ಕೋಲಾರ : ತನ್ನ ಪತ್ನಿ ನಾಲ್ಕನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡ ಅಪರೂಪದ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಸೆಟ್ಟಿಹಳ್ಳಿಯಲ್ಲಿ ನಡೆದಿದೆ.
9 ವರ್ಷಗಳ ಹಿಂದೆ ಆಂದ್ರಪ್ರದೇಶದ ಪುಂಗನೂರಿನ ವಧುವನ್ನು ಸೆಟ್ಟಿಹಳ್ಳಿಯ ಲೋಕೇಶ್ ವರಿಸಿದ್ದರು. ಕಳೆದ 9 ವರ್ಷಗಳ ಅವಧಿಯಲ್ಲಿ ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದ ಲೋಕೇಶ್ ದಂಪತಿ ಹಿಂದಿನಿಂದಲೂ ಗಂಡು ಮಗುವಿನ ನಿರೀಕ್ಷೆಯಲ್ಲಿ ಇದ್ದರು.
ಆದರೆ ನಾಲ್ಕನೇ ಬಾರಿಯೂ ಲೋಕೇಶ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ 34 ವರ್ಷದ ಪತಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾನುವಾರ ಮುಂಜಾನೆ ಲೋಕೇಶ್‌ನ ತಾಯಿ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿರುವುದನ್ನು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮೂರು ವರ್ಷಗಳ ಹಿಂದೆ ಮೂರನೇ ಮಗಳು ಜನಿಸಿದಾಗ ಲೋಕೇಶ್ ಗಂಡು ಮಗುವಾಗದಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿ ತನ್ನ ಕೆಲ ಸ್ನೇಹಿತರಲ್ಲಿ ಪ್ರಾಣ ಬಿಡುವುದಾಗಿ ಹೇಳಿಕೊಂಡಿದ್ದರು. ಹಾಗಾಗಿ ಗಂಡು ಮಗು ಇಲ್ಲದ ಕಾರಣಕ್ಕೆ ಅವರು ಈ ಕ್ರಮ ಕೈಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಲೋಕೇಶ್ ಅವರ ಪತ್ನಿ ಮತ್ತೆ ಗರ್ಭ ಧರಿಸಿದ ನಂತರ ಅವರು ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಶುಕ್ರವಾರ ಮುಳಬಾಗಲಿನ ಆಸ್ಪತ್ರೆಯಲ್ಲಿ ನಾಲ್ಕನೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಲೋಕೇಶ್ ತೀವ್ರ ಬೇಸರಗೊಂಡಿದ್ದರು ಎಂದು ಲೋಕೇಶ್ ಅವರ ಆಪ್ತರು ಹೇಳಿಕೊಂಡಿದ್ದಾರೆ.