ಟ್ವಿಟ್ಟರ್ ಸಂಸ್ಥೆಯ ಉದ್ಯೋಗದಿಂದ ವಜಾಗೊಳಿಸುವ ಪ್ರಕ್ರಿಯೆಯ ನಂತರ ಫೇಸ್ಬುಕ್ ಪೋಷಕ ಸಂಸ್ಥೆ ಮೆಟಾ ಈ ವಾರದಲ್ಲಿ ತನ್ನ ಸಂಸ್ಥೆಯ ಉದ್ಯೋಗಿಗಳಿಗೆ ಶಾಕ್ ನೀಡಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಈ ವಾರದಲ್ಲಿ ಮೇಟಾ ಸಂಸ್ಥೆ ಸಾವಿರಾರು ಉದ್ಯೋಗಿಗಳನ್ನು ತನ್ನ ಸಂಸ್ಥೆಯಿಂದ ಹೊರಹಾಕಲು ಯೋಜನೆ ರೂಪಿಸಿದೆ.
ಮೆಟಾ ಸಂಸ್ಥೆ ಫೇಸ್ಬುಕ್ ನ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ನಡೆಸಿದೆ. ಇದು ಸಾವಿರಾರು ಉದ್ಯೋಗಿಗಳ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು ಎಂದು ಅಂತರಾಷ್ಟ್ರೀಯ ಮಾಧ್ಯಮ ‘ವಾಲ್ ಸ್ಟ್ರೀಟ್ ಜರ್ನಲ್’ ಭಾನುವಾರ ವರದಿ ಮಾಡಿದೆ, ಈ ವಿಷಯದ ಬಗ್ಗೆ ಫೇಸ್ಬುಕ್ ಉನ್ನತ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಮೆಟಾ ಬುಧವಾರದಂದು ಪ್ರಕಟಣೆಯನ್ನು ಹೊರಡಿಸುವ ಸಾಧ್ಯತೆ ಇದೆ.
ನಿಧಾನಗತಿಯ ಜಾಗತಿಕ ಆರ್ಥಿಕ ಬೆಳವಣಿಗೆ, ಟಿಕ್‌ಟಾಕ್‌ನಿಂದ ಎದುರಾದ ಸ್ಪರ್ಧೆ, ಆಪಲ್‌ನಿಂದ ಗೌಪ್ಯತೆ ಬದಲಾವಣೆಗಳು, ಮೆಟಾವರ್ಸ್‌ನಲ್ಲಿ ಉಂಟಾದ ಭಾರಿ ಖರ್ಚು ಮತ್ತು ನಿಯಂತ್ರಣದ ನಿರಂತರ ಬೆಳವಣಿಗೆಗಳ ನಡುವೆ ಮೆಟಾ ಪ್ರಬಲ ಪ್ರತಿಸ್ಪರ್ಧಿಗಳನ್ನು ಹೊಂದಿದೆ. ಇದರ ಜೊತೆಗೆ ಆರ್ಥಿಕ ಹಿಂಜರಿತದ ನಡುವೆ ಮೆಟಾ ಸ್ಪರ್ಧಿಸುತ್ತಿರುವುದರಿಂದ ನಿರಾಶಾದಾಯಕ ಫಲಿತಾಂಶ ಸಿಗಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಅನಿವಾರ್ಯ ಎನ್ನಲಾಗಿದೆ.
“2023 ರಲ್ಲಿ, ನಾವು ಕಡಿಮೆ ಔದ್ಯೋಗಿಕ ಸಂಖ್ಯೆಯ ಮೂಲಕ ಹೆಚ್ಚಿನ ಆದ್ಯತೆಯ ಬೆಳವಣಿಗೆಯ ಕ್ಷೇತ್ರಗಳ ಮೇಲೆ ನಮ್ಮ ಹೂಡಿಕೆಗಳನ್ನು ಕೇಂದ್ರೀಕರಿಸಲಿದ್ದೇವೆ. ಇದರಿಂದ ಸಂಸ್ಥೆಯ ಆರ್ಥಿಕ ಬೆಳವಣಿಗೆ ಅರ್ಥಪೂರ್ಣವಾಗಿ ಬೆಳೆಯುತ್ತವೆ. ಅಂದಾಜಿನ ಪ್ರಕಾರ ಮುಂದಿನ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ತಟಸ್ಥವಾಗಿ ಅಥವಾ ಇನ್ನೂ ಕುಗ್ಗುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಮುಂಬರುವ 2023 ರಿಂದ ಸಂಸ್ಥೆಯನ್ನು ಕಡಿಮೆ ಸಂಖ್ಯೆಯ ಉದ್ಯೋಗಿಗಳಿಂದ ಮುಂದುವರೆಸುವ ಬಗ್ಗೆ ಯೋಚಿಸಲಾಗುತ್ತಿದೆ” ಎಂದು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಮಾಹಿತಿ ತಿಳಿಸಿದ್ದಾರೆ.