ಬೆಂಗಳೂರು, ಮಾರ್ಚ್ 31; “ನಾನು, ನನ್ನ ಸಹೋದರ ನಿಮ್ಮ ಸೇವಕರು. ನಿಮಗೆ ಏನೇ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ನೀಡುವವರು ನಾವು. ದೆಹಲಿಯಲ್ಲಿರುವವರು ನಿಮ್ಮ ಕಷ್ಟಕ್ಕೆ ಬರುವುದಿಲ್ಲ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಮತದಾರರಿಗೆ ತಿಳಿಸಿದರು.
ರಾಜರಾಜೇಶ್ವರಿ ನಗರ ಕ್ಷೇತ್ರದ ವ್ಯಾಪ್ತಿಯ ವಿವಿಧ ಅಪಾರ್ಟ್ಮೆಂಟ್ ಗಳಿಗೆ ಭೇಟಿ ನೀಡಿ ಅಲ್ಲಿನ ಮತದಾರರ ಜತೆ ಹಾಗೂ ಕಾರ್ಯಕರ್ತರ ಜತೆ ಶಿವಕುಮಾರ್ ಅವರು ಚರ್ಚೆ ಮಾಡಿದರು. ಈ ಸಂದರ್ಭದಲ್ಲಿ ಅವರು “ನಾನು ನಿಮ್ಮನ್ನು ಕೇವಲ ಚುನಾವಣೆಗಾಗಿ ನಿಮ್ಮನ್ನು ಭೇಟಿ ಮಾಡುತ್ತಿಲ್ಲ, ನಿಮ್ಮ ಅನುಕೂಲಕ್ಕೆ ಈ ಭೇಟಿ ಮಾಡುತ್ತಿದ್ದೇನೆ” ಎಂದು ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಕುಸುಮಾ ಅವರು ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಹತ್ತು ಸಾವಿರ ಮತ ಕಡಿಮೆ ಆಗಿದೆ. ನೀವೆಲ್ಲರೂ ಸೇರಿ ಇನ್ನಷ್ಟು ಮತ ಹಾಕಿದ್ದರೆ, ಕುಸುಮಾ ಅವರು ಗೆಲ್ಲುತ್ತಿದ್ದರು. ಸೋತರೂ ನಿಮ್ಮ ಸೇವೆ ಮಾಡುತ್ತಿದ್ದಾರೆ.
ರಸ್ತೆ, ನೀರಿನ ಸಮಸ್ಯೆ ಸೇರಿದಂತೆ ನಿಮ್ಮ ಸಮಸ್ಯೆ ನೀಗಿಸುವವರು ನಾವು. ದೆಹಲಿಯವರು ನಿಮ್ಮ ಕಷ್ಟಕ್ಕೆ ಸ್ಪಂದಿಸುವುದಿಲ್ಲ. ಹೀಗಾಗಿ ನಿಮ್ಮ ಮತ ನಿಮ್ಮ ಹಿತಕ್ಕೆ ಮೀಸಲಾಗಬೇಕು. ನಾನು ಬೆಂಗಳೂರು ಜವಾಬ್ದಾರಿ ತೆಗೆದುಕೊಂಡ ನಂತರ ಬೆಂಗಳೂರಿನ ಘನತೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇನೆ. ಇದರಿಂದ ನಿಮ್ಮ ಆಸ್ತಿ ಮೌಲ್ಯ ಹೆಚ್ಚುತ್ತಿದೆ. ಮುಂದೆ ಬೆಂಗಳೂರಿನ ವಿಚಾರವಾಗಿ ಅನೇಕ ಕನಸು ಕಟ್ಟುಕೊಂಡಿದ್ದೇನೆ. ಅದಕ್ಕೆ ನಿಮ್ಮ ಸಹಕಾರ ಬೇಕು ಎಂದು ಉಪ ಮುಖ್ಯಮಂತ್ರಿ ಜನರ ಬಳಿ ಮನವಿ ಮಾಡಿದರು.
ಮುಂದುವರೆದು ಮಾತನಾಡಿದ ಅವರು “ಮೋದಿ ಅವರನ್ನು ನೋಡಿ ಮತ ಹಾಕುತ್ತೇವೆ, ರಾಮ ಮಂದಿರ ಕಟ್ಟಿದ್ದಾರೆ ಎಂದು ಯಾಮಾರಿದರೆ ನಾವು ಜವಾಬ್ದಾರರಲ್ಲ. ನಿಮ್ಮ ಮತದಿಂದ ನಿಮ್ಮ ಬದುಕಿನಲ್ಲಿ ಬದಲಾವಣೆ ಆಗಬೇಕು.
ನಮ್ಮ ಚುನಾವಣೆಯಲ್ಲಿ ನೀವು ಸಹಾಯ ಮಾಡಬೇಕು. ಹೀಗಾಗಿ ನಾನೇ ನಿಮ್ಮ ಬಳಿ ಬಂದು ಮತಯಾಚನೆ ಮಾಡುತ್ತಿದ್ದೇನೆ. ನೀವು ಕುಸುಮಾ ಅವರಿಗೆ ಶಕ್ತಿ ನೀಡಲಿಲ್ಲ. ಸುರೇಶ್ ಅವರಿಗೆ ಶಕ್ತಿ ನೀಡಿ.
ಕೋವಿಡ್ ಸಮಯದಲ್ಲಿ ಪ್ರತಿ ಮನೆಗೂ ಮೆಡಿಕಲ್ ಕಿಟ್ ಹಂಚಿದ್ದೇವೆ. ಹೆಣ ಸಂಸ್ಕಾರಕ್ಕೆ ಯಾರೂ ಇರಲಿಲ್ಲ. ಆ ಸಮಯದಲ್ಲಿ ಡಿ.ಕೆ ಸುರೇಶ್ ಅನಾಥ ಶವಗಳಿಗೆ ಅಂತ್ಯ ಸಂಸ್ಕಾರ ಮಾಡಿದರು.
ನಿಮ್ಮ ಅಪಾರ್ಟ್ಮೆಂಟ್ ನಲ್ಲಿ ಇರುವ ಎಲ್ಲರ ಜೊತೆ ಚರ್ಚೆ ಮಾಡಿ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಅವರಿಗೆ ಮತ ಹಾಕುವಂತೆ ಮಾಡಿ.
ನಾನು ಈ ಜಿಲ್ಲೆಯ ಉಸ್ತುವಾರಿ ಸಚಿವ, ನನ್ನ ಸಹೋದರ ಈ ಕ್ಷೇತ್ರದ ಸಂಸದ, ನಿಮ್ಮ ಮನೆಯವರಂತೆಯೇ ಇದ್ದೇವೆ. ನಾವು ಬೇಕಾ, ದೆಹಲಿಯವರು ಬೇಕಾ? ನೀವೇ ತೀರ್ಮಾನಿಸಿ.
ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ನಮ್ಮ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಹೆಚ್ಚಾಗಿಲ್ಲ. ಆದರೂ ಸುಮಾರು 25 % ಮಂದಿಗೆ ಇದರ ಪ್ರಯೋಜನ ಸಿಗುತ್ತಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 1.80 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಇದ್ದಾರೆ.
ನಾವು ಚುನಾವಣೆ ಸಮಯದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ನಾನು ಬೇರೆ ಪಕ್ಷ ಹಾಗೂ ಅಭ್ಯರ್ಥಿ ಬಗ್ಗೆ ಟೀಕೆ ಮಾಡುವುದಿಲ್ಲ. ನಾವೆಲ್ಲಾ ಒಟ್ಟಾಗಿ ಸೇರಿ ಕೆಲಸ ಮಾಡೋಣ.
ನಿಮ್ಮ ಸಂಸತ್ ಸದಸ್ಯರ ಹೆಗ್ಗಳಿಕೆ ಎಂದರೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಿರುವುದು. ಕಳಂಕರಹಿತರಾಗಿ ಕೆಲಸ ಮಾಡಿರುವುದು ಡಿ.ಕೆ.ಸುರೇಶ್ ಅವರ ಸಾಧನೆ.
ತಮ್ಮದೇ ಆದ ಕಾರ್ಯಶೈಲಿ ರೂಪಿಸಿಕೊಂಡು ಸುರೇಶ್ ಅವರು ಕೆಲಸ ಮಾಡುತ್ತಿದ್ದಾರೆ. ದಿನದ 12 ಗಂಟೆ ಜನರ ಮಧ್ಯೆ ಇದ್ದು ಕೆಲಸ ಮಾಡುತ್ತಿದ್ದಾರೆ.
ಕಾರ್ಯಕರ್ತರು ಸುರೇಶ್ ಅವರ ಬೆನ್ನಿಗೆ ನಿಂತು ಕೆಲಸ ಮಾಡಬೇಕು. ಕೇವಲ ಸಭೆಗೆ ಬಂದು ಚಪ್ಪಾಳೆ ಹೊಡೆದರೆ ಸಾಲದು. ಸರ್ಕಾರದ ಎಲ್ಲಾ ಸಾಧನೆಗಳನ್ನು ಮನೆ, ಮನೆಗೆ ತಲುಪಿಸಬೇಕು.
ಮತದಾರರ ಬಳಿ ಮಾತನಾಡಬೇಕು. ಗ್ಯಾರಂಟಿ ಯೋಜನೆಗಳು ಮನೆಗೆ ತಲುಪಿವೆಯೇ ಎಂದು ಜನರ ಬಳಿ ಕೇಳಬೇಕು.
ಅನೇಕ ಕಡೆ ದಳ ಮತ್ತು ಬಿಜೆಪಿಗೆ ಮತ ಹಾಕುವುದು ಬೇಡ, ಕಾಂಗ್ರೆಸ್ ಗೆ ಮತ ಹಾಕೋಣ ಎಂದು ತೀರ್ಮಾನ ಮಾಡಿದ್ದಾರೆ. ಶೇ. 70 ಕ್ಕೂ ಹೆಚ್ಚು ಜನರು ಕಾಂಗ್ರೆಸ್ ಪರ ತೀರ್ಮಾನ ಮಾಡಿದ್ದಾರೆ. ನೀವೂ ಕೈಜೋಡಿಸಿ.” ಎಂದು ಹೇಳಿದರು.