಯ್ಯರು ಕರಾವಳಿಯ ಕ್ರಾಂತಿಕಾರಿ ವೀರರು. ಅವರ ಹೋರಾಟ ಇಂದಿನ ಪೀಳಿಗೆಗೂ ಆದರ್ಶ. ಲೋಕೇಶ್ ಪೂಜಾರಿಯವರು ಬಿಲ್ಲವ ಸಮುದಾಯಕ್ಕೆ ಸೇರಿದವರು. ಕೋಟಿ ಚೆನ್ನಯ್ಯ ಬಿಲ್ಲವ ಸಮುದಾಯದ ಕುಲದೈವವಾಗಿದ್ದಾರೆ. ಹಾಗಾಗಿ ಕೋಟಿ ಚೆನ್ನಯ್ಯರ ಕುಲಬಾಂಧವರೇ, ನಿಮ್ಮ ಸಮುದಾಯಕ್ಕೆ ಆದ ಅನ್ಯಾಯಗಳ ನೆನಪಿರಲಿ ಎಂದು ಬರೆದಿದ್ದಾರೆ. ಅವರ ಸಮುದಾಯವನ್ನು ಕೋಟಿ ಚೆನ್ನಯ್ಯರ ಹೆಸರಿನಲ್ಲಿ ಎಚ್ಚರಿಸಿದ್ದಾರೆಯೇ ವಿನಹಃ ದ್ವೇಷದ ಬರಹವಲ್ಲ” ಎಂದರು.

ಎಸ್ ಬಾಲನ್ ಅವರ ಅರ್ಜಿಯ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಪೀಠವು ಬೆಳ್ತಂಗಡಿ ಪೊಲೀಸರು ದಾಖಲಿಸಿದ್ದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ. ಈ ಪ್ರಕರಣದ ಹಿನ್ನಲೆಯಲ್ಲಿ ಕರಾವಳಿಯ ಅವಳಿ ವೀರರಾದ ಕೋಟಿ ಚೆನ್ನಯ್ಯರ ಹೋರಾಟ, ಭೂಮಿಯ ಹಕ್ಕಿಗಾಗಿ ನಡೆಸಿದ ಸ್ವಾಭಿಮಾನದ ಹೋರಾಟ ಹೈಕೋರ್ಟ್ ನಲ್ಲಿ ಚರ್ಚೆಗೆ ಬಂದಂತಾಯಿತು.

You cannot copy content of this page

Exit mobile version