ಬೆಂಗಳೂರು: ಜೆಡಿಎಸ್ ಕಾರ್ಯಕರ್ತನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಎದುರಿಸುತ್ತಿರುವ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯವು ದೊಡ್ಡ ಶಾಕ್ ನೀಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT) ಈ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ‘ಬಿ ರಿಪೋರ್ಟ್’ ಅನ್ನು ನ್ಯಾಯಾಲಯ ತಿರಸ್ಕರಿಸಿದೆ.
ಈ ಬಿ ರಿಪೋರ್ಟ್‌ನಲ್ಲಿ, ತನಿಖಾಧಿಕಾರಿಗಳು ಸೂರಜ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಉಲ್ಲೇಖಿಸಿ, ಆರೋಪದಿಂದ ಮುಕ್ತಿ ನೀಡಲು ಕೋರಿದ್ದರು. ಆದರೆ, ನ್ಯಾಯಾಲಯವು ಅದನ್ನು ಮನ್ನಿಸಲಿಲ್ಲ.
ನ್ಯಾಯಾಲಯವು ಮಂಗಳವಾರ ಈ ಕುರಿತು ವಿಚಾರಣೆ ನಡೆಸಿತು ಮತ್ತು ಬಿ ರಿಪೋರ್ಟ್ ಅನ್ನು ತಿರಸ್ಕರಿಸಿದ್ದಲ್ಲದೆ, ತನಿಖೆಯನ್ನು ಮುಂದುವರಿಸಲು ಮತ್ತು ಡಿಸೆಂಬರ್ 29 ರೊಳಗೆ ಸಂಪೂರ್ಣ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎಸ್‌ಐಟಿ (SIT) ಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇದರಿಂದಾಗಿ ಸದ್ಯ ಷರತ್ತುಬದ್ಧ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ ಹೊರಗಿರುವ ಸೂರಜ್ ರೇವಣ್ಣ ಅವರಿಗೆ ಮತ್ತೊಮ್ಮೆ ಕಾನೂನು ಸಂಕಷ್ಟ ಎದುರಾದಂತಾಗಿದೆ.
ಈ ಪ್ರಕರಣವು 2024ರ ಜೂನ್ 22ರಂದು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಜೆಡಿಎಸ್ ಕಾರ್ಯಕರ್ತನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಸೂರಜ್ ಅವರ ಮೇಲಿದೆ.
ಪ್ರಕರಣದ ದಾಖಲಾತಿಯ ಬೆನ್ನಲ್ಲೇ ಸೂರಜ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ನಂತರ ಈ ಪ್ರಕರಣವನ್ನು ಸಿಐಡಿ ಎಸ್‌ಐಟಿ ತನಿಖೆಗೆ ವಹಿಸಲಾಗಿತ್ತು. ಜಾಮೀನು ಪಡೆದ ನಂತರ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು.
