ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಡಿಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಡಿಕೆಶಿ ಅವರ ತಂದೆ ಹೆಸರು ಕೆಂಪೇಗೌಡ, ಅವರ ಬಗ್ಗೆ ನಾನು ತಿಳಿದಿದ್ದೇನೆ. ಅಂತವರ ಮಗನಾಗಿ ಕೆಂಪೇಡೌಡರು ನಿರ್ಮಿಸಿದ ಬೆಂಗಳೂರನ್ನು ಛಿದ್ರ ಛಿದ್ರ ಮಾಡುತ್ತಿದ್ದಾರೆ ಎಂದು ಅಶೋಕ್ ಕಿಡಿಕಾರಿದರು.“ಕೆಂಪೇಗೌಡರು ಬೆಂಗಳೂರನ್ನು ಒಗ್ಗಟ್ಟಿನಿಂದ ಕಟ್ಟಿದರು. ಆದರೆ ಇಂದು ಅದಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ” ಎಂದು ಅಶೋಕ್ ಹೇಳಿದರು. “ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚಿಸಿದಾಗ, ಕನ್ನಡಿಗರ ಸಂಖ್ಯೆ ಕಡಿಮೆಯಾದರೆ ಕೇಂದ್ರಾಡಳಿತ ಪ್ರದೇಶವಾಗುವ ಭೀತಿಯಿಂದ ಸುತ್ತಮುತ್ತಲಿನ ಹಳ್ಳಿಗಳನ್ನು ಸೇರಿಸಲಾಯಿತು. ಆದರೆ ಈಗ ಭಾಗ ಮಾಡಲು ಹೊರಟಿದ್ದಾರೆ. ಇದರಿಂದ ಬೆಂಗಳೂರಿನ ಪೂರ್ವ ಭಾಗದಲ್ಲಿ ಕನ್ನಡ ಹೇಗೆ ಉಳಿಯುತ್ತದೆ?” ಎಂದು ಅವರು ಪ್ರಶ್ನಿಸಿದರು.
“ಒಂದೊಂದಾಗಿ ನಾವು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಮೊದಲು ನಮ್ಮ ಭಾಷೆ, ನಂತರ ನಮ್ಮ ಹಕ್ಕುಗಳು. ಮುಂದೆ ಕನ್ನಡಿಗರೇ ಮೇಯರ್ ಆಗಲಾಗದ ಪರಿಸ್ಥಿತಿ ಬರುತ್ತದೆ” ಎಂದು ಅಶೋಕ್ ಆತಂಕ ವ್ಯಕ್ತಪಡಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಜಮೀರ್ ಅಹ್ಮದ್ ಖಾನ್, “ಈ ಹಿಂದೆ ರಾಜಸ್ಥಾನ ಮೂಲದ ಗೌತಮ್ ಎಂಬುವವರನ್ನು ಮೇಯರ್ ಮಾಡಲಾಗಿತ್ತು” ಎಂದು ನೆನಪಿಸಿದರು. ಇದಕ್ಕೆ ಪ್ರತಿಯಾಗಿ “ಗೌತಮ್ ಅವರ ತಂದೆ ಬೆಂಗಳೂರಿನವರೇ ಹೊರತು ಬೇರೆ ಯಾರೂ ಅಲ್ಲ” ಎಂದು ಸ್ಪಷ್ಟಪಡಿಸಿದರು.ಗ್ರೇಟರ್ ಬೆಂಗಳೂರಿನಿಂದ ಯಾವ ಅಭಿವೃದ್ಧಿಯೂ ಆಗುವುದಿಲ್ಲ. ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ನೀವು ಹೇಳುವಂತೆ, ನಾವೂ ಸಹ ಅನ್ಯಾಯವಾಗುತ್ತಿದೆ ಎಂದು ಹೇಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.