ರಾಯಚೂರು : ಬಿಜೆಪಿ ನಡೆಸಿದ ಹೋರಾಟಕ್ಕೆ ಸರ್ಕಾರ ಮಣಿದು ಪಾರ್ಕ್ ಮಸೂದೆಯನ್ನು ವಾಪಸ್ ಪಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ಹೇಳಿದ್ದಾರೆ.
ಸಿಂಧನೂರಿನ ಬಳಿ ನಡೆಯತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ವೇಳೆ ಮಾತನಾಡಿದ ಅವರು, ಪಾರ್ಕ್ ಮಸೂದೆಗೆ ಯಾವ ಮೂರ್ಖ ಈ ಸಲಹೆ ಕೊಟ್ಟಿದ್ದಾರೋ ಗೊತ್ತಿಲ್ಲ. ಬಿಜೆಪಿ ಹೋರಾಟಕ್ಕೆ ಸರ್ಕಾರ ಬೆದರಿದೆ. ಇದೀಗ ಮಸೂದೆ ವಾಪಸ್ ಪಡೆಯುವ ನಿರ್ಧಾರ ಕೈಗೊಂಡಿದೆ ಎಂದು ಟೀಕಿಸಿದರು.
ಬಿಜೆಪಿ ಹೋರಾಟಕ್ಕೆ ಮಣಿದು ಪಾರ್ಕ್ ಮಸೂದೆ ವಾಪಸ್ ಪಡೆದಿರುವ ಸರ್ಕಾರ, ರೈತರ ವಿಚಾರದಲ್ಲೂ ಇದೇ ರೀತಿಯ ಸೂಕ್ಷ್ಮತೆ ತೋರಬೇಕು. ರೈತರ ಬದುಕಿನೊಂದಿಗೆ ಚೆಲ್ಲಾಟವಾಡದೆ, ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
ಬೆಳಗ್ಗೆಯೇ ರೈತರ ಬೇಡಿಕೆಗಳ ಬಗ್ಗೆ ನಾವು ಪ್ರಸ್ತಾಪ ಮಾಡಿದ್ದೇವೆ. ಇದೀಗ ವಿಶೇಷ ಅಧಿವೇಶನ ಕರೆಯಲು ಸರ್ಕಾರ ನಿರ್ಧರಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಬರಗಾಲದ ಸಂದರ್ಭದಲ್ಲಿ ರೈತರ ನೆರವಿಗೆ ಸರ್ಕಾರ ತಕ್ಷಣ ಧಾವಿಸಬೇಕು. ರೈತರ ಕೃಷಿ ಸಾಲ ಮನ್ನಾ ಸೇರಿದಂತೆ ಅವರ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣಾ) (ತಿದ್ದುಪಡಿ) ಮಸೂದೆ, 2026 ಅನ್ನು ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ಅಂಗೀಕರಿಸಿದ್ದು, ಇದು ಬೆಂಗಳೂರಿನ ಐತಿಹಾಸಿಕ ಹಸಿರು ತಾಣಗಳಾದ ಲಾಲ್‌ಬಾಗ್ (Lalbagh) ಮತ್ತು ಕಬ್ಬನ್ ಪಾರ್ಕ್ (cubbon park) ಸೇರಿದಂತೆ ಸಾರ್ವಜನಿಕ ಉದ್ಯಾನವನಗಳ ಜಾಗವನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಬಳಸಿಕೊಳ್ಳಲು ಶೇ. 5ರಷ್ಟು ಭೂಮಿಯನ್ನು ವರ್ಗಾಯಿಸಲು (ಡೈವರ್ಷನ್) ಅವಕಾಶ ನೀಡುತ್ತದೆ. ಈ ನಿರ್ಧಾರವು ಪರಿಸರವಾದಿಗಳು ಮತ್ತು ಬೆಂಗಳೂರಿನ ನಾಗರಿಕರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
