Home ರಾಜ್ಯ ಸಾರಿಗೆ ನೌಕರರ ‘ಬೆಂಗಳೂರು ಚಲೋ’: ನಾಳೆ ಸಂಜೆ ಬಳಿಕ ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

ಸಾರಿಗೆ ನೌಕರರ ‘ಬೆಂಗಳೂರು ಚಲೋ’: ನಾಳೆ ಸಂಜೆ ಬಳಿಕ ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

0

ಬೆಂಗಳೂರು, ಫೆ.18: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಾಳೆ ಸಂಜೆ ಬಳಿಕ ರಾಜ್ಯದಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸೇರಿ ನಾಲ್ಕು ಸಾರಿಗೆ ನಿಗಮಗಳ ಸೇವೆಗಳು ಅಸ್ತವ್ಯಸ್ತವಾಗುವ ಸಾಧ್ಯತೆ ವ್ಯಕ್ತವಾಗಿದೆ.

‘ಬೆಂಗಳೂರು ಚಲೋ’ ಘೋಷಣೆಯಡಿ ನಾಳೆ ರಾಜಧಾನಿಗೆ ಆಗಮಿಸುವ ಸಾರಿಗೆ ನೌಕರರು ಫ್ರೀಡಂ ಪಾರ್ಕ್ನಲ್ಲಿ ಮಹಾಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ನೌಕರರು ಸರ್ಕಾರಕ್ಕೆ ನಾಳೆ ಸಂಜೆ 4 ಗಂಟೆಯವರೆಗೆ ಡೆಡ್‌ಲೈನ್ ನೀಡಿದ್ದು, ಆ ವೇಳೆಗೆ ಬೇಡಿಕೆಗಳ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಸಾರಿಗೆ ಬಂದ್ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಈ ನಡುವೆ, ಮುಷ್ಕರಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಕಠಿಣ ನಿಲುವು ತಾಳಿದೆ. ಕೆಲಸಕ್ಕೆ ಹಾಜರಾಗದ ನೌಕರರಿಗೆ ‘ನೋ ವರ್ಕ್ ನೋ ಪೇ’ ನಿಯಮ ಜಾರಿಗೆ ತರಲಾಗುವುದು ಎಂದು ತಿಳಿಸಿದೆ. ಕರ್ತವ್ಯಕ್ಕೆ ಗೈರುಹಾಜರಾಗುವವರ ವಿರುದ್ಧ ಸೇವಾ ನಿಯಮಗಳ ಅನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಎಂಡಿ ಅಕ್ರಮ್ ಪಾಷಾ ಎಚ್ಚರಿಕೆ ನೀಡಿದ್ದಾರೆ.

ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪರ್ಯಾಯ ಪ್ರಯಾಣ ವ್ಯವಸ್ಥೆಗಳ ಬಗ್ಗೆ ಚಿಂತನೆ ಮಾಡುವಂತೆ ಸೂಚಿಸಲಾಗಿದೆ. ಸರ್ಕಾರ ಮತ್ತು ನೌಕರರ ಸಂಘಟನೆಗಳ ನಡುವಿನ ಮಾತುಕತೆ ಫಲಶ್ರುತಿಯಾಗುತ್ತದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

You cannot copy content of this page

Exit mobile version