Home ಅಂಕಣ SIR: ಅನರ್ಹ ಮತದಾರರು ಹಿಂದಿನ ಚುನಾವಣೆಗಳಲ್ಲಿ ಹೇಗೆ ವೋಟ್ ಹಾಕಿದರು?

SIR: ಅನರ್ಹ ಮತದಾರರು ಹಿಂದಿನ ಚುನಾವಣೆಗಳಲ್ಲಿ ಹೇಗೆ ವೋಟ್ ಹಾಕಿದರು?

0
2023ರಿಂದ 2025ರ ನಡುವೆ ವಿಧಾನಸಭಾ ಚುನಾವಣೆಗಳು ನಡೆದ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ದೆಹಲಿ ಮತ್ತು ಆಂಧ್ರಪ್ರದೇಶಗಳಲ್ಲಿ  ಅತ್ಯಂತ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಿರುವುದು SIRಗೆ ಮುನ್ನ ಇದ್ದ ಮತದಾರರ ಪಟ್ಟಿಗಳ ವಿಶ್ವಾಸಾರ್ಹತೆಯ ಬಗ್ಗೆಯೇ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅನರ್ಹ ಮತದಾರರು ಇದ್ದಿದ್ದರೆ, ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಅವರು ಹೇಗೆ ಮತ ಚಲಾಯಿಸಲು ಅರ್ಹರಾಗಿದ್ದರು? - ಶ್ರಾವಸ್ತಿ ದಾಸ್‌ಗುಪ್ತಾ

ವಿಶೇಷ ತೀವ್ರ ಪರಿಷ್ಕರಣೆ (SIR)ಯ ಮೂರನೇ ಹಂತದ ಕರಡು ಮತದಾರರ ಪಟ್ಟಿಗಳು ಬಿಡುಗಡೆಯಾಗಿದೆ. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 6.15 ಕೋಟಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬುದು ಬಹಿರಂಗವಾಗಿದೆ. ಅಂತಿಮ ಮತದಾರರ ಪಟ್ಟಿಗಳು ಪ್ರಕಟವಾದ ಬಳಿಕ ಈ ಸಂಖ್ಯೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಆದರೆ, ಕರಡು ಪಟ್ಟಿಗಳ ಅಂಕಿಅಂಶಗಳು ತೋರಿಸುವಂತೆ, ಅತಿ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿರುವ ಐದು ರಾಜ್ಯಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಅವುಗಳೆಂದರೆ ಮಹಾರಾಷ್ಟ್ರ (2024), ಕರ್ನಾಟಕ (2023), ತೆಲಂಗಾಣ (2023), ದೆಹಲಿ (2025) ಮತ್ತು ಆಂಧ್ರಪ್ರದೇಶ (2024).

ಹೆಸರುಗಳನ್ನು ತೆಗೆದುಹಾಕಿದ ಶೇಕಡಾವಾರು ಪ್ರಮಾಣದ ದೃಷ್ಟಿಯಿಂದಲೂ, ಅಗ್ರ ಐದು ಸ್ಥಾನಗಳಲ್ಲಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಹುತೇಕ ಕಡೆ ಕಳೆದ ಮೂರು ವರ್ಷಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ. ದೆಹಲಿಯಲ್ಲಿ ಅತಿ ಹೆಚ್ಚು, ಅಂದರೆ 32.78% ಹೆಸರುಗಳನ್ನು ತೆಗೆದುಹಾಕಲಾಗಿದೆ. ನಂತರ ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು (29.65%), ತೆಲಂಗಾಣ (21.69%), ಮಹಾರಾಷ್ಟ್ರ (21.14%) ಮತ್ತು ಕರ್ನಾಟಕ (19.48%) ಸ್ಥಾನ ಪಡೆದಿವೆ. ಇದರ ನಂತರ ಅರುಣಾಚಲ ಪ್ರದೇಶ (19.09%) ಇದೆ.

ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯುನಲ್ಲಿ ಎರಡನೇ ಅತಿ ಹೆಚ್ಚು ಶೇಕಡಾವಾರು ಹೆಸರುಗಳು ಡಿಲಿಟ್‌ ಆಗಿದ್ದರೂ, ಇದು ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಪ್ರತ್ಯೇಕ ವಿಧಾನಸಭೆಯನ್ನು ಹೊಂದಿಲ್ಲ. 2020ರಲ್ಲಿ ಈ ಎರಡು ಪ್ರದೇಶಗಳನ್ನು ವಿಲೀನಗೊಳಿಸಿ ಒಂದೇ ಲೋಕಸಭಾ ಕ್ಷೇತ್ರವನ್ನಾಗಿ ಮಾಡಲಾಗಿತ್ತು. ಹಾಗಿದ್ದೂ, ಇದು 2024ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿತ್ತು.

ಮಹಾರಾಷ್ಟ್ರದಲ್ಲಿ ಸಂಪೂರ್ಣ ಸಂಖ್ಯೆಯ ದೃಷ್ಟಿಯಿಂದ ಅತಿ ಹೆಚ್ಚು ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಈ ಪ್ರಮಾಣವು 2024ರಲ್ಲಿ ಅಲ್ಲಿದ್ದ ಒಟ್ಟು ಮತದಾರರ ಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟಿದೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ, 2023ರಲ್ಲಿ ಮತ ಚಲಾಯಿಸಿದ ಮತದಾರರ ಸಂಖ್ಯೆಯ ಸುಮಾರು ಅರ್ಧದಷ್ಟು ಪ್ರಮಾಣದ ಹೆಸರುಗಳನ್ನು ತೆಗೆದುಹಾಕಲಾಗಿದೆ. ಮೂರನೇ ಸ್ಥಾನದಲ್ಲಿರುವ ತೆಲಂಗಾಣದಲ್ಲಿಯೂ 2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದವರ ಸಂಖ್ಯೆಯ ಮೂರನೇ ಒಂದು ಭಾಗಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದ ಹೆಸರುಗಳನ್ನು ತೆಗೆದುಹಾಕಲಾಗಿದೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿರುವುದು, SIR ಪ್ರಕ್ರಿಯೆಗೂ ಮುನ್ನ ಅಸ್ತಿತ್ವದಲ್ಲಿದ್ದ ಮತದಾರರ ಪಟ್ಟಿಗಳ ಸಿಂಧುತ್ವದ ಬಗ್ಗೆಯೇ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ‘ಅನರ್ಹ’ ಮತದಾರರು ಇದ್ದರೆ, ಇತ್ತೀಚಿನ ಚುನಾವಣೆಗಳಲ್ಲಿ ಸರ್ಕಾರಗಳನ್ನು ಆಯ್ಕೆ ಮಾಡಲು ಅವರಿಗೆ ಹೇಗೆ ಮತ ಚಲಾಯಿಸಲು ಅವಕಾಶ ದೊರೆಯಿತು? ಈಗ ಆ ಚುನಾವಣೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಸರ್ಕಾರಗಳನ್ನೇ ಅವರು ಆಯ್ಕೆ ಮಾಡಿದ್ದಾರಲ್ಲವೇ?

ಮತದಾರರ ಪಟ್ಟಿಗಳು ಒಂದೇ ದಿನದಲ್ಲಿ ದೋಷಪೂರಿತವಾಗುವುದಿಲ್ಲ. SIR ಪ್ರಕ್ರಿಯೆಯು ಉತ್ತರಗಳಿಗಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂಬುದನ್ನು ಇದು ಮತ್ತೊಮ್ಮೆ ತೋರಿಸುತ್ತದೆ. ಹೆಸರುಗಳನ್ನು ತೆಗೆದುಹಾಕುವ ವಿಚಾರದಲ್ಲಿಯೂ, ಹೊಸ ಹೆಸರುಗಳನ್ನು ಸೇರ್ಪಡೆಗೊಳಿಸುವ ವಿಚಾರದಲ್ಲಿಯೂ ಸಂಪೂರ್ಣ ಪಾರದರ್ಶಕತೆಯ ಕೊರತೆಯಿದೆ. ನಕಲಿ ಮತದಾರರು ಒಂದೇ ದಿನದಲ್ಲಿ ಸೃಷ್ಟಿಯಾಗುವುದಿಲ್ಲ. ಆದರೂ, ಬಹಳ ಹಿಂದೆಯೇನೂ ಅಲ್ಲದ ಇತ್ತೀಚಿನ ಚುನಾವಣೆಗಳಲ್ಲಿ ಅವರು ಮತ ಚಲಾಯಿಸಿರುವಂತೆ ಕಾಣುತ್ತಿದೆ,” ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಹೇಳಿದ್ದಾರೆ.

Source: CEO of respective State/UTsCreated with Datawrapper

SIRನ ಮೂರನೇ ಹಂತವನ್ನು ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು, ಹರಿಯಾಣ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ದೆಹಲಿ (NCT), ಒಡಿಶಾ, ಪಂಜಾಬ್, ಸಿಕ್ಕಿಂ, ತ್ರಿಪುರ, ತೆಲಂಗಾಣ ಮತ್ತು ಉತ್ತರಾಖಂಡ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಯಿತು.

ಇವುಗಳಲ್ಲಿ ನಾಗಾಲ್ಯಾಂಡ್ ಮತ್ತು ತ್ರಿಪುರದ ಕರಡು ಮತದಾರರ ಪಟ್ಟಿಗಳು ಇನ್ನೂ ಪ್ರಕಟವಾಗಿಲ್ಲ. ಈಗಾಗಲೇ ಕರಡು ಪಟ್ಟಿಗಳನ್ನು ಪ್ರಕಟಿಸಿರುವ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 6,15,07,245 ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.

SIR ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಎಲ್ಲರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು ಎಂದೇನಿಲ್ಲ. ಆದರೆ, ಈ ಚುನಾವಣೆಗಳಲ್ಲಿ ಮತ ಚಲಾಯಿಸಿದ ಮತದಾರರ ಸಂಖ್ಯೆಯನ್ನು ಪರಿಗಣಿಸಿದರೆ, ಹೆಸರುಗಳನ್ನು ತೆಗೆದುಹಾಕಿರುವ ಪ್ರಮಾಣ ಎಷ್ಟು ದೊಡ್ಡದು ಎಂಬುದು ಸ್ಪಷ್ಟವಾಗುತ್ತದೆ.

ಉದಾಹರಣೆಗೆ, ಮಹಾರಾಷ್ಟ್ರದಲ್ಲಿ 2.06 ಕೋಟಿ ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಸಂಪೂರ್ಣ ಸಂಖ್ಯೆಯ ದೃಷ್ಟಿಯಿಂದ ಇದು ಅತಿ ಹೆಚ್ಚು. ಆ ರಾಜ್ಯದಲ್ಲಿ 2024ರಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ಚುನಾವಣಾ ಆಯೋಗದ ಮತದಾನ ಪ್ರಮಾಣದ ಅಂಕಿಅಂಶಗಳ ಪ್ರಕಾರ 6.41 ಕೋಟಿ ಮತದಾರರು ಮತ ಚಲಾಯಿಸಿದ್ದರು. ಈಗ ತೆಗೆದುಹಾಕಲಾಗಿರುವ ಹೆಸರುಗಳ ಸಂಖ್ಯೆ 2024ರಲ್ಲಿ ಮತ ಚಲಾಯಿಸಿದ ಒಟ್ಟು ಮತದಾರರ ಮೂರನೇ ಒಂದು ಭಾಗಕ್ಕಿಂತ ಸ್ವಲ್ಪ ಕಡಿಮೆ.

ಎರಡನೇ ಅತಿ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿರುವ ಕರ್ನಾಟಕದಲ್ಲಿ 1.07 ಕೋಟಿ ನೋಂದಾಯಿತ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 3.88 ಕೋಟಿ ಮತದಾರರು ಮತ ಚಲಾಯಿಸಿದ್ದರು. ಇದಕ್ಕೆ ಹೋಲಿಸಿದರೆ, ಈಗ ತೆಗೆದುಹಾಕಲಾಗಿರುವ ಹೆಸರುಗಳ ಸಂಖ್ಯೆ 2023ರಲ್ಲಿ ಮತ ಚಲಾಯಿಸಿದ ಮತದಾರರ ಸುಮಾರು ಅರ್ಧದಷ್ಟಿದೆ.

2023ರಲ್ಲಿ ವಿಧಾನಸಭಾ ಚುನಾವಣೆ ನಡೆದ ತೆಲಂಗಾಣದಲ್ಲಿ 73.39 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದು ಒಟ್ಟು 3.38 ಕೋಟಿ ಮತದಾರರ ಪೈಕಿ ಮೂರನೇ ಅತಿ ಹೆಚ್ಚು ಪ್ರಮಾಣದ ತೆಗೆದುಹಾಕುವಿಕೆಯಾಗಿದೆ. 2023ರಲ್ಲಿ ಮತ ಚಲಾಯಿಸಿದ 2.32 ಕೋಟಿ ಮತದಾರರಿಗೆ ಹೋಲಿಸಿದರೆ, ಈಗ ತೆಗೆದುಹಾಕಲಾಗಿರುವ ಹೆಸರುಗಳ ಸಂಖ್ಯೆ ಮೂರನೇ ಒಂದು ಭಾಗಕ್ಕಿಂತ ಸ್ವಲ್ಪ ಕಡಿಮೆ.

2025ರಲ್ಲಿ ವಿಧಾನಸಭಾ ಚುನಾವಣೆ ನಡೆದ ದೆಹಲಿಯಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇಲ್ಲಿ ಒಟ್ಟು 47.56 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಇದರಿಂದ ಸಂಪೂರ್ಣ ಸಂಖ್ಯೆಯ ದೃಷ್ಟಿಯಿಂದ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ. SIRಗೂ ಮುನ್ನ ದೆಹಲಿಯ ಮತದಾರರ ಪಟ್ಟಿಯಲ್ಲಿ 1.45 ಕೋಟಿ ಮತದಾರರು ಇದ್ದರು.

2024ರಲ್ಲಿ ಲೋಕಸಭಾ ಚುನಾವಣೆಯೊಂದಿಗೇ ವಿಧಾನಸಭಾ ಚುನಾವಣೆಯೂ ನಡೆದ ಆಂಧ್ರಪ್ರದೇಶದಲ್ಲಿ 44.89 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಈ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಸರುಗಳನ್ನು ತೆಗೆದುಹಾಕಿರುವ ಶೇಕಡಾವಾರು ಪ್ರಮಾಣದ ವಿಶ್ಲೇಷಣೆ ನಡೆಸಿದಾಗ, ದೆಹಲಿಯಲ್ಲಿ ಅತಿ ಹೆಚ್ಚು — 32.78% ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬುದು ಕಂಡುಬರುತ್ತದೆ. ವಿಧಾನಸಭಾ ಚುನಾವಣೆ ನಡೆದ ಕೇವಲ ಒಂದೂವರೆ ವರ್ಷಗಳ ನಂತರವೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿದೆ.

ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯುದಲ್ಲಿ ಮತದಾರರ ಪಟ್ಟಿಯು 29.65% ರಷ್ಟು ಕುಗ್ಗಿದೆ. ಈ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುವುದಿಲ್ಲ. ಇವೆರಡೂ ಸೇರಿ ಒಂದೇ ಲೋಕಸಭಾ ಕ್ಷೇತ್ರವನ್ನು ಹೊಂದಿವೆ.

‘ಹೆಚ್ಚು ಹೆಸರುಗಳನ್ನು ತೆಗೆದುಹಾಕಿರುವ’ ರಾಜ್ಯಗಳು ಮತದಾರರ ಪಟ್ಟಿಯ ವಿವಾದದ ಕೇಂದ್ರಬಿಂದು

ಈ ರಾಜ್ಯಗಳ ಪೈಕಿ ದೆಹಲಿ, ಮಹಾರಾಷ್ಟ್ರ ಮತ್ತು ಕರ್ನಾಟಕ ಮತದಾರರ ಪಟ್ಟಿಗಳಲ್ಲಿನ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ತೀವ್ರ ವಿವಾದದ ಕೇಂದ್ರದಲ್ಲಿವೆ.

ಫೆಬ್ರವರಿಯಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು, ಆಮ್ ಆದ್ಮಿ ಪಕ್ಷ (AAP) ಮತ್ತು ಭಾರತೀಯ ಜನತಾ ಪಕ್ಷ (BJP) ಎರಡೂ ಮತದಾರರ ಪಟ್ಟಿಗಳಲ್ಲಿನ ಅಕ್ರಮಗಳ ಆರೋಪ ಮಾಡಿದ್ದವು. ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಮತದಾರರ ಸೇರ್ಪಡೆಗೆ ಸಂಬಂಧಿಸಿದಂತೆ AAP ತನ್ನ ದೂರುಗಳನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಿತ್ತು.

ದೆಹಲಿ ಚುನಾವಣೆಗೆ ಮುನ್ನವೇ, ಕೇಂದ್ರ ಸಚಿವರ ಮನೆಗಳಲ್ಲಿ ಹಲವಾರು ಮತದಾರರು ವಾಸಿಸುತ್ತಿದ್ದಾರೆ ಎಂದು ಮತದಾರರ ಪಟ್ಟಿಯಲ್ಲಿ ದಾಖಲಾಗಿದ್ದರೂ, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು AAP ಆರೋಪಿಸಿತ್ತು. ಮತ್ತೊಂದೆಡೆ, ದೆಹಲಿಯ ಮತದಾರರ ಪಟ್ಟಿಗಳನ್ನು AAP ತಿರುಚುತ್ತಿದೆ ಎಂದು BJP ಕೂಡ ಆರೋಪಿಸಿತ್ತು. ಅಲ್ಲದೆ, 40ರಿಂದ 80 ವರ್ಷದೊಳಗಿನ ಹೊಸ ಮತದಾರರನ್ನು ಸೃಷ್ಟಿಸಲಾಗುತ್ತಿದೆ ಎಂಬ ಆರೋಪವನ್ನೂ BJP ಮಾಡಿತ್ತು.

ಕಳೆದ ಆಗಸ್ಟ್‌ನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಚುನಾವಣಾ ಆಯೋಗ ಮತ್ತು BJP ನಡುವೆ ಒಳಸಂಚು ನಡೆದಿದೆ ಎಂದು ಆರೋಪಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ‘ಕದಿಯಲಾಗಿದೆ’ ಎಂದು ಅವರು ಆರೋಪಿಸಿದ್ದರು.

ಗಾಂಧಿ ಮಾಡಿದ್ದ ಆರೋಪಗಳನ್ನು ಚುನಾವಣಾ ಆಯೋಗ ತಳ್ಳಿಹಾಕಿತು. ಈ ಆರೋಪಗಳು ನಿಜವೆಂದು ಅವರು ನಂಬಿದ್ದರೆ, ಪ್ರಮಾಣಪೂರ್ವಕವಾಗಿ (oath) ತಮ್ಮ ಆರೋಪಗಳನ್ನು ಸಲ್ಲಿಸಬೇಕು ಎಂದು ಆಯೋಗ ಹೇಳಿತು. ಇಲ್ಲವಾದರೆ, “ಅಸಂಬದ್ಧ ತೀರ್ಮಾನಗಳಿಗೆ ಬರುವುದನ್ನು ಮತ್ತು ಭಾರತದ ನಾಗರಿಕರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು” ಎಂದು ಚುನಾವಣಾ ಆಯೋಗ ತಿಳಿಸಿತು.

ಒಂದು ವರ್ಷದ ಬಳಿಕ ಈ ವಿಚಾರ ಮತ್ತೊಮ್ಮೆ ಚುನಾವಣಾ ಆಯೋಗದ ಗಮನಕ್ಕೆ ಬಂದಿದೆ. ರಾಜ್ಯದಲ್ಲಿ SIR ಪ್ರಕ್ರಿಯೆ ಹಕ್ಕುಗಳು ಮತ್ತು ಆಕ್ಷೇಪಣೆಗಳ ಹಂತಕ್ಕೆ ತಲುಪಿರುವ ಸಂದರ್ಭದಲ್ಲಿ, ಕರ್ನಾಟಕದ ಚುನಾವಣಾ ಅಧಿಕಾರಿಗಳು ಕಾಂಗ್ರೆಸ್ ಸಂಸದ ಮನ್ಸೂರ್ ಅಲಿ ಖಾನ್ ಅವರು ನೀಡಿದ ದೂರನ್ನು ಚುನಾವಣಾ ಆಯೋಗಕ್ಕೆ ರವಾನಿಸಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತದಾರರು ಇದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕಳೆದ ವರ್ಷದ ಫೆಬ್ರವರಿಯಲ್ಲಿ, SIR ಆರಂಭವಾಗುವ ಮುನ್ನವೇ, ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (MVA)ಯ ಇತರ ಸಂಸದರೊಂದಿಗೆ ರಾಹುಲ್ ಗಾಂಧಿ ರಾಜ್ಯದ ಮತದಾರರ ಪಟ್ಟಿಗಳಲ್ಲಿನ ಅಕ್ರಮಗಳ ಕುರಿತು ಆರೋಪಿಸಿದ್ದರು. ಮಹಾರಾಷ್ಟ್ರದ ವಯಸ್ಕ ಜನಸಂಖ್ಯೆಗಿಂತ ಮತದಾರರ ಸಂಖ್ಯೆ ಹೇಗೆ ಹೆಚ್ಚಾಗಿದೆ? ಎಂದು ಅವರು ಪ್ರಶ್ನಿಸಿದ್ದರು.

ರಾಹುಲ್ ಗಾಂಧಿ, ಶಿವಸೇನೆ (UBT) ಸಂಸದ ಸಂಜಯ್ ರಾವತ್ ಮತ್ತು NCP (SP) ಸಂಸದೆ ಸುಪ್ರಿಯಾ ಸುಳೆ ಅವರು, ಮಹಾರಾಷ್ಟ್ರದಲ್ಲಿ 2019ರ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯ ನಡುವೆ 32 ಲಕ್ಷ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಹೇಳಿದ್ದರು. ಇದಲ್ಲದೆ, 2024ರ ಲೋಕಸಭಾ ಚುನಾವಣೆ ಮತ್ತು ಅದೇ ವರ್ಷದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಡುವಿನ ಕೇವಲ ಐದು ತಿಂಗಳಲ್ಲಿ 39 ಲಕ್ಷ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದರು.

ಮಹಾರಾಷ್ಟ್ರದ ಕರಡು ಮತದಾರರ ಪಟ್ಟಿ ಬಿಡುಗಡೆಯಾದ ಬಳಿಕವೂ ಗಾಂಧಿ ಅವರು Xನಲ್ಲಿ ಹೇಳಿಕೆ ನೀಡುವ ಮೂಲಕ ಈ ಅಂಕಿಅಂಶಗಳನ್ನು ಮತ್ತೊಮ್ಮೆ ಪ್ರಸ್ತಾಪಿಸಿದರು.

ಅವರು ಪ್ರಶ್ನಿಸಿದ್ದು: “ಲೋಕಸಭೆ 2024: 9.29 ಕೋಟಿ
ವಿಧಾನಸಭೆ 2024: 9.7 ಕೋಟಿ
SIR 2026: 7.78 ಕೋಟಿ
ಯಾವ ಪಟ್ಟಿಯು ಸರಿಯಾಗಿತ್ತು?”

ಸಣ್ಣ ರಾಜ್ಯಗಳಲ್ಲಿ ಕಡಿಮೆ ಪ್ರಮಾಣದ ಹೆಸರುಗಳ ಅಳಿಕೆ

ಕರಡು ಮತದಾರರ ಪಟ್ಟಿಗಳಲ್ಲಿ ಅತಿ ಕಡಿಮೆ ಪ್ರಮಾಣದ ಹೆಸರುಗಳ ಅಳಿಕೆ ದಾಖಲಾಗಿರುವ ರಾಜ್ಯಗಳಲ್ಲಿ ಮಿಜೋರಾಂ (5.27%), ಒಡಿಶಾ (6.03%), ಮಣಿಪುರ (7.50%), ಮೇಘಾಲಯ (7.68%) ಮತ್ತು ಸಿಕ್ಕಿಂ (8%) ಸೇರಿವೆ.

ಒಡಿಶಾ ಮತ್ತು ಸಿಕ್ಕಿಂನಲ್ಲಿ 2024ರಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದ್ದರೆ, ಮಿಜೋರಾಂ ಮತ್ತು ಮೇಘಾಲಯದಲ್ಲಿ 2023ರಲ್ಲಿ ಹಾಗೂ ಮಣಿಪುರದಲ್ಲಿ 2022ರಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದ್ದವು.

SIRನ ಮೂರನೇ ಹಂತದ ಕರಡು ಪಟ್ಟಿಯಲ್ಲಿ ಒಟ್ಟು ಹೆಸರುಗಳ ಅಳಿಕೆಯ ಪ್ರಮಾಣವೂ ಕಡಿಮೆ ಇರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೆಂದರೆ — ಸಿಕ್ಕಿಂ (37,724), ಮಿಜೋರಾಂ (46,162), ಚಂಡೀಗಢ (66,147), ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು (1,26,894) ಮತ್ತು ಮಣಿಪುರ (1,58,677).

ಒಟ್ಟಾರೆಯಾಗಿ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಿರುವ ವಿಚಾರವು, ತೆಗೆದುಹಾಕಲಾಗಿರುವ ವ್ಯಕ್ತಿಗಳಿಗಿಂತ ಅದನ್ನು ನಡೆಸಿರುವ ಪ್ರಕ್ರಿಯೆಯ ಬಗ್ಗೆಯೇ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

“ಅಂತಿಮವಾಗಿ, ASDD (Absent, Shifted, Duplicate, Dead — ಗೈರು, ಸ್ಥಳಾಂತರಗೊಂಡ, ನಕಲಿ ಮತ್ತು ಮೃತಪಟ್ಟವರು) ಎಂಬುದು ಮುಖ್ಯವಾಗಿ ವ್ಯಕ್ತಿಗಳು ಪತ್ತೆಯಾಗದಿರುವ ವರ್ಗವಾಗಿರಬೇಕು. ಆದರೆ, ಈಗ ಕೆಲವರು ತಾವು ವಾಸ್ತವವಾಗಿ ಪತ್ತೆಹಚ್ಚಬಹುದಾದ ವ್ಯಕ್ತಿಗಳಾಗಿದ್ದರೂ ತಮ್ಮ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳುತ್ತಿರುವ ಉದಾಹರಣೆಗಳಿವೆ. ಇದರಿಂದ ಒಬ್ಬ ವ್ಯಕ್ತಿಯ ಸ್ವಭಾವ ಅಥವಾ ಅರ್ಹತೆಯ ಪ್ರಶ್ನೆಗಿಂತ, ಅವರನ್ನು ಮತದಾರರ ಪಟ್ಟಿಯಿಂದ ಹೊರಗಿಡುತ್ತಿರುವ ಪ್ರಕ್ರಿಯೆಯ ಸ್ವರೂಪವೇ ಪ್ರಶ್ನಾರ್ಹವಾಗಿದೆ ಎಂಬುದು ಸ್ಪಷ್ಟವಾಗುತ್ತದೆ,” ಎಂದು ಅಹಮದಾಬಾದ್ ವಿಶ್ವವಿದ್ಯಾಲಯದ ಸಾಮಾಜಿಕ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ನೀಲಾಂಜನ ಸರ್ಕಾರ್ ಹೇಳಿದ್ದಾರೆ.

“ವಲಸೆಯಿಂದಾಗಿ ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಹೆಸರುಗಳ ಅಳಿಕೆ ಸಂಭವಿಸಿರಬಹುದು. ಆದರೆ, ಇದೇ ಜನಸಂಖ್ಯೆಗಳು ಅಕ್ರಮವಾಗಿ ಮತದಾರರ ಪಟ್ಟಿಯಿಂದ ಹೊರಗಿಡಲ್ಪಡುವ ಸಾಧ್ಯತೆಗೂ ಹೆಚ್ಚು ಒಳಗಾಗಿರುತ್ತವೆ. ಅಲ್ಲದೆ, ಹೆಸರುಗಳನ್ನು ತೆಗೆದುಹಾಕಿರುವುದರಿಂದ ಉಂಟಾಗಬಹುದಾದ ರಾಜಕೀಯ ಪರಿಣಾಮಗಳ ಬಗ್ಗೆಯೂ ಪ್ರಶ್ನೆಗಳು ಎದುರಾಗುತ್ತವೆ. ನಿರ್ದಿಷ್ಟ ಪಕ್ಷಕ್ಕೆ ಮತ ಚಲಾಯಿಸುವ ಸಾಧ್ಯತೆ ಹೆಚ್ಚಿರುವ ಕೆಲವು ಜನಸಮುದಾಯಗಳ ಹೆಸರುಗಳನ್ನು ಮತ್ತೊಂದು ಪಕ್ಷದ ಬೆಂಬಲಿಗರಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಹಾಕಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಇಲ್ಲಿ ಇದೆ.”

ಶ್ರಾವಸ್ತಿ ದಾಸ್‌ಗುಪ್ತಾ - ಇವರು ದಿ ವೈರ್‌ನ ಹಿರಿಯ ವರದಿಗಾರರು. ಇವರು ಎಸ್‌ಐಆರ್‌ಗೆ ಸಂಬಂಧಿಸಿದಂತೆ ವಿಸ್ತೃತ ವರದಿಗಳನ್ನು ಮಾಡುತ್ತಿದ್ದಾರೆ. ಈ ವರದಿಯು ಅವರ SIR Draft Rolls Show Highest Voter Deletions in States Where Elections Were Held in Last 3 Years ಯ ಕನ್ನಡಾನುವಾದ

You cannot copy content of this page

Exit mobile version