ಬೆಂಗಳೂರು: ಎಐಸಿಸಿ ಆಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರಿಗೆ, ಬಡವರ ಪರವಾದ, ಬುದ್ಧ, ಬಸವ, ಅಂಬೇಡ್ಕರ್ ಅವರ ಸಿದ್ದಾಂತಗಳಿಗೆ ಬದ್ಧರಾಗಿ, ಯಾವ ರಾಜಿಯಿಲ್ಲದೆ ರಾಜಕಾರಣ ಮಾಡಿಕೊಂಡು ಬಂದಿರುವುದು ಅಭ್ಯಾಸವೇ ಹೊರತು, ದ್ವೇಶದ, ಶ್ರೀಮಂತರ ಪರವಾದ ರಾಜಕಾರಣ ಮಾಡುವುದು ಗೊತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಈ ಕುರಿತು ಭಾನುವಾರ ನಡೆದ ಸರ್ವೋದಯ ಸಮಾವೇಶದಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾಗಿ ಮೊದಲ ಬಾರಿ ರಾಜ್ಯಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಬ್ಬದ ವಾತಾವರಣದಲ್ಲಿ ಸ್ವಾಗತಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಈ ಸ್ಥಾನವನ್ನು ಅಲಂಕರಿಸಿರುವುದು ಕರ್ನಾಟಕದ ಏಳು ಕೋಟಿ ಕನ್ನಡಿಗರಲ್ಲಿ ಹೆಮ್ಮೆ ಮೂಡಿಸಿದೆ ಎಂದು ಹೇಳಿದರು.
ರಾಜ್ಯದ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತುಹಾಕಿದಾಗಲೇ ತಮಗೆ ಸಂತೋಷವಾಗುವುದು ಎಂದು ಖರ್ಗೆ ಹೇಳಿದ್ದಾರೆ. ನನ್ನ ಪ್ರಕಾರ ಬಿಜೆಪಿಯ ಭ್ರಷ್ಟ, ದುರಾಡಳಿತದ ಸರ್ಕಾರವನ್ನು ಕಿತ್ತುಹಾಕಬೇಕು ಎಂದು ರಾಜ್ಯದ ಜನ ಸಂಕಲ್ಪ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ, ರಾಜ್ಯದ ಜನ ಬಿಜೆಪಿ ಸರ್ಕಾರವನ್ನು ಕಿತ್ತುಹಾಕಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಭಿನಂದನೆ ಸಲ್ಲಿಸುತ್ತಾರೆ ಎಂಬ ಭರವಸೆ ನನಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಹಿರಿಯ ನಾಯಕರಾದ ಖರ್ಗೆ ಅವರು ರಾಜ್ಯದಲ್ಲಿ ಸುದೀರ್ಘ ಕಾಲ ರಾಜಕಾರಣ ಮಾಡಿದವರು, ಶಾಸಕರಾಗಿ, ಸಚಿವರಾಗಿ, ವಿರೋಧಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಆಡಳಿತದ ಅನುಭವ ಉಳ್ಳವರು. ತಾವು ಕೆಲಸ ಮಾಡಿದ ಇಲಾಖೆಗಳಲ್ಲಿ ಸಾಧನೆಯ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಹೀಗಾಗಿ ಅವರಿಗೆ ದ್ವೇಷದ, ಶ್ರೀಮಂತರ ಪರವಾದ ರಾಜಕಾರಣ ಮಾಡುವುದು ಗೊತ್ತಿಲ್ಲ ಎಂದರು.
ಖರ್ಗೆ ಅವರು ಒಬ್ಬ ಸ್ವಾಭಿಮಾನಿ ರಾಜಕಾರಣಿಯಾಗಿ ಹೆಸರು ಮಾಡಿದವರು. ನಾನು ಕಂಡಂತೆ ಮಲ್ಲಿಕಾರ್ಜುನ ಖರ್ಗೆಯವರು ಸಮಚಿತ್ತವಿರುವ, ಮೌಢ್ಯವಿರೋಧಿ, ಪ್ರಗತಿಪರ ರಾಜಕಾರಣಿ. ಲೋಕಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ, ಆ ಸದನಗಳಲ್ಲಿ ವಿರೋಧಪಕ್ಷದ ನಾಯಕರಾಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿರುವ ಅವರಿಗೆ ಅರ್ಹತೆ ಮತ್ತು ಸಾಧನೆಯ ಬಲದಿಂದಲೇ ಎಐಸಿಸಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ ಎಂದು ತಿಳಿಸಿದರು.
ಖರ್ಗೆ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿಯನ್ನು ತಂದುಕೊಟ್ಟಿದೆ. 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಸ್ಪೂರ್ತಿ ನೀಡಿದೆ. ನಮ್ಮ ಪಕ್ಷದಲ್ಲಿ ಇರಬಹುದಾದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ಬಗ್ಗೆ ಖರ್ಗೆಯವರು ಎಚ್ಚರಿಕೆ ಮಾತುಗಳನ್ನು ಆಡಿದ್ದಾರೆ. ನಮ್ಮ ಪಕ್ಷದ ನಾಯಕರಿಂದ ಕಾರ್ಯಕರ್ತರ ವರೆಗೆ ಎಲ್ಲರೂ ಇದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ವಂಶಪಾರಂಪರ್ಯ ಇದೆ, ನೆಹರೂ ಕುಟುಂಬ ಬಿಟ್ಟು ಬೇರೆಯವರಿಗೆ ಅವಕಾಶ ಇಲ್ಲ ಎಂದು ಬಿಜೆಪಿ ಟೀಕಿಸುತಿತ್ತು. ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾಗಿ ಆ ಟೀಕೆಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ ಎಂಬುದು ಸಾಬೀತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.