Home ಬೆಂಗಳೂರು ರಾಜ್ಯ ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ: ದೆಹಲಿಯಲ್ಲಿ ನೆಲೆಯಾದ ಬಿಜೆಪಿ ಶಾಸಕರು

ರಾಜ್ಯ ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ: ದೆಹಲಿಯಲ್ಲಿ ನೆಲೆಯಾದ ಬಿಜೆಪಿ ಶಾಸಕರು

0

ಬೆಂಗಳೂರು: ‘ಮನೆಯೊಂದು ಮೂರು ಬಾಗಿಲು’ ಎಂಬಂತಾಗಿರುವ ವಿರೋಧ ಪಕ್ಷವಾದ ಬಿಜೆಪಿಯಲ್ಲಿ ಬಣಗಳ ನಡುವಿನ ಬಡಿದಾಟ ತಾರಕಕ್ಕೇರಿದೆ. ಇದರ ಬೆನ್ನಲ್ಲೇ ಭಿನ್ನಮತೀಯರ ಒಂದು ಗುಂಪು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಹೈಕಮಾಂಡ್‌ನ ವರಿಷ್ಠರನ್ನು ಭೇಟಿ ಮಾಡಲು ಮುಂದಾಗಿದೆ.

ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಸೀಮಂತ್ ಪಾಟೀಲ್, ಮಾಜಿ ಸಂಸದ ಬಿ.ವಿ. ನಾಯಕ್ ಮತ್ತು ಎನ್.ಆರ್. ಸಂತೋಷ್ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ಯಾವುದೇ ಸಂದರ್ಭದಲ್ಲಿ ದೆಹಲಿ ವರಿಷ್ಠರು ಕರ್ನಾಟಕ ಬಿಜೆಪಿ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕಾತಿ ಆದೇಶವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಭಿನ್ನಮತೀಯರ ತಂಡ ದೆಹಲಿಯಲ್ಲಿ ಬೀಡುಬಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಮತ್ತೊಂದು ಅವಧಿಗೆ ಮುಂದುವರೆಸಲು ಒಪ್ಪದಿರುವ ಈ ಬಣವು, ಅಧ್ಯಕ್ಷ ಸ್ಥಾನವನ್ನು ತಮ್ಮ ಬಣಕ್ಕೆ ನೀಡಬೇಕೆಂಬ ಬೇಡಿಕೆಯನ್ನು ವರಿಷ್ಠರ ಮುಂದೆ ಸಲ್ಲಿಸಲು ಸಿದ್ಧವಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೇಳಲಾಗಿದೆ. ಆದರೆ, ಸಂಸತ್ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಭೇಟಿಗೆ ಅವಕಾಶ ಸಿಗುತ್ತದೆಯೇ ಎಂಬುದು ಖಚಿತವಾಗಿಲ್ಲ. ಮೂಲಗಳ ಪ್ರಕಾರ, ಭಿನ್ನಮತೀಯ ನಾಯಕರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟನೆಗೊಂಡಿರುವ ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪುನಃ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆಯೂ ವರಿಷ್ಠರಿಗೆ ಮನವಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗುವುದನ್ನು ಶತಾಯಗತಾಯ ತಪ್ಪಿಸಲು ಪ್ರಯತ್ನಿಸುತ್ತಿರುವ ಭಿನ್ನಮತೀಯರು, ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸುವ ತೀರ್ಮಾನದ ಬಗ್ಗೆ ಮರು ಆಲೋಚನೆ ಮಾಡುವಂತೆ ವರಿಷ್ಠರನ್ನು ಕೋರಿದ್ದಾರೆ. ಆದರೆ, ಕರ್ನಾಟಕದ ಬೆಳವಣಿಗೆಗಳ ಬಗ್ಗೆ ತಮ್ಮದೇ ಆದ ಮೂಲಗಳಿಂದ ಮಾಹಿತಿ ಪಡೆದಿರುವ ದೆಹಲಿ ನಾಯಕರು ಈ ಭಿನ್ನಮತೀಯರ ಬೇಡಿಕೆಯನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ.

ಪಕ್ಷದ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಹೈಕಮಾಂಡ್ ನೀಡುವ ಸಾಧ್ಯತೆ ಇದೆ. ವಿಜಯೇಂದ್ರ ಅವರನ್ನು ಪೂರ್ಣಾವಧಿಗೆ ಮುಂದುವರೆಸುವ ಅಥವಾ ಬೇರೊಬ್ಬರಿಗೆ ಅವಕಾಶ ನೀಡುವ ಕುರಿತು ಯಾವುದೇ ನಿರ್ಧಾರ ಇನ್ನೂ ತೆಗೆದುಕೊಂಡಿಲ್ಲ. ಅಂತಿಮವಾಗಿ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ, ಅದಕ್ಕೆ ಎಲ್ಲರೂ ಬದ್ಧರಾಗಲೇಬೇಕೆಂದು ವರಿಷ್ಠರು ಸೂಚಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

You cannot copy content of this page

Exit mobile version