ಚುನಾವಣಾ ಬಾಂಡ್ ಗಳ ಬಹಿರಂಗಪಡಿಸುವಿಕೆಯ ಬಗ್ಗೆ ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ದಾಖಲೆಯಂತೆ ಮಹತ್ವದ ವಿಚಾರಗಳು ಹೊರಬಿದ್ದಿವೆ.
ಎಲ್ಲರ ಅನುಮಾನದಂತೆ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರವನ್ನೇ ಕಾನೂನುಬದ್ಧಗೊಳಿಸಿದ ಆರೋಪದಂತೆ ಹಲವು ‘ಕೊಡು ಕೊಳ್ಳುವಿಕೆ’, ‘ಕಿಕ್ ಬ್ಯಾಕ್’ ಸೇರಿದಂತೆ ‘ಬ್ಲಾಕ್ ಮೇಲ್’ ಪ್ರಕ್ರಿಯೆಗಳೂ ನಡೆದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಆ ಮೂಲಕ ಕೋಟ್ಯಾಂತರ ರೂಪಾಯಿಯ ಬಾಂಡ್‌ಗಳನ್ನು ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಕಂಪನಿಗಳು, ಅದಕ್ಕೆ ಪ್ರತಿಯಾಗಿ ಲಾಭ ಪಡೆದಿರುವುದು ಗೊತ್ತಾಗಿದೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿದ ಮಾಹಿತಿಯಂತೆ ಯಾವ್ಯಾವ ಕಂಪನಿಗಳು ಎಷ್ಟೆಷ್ಟು ದೇಣಿಗೆ ನೀಡಿವೆ ಎಂಬ ಮಾಹಿತಿಗಳು ಇದ್ದರೂ ಯಾರಿಗೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ. ಆದರೆ ದೇಣಿಗೆ ನೀಡಿದ ಕೆಲವೇ ದಿನಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಕಡೆಯಿಂದ ದೊಡ್ಡ ದೊಡ್ಡ ಮೊತ್ತದ ಲಾಭ ಪಡೆದುಕೊಂಡ ಬಗ್ಗೆಯೂ ಮಾಹಿತಿ ಬಿಡುಗಡೆ ಆಗಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಅದು ಈ ಕೆಳಗಿನಂತಿದೆ.
* ದೇಶದ ದೊಡ್ಡ ಮಾಧ್ಯಮ TV 9 ಸಂಸ್ಥೆಯ ಮಾಲಿಕತ್ವ ಹೊಂದಿರುವ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯು 966 ಕೋಟಿ ರೂ.ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದೆ. ಏಪ್ರಿಲ್ 2023ರಲ್ಲಿ ಈ ಕಂಪನಿಯು 140 ಕೋಟಿ ರೂ. ದೇಣಿಗೆ ನೀಡಿತ್ತು. ಇದಾಗಿ ಒಂದು ತಿಂಗಳ ಬಳಿಕ ಕಂಪನಿಯು ಕೇಂದ್ರ ಬಿಜೆಪಿ ಸರ್ಕಾರದಿಂದ 14,400 ಕೋಟಿ ರೂ. ವೆಚ್ಚದ ಥಾಣೆ-ಬೊರಿವಲಿ ಅವಳಿ ಸುರಂಗ ಮಾರ್ಗದ ದೊಡ್ಡ ಯೋಜನೆಯನ್ನು ತನ್ನದಾಗಿಸಿಕೊಂಡಿದೆ.
* ಜಿಂದಾಲ್ ಸ್ಟೀಲ್ & ಪವರ್ ಕಂಪನಿ ಅಕ್ಟೋಬರ್ 7, 2022ರಂದು 25 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಖರೀದಿ ಮಾಡಿದೆ. ಅದಾಗಿ ಕೇವಲ ಮೂರೇ ದಿನಗಳ ಬಳಿಕ, ಅಂದರೆ 10 ಅಕ್ಟೋಬರ್ 2022 ರಂದು ಜಿಂದಾಲ್ ಕಂಪನಿಯು ಗರೇ ಪಾಲ್ಮಾ IV/6 ಕಲ್ಲಿದ್ದಲು ಗಣಿಗಾರಿಕೆಯ ಗುತ್ತಿಗೆ ತನ್ನದಾಗಿಸಿಕೊಂಡಿದೆ.
ಇದು ದೇಣಿಗೆ ನೀಡಿ, ಲಾಭದಾಯಕ ಕೆಲಸಗಳನ್ನು ತನ್ನದಾಗಿಸಿಕೊಂಡ ಮಾಹಿತಿಯಾದರೆ ಬಿಜೆಪಿ ಸರ್ಕಾರ ಐಟಿ, ಇಡಿ, CBI ನಂತಹ ತನಿಖಾ ಸಂಸ್ಥೆಗಳ ಮೇಲೆ ಪ್ರಭಾವ ಬಳಸಿ, ದಾಳಿಗಳ ಮೂಲಕ ಬ್ಲಾಕ್ಮೇಲ್ ತಂತ್ರ ಮಾಡಿಯೂ ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದ ಬಗ್ಗೆಯೂ ಜೈರಾಮ್ ರಮೇಶ್ ತಮ್ಮ ಪೋಸ್ಟ್ ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
* ಹೆಟೆರೊ ಫಾರ್ಮಾ ಮತ್ತು ಯಶೋದಾ ಆಸ್ಪತ್ರೆಯಂತಹ ಕಂಪನಿಗಳು ತನಿಖಾ ಸಂಸ್ಥೆಗಳ ದಾಳಿಗೆ ಒಳಗಾದ ಬಳಿಕ ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ.
* ಕಳೆದ ಡಿಸೆಂಬರ್ 2023ರಲ್ಲಿ ಶಿರಡಿ ಸಾಯಿ ಎಲೆಕ್ಟ್ರಿಕಲ್ಸ್ ಮೇಲೆ ಐಟಿ ಸಂಸ್ಥೆ ದಾಳಿ ನಡೆಸಿತ್ತು. ಅದಾಗಿ ಒಂದೇ ತಿಂಗಳಲ್ಲಿ ಈ ಸಂಸ್ಥೆ 40 ಕೋಟಿ ಎಲೆಕ್ಟಾಲ್ ಬಾಂಡ್ ಮೂಲಕ ದೇಣಿಗೆ ನೀಡಿದೆ.
* ಈ ಪಟ್ಟಿಯಲ್ಲಿ ಅತಿ ಹೆಚ್ಚು ಮೊತ್ತದ ದೇಣಿಗೆ ನೀಡಿದ ಸಂಸ್ಥೆಯಾಗಿ ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ಸ್ ಲಿಮಿಟೆಡ್ ನಿಲ್ಲಲಿದೆ. ಈ ಸಂಸ್ಥೆ 1,200 ಕೋಟಿ ಮೌಲ್ಯದ ಬಾಂಡ್ ಖರೀದಿಸುವ ಮೂಲಕ ಅತೀ ಹೆಚ್ಚು ದೇಣಿಗೆ ನೀಡಿದ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಏಪ್ರಿಲ್ 2, 2022 ರಂದು ಫ್ಯೂಚರ್ ಗೇಮಿಂಗಗ್ ಕಂಪನಿ ಮೇಲೆ ಇಡಿ ದಾಳಿ ನಡೆಸಿತ್ತು. ಇದಾಗಿ ಕೇವಲ 5 ದಿನಗಳ ನಂತರ, ಏಪ್ರಿಲ್ 7ರಂದು ಕಂಪನಿಯು ಚುನಾವಣಾ ಬಾಂಡ್ ಮೂಲಕ 100 ಕೋಟಿ ರೂ. ದೇಣಿಗೆ ನೀಡಿದೆ.
* ಅಕ್ಟೋಬರ್ 2023ರಲ್ಲಿ ಐಟಿ ಇಲಾಖೆಯು ಫ್ಯೂಚರ್ ಕಂಪನಿ ಮೇಲೆ ದಾಳಿ ನಡೆಸಿತ್ತು. ಅದೇ ತಿಂಗಳು ಕಂಪನಿಯು ಚುನಾವಣಾ ಬಾಂಡ್ ಮೂಲಕ 65 ಕೋಟಿ ರೂ. ದೇಣಿಗೆ ನೀಡಿದೆ.
ಇನ್ನು ಕೇಂದ್ರ ಸರ್ಕಾರದ ಮೇಲೆ ಕಿಕ್ ಬ್ಯಾಕ್ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಬಿಜೆಪಿ ಈ ಮಾರ್ಗವಾಗಿಯೂ ಹಣ ಪಡೆದಿರುವ ಬಗ್ಗೆ ಆರೋಪ ಮಾಡಿದ್ದಾರೆ.
* ವೇದಾಂತ ಸಂಸ್ಥೆಯು ಮಾರ್ಚ 3, 2021ರಂದು ರಾಧಿಕಪೂರ್ ವೆಸ್ಟ್ ಖಾಸಗಿ ಕಲ್ಲಿದ್ದಲು ಗಣಿ ಗುತ್ತಿಗೆಯನ್ನು ತನ್ನದಾಗಿಸಿಕೊಂಡಿತ್ತು. ಈ ಪ್ರಕ್ರಿಯೆಯ ಕೇವಲ ಒಂದು ತಿಂಗಳ ನಂತರ ಏಪ್ರಿಲ್ 2021ರಲ್ಲಿ ಸಂಸ್ಥೆ ಚುನಾವಣಾ ಬಾಂಡ್‌ಗಳ ಮೂಲಕ 25 ಕೋಟಿ ರೂ. ದೇಣಿಗೆ ನೀಡಿದೆ.
* ಮೇಘಾ ಇಂಜಿನಿಯರಿಂಗ್ ಕಂಪನಿಯು ಆಗಸ್ಟ್ 2020ರಲ್ಲಿ 4,500 ಕೋಟಿ ರೂ. ವೆಚ್ಚದ ಜೊಜಿಲಾ ಸುರಂಗ ಯೋಜನೆಯನ್ನು ತನ್ನದಾಗಿಸಿಕೊಂಡಿತ್ತು. ಅಕ್ಟೋಬರ್ 2020ರಲ್ಲಿ ಕಂಪನಿಯು ಚುನಾವಣಾ ಬಾಂಡ್‌ಗಳ ಮೂಲಕ 20 ಕೋಟಿ ರೂ. ದೇಣಿಗೆ ನೀಡಿದೆ.
* ಮೇಘಾ ಕಂಪನಿಯು ಡಿಸೆಂಬರ್ 2022ರಲ್ಲಿ ಬಿಕೆಸಿ ಬುಲೆಟ್ ರೈಲು ನಿಲ್ದಾಣದ ಗುತ್ತಿಗೆಯನ್ನು ಪಡೆದಿತ್ತು. ಅದೇ ತಿಂಗಳು ಕಂಪನಿ 56 ಕೋಟಿ ರೂ. ದೇಣಿಗೆ ನೀಡಿದೆ.
ಇನ್ನು ಹಣಕಾಸು ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ಜಾರಿಗೊಳಿಸಿದ ಈ ಯೋಜನೆಯ ಹಿಂದೆ ಕೋಟ್ಯಂತರ ರೂಪಾಯಿ ಅವ್ಯವಹಾರದ ಬಗ್ಗೆಯೂ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾಹಿತಿ ಹೊರಹಾಕಿದ್ದಾರೆ. ತಿದ್ದುಪಡಿಯ ವೇಳೆ ಯಾವುದೇ ಕಂಪನಿಯ ಲಾಭದ ಒಂದು ಸಣ್ಣ ಶೇಕಡಾವಾರು ಭಾಗವನ್ನು ಮಾತ್ರ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದೆಂಬ ನಿರ್ಬಂಧವನ್ನು ತೆಗೆದು ಹಾಕಲಾಗಿದೆ.
ಅಷ್ಟೆ ಅಲ್ಲದೆ ಕಪ್ಪು ಹಣ ಕೂಡಾ ಈ ಚುನಾವಣಾ ಬಾಂಡ್ ಕೆಳಗೆ ಓಡಾಡಿದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
* ಶೆಲ್ ಕಂಪನಿಗಳಿಗೆ ಕಪ್ಪು ಹಣವನ್ನು ದೇಣಿಗೆ ನೀಡಲು ಚುನಾವಣಾ ಬಾಂಡ್ ಹೆಚ್ಚು ನೆರವು ಮಾಡಿಕೊಟ್ಟಿದೆ. ಕ್ವಿಕ್ ಸಪ್ಲೈ ಚೈನ್ ಲಿಮಿಟೆಡ್ ಎಂಬ ಕಂಪನಿಯು ರೂ. 410 ಕೋಟಿ ದೇಣಿಗೆ ನೀಡಿದೆ. ಈ ಕಂಪನಿಯ ಸಂಪೂರ್ಣ ಷೇರು ಬಂಡವಾಳ ಕೇವಲ 130 ಕೋಟಿ ರೂ. ಮಾತ್ರ. ಇದು ಎಲೆಕ್ಟ್ರಾಲ್ ಬಾಂಡ್ ಕೆಳಗೆ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಹಣವೂ ಕಾನೂನುಬದ್ಧವಾಗಿ ಓಡಾಡಲು ಇದು ಕೆಲಸ ಮಾಡಿದೆ ಎನ್ನಲಾಗಿದೆ.
ಇನ್ನು ಎಸ್‌ಬಿಐ ಕಡೆಯಿಂದ ಬಂದ ಈ ಮಾಹಿತಿ ಕೇವಲ ಏಪ್ರಿಲ್ 2019ರಿಂದ ಮಾರಾಟ ಮಾಡಿದ ಬಾಂಡ್‌ಗಳದ್ದಾಗಿದೆ. ಆದರೆ ಎಸ್‌ಬಿಐ ಮಾರ್ಚ್ 2018 ರಲ್ಲಿ ಮೊದಲ ಬಾಂಡ್‌ಗಳನ್ನು ಮಾರಾಟ ಮಾಡಿದೆ. ಹಾಗಾಗಿ, ಡೇಟಾದಿಂದ 2,500 ಕೋಟಿ ರೂ. ಮೌಲ್ಯದ ಬಾಂಡ್‌ಗಳು ಕಾಣೆಯಾಗಿವೆ.
ಮಾರ್ಚ್ 2018 ರಿಂದ ಏಪ್ರಿಲ್ 2019 ರವರೆಗಿನ ಈ ಕಾಣೆಯಾದ ಬಾಂಡ್‌ಗಳ ಡೇಟಾ ಎಲ್ಲಿದೆ? ಉದಾಹರಣೆಗೆ, ಬಾಂಡ್‌ಗಳ ಮೊದಲ ಕಂತಿನಲ್ಲಿ ಬಿಜೆಪಿ ಶೇ. 95 ಹಣವನ್ನು ಪಡೆದುಕೊಂಡಿದೆ. ಬಿಜೆಪಿ ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಚುನಾವಣಾ ಬಾಂಡ್‌ಗಳ ಅಂಕಿ ಅಂಶಗಳ ವಿಶ್ಲೇಷಣೆ ಮುಂದುವರಿದಂತೆ, ಬಿಜೆಪಿಯ ಭ್ರಷ್ಟಾಚಾರದ ಇನ್ನೂ ಅನೇಕ ಪ್ರಕರಣಗಳು ಬಯಲಿಗೆ ಬರಲಿವೆ. ನಾವು ವಿಶಿಷ್ಟ ಬಾಂಡ್‌ಗಳ ಐಡಿ ಸಂಖ್ಯೆ ಅಥವಾ ಸೀರಿಯಲ್ ನಂಬರ್ ಬಹಿರಂಗಗೊಳಿಸುವಂತೆ ಆಗ್ರಹಿಸುತ್ತಿದ್ದೇವೆ. ಇದರಿಂದ ಯಾವ ಪಕ್ಷ, ಯಾರಿಂದ ಎಷ್ಟು ದೇಣಿಗೆ ಪಡೆದಿದೆ ಎಂಬುವುದು ಗೊತ್ತಾಗಲಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.