Home ಬ್ರೇಕಿಂಗ್ ಸುದ್ದಿ ಕೆಪಿಎಸ್‌ಸಿ ನೇಮಕಾತಿ ಹಗರಣ ; ಆರೋಪಿ ಬಸವರಾಜ್ ಕನ್ನಾಳೆ ಮನೆಯಲ್ಲಿ ಪ್ರಭಾವಿ ಬಿಜೆಪಿ ಮುಖಂಡರ ಕಾಲ್ ಡೀಟೇಲ್ಸ್...

ಕೆಪಿಎಸ್‌ಸಿ ನೇಮಕಾತಿ ಹಗರಣ ; ಆರೋಪಿ ಬಸವರಾಜ್ ಕನ್ನಾಳೆ ಮನೆಯಲ್ಲಿ ಪ್ರಭಾವಿ ಬಿಜೆಪಿ ಮುಖಂಡರ ಕಾಲ್ ಡೀಟೇಲ್ಸ್ ಸೇರಿದಂತೆ ಅನೇಕ ಸಾಕ್ಷ್ಯ ಪತ್ತೆ

0

ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮುಂದುವರಿದಿರುವ ಬೆನ್ನಲ್ಲೇ ಪ್ರಕರಣಕ್ಕೆ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಬಂಧಿತ ಆರೋಪಿ ಬಸವರಾಜ್ ಕನ್ನಾಳೆ ಅವರ ಬೆಂಗಳೂರಿನ ಸಂಜಯನಗರ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಬರೋಬ್ಬರಿ 15 ಗ್ರೂಪ್‌ ಬಿ ಪರೀಕ್ಷೆಗಳ ಹಾಲ್‌ಟಿಕೆಟ್‌ಗಳು ಪತ್ತೆಯಾಗಿವೆ.

ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮಕ್ಕೆ ಮಾತ್ರ ಸೀಮಿತವಾಗದೆ, ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲೂ ಅಕ್ರಮ ನಡೆದಿರುವ ಸಾಧ್ಯತೆ ಬಗ್ಗೆ ಸಿಐಡಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಶೋಧದ ವೇಳೆ ಪತ್ತೆಯಾದ ದಾಖಲೆಗಳ ಹಿನ್ನೆಲೆಯಲ್ಲಿ ಕೆಎಎಸ್‌ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಅಕ್ರಮ ವಹಿವಾಟು ನಡೆದಿದೆಯೇ ಎಂಬ ಬಗ್ಗೆಯೂ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕೆಎಎಸ್‌ ಪರೀಕ್ಷೆಗೂ ಅಕ್ರಮದ ನಂಟು
ಕೆಎಎಸ್‌ ನೇಮಕಾತಿಯಲ್ಲಿ ಪ್ರಿಲಿಮ್ಸ್, ಮೇನ್ಸ್ ಹಾಗೂ ಸಂದರ್ಶನ ಸೇರಿದಂತೆ ಮೂರು ಹಂತಗಳಿಗೂ ಪ್ಯಾಕೇಜ್‌ ರೂಪದಲ್ಲಿ ದರ ನಿಗದಿಪಡಿಸಿ ಅಕ್ರಮ ನಡೆಸಲಾಗುತ್ತಿತ್ತೇ ಎಂಬ ಅನುಮಾನ ತನಿಖಾಧಿಕಾರಿಗಳಲ್ಲಿ ಮೂಡಿದೆ ಎನ್ನಲಾಗಿದೆ.

ಸದ್ಯ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದ ತನಿಖೆ ಪ್ರಮುಖ ಹಂತದಲ್ಲಿದ್ದು, ಈ ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕ ಇತರ ಪರೀಕ್ಷೆಗಳಲ್ಲಿನ ಅಕ್ರಮಗಳ ಕುರಿತು ಪ್ರತ್ಯೇಕವಾಗಿ ತನಿಖೆ ನಡೆಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದಿಂದ ಅನುಮತಿ ದೊರೆತರೆ ಕೆಎಎಸ್‌ ಸೇರಿದಂತೆ ಇತರ ಹುದ್ದೆಗಳ ನೇಮಕಾತಿ ಅಕ್ರಮದ ಬಗ್ಗೆಯೂ ಸಮಗ್ರ ತನಿಖೆ ಕೈಗೊಳ್ಳಲು ಸಿಐಡಿ ಮುಂದಾಗುವ ಸಾಧ್ಯತೆ ಇದೆ.

ಮೊಬೈಲ್‌ ಪರಿಶೀಲನೆಯಲ್ಲಿ ಬಿಜೆಪಿ ಪಕ್ಷದ ಪ್ರಭಾವಿಗಳ ಸಂಪರ್ಕ
ಇನ್ನು ಬಸವರಾಜ್ ಕನ್ನಾಳೆ ಅವರ ಮೊಬೈಲ್‌ ಫೋನ್‌ ಹಾಗೂ ಕರೆ ವಿವರಗಳ ಪರಿಶೀಲನೆ ವೇಳೆ ಹಲವು ಪ್ರಭಾವಿ ಬಿಜೆಪಿ ನಾಯಕರುಗಳು ಸಂಪರ್ಕ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕನ್ನಾಳೆ ಅವರ ಮೊಬೈಲ್‌ನಲ್ಲಿ ಶಾಸಕರು, ಸಂಸದರು ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ 50ಕ್ಕೂ ಹೆಚ್ಚು ರಾಜಕೀಯ ಮುಖಂಡರ ವೈಯಕ್ತಿಕ ದೂರವಾಣಿ ಸಂಖ್ಯೆಗಳು, ಕರೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಈ ಕುರಿತು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ತಾನು ಉದ್ಯಮಿ ಹಾಗೂ ರಾಜಕೀಯ ಕ್ಷೇತ್ರದಲ್ಲೂ ಸಂಪರ್ಕ ಹೊಂದಿರುವ ವ್ಯಕ್ತಿಯಾಗಿದ್ದು, ಟ್ರಾವೆಲ್ಸ್ ಸೇರಿದಂತೆ ಹಲವು ಉದ್ದಿಮೆಗಳಿವೆ. ಹೀಗಾಗಿ ದೆಹಲಿಯಿಂದ ಭಾಲ್ಕಿವರೆಗೆ ಹಲವು ರಾಜಕೀಯ ನಾಯಕರ ಪರಿಚಯವಿದೆ ಎಂದು ಕನ್ನಾಳೆ ಸಮಜಾಯಿಷಿ ನೀಡಿದ್ದಾನೆ ಎನ್ನಲಾಗಿದೆ.

ತುಮಕೂರು ವಿವಿ ಸಿಂಡಿಕೇಟ್ ಸದಸ್ಯನಾಗಿದ್ದ ಕನ್ನಾಳೆ
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನವನಾದ ಬಸವರಾಜ್ ಕನ್ನಾಳೆ ತುಮಕೂರು ವಿಶ್ವವಿದ್ಯಾಲಯದ ಹಾಲಿ ಸಿಂಡಿಕೇಟ್ ಸದಸ್ಯನಾಗಿದ್ದಾನೆ ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ತುಮಕೂರಿನ ಬಿಜೆಪಿಯ ಪ್ರಭಾವಿ ನಾಯಕರೊಬ್ಬರೊಂದಿಗಿನ ನಿಕಟ ಸಂಪರ್ಕದ ಮೂಲಕ ಸಿಂಡಿಕೇಟ್ ಸದಸ್ಯ ಸ್ಥಾನ ಪಡೆದುಕೊಂಡಿದ್ದನೇ ಎಂಬ ಬಗ್ಗೆಯೂ ಸಿಐಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಹಾಯಕ ಪ್ರಾಧ್ಯಾಪಕರ ನೇಮಕಾತಿಯೂ ತನಿಖೆಯ ವ್ಯಾಪ್ತಿಗೆ
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ರಾಜ್ಯದಲ್ಲಿ ನಡೆದಿದ್ದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲೂ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

ಹೀಗಾಗಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ತನಿಖೆ ಮುಂದುವರಿದಂತೆ ಪ್ರಕರಣದ ವ್ಯಾಪ್ತಿ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಎದುರಾಗಿದೆ. ವಿವಿಧ ಪರೀಕ್ಷೆಗಳ ಹಾಲ್‌ಟಿಕೆಟ್‌ಗಳು, ಮೊಬೈಲ್‌ ಸಂಪರ್ಕಗಳು ಹಾಗೂ ಇತರ ದಾಖಲೆಗಳ ಆಧಾರದ ಮೇಲೆ ತನಿಖಾಧಿಕಾರಿಗಳು ಅಕ್ರಮದ ಜಾಲದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

You cannot copy content of this page

Exit mobile version