ಬೆಂಗಳೂರು : ರಾಜ್ಯದ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ(pension) ಪಡೆಯುತ್ತಿದ್ದ ಫಲಾನುಭವಿಗಳಿಗೆ ಭೌತಿಕ ಪರಿಶೀಲನೆಯ ಬಳಿಕ ವಾರ್ಷಿಕ ₹32,000 ದಿಂದ ₹1,20,000 ವರೆಗೆ ಆದಾಯ ಮಿತಿ ಹೊಂದಿರುವ ಎಲ್ಲಾ ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಮುಂದಿನ ಆದೇಶದವರೆಗೆ ಮುಂದುವರಿಸಲು ಕಂದಾಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಸರ್ಕಾರದ ‘ಕುಟುಂಬ ದತ್ತಾಂಶ’ದ (Kutumba Database) ಮಾಹಿತಿಯೊಂದಿಗೆ ಪಿಂಚಣಿದಾರರ ವಿವರಗಳನ್ನು ತಾಳೆ ಮಾಡಿದಾಗ, ಸುಮಾರು 23,14,544 ಫಲಾನುಭವಿಗಳ ಮಾಹಿತಿ ಸಂದೇಹಾಸ್ಪದವಾಗಿ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ‘ಸಂಯೋಜನೆ’ ಮೊಬೈಲ್ ಆ್ಯಪ್ ಮೂಲಕ ಗ್ರಾಮ ಆಡಳಿತಾಧಿಕಾರಿಗಳು ಮನೆ-ಮನೆಗೆ ತೆರಳಿ ಭೌತಿಕ ಪರಿಶೀಲನೆ ನಡೆಸಿದ್ದರು.
ಸೂಕ್ತ ದಾಖಲೆ ನೀಡದ, ನೀಡಿದ ವಿಳಾಸದಲ್ಲಿ ವಾಸವಿಲ್ಲದ ಹಾಗೂ ಆದಾಯ ಪ್ರಮಾಣಪತ್ರ ಒದಗಿಸದ ಕಾರಣಕ್ಕಾಗಿ ಆರಂಭದಲ್ಲಿ 18,06,032 ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಆದರೆ ಪರಿಶೀಲನೆ ಮುಂದುವರಿದಂತೆ, ಸಂದೇಹಾಸ್ಪದ ಪಟ್ಟಿಯಲ್ಲಿದ್ದ ಅನೇಕ ಬಡ ಮತ್ತು ಮಧ್ಯಮ ವರ್ಗದ ಫಲಾನುಭವಿಗಳ ಆದಾಯವು ₹32,000 ದಿಂದ ₹1,20,000 ರೊಳಗಿರುವುದು ಪತ್ತೆಯಾಗಿದೆ.
ಉಪ ಮುಖ್ಯಮಂತ್ರಿ ನಿರ್ದೇಶನದಂತೆ ಆದೇಶ!
ಬಡ ಹಾಗೂ ಮಧ್ಯಮ ವರ್ಗದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ನೀಡಿದ ನಿರ್ದೇಶನದಂತೆ, ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಎನ್. ಸುಶೀಲ ಅವರು ಅಧಿಕೃತ ಆದೇಶ (ಸಂಖ್ಯೆ: ಆರ್‌ಡಿ/235/ಕೆಎಟಿ/ಎಸ್‌ಎಸ್‌ಪಿ/2026) ಹೊರಡಿಸಿದ್ದಾರೆ.
‘ಸಂಯೋಜನೆ’ ಆ್ಯಪ್ ಮೂಲಕ ಪರಿಶೀಲನೆ ಪೂರ್ಣಗೊಂಡ ಬಳಿಕ ಹಾಗೂ ಪರಿಶೀಲನೆಗೆ ಬಾಕಿ ಇರುವವರಲ್ಲಿ ₹1.20 ಲಕ್ಷ ಒಳಗಿನ ವಾರ್ಷಿಕ ಆದಾಯ ಹೊಂದಿರುವ ಎಲ್ಲಾ ಅರ್ಹರಿಗೂ ಪಿಂಚಣಿ ಸೌಲಭ್ಯವನ್ನು ತಡೆಹಿಡಿಯದೆ ವಿತರಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
