“..ಉಸ್ತಾದರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ನಾವು ಗೌರವಿಸೋಣ, ಆದರೆ ಅವರ ಹೇಳಿಕೆಯನ್ನು ಕೆಲವು ಮುಸ್ಲಿಂ ಯುವಕರು ಸಮರ್ಥಿಸಿಕೊಳ್ಳುತ್ತಿರುವ ರೀತಿ ಅಸಹನೀಯ..” ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಅವರ ಬರಹದಲ್ಲಿ
ಸ್ವಾತಂತ್ರ್ಯ ಹೋರಾಟದಲ್ಲಿ ಗಲ್ಲು ಶಿಕ್ಷೆಗೊಳಗಾದ ಧೀರೆ ಹಬೀಬಾ ಅವರ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. 1833ರಲ್ಲಿ ಉತ್ತರ ಪ್ರದೇಶದ ಮುಜಫರ್ ನಗರದ ಮುಸ್ಲಿಂ ಗುಜ್ಜರ್ ಕುಟುಂಬದಲ್ಲಿ ಜನಿಸಿದ ಇವರನ್ನು, ಬ್ರಿಟಿಷ್ ಸೈನಿಕರ ವಿರುದ್ಧ ಹೋರಾಡಿದ ಅಪರಾಧಕ್ಕಾಗಿ 1857ರಲ್ಲಿ ಗಲ್ಲಿಗೇರಿಸಲಾಯಿತು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತ್ಯಾಗ ಮಾಡಿದವರು ಇವರೊಬ್ಬರೇ ಅಲ್ಲ; ಅಸ್ಲರಿ ಬೇಗಂ, ಬೇಗಂ ಮೆಹಬೂಬ್ ಫಾತಿಮಾ, ಜಹೀರಾ ಬೇಗಂ, ಸುಲ್ತಾನಾ ಬೇಗಂ, ಮಜೀದಾ ಹನೀನಾ ಬೇಗಂ ಸೇರಿದಂತೆ ಅನೇಕ ಮುಸ್ಲಿಂ ಮಹಿಳೆಯರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಅಂದಿನ ಕಾಲಘಟ್ಟದ ಸಾಮಾಜಿಕ ನಿರ್ಬಂಧಗಳ ನಡುವೆಯೂ ಪುರುಷರಿಗೆ ಸರಿಸಮಾನವಾಗಿ ನಿಂತು ಹೋರಾಡಿದ ಈ ಧೀರೆಯರನ್ನು ನಾವು ಇಂದು ಗೌರವದಿಂದ ಸ್ಮರಿಸುತ್ತೇವೆ.
ದೇಶಕ್ಕಾಗಿ ಮುಸ್ಲಿಮರ ಕೊಡುಗೆ ಏನೆಂದು ಪ್ರಶ್ನಿಸುವ ಕೋಮುವಾದಿಗಳಿಗೆ ಈ ಮಹಿಳೆಯರ ತ್ಯಾಗವೇ ಉತ್ತರ.
ಮುಸ್ಲಿಂ ಮಹಿಳೆಯರು ಮನೆಗೆ ಸೀಮಿತವಾಗಿರಬೇಕು ಎಂದು ಧರ್ಮದ ಹೆಸರಿನಲ್ಲಿ ತಾಕೀತು ಮಾಡುವವರಿಗೆ ಈ ಇತಿಹಾಸ ಅರ್ಥವಾಗುವುದಿಲ್ಲ. ಇಸ್ಲಾಂ ಚರಿತ್ರೆಯಲ್ಲೂ ಇಂತಹ ಧೀರೆಯರ ಹೆಸರುಗಳು ನಮಗೆ ಸಿಗುತ್ತವೆ.
ಕಾಲ ಬದಲಾಗುತ್ತಿದೆ. ಒಂದು ಕಾಲದಲ್ಲಿ ಮನೆಗೆ ಸೀಮಿತರಾಗಿದ್ದ ಮುಸ್ಲಿಂ ಹೆಣ್ಣುಮಕ್ಕಳು ಇಂದು ಎಲ್ಲಾ ರಂಗಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳ ಸಾಧನೆಗಳನ್ನು ಪತ್ರಿಕೆಗಳಲ್ಲಿ ಗಮನಿಸಿದಾಗ ನಮಗೂ ಹೆಮ್ಮೆ ಅನ್ನಿಸುತ್ತಿದೆ.
ಹೀಗಿರುವಾಗ, ಎಪಿ ಉಸ್ತಾದರು ನೀಡಿದ ಹೇಳಿಕೆಗೆ ವಿರೋಧಗಳು ವ್ಯಕ್ತವಾಗುತ್ತಿರುವುದು ಸಹಜ. ಉಸ್ತಾದರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ನಾವು ಗೌರವಿಸೋಣ, ಆದರೆ ಅವರ ಹೇಳಿಕೆಯನ್ನು ಕೆಲವು ಮುಸ್ಲಿಂ ಯುವಕರು ಸಮರ್ಥಿಸಿಕೊಳ್ಳುತ್ತಿರುವ ರೀತಿ ಮಾತ್ರ ಮುಸ್ಲಿಂ ಸಮಾಜಕ್ಕೆ ಹಾಗೂ ಹೆಣ್ಣುಮಕ್ಕಳಿಗೆ ಮಾಡುತ್ತಿರುವ ಅವಮಾನ.
ಸಮರ್ಥನೆ ಮಾಡುವ ಭರದಲ್ಲಿ ಕೆಲವರು ಉಸ್ತಾದರು ಹೇಳದಿರುವ ವಿಚಾರಗಳನ್ನೂ ಉಲ್ಲೇಖಿಸಿ ಮಹಿಳೆಯರನ್ನು ಹಗುರವಾಗಿ ಕಾಣುತ್ತಿದ್ದಾರೆ. ಇದನ್ನು ವಿರೋಧಿಸಿದ ಪ್ರಗತಿಪರರಿಗೆ ‘ಮುಸ್ಲಿಂ ವಿರೋಧಿ’ ಎಂಬ ಪಟ್ಟ ಕಟ್ಟಲಾಗುತ್ತಿದೆ.
ಇಂತಹ ವಿವಾದಗಳು ಎದುರಾದಾಗ ಕನಿಷ್ಠ ಸೂಕ್ಷ್ಮತೆ ಮತ್ತು ಸಂಯಮ ಅಗತ್ಯ. ಈಗಾಗಲೇ ಮುಸ್ಲಿಂ ಸಮಾಜದ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳನ್ನು ಬಿತ್ತಲಾಗಿದೆ. ಇಂತಹ ಅತಿರೇಕದ ನಡವಳಿಕೆಗಳು ಆ ತಪ್ಪು ಕಲ್ಪನೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಕಾಲ ಬದಲಾಗುತ್ತಿದೆ, ನಮ್ಮ ಮನಸ್ಥಿತಿಯೂ ಬದಲಾಗಲಿ.
