ಅಮೆರಿಕ : ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಅರ್ಜೆಂಟೀನಾ (Argentina) ಹಾಗೂ ಸ್ಪೇನ್ (Spain) ನಡುವಿನ 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ (FIFA 2026) ಕ್ರೀಡಾ ಇತಿಹಾಸದಲ್ಲೇ ಅತ್ಯಂತ ದುಬಾರಿ ಕದನವಾಗಿ ದಾಖಲೆ ಬರೆದಿದೆ. ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗುವ ಸಾಧ್ಯತೆ ಮತ್ತು ಸ್ಪೇನ್‌ನ ಉದಯೋನ್ಮುಖ ತಾರೆ ಲಾಮಿನ್ ಯಮಾಲ್ ಅವರ ನಡುವಿನ ರಣರೋಚಕ ಆಟಕ್ಕೆ ಸಾಕ್ಷಿಯಾಗಲು ಜಗತ್ತಿನಾದ್ಯಂತ ಅಭಿಮಾನಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪಂದ್ಯ ವೀಕ್ಷಿಸಲು ಸಿದ್ಧರಾಗಿದ್ದಾರೆ.
ಈ ಮಹಾಸಮರದ ಟಿಕೆಟ್‌ಗಳ ದರಗಳು ಹುಬ್ಬೇರಿಸುವಂತಿದೆ. ಆರಂಭಿಕ ಹಂತದ ಅಧಿಕೃತ ಟಿಕೆಟ್‌ಗಳು 1.95 ಲಕ್ಷದಿಂದ 6.3 ಲಕ್ಷ ರೂಪಾಯಿ ವರೆಗೆ ಲಭ್ಯವಿದ್ದವು. ಕ್ರೀಡಾಂಗಣದ ಅತ್ಯಂತ ಮೇಲಿನ ಸ್ಟ್ಯಾಂಡ್‌ನ (೩೦೦ ಲೆವೆಲ್) ಒಂದು ಸೀಟಿನ ಬೆಲೆ ಕನಿಷ್ಠ 5.8 ಲಕ್ಷದಿಂದ 6.3 ಲಕ್ಷ ರೂಪಾಯಿ ವರೆಗೆ ಮಾರಾಟವಾಗಿದೆ. ಕ್ರೀಡಾಂಗಣದ ಸ್ಟ್ಯಾಂಡರ್ಡ್ ಟಾಪ್-ಟೈರ್ ಬೆಲೆ 10.58 ಲಕ್ಷ ರೂಪಾಯಿ ಆಗಿದೆ. ಈ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಖರೀದಿಸಿರುವ ಸರಾಸರಿ ಟಿಕೆಟ್ ದರವೇ ಬರೋಬ್ಬರಿ 9.4 ಲಕ್ಷದಿಂದ 10.90 ಲಕ್ಷ ರೂಪಾಯಿ ಆಗಿದೆ, ಇದು ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ಸರಾಸರಿಯಾಗಿದೆ.
ಇನ್ನು ಮೈದಾನಕ್ಕೆ ಅತ್ಯಂತ ಹತ್ತಿರವಿರುವ ಫ್ರಂಟ್ ಸೆಕ್ಷನ್‌ನ (115A) ಒಂದು ಪ್ರೀಮಿಯಂ ವಿಐಪಿ ಟಿಕೆಟ್ 23.7 ಲಕ್ಷ ರೂಪಾಯಿಗೆ ಮಾರಾಟವಾಗಿದ್ದು, ಕೆಲವು ವಿಐಪಿ ಟ್ರೋಫಿ ಲಾಂಜ್ ಪ್ಯಾಕೇಜ್‌ಗಳ ಬೆಲೆ 30 ಲಕ್ಷದ ಗಡಿ ದಾಟಿದೆ. ಇನ್ನು 12 ಜನರಿಗಾಗಿ ಇರುವ ಖಾಸಗಿ ಬಾಕ್ಸ್ ಒಳಗೊಂಡ ಆನ್-ಫೀಲ್ಡ್ ಹಾಸ್ಪಿಟಾಲಿಟಿ ಪ್ಯಾಕೇಜ್ ದರ ಬರೋಬ್ಬರಿ 9.62 ಕೋಟಿ ರೂಪಾಯಿಗೂ ಅಧಿಕವಾಗಿದೆ.
ಎಲ್ಲಕ್ಕಿಂತ ಆಶ್ಚರ್ಯಕರವಾಗಿ, ಮರುಮಾರಾಟ (ರಿಸೇಲ್) ಮಾರುಕಟ್ಟೆಯಲ್ಲಿ ಗರಿಷ್ಠ ಮರುಮಾರಾಟ ದರವು ಬರೋಬ್ಬರಿ 22.5 ಕೋಟಿ ರೂಪಾಯಿಗಳನ್ನು ತಲುಪಿದೆ. ಕ್ರೀಡಾಂಗಣದ ಕೆಳಭಾಗದ ಲೋವರ್ ಡೆಕ್‌ನ ಬ್ಲಾಕ್ 124, ರೋ 45 ರಲ್ಲಿರುವ ನಾಲ್ಕು ಪ್ರೀಮಿಯಂ ಟಿಕೆಟ್‌ಗಳನ್ನು ತಲಾ 21.68 ಕೋಟಿಯಿಂದ 22.14 ಕೋಟಿ ರೂಪಾಯಿ ಬೆಲೆಗೆ ಲಿಸ್ಟ್ ಮಾಡಲಾಗಿದೆ. ಮೂಲತಃ ಕೇವಲ 5.36 ಲಕ್ಷದಿಂದ 10.18 ಲಕ್ಷ ರೂಪಾಯಿ ಬೆಲೆಯ ಈ ನಾಲ್ಕು ಟಿಕೆಟ್‌ಗಳನ್ನು ಒಟ್ಟಾರೆಯಾಗಿ ಬರೋಬ್ಬರಿ 88 ಕೋಟಿ ರೂಪಾಯಿಗೆ ಮರುಮಾರಾಟಕ್ಕಿಡಲಾಗಿದೆ.
ಅರ್ಜೆಂಟೀನಾ ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲಲು ಸಜ್ಜಾಗಿದ್ದರೆ, ಸ್ಪೇನ್ 16 ವರ್ಷಗಳ ನಂತರ ಚಾಂಪಿಯನ್ ಪಟ್ಟಕ್ಕೇರಲು ಕಾಯುತ್ತಿದೆ. ಫಿಫಾದ ಆಧುನಿಕ ತಂತ್ರಜ್ಞಾನ ಆಧಾರಿತ ದರ ನಿಗದಿ ವ್ಯವಸ್ಥೆ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದ್ದು, ಭಾರತೀಯ ಕಾಲಮಾನದ ಪ್ರಕಾರ ಜುಲೈ ೨೦ರ ಮಧ್ಯರಾತ್ರಿ 12.30ಕ್ಕೆ ಈ ಐತಿಹಾಸಿಕ ಪಂದ್ಯ ಆರಂಭವಾಗಲಿದೆ.
