Home ಬೆಂಗಳೂರು ಮುಖ್ಯಮಂತ್ರಿಗಾಗಿ ಹನುಮ ಜಯಂತಿಯಂದು ನಾಟಿಕೋಳಿ ಮರ್ಡರ್ ಮಾಡಿದ್ದಾರೆ: ಆರ್. ಅಶೋಕ್ ಆಕ್ರೋಶ

ಮುಖ್ಯಮಂತ್ರಿಗಾಗಿ ಹನುಮ ಜಯಂತಿಯಂದು ನಾಟಿಕೋಳಿ ಮರ್ಡರ್ ಮಾಡಿದ್ದಾರೆ: ಆರ್. ಅಶೋಕ್ ಆಕ್ರೋಶ

0

ಬೆಂಗಳೂರು: ಹನುಮ ಜಯಂತಿಯ ಶುಭ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಟಿ ಕೋಳಿ ಬ್ರೇಕ್‌ಫಾಸ್ಟ್ ಮಾಡಿರುವುದು ವಿಪರ್ಯಾಸ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹನುಮ ಭಕ್ತರು ಈ ದಿನ ಮಾಲೆ ಹಾಕಿಕೊಂಡು ಉಪವಾಸ ಮಾಡುತ್ತಾರೆ. ಆದರೆ, ಈ ದಿನ ಸಿದ್ದರಾಮಯ್ಯ ಅವರಿಗಾಗಿ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ನಾಟಿ ಕೋಳಿ ಮರ್ಡರ್ ಆಗಿದೆ ಎಂದು ಅವರು ಟೀಕಿಸಿದರು.

ಸಿಎಂ ಮತ್ತು ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಕುರಿತು ಸುದ್ದಿಗೋಷ್ಠಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಶೋಕ್, ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸಿಲ್ಲ, ರಸ್ತೆಗುಂಡಿಗಳನ್ನು ದುರಸ್ತಿ ಮಾಡಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ತಮ್ಮ ನಡುವಿನ ವೈಯಕ್ತಿಕ ಸಮಸ್ಯೆ ಬಗೆಹರಿಸಲು ಉಪಾಹಾರ ಸಭೆ ನಡೆಸಿದ್ದಾರೆ. ಈ ಹಿಂದೆ ಅವರು ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗಿದ್ದರು ಎಂದು ಅವರು ವ್ಯಂಗ್ಯವಾಡಿದರು.

ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯ ಅವರ ಮನೆಯಲ್ಲಿ ಉಪಾಹಾರ ನಡೆದಿದ್ದರೆ, ಈಗ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ನಡೆದಿದೆ. “ಈ ಪ್ರಹಸನಕ್ಕೆ ಸೋನಿಯಾ ಗಾಂಧಿ ನಿರ್ದೇಶನ, ರಾಹುಲ್ ಗಾಂಧಿ ಚಿತ್ರಕತೆ ಹಾಗೂ ವೇಣುಗೋಪಾಲ್ ಡೈಲಾಗ್ ಬರೆದಿದ್ದಾರೆ,” ಎಂದು ಅಶೋಕ್ ಟೀಕಿಸಿದರು.

“ಅದೃಷ್ಟಕ್ಕೆ ಡಿ.ಕೆ. ಶಿವಕುಮಾರ್ ಅವರು ಇಂದು ನಾಟಿ ಕೋಳಿ ತಿಂದಿಲ್ಲ. ರಾಜ್ಯದಲ್ಲಿ ಹಿಂದೂಗಳೇ ಬಹುಸಂಖ್ಯಾತರು. ಹನುಮ ಜಯಂತಿ ದಿನ ನಾಟಿ ಕೋಳಿ ಪಲಾವ್, ಬಿರಿಯಾನಿ, ಪಲ್ಯ ತಿಂದ ಸಿದ್ದರಾಮಯ್ಯನವರ ಈ ನಡೆಯಿಂದ ಎಲ್ಲ ಹನುಮ ಭಕ್ತರ ಮನಸ್ಸಿಗೆ ನೋವಾಗಿದೆ,” ಎಂದು ಆರ್. ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.

ಜೊತೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೂ ಇದರಿಂದ ವ್ಯಥೆ ತಂದಿದೆ. “ಪರಮೇಶ್ವರ್‌ಗೆ ಇಡ್ಲಿ ಸಹ ಸಿಕ್ಕಿಲ್ಲ, ಸಾಂಬಾರ್ ಸಹ ಸಿಕ್ಕಿಲ್ಲ. ಯಾರಿಗೂ ಬರಬಾರದ ಪಾಡು ಪರಮೇಶ್ವರ್‌ಗೆ ಬಂದಿದೆ. ಬಿಗ್ ಬಾಸ್ ಮನೆ ರೀತಿ ವೈಲ್ಡ್ ಕಾರ್ಡ್ ಎಂಟ್ರಿಗಾಗಿ ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಅವರು ಕಾಯುತ್ತಿದ್ದಾರೆ. ರಾಜ್ಯದಲ್ಲಿ ಈಗ ರಿಯಲ್ ಬಿಗ್ ಬಾಸ್ ಶೋ ನಡೆಯುತ್ತಿದೆ,” ಎಂದು ಅವರು ಟೀಕಿಸಿದರು.

“ನಾನು ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ, ಈಗ ಅವರು ಉಪಾಹಾರ ಸವಿದಿದ್ದಾರೆ. ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ 580 ಕ್ಕೂ ಅಧಿಕ ಜನರು ರಸ್ತೆಗುಂಡಿಯಿಂದ ಸತ್ತಿದ್ದಾರೆ. ತಿಂಡಿ ತಿನ್ನುವ ಸಮಯವನ್ನು ರಸ್ತೆಗುಂಡಿ ಮುಚ್ಚಿಸಲು ವಿನಿಯೋಗಿಸಿದ್ದರೆ ಅಮಾಯಕ ಜೀವಗಳು ಉಳಿಯುತ್ತಿತ್ತು.

ಈ ಯಾವುದೇ ಸಮಸ್ಯೆಗಳ ಕುರಿತು ಉಪಾಹಾರ ಸಭೆ ನಡೆಸಿಲ್ಲ. ಇವರಿಬ್ಬರ ನಡುವಿನ ಸಮಸ್ಯೆ ಬಗೆಹರಿಸಲು ಉಪಾಹಾರ ಸಭೆ ನಡೆಸಬೇಕಿತ್ತೇ? ಅಂಗನವಾಡಿ ಕಾರ್ಯಕರ್ತರು, ರೈತರು, ಉದ್ಯಮಿಗಳು, ದಲಿತರ ವಿಶ್ವಾಸವನ್ನು ಸರ್ಕಾರ ಕಳೆದುಕೊಂಡಿದೆ ಎಂದು ಅಶೋಕ್ ದೂರಿದರು.

You cannot copy content of this page

Exit mobile version