ನವದೆಹಲಿ : ಬರುವ ನವರಾತ್ರಿ, ದೀಪಾವಳಿ ಹಾಗೂ ಛಾತ್ ಪೂಜೆಯಂತಹ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ (Festival Season) ಬೀದಿಬದಿ ವ್ಯಾಪಾರಿಗಳು(Street Vendors), ಸಣ್ಣ ಪ್ರಮಾಣದ ತಳ್ಳುಗಾಡಿ ವರ್ತಕರು, ಮಡಿಕೆ ಮಾಡುವವರು ಹಾಗೂ ಸ್ಥಳೀಯ ಸಣ್ಣ ವ್ಯಾಪಾರಿಗಳನ್ನು ಅನಗತ್ಯವಾಗಿ ತೆರವುಗೊಳಿಸಬಾರದು ಮತ್ತು ಅವರ ಜೀವನಾಧಾರದ ಹಕ್ಕನ್ನು ಕಸಿಯಬಾರದು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಹಬ್ಬದ ದಿನಗಳಲ್ಲಿ ದೇಶದ ಹಲವು ನಗರಗಳಲ್ಲಿ ಸ್ಥಳೀಯ ಆಡಳಿತ ಮತ್ತು ಪೊಲೀಸರು ಬೀದಿಬದಿ ವ್ಯಾಪಾರಿಗಳನ್ನು ರಸ್ತೆಬದಿಯಿಂದ ಏಕಾಏಕಿ ಖಾಲಿ ಮಾಡಿಸುವುದು, ಅವರ ಸರಕು-ಸಾಮಗ್ರಿಗಳನ್ನು ಜಪ್ತಿ ಮಾಡುವುದು, ದಂಡ ವಿಧಿಸುವುದು ಹಾಗೂ ಕಿರುಕುಳ ನೀಡುತ್ತಿರುವ ಕುರಿತು ಆಯೋಗಕ್ಕೆ ದೂರುಗಳು ಬಂದಿದ್ದವು. ಈ ಹಿಂದೆ ಸಲ್ಲಿಕೆಯಾಗಿದ್ದ ದೂರುಗಳ ಆಧಾರದ ಮೇಲೆ ಎನ್‌ಎಚ್‌ಆರ್‌ಸಿ ಸದಸ್ಯ ಪ್ರಿಯಾಂಕ್ ಕಾನೂನೊ ನೇತೃತ್ವದ ಪೀಠವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮತ್ತೊಮ್ಮೆ ನಿರ್ದೇಶಿಸಿದೆ.
ಸಾರ್ವಜನಿಕ ಸುವ್ಯವಸ್ಥೆ ಅಥವಾ ಸಂಚಾರ ನಿಯಂತ್ರಣದ ಹೆಸರಿನಲ್ಲಿ ಬಡ ವ್ಯಾಪಾರಿಗಳ ಮೂಲಭೂತ ಬದುಕಿನ ಹಕ್ಕನ್ನು ಕಸಿಯಲು ಸಾಧ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಅಗ್ನಿಶಾಮಕ ಭದ್ರತೆ, ತುರ್ತು ಸೇವೆಗಳು ಅಥವಾ ಅತಿಯಾದ ಜನದಟ್ಟಣೆಯ ಕಾರಣದಿಂದಾಗಿ ರಸ್ತೆ ಅಥವಾ ಕಾಲುದಾರಿ ತೆರವುಗೊಳಿಸುವುದು ಅತ್ಯಗತ್ಯವಾದ ಪರಿಸ್ಥಿತಿ ಬಂದಲ್ಲಿ, ವ್ಯಾಪಾರಿಗಳನ್ನು ಸಂಪೂರ್ಣವಾಗಿ ಓಡಿಸುವಂತಿಲ್ಲ. ಬದಲಾಗಿ, ಅವರಿಗೆ ಹತ್ತಿರದಲ್ಲೇ ವ್ಯಾಪಾರ ಮಾಡಲು ಪರ್ಯಾಯ ಹಾಗೂ ಸೂಕ್ತವಾದ ಜಾಗವನ್ನು ಕಲ್ಪಿಸಿಕೊಡುವುದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದೆ ಎಂದು ಆಯೋಗ ಹೇಳಿದೆ.
ಇದರೊಂದಿಗೆ, ವ್ಯಾಪಾರಿಗಳ ಸರಕುಗಳನ್ನು ಕಾನೂನುಬಾಹಿರವಾಗಿ ಮುಟ್ಟುಗೋಲು ಹಾಕಿಕೊಳ್ಳುವುದು, ಅನಧಿಕೃತವಾಗಿ ದಂಡ ವಸೂಲಿ ಮಾಡುವುದು ಅಥವಾ ಕೆಳಹಂತದ ಅಧಿಕಾರಿಗಳು ಹಾಗೂ ಪೊಲೀಸರು ನೀಡುವ ಕಿರುಕುಳ ಮತ್ತು ಸುಲಿಗೆ ಯತ್ನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚಿಸಲಾಗಿದೆ.
ಕೇಂದ್ರ ಸರ್ಕಾರದ ‘ವೋಕಲ್ ಫಾರ್ ಲೋಕಲ್’ ಅಂದರೆ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಆಶಯಕ್ಕೆ ಬೆಂಬಲವಾಗಿ ನಿಲ್ಲಬೇಕಾದ ಆಡಳಿತ ವ್ಯವಸ್ಥೆಯು, ಹಬ್ಬದ ಸಮಯದಲ್ಲಿ ಮಣ್ಣಿನ ಹಣತೆ, ಹೂವು, ಅಲಂಕಾರಿಕ ವಸ್ತುಗಳು ಹಾಗೂ ಸ್ಥಳೀಯ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಬೇಕು ಎಂದು ಆಯೋಗ ತಿಳಿಸಿದೆ.
ಆಯೋಗದ ಈ ನಿರ್ದೇಶನಗಳನ್ನು ತಕ್ಷಣವೇ ಜಾರಿಗೆ ತರಲು ಅನುಕೂಲವಾಗುವಂತೆ ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಮತ್ತು ಪೊಲೀಸ್ ಮುಖ್ಯಸ್ಥರಿಗೆ ಸುತ್ತೋಲೆ ರವಾನಿಸಬೇಕು. ಜೊತೆಗೆ, ಈ ಕುರಿತು ತೆಗದುಕೊಂಡ ಕ್ರಮಗಳ ಕುರಿತು ಆಯೋಗಕ್ಕೆ ಅಕ್ಟೋಬರ್ 18, 2026ರ ಒಳಗೆ ವರದಿ (Action Taken Report) ಸಲ್ಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಆದೇಶಿಸಿದೆ.
