ಡಿಕೆಶಿ – ಜಾರಕಿಹೊಳಿ ಭೇಟಿ: ಕಾಂಗ್ರೆಸ್ ಒಳಜಗಳಕ್ಕೆ ಮುದ್ದು ಸಿಗುತ್ತಾ?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಒಳಜಗಳ ತೀವ್ರಗೊಂಡಿರುವ ಸಂದರ್ಭದಲ್ಲಿ, ಪಕ್ಷದ ಎರಡು ಪ್ರಮುಖ ಶಕ್ತಿ ಕೇಂದ್ರಗಳೆಂದು ಪರಿಗಣಿಸಲ್ಪಡುವ ಡಿಕೆ ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ಇಂದು ಮಹತ್ವದ ಭೇಟಿಯನ್ನು ನಡೆಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಕುಮಾರಪಾರ್ಕ್‌ನಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ತಮ್ಮ ಅಧಿಕೃತ ‘ಎಕ್ಸ್‌’ ಖಾತೆಯಲ್ಲಿ ತಿಳಿಸಿದ್ದಾರೆ. “ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ ಚರ್ಚೆ ನಡೆಸಿದರು” ಎಂದು ಅವರು ಪೋಸ್ಟ್‌ ಮಾಡಿದ್ದಾರೆ. ಇಬ್ಬರೂ ನಾಯಕರೂ ಈ ಭೇಟಿಯನ್ನು ‘ಸೌಜನ್ಯಯುತ’ ಎಂದು ಹೇಳಿಕೊಂಡಿದ್ದರೂ, ಇದರ ರಾಜಕೀಯ ಅರ್ಥಗಳ ಕುರಿತು ಚರ್ಚೆಗಳು ಜೋರಾಗಿವೆ.

ಇತ್ತೀಚೆಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನದ ವಾತಾವರಣ ನಿರ್ಮಾಣವಾಗಿರುವುದು ಗಮನಾರ್ಹ. ವಿಶೇಷವಾಗಿ ಮುಸ್ಲಿಂ ಸಮುದಾಯದ ನಾಯಕರಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಟಿಕೆಟ್‌ ಹಂಚಿಕೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳ ದಿಕ್ಕು ಬದಲಾವಣೆಯ ಕುರಿತಂತೆ ಸತೀಶ್ ಜಾರಕಿಹೊಳಿ ಅನುಮಾನ ವ್ಯಕ್ತಪಡಿಸಿದ್ದೂ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಇನ್ನೊಂದೆಡೆ, ಅಬ್ದುಲ್ ಜಬ್ಬಾರ್ ಅವರ ರಾಜೀನಾಮೆ, ನಸಿರ್ ಅಹಮದ್ ಅವರನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿರುವುದು, ಹಾಗೂ ಜಮೀರ್ ಅಹಮದ್ ಖಾನ್ ಮತ್ತು ಡಿಕೆ ಶಿವಕುಮಾರ್‌ ನಡುವೆ ನಡೆಯುತ್ತಿರುವ ಅಂತರಂಗದ ಭಿನ್ನಾಭಿಪ್ರಾಯಗಳು ಪಕ್ಷದೊಳಗಿನ ಸಂಘರ್ಷವನ್ನು ಮತ್ತಷ್ಟು ಬಹಿರಂಗಗೊಳಿಸಿವೆ.

ಶಿಸ್ತು ಉಲ್ಲಂಘನೆ ಆರೋಪದ ಹಿನ್ನೆಲೆ ಕೆಲವು ಬೆಂಬಲಿಗರ ವಿರುದ್ಧ ಕ್ರಮ ಕೈಗೊಂಡಿರುವ ಡಿಕೆ ಶಿವಕುಮಾರ್‌ ವಿರುದ್ಧ ಜಮೀರ್ ಅಹ್ಮದ್ ಖಾನ್‌ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದ ಒಳಜಗಳ ತಾರಕಕ್ಕೇರಿದೆ. ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಜಮೀರ್, ಪಕ್ಷ ನೀಡಿದ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು