Home ರಾಜ್ಯ ಚಾಮರಾಜನಗರ ಹನೂರು: ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಕಡವೆ ಹತ್ಯೆ – ಆರೋಪಿಗಳು ಪರಾರಿ

ಹನೂರು: ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಕಡವೆ ಹತ್ಯೆ – ಆರೋಪಿಗಳು ಪರಾರಿ

0

ಹನೂರು: ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ಬಫರ್ ವಲಯದ ಹನೂರು ಶಾಖೆಯ ಹನೂರು ಗಸ್ತಿನ ಉಡುತೊರೆಹಳ್ಳ ಜಲಾಶಯದ ಡ್ಯಾಂ ಗೇಟ್ ಬಳಿ ದಿನಾಂಕ 01.09.2026 ರಂದು ರಾತ್ರಿ ಮಧ್ಯರಾತ್ರಿ ವೇಳೆಯಲ್ಲಿ ಹನೂರು ಶಾಖೆಯ ಉಪವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಗಸ್ತು ಮಾಡುತ್ತಿರುವಾಗ ಉಡುತೊರೆಹಳ್ಳ ಹಿನ್ನೀರು ಅರಣ್ಯ ಪ್ರದೇಶದಲ್ಲಿ 04 ಜನ ಆರೋಪಿಗಳು ಬಂದೂಕಿನ ಸಮೇತ ಚೀಲಗಳನ್ನು ತಲೆಯ ಮೇಲೆ ಹೊತ್ತುಕೊಂಡು ಬರುತ್ತಿರುವುದನ್ನು ಗಮನಿಸಿದ್ದಾರೆ.

ಅರಣ್ಯ ಸಿಬ್ಬಂದಿಗಳನ್ನು ಕಂಡ ತಕ್ಷಣ ಚೀಲಗಳನ್ನು ಬಿಸಾಡಿ ಕತ್ತಲಿನಲ್ಲಿ ಪರಾರಿಯಾಗಿದ್ದಾರೆ. ಈ ವೇಳೆ ಯಾರೊಬ್ಬರೂ ಸಿಕ್ಕಿಲ್ಲ. ಸ್ಥಳದಲ್ಲಿ ಬಿದ್ದ ಮೂರು ಚೀಲಗಳನ್ನು ಪರಿಶೀಲಿಸಿದಾಗ 03 ಭಾಗಗಳಾಗಿ ಕ್ರೂರವಾಗಿ ಕತ್ತರಿಸಿದ ಕಡವೆ ಮೃತ ದೇಹ ಪತ್ತೆಯಾಗಿದೆ. ಕಡವೆಯನ್ನು ನಾಡಬಂದೂಕಿನಿಂದ ಗುಂಡು ಹಾರಿಸಿ ಕೊಂದು ನಂತರ ಅಮಾನವೀಯವಾಗಿ ಕತ್ತರಿಸಿ 03 ತುಂಡುಗಳಾಗಿ ಮಾಡಿ ಚೀಲಗಳಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.

ಪರಾರಿಯಾದ ಆರೋಪಿಗಳ ವಿರುದ್ಧ ವನ್ಯಜೀವಿ ಅಪರಾಧ ವರದಿ ದಾಖಲಿಸಿದ್ದು, ಆರೋಪಿಗಳ ಪತ್ತೆಗಾಗಿ ಸ್ಥಳದ ತಂಡದಿಂದ ಕೋಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಹಾಗೂ ತನಿಖೆ ಪ್ರಗತಿಯಲ್ಲಿದೆ.

ಈ ಕಾರ್ಯಾಚರಣೆಯನ್ನು ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ವಿರಾಜ್ ಶ್ರೀಕಾಂತ್ ಹೊಸೂರು ರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶ್ರೀ ಮಹೇಶ್ ಹೆಚ್.ಎನ್ ರವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಶ್ರೀ ನಂದೀಶ್ ಎಸ್.ಬಿ ಮತ್ತು ಇತರ ಸಿಬ್ಬಂದಿಗಳು ನಡೆಸಿದ್ದಾರೆ.

ವರದಿ: ನಾಗೇಂದ್ರ ಪ್ರಸಾದ್, ಹನೂರು

You cannot copy content of this page

Exit mobile version