Saturday, April 12, 2025

ಸತ್ಯ | ನ್ಯಾಯ |ಧರ್ಮ

ಪೋಕ್ಸೋ ಅಪರಾಧ ಹಾಗೂ ಬಾಲ್ಯ ವಿವಾಹ ಪ್ರಕರಣಗಳ ತಡೆಗೆ ಸಮಗ್ರ ಯೋಜನೆ: ನಾಲ್ಕು ಹಂತದಲ್ಲಿ ಜಾರಿ ತಂಡಗಳ ರಚನೆಗೆ ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ಪ್ರಕರಣಗಳ ತಡೆಗೆ ಸಮಗ್ರ ಯೋಜನೆ ರೂಪಿಸುವುದರೊಂದಿಗೆ ಹಳ್ಳಿ, ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜಾರಿ ತಂಡಗಳನ್ನು ರಚನೆ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಬಾಲ್ಯ ವಿವಾಹ, ಪೋಕ್ಸೋ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಸಲುವಾಗಿ ಪೊಲೀಸ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.

ಪೋಕ್ಸೋ ಹಾಗೂ ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ. ಇವುಗಳನ್ನು ತಡೆಗಟ್ಟಲು ಚುನಾವಣೆಯ ಮತದಾನ ಜಾಗೃತಿ ಮಾದರಿಯಲ್ಲಿ ಪ್ರತಿ ಮನೆ ಮನೆಗಳಿಗೂ ತೆರಳಿ ವ್ಯಾಪಕವಾಗಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಪ್ರತಿ ಹಳ್ಳಿಗಳಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆ, ಗ್ರಾಮ ಸಹಾಯಕ, ಆರ್.ಡಿ.ಪಿ.ಆರ್ ಸಿಬ್ಬಂದಿ, ಬೀಟ್ ಪೊಲೀಸ್, ಸ್ಥಳೀಯ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಹಾಸ್ಟೆಲ್ ವಾರ್ಡ್‍ಗಳ ನೇತೃತ್ವದಲ್ಲಿ ಜಾರಿ ತಂಡಗಳನ್ನು ರಚಿಸಬೇಕು.

ಈ ತಂಡಗಳು ಪ್ರತಿ ಮನೆ ಮನೆಗೆ ತೆರಳಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸುವುದರೊಂದಿಗೆ ಮಾಹಿತಿ ಸಂಗ್ರಹಿಸಬೇಕು. ಈ ತಂಡಗಳ ಮೇಲುಸ್ತುವಾರಿಗೆ ಗ್ರಾಮ ಪಂಚಾಯಿತಿ ಹಂತದಲ್ಲಿ ಪಿಡಿಓ, ರಾಜಸ್ವ ನಿರೀಕ್ಷಕ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ವಾರ್ಡನ್, ಸಬ್ ಇನ್ಸ್‍ಪೆಕ್ಟರ್, ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ, ಹಾಗೂ ಅಂಗನವಾಡಿ ಮೇಲ್ವಿಚಾರಕರ ನೇತೃತ್ವದಲ್ಲಿ ಎರಡನೇ ಹಂತದ ಜಾರಿ ತಂಡ ರಚಿಸಬೇಕು. ಈ ತಂಡ ಹಳ್ಳಿಗಳ ಜಾರಿ ತಂಡದಿಂದ ಪ್ರತಿದಿನ ಮಾಹಿತಿ ಪಡೆದು ವಾರಕೊಮ್ಮೆ ಸಭೆ ನಡೆಸಬೇಕು. ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಪೋಕ್ಸೋ ಹಾಗೂ ಬಾಲ್ಯ ವಿವಾಹ ಪ್ರಕರಣಗಳು ನಡೆಯದಂತೆ ತಡೆಯಬೇಕು.

ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಜಾರಿ ತಂಡ ರಚಿಸಬೇಕು. ಇದರಲ್ಲಿ ತಾ.ಪಂ.ಇಓ, ಸಿಡಿಪಿಓ, ಬಿಇಓ, ಸಿಪಿಐ, ತಾಲ್ಲೂಕು ಆರೋಗ್ಯಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ಸೇರಿದಂತೆ ಇತರೆ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಇರಬೇಕು. ಪ್ರತಿ ತಾಲ್ಲೂಕಿಗೂ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ತಾಲ್ಲೂಕು ಹಂತದ ತಂಡ ಪ್ರತಿ 15 ದಿನಗಳಿಗೊಮ್ಮೆ ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳ ಕುರಿತು ಸಭೆ ನಡೆಸಬೇಕು ಎಂದರು.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ, ಸಿಇಓ, ಎಸ್.ಪಿ, ಡಿವೈಎಸ್‍ಪಿ, ಸೇರಿದಂತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಪಿಯು, ಸಮಾಜ ಕಲ್ಯಾಣ, ಆರೋಗ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಕೋರ್ ಕಮಿಟಿ ರಚಿಸಬೇಕು. ಈ ಸಮಿತಿ 30 ದಿನಗಳಿಗೊಮ್ಮೆ ಪರಿಶೀಲನೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡು ಸೂಕ್ತ ಸಲಹೆ ಸೂಚನೆಗಳನ್ನು ಸಹ ನೀಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚು ಚರ್ಚೆಯಾಗುತ್ತಿವೆ. ಈ ಪಿಡುಗಳು ಜಿಲ್ಲೆಯಲ್ಲಿ ಹೆಚ್ಚಾಗಲು ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳು ಇವೆ. ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ CAP-SECUR ( Comprehensive Approach to Prevent- Sexual Explotation, Child-marriages & to Uplift the Right of-Children) ಎನ್ನುವ ವಿನೂತನ ಕಾರ್ಯಕ್ರಮ ಜಾರಿಗೊಳಿಸಲಾಗುತ್ತದೆ. ಇತರೆ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ತಂಡಗಳನ್ನು ರಚಿಸಿ, ಸಮಾಜದ ಅತ್ಯಂತ ದುಸ್ತರದಲ್ಲಿರುವ ಸ್ಥಳಗಳಲ್ಲಿ ಮಕ್ಕಳನ್ನು ಲೈಂಗಿಕ ಶೋಷಣೆ ಹಾಗೂ ಬಲವಂತದ ಮದುವೆಯಿಂದ ಪಾರು ಮಾಡಿ, ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಗುರಿ ಹೊಂದಲಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 93, 2023-24ನೇ ಸಾಲಿನಲ್ಲಿ 131, 2024-25ನೇ ಸಾಲಿನಲ್ಲಿ 150 ಹಾಗೂ 2025-26ನೇ ಸಾಲಿನಲ್ಲಿ ಪ್ರಸ್ತುತ 21 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ದಾಖಲಾದ ಈವರೆಗಿನ ಪೋಕ್ಸೋ ಪ್ರಕರಣಗಳಲ್ಲಿ 18 ತುಂಬಿದ ಹಾಗೂ 30 ವರ್ಷದ ಒಳಗಿನ ಆರೋಪಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಲವು ಪ್ರಕರಣಗಳಲ್ಲಿ ಪೊಕ್ಸೋ ಕಾಯ್ದೆಯ ಅರಿವು ಇಲ್ಲದೇ ತಪ್ಪು ಮಾಡಿ, ಶಿಕ್ಷೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಪಿಡುಗುಗಳನ್ನು ತೊಡೆದು ಹಾಕಲು ವಿನೂತನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳ ತಡೆಗೆ ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆಗಳು ಮುನ್ನೆಚ್ಚರಿಕೆ ವಹಿಸಬೇಕು. ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರಿವು ಮೂಡಿಸಲು ವಿಶೇಷ ಗಮನಹರಿಸಬೇಕು.
ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕಲಾವಿದರ ಮೂಲಕ ಗ್ರಾಮಗಳಲ್ಲಿ ಕಿರು ನಾಟಕಗಳನ್ನು ಏರ್ಪಡಿಸಿ, ಮನಮುಟ್ಟುವಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕಿದೆ ಎಂದು ತಿಳಿಸಿದ ಅವರು, ಇನ್ನು ಮುಂದೆ ಪೋಕ್ಸೋ, ಬಾಲ್ಯ ವಿವಾಹ ಪ್ರಕರಣಗಳು ವರದಿಯಾದರೆ ಆಶಾ ಕಾರ್ಯಕರ್ತೆಯರು, ಸಂಬಂಧಪಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ಪೊಲೀಸರು, ಕ್ಷೇತ್ರ ಮಟ್ಟದ ಅಧಿಕಾರಿಗಳು ಪ್ರಕರಣದ ಸಂಪೂರ್ಣ ಹಿನ್ನಲೆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.

ಬಾಲ್ಯ ವಿವಾಹ, ಬಾಲ ಗರ್ಭಿಣಿ, ಪೋಕ್ಸೋ, ದೌರ್ಜನ್ಯ ತಡೆ ಕಾಯ್ದೆಗಳ ಕುರಿತು ಕರಪತ್ರಗಳನ್ನು ಮುದ್ರಿಸಿ, ಪ್ರತಿ ಮನೆಗಳಿಗೆ ಹಂಚುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸಲಹೆ ನೀಡಿದರು.

ಬಾಲ್ಯ ವಿವಾಹ, ಬಾಲಕಾರ್ಮಿಕ ಹಾಗೂ ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಸಭೆಗೆ ಮಾಹಿತಿ ನೀಡಿದರು. ಶಾಲೆಗೆ ಗೈರಾದ ಮಕ್ಕಳ ಮಾಹಿತಿಯನ್ನು ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

“ಜಾಗೃತಿ ಕಾರ್ಯಕ್ರಮಗಳು ಪ್ರತಿಯೊಬ್ಬರಿಗೂ ಹಾಗೂ ಪ್ರತಿ ಮನೆ ಮನೆಗೂ ತಲುಪುವಂತಾಗಬೇಕು. ಪ್ರತಿ ಗ್ರಾಮದಲ್ಲೂ ನಿಗಾ ಸಮಿತಿ ರಚಿಸಬೇಕು. ಪ್ರಕರಣ ಜರುಗಿದ ತಕ್ಷಣ ಗಮನಕ್ಕೆ ಬರುವಂತೆ ನಿರ್ವಹಣೆ ಆಗಬೇಕು. ಈ ಸಮಿತಿಗೆ ನಿಯಮಿತವಾಗಿ ಮಾನಿಟರಿಂಗ್ ಮಾಡುವ ಮೂಲಕ ವರದಿ ಪಡೆದುಕೊಳ್ಳಬೇಕು. ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪೊಲೀಸ್ ಉಪಾಧೀಕ್ಷಕ ಪಿ.ಕೆ. ದಿನಕರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ ಸೇರಿದಂತೆ ಎನ್‍ಜಿಒ ಪ್ರತಿನಿಧಿಗಳು ಇದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page