ದೇಶದ ಮುಖ್ಯ ಚುನಾವಣ ಆಯುಕ್ತರನ್ನು ರಾತೋರಾತ್ರಿ ನೇಮಕ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಸೋಮವಾರ ರಾತ್ರಿ ಜ್ಞಾನೇಶ್ ಕುಮಾರ್‌ರನ್ನು ನೂತನ ಮುಖ್ಯ ಚುನಾವಣ ಆಯುಕ್ತರನ್ನಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿತ್ತು.
ಈ ಹಿನ್ನೆಲೆಯಲ್ಲಿ ಮಂಗಳವಾರ ಟ್ವೀಟ್ ಮಾಡಿದ ರಾಹುಲ್, ಮುಖ್ಯ ಚುನಾವಣ ಆಯುಕ್ತರ ಆಯ್ಕೆಯ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣ ಇನ್ನೂ ಇತ್ಯರ್ಥಗೊಂಡಿಲ್ಲ. ಅದಕ್ಕೂ ಮುನ್ನವೇ ಅದರಲ್ಲೂ ರಾತೋರಾತ್ರಿ ನೇಮಕದ ಬಗ್ಗೆ ತೀರ್ಮಾನ ಕೈಗೊಂಡದ್ದು ಸರಿಯಲ್ಲ. ಇದು ಪ್ರಧಾನಿ ಮತ್ತು ಗೃಹ ಸಚಿವರಿಗೆ ಶೋಭೆ ತರುವಂಥದ್ದಲ್ಲ ಎಂದಿದ್ದಾರೆ.
ಚುನಾವಣ ಆಯೋಗ ಶಾಸಕಾಂಗದ ಹಸ್ತಕ್ಷೇ ಪದಿಂದ ಮುಕ್ತವಾಗಿರಬೇಕು. ಮುಖ್ಯ ಚುನಾವಣ ಆಯುಕ್ತ, ಚುನಾವಣ ಆಯುಕ್ತರ ಆಯ್ಕೆಯೂ ಅದೇ ರೀತಿ ಇರಬೇಕು ಎಂದು ನಾನು ಪ್ರತಿರೋಧದ ಟಿಪ್ಪಣಿಯಲ್ಲಿ ಪ್ರಸ್ತಾವಿಸಿದ್ದೆ. ಆದರೆ ಕೇಂದ್ರ ಸರಕಾರ ಆಯ್ಕೆ ಸಮಿತಿಯಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯವರನ್ನು ಹೊರಗಿಟ್ಟು ದೇಶದ ಚುನಾವಣ ಪ್ರಕ್ರಿಯೆ ಬಗ್ಗೆ ಜನರಿಗೆ ಸಂಶಯಗಳು ಮೂಡುವಂತೆ ಮಾಡಿದೆ ಎಂದಿದ್ದಾರೆ.
ಇಂದು ಸುಪ್ರೀಂನಲ್ಲಿ ವಿಚಾರಣೆ: ಇದೇ ವೇಳೆ, ಸಿಇಸಿ, ಇಸಿ ನೇಮಕ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಆಯ್ಕೆ ಸಮಿತಿಯಿಂದ ಸಿಜೆಐಯನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಕೆಯಾಗಿದೆ.