Sunday, June 23, 2024

ಸತ್ಯ | ನ್ಯಾಯ |ಧರ್ಮ

ಮುಖ್ಯಮಂತ್ರಿಗಳಿಗೆ ನಿಜವಾಗಿಯೂ ಕನ್ನಡ, ಕರ್ನಾಟಕದ ಮೇಲೆ ಕಾಳಜಿ ಇದೆಯೇ?

ಕನ್ನಡ ರಾಜ್ಯೋತ್ಸವ ಹತ್ತಿರ ಬರುತ್ತಿದ್ದಂತೆ, ಕೋಟಿ ಕಂಠಗಾಯನ ಮತ್ತಿತರ ಕನ್ನಡಪರ ಕಾರ್ಯಕ್ರಮಗಳಿಗೆ ಚಾಲನೆ, ಬೆಂಬಲ, ಪ್ರೊತ್ಸಾಹ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕನ್ನಡ ನಾಡು ನುಡಿಗಳ ಕುರಿತು ಎಷ್ಟರ ಮಟ್ಟಿಗೆ ಕಾಳಜಿ ಅಭಿಮಾನ ಹೊಂದಿದ್ದಾರೆ ಎಂಬ ಅನುಮಾನ ಕನ್ನಡಿಗರಲ್ಲಿ ಮೂಡಿದೆ.

ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಉನ್ನತ ತಾಂತ್ರಿಕ ಸಂಸ್ಥೆಗಳವರೆಗೂ ಇಂಗ್ಲೀಷ್‌ ಬದಲು ಹಿಂದಿ ಮಾಧ್ಯಮದಲ್ಲಿಯೇ ಪಠ್ಯಬೋಧನೆಯನ್ನು ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷರಾಗಿರುವ ಸಂಸತ್ತಿನ ಅಧಿಕೃತ ಭಾಷಾ ಸಮಿತಿ ಶಿಫಾರಸು ಮಾಡಿದೆ. ಇಂತಹ ಒಂದು ನಡೆ ದಕ್ಷಿಣ ರಾಜ್ಯಗಳ ದೃಷ್ಟಿಯಿಂದ ಬಹಳ ಅನಾಹುತಕಾರಿಯಾದದ್ದು. ಇದಕ್ಕೆ ನಮ್ಮ ನೆರೆ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ತೀವ್ರ ಅಸಮಧಾನ ವ್ಯಕ್ತಪಡಿಸಿ, ಕೇಂದ್ರದ ನಡೆಯನ್ನು ವಿರೋಧಿಸಿ ಶಿಫಾರಸ್ಸನ್ನು ಹಿಂಪಡೆಯುವಂತೆ ಆಗ್ರಹಿಸಿ ಪತ್ರ ಬರೆದಿದ್ದಾರೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಗ್ಗೆ ತುಟಿಕ್ ಪಿಟಿಕ್‌ ಎನ್ನದೆ ಮೌನವಹಿಸಿದ್ದಾರೆ. ಈ ಹಿಂದಿ ಹೇರಿಕೆಯ ನಡೆಗೆ ಯಾವುದೇ ಪ್ರತಿರೋಧ ಕರ್ನಾಟಕದ ಮುಖ್ಯಮಂತ್ರಿಗಳಿಂದ ವ್ಯಕ್ತವಾಗಿಲ್ಲ. ಹೀಗಾಗಿ ನಿಜವಾಗಿಯೂ ಕನ್ನಡ ನಾಡು, ಕನ್ನಡ ಭಾಷೆಯ ಬಗ್ಗೆ ಇವರಿಗೆ ನಿಜವಾಗಿ ಗೌರವ ಅಭಿಮಾನಗಳು ಇವೆಯೇ ಎಂಬ ಪ್ರಶ್ನೆ ಕಾಡುತ್ತದೆ.

ಕನ್ನಡಿಗರ ಪ್ರಶ್ನೆಗೆ ಕಾರಣವಾಗಿರುವ ಅಮಿತ್‌ ಶಾ ಶಿಫಾರಸ್ಸಿನಲ್ಲಿ ಏನಿದೆ?

ಅಮಿತ್‌ ಶಾ ಅವರ ಸಮಿತಿ ಶಿಫಾರಸು ನೀಡುವ ಮುಂಚೆಯೇ, ಅಧಿಕೃತ ಭಾಷಾ ಸಂಸದೀಯ ಸಮಿತಿ 37 ನೇ ಸಭೆಯಲ್ಲಿ, ಶಾ ಅವರು ‘ ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯ ಭಾಷೆಯಾಗಿ ಬಳಸಬೇಕೆ ಹೊರೆತು ಸ್ಥಳೀಯ ಭಾಷೆಗಳನ್ನಲ್ಲ ಎಂದು ಹೇಳಿದ್ದರು. ಹೀಗಾಗಿ ದೇಶದಲ್ಲೆಡೆ ಸಂಪರ್ಕ ಭಾಷೆಯಾಗಿ, ದೇಶಿಯ ಭಾಷೆ ಹಿಂದಿಯನ್ನು ಬಳಸಬೇಕು ಎಂದು ಸಭೆಯಲ್ಲಿ ಘೋಷಿಸಿದ್ದರು. ಇದಲ್ಲದೆ ಅಮಿತ್ ಶಾ ಅವರ ಅಧಿಕೃತ ಭಾಷಾ ಸಮಿತಿಗೆ ತನ್ನ ವರದಿಗಳನ್ನು ಹಂತ ಹಂತವಾಗಿ ಜಾರಿಗೆ ತರುವ ಹಾಗೆ ಸಮಿತಿಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು.

ಈ ಸೂಚನೆ ಮೇರೆಗೆ ಸಮಿತಿ ಸಲ್ಲಿಸಿದ ಶಿಫಾರಸ್ಸಿನಲ್ಲಿ, ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಉನ್ನತ ತಾಂತ್ರಿಕ ಸಂಸ್ಥೆಗಳವರೆಗೂ ಇಂಗ್ಲೀಷ್‌ ಬದಲು ಹಿಂದಿ ಮಾಧ್ಯಮದಲ್ಲಿಯೇ ಪಠ್ಯಬೋಧನೆಯನ್ನು ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಅದಲ್ಲದೇ ಐಐಟಿ, ಐಐಎಂ, ನವೋದಯ ಕೇಂದ್ರೀಯ ವಿವಿ ಇತ್ಯಾದಿಗಳಿಗೆ ಅನ್ವಯವಾಗುವಂತೆ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಬದಲು ಹಿಂದಿ ಮಾಧ್ಯಮ ಬರಬೇಕು. ಕೇಂದ್ರೀಯ ನೇಮಕಾತಿ ವೇಳೆ ಇಂಗ್ಲೀಷ್‌ ಬದಲು ಹಿಂದಿಯಲ್ಲಿ ಪ್ರಶ್ನೆಪತ್ರಿಕೆ ಇರಬೇಕು. ಕೇಂದ್ರೀಯ ಸರ್ಕಾರಿ ನೌಕರರ ನೇಮಕಾತಿ ವೇಳೆ ಹಿಂದಿ ಬಲ್ಲವರಿಗೆ ಆದ್ಯತೆ ನೀಡಬೇಕು. ಹಾಗೆಯೇ ಹಿಂದಿ ಬಳಸದ ನೌಕರರಿಗೆ ಎಚ್ಚರಿಕೆ ನೀಡಿ, ವಾರ್ಷಿಕ ವರದಿಯಲ್ಲಿ ನಮೂದಿಸಬೇಕು. ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿಯಲ್ಲೇ ಹೈಕೋರ್ಟ್‌ ಕಲಾಪಗಳನ್ನು ನಡೆಸಬೇಕು. ಕೇಂದ್ರ ಸರ್ಕಾರದ ಎಲ್ಲಾ ಪತ್ರ, ಇ-ಮೇಲ್‌ ವ್ಯವಹಾರ ಹಿಂದಿಯಲ್ಲೇ ನಡೆಯಬೇಕು. ಸರ್ಕಾರದ ಜಾಹೀರಾತಿನ ಹಣದಲ್ಲಿ ಶೇ.50 ರಷ್ಟು ಹಣವನ್ನು ಹಿಂದಿ ಜಾಹೀರಾತಿಗೆ ನೀಡಬೇಕು, ವಿಶ್ವ ಸಂಸ್ಥೆಯಲ್ಲಿ ಭಾರತದ ಅಧಿಕೃತ ಭಾಷೆಯನ್ನು ಹಿಂದಿ ಎಂದು ಪರಿಗಣಿಸಬೇಕು ಎಂದು ತಿಳಿಸಲಾಗಿತ್ತು.

ಹೀಗಾದರೆ ಏನಾಗುತ್ತದೆ?

ಶಿಫಾರಸ್ಸಿನಲ್ಲಿ ಇರುವಂತೆ ಆದರೆ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಉದ್ಯೋಗವಕಾಶಗಳನ್ನು ಕಳೆದುಕೊಳ್ಳುವಂತಾಗುತ್ತದೆ. ಹಿಂದಿ ಭಾಷೆ ಬಾರದ ಜನರು ಎರಡನೆ ದರ್ಜೆಯ ನಾಯಕರಾಗುತ್ತಾರೆ. ಪರ್ಯಾಯ ಭಾಷೆಯಾಗಿ ಹಿಂದಿ ಬಳಸುವುದರಿಂದ, ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಮಾನ್ಯತೆ ಇರುವುದಿಲ್ಲ. ಇದರಿಂದ, ಪ್ರಾದೇಶಿಕ ಭಾಷೆಯನ್ನಾಡುವ ಜನಸಮೂಹಕ್ಕೆ, ಶಿಕ್ಷಣ, ಉದ್ಯೋಗ, ಮತ್ತಿತರ ವಿಷಯಗಳಿಂದ ವಂಚಿತರಾಗಬೇಕಾಗುತ್ತದೆ.

ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಸೇರಿದಂತೆ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿಸುವ ಕ್ರಮವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಬಲವಾಗಿ ವಿರೋಧಿಸಿದ್ದು ಅಲ್ಲದೇ, ಕೇಂದ್ರದ ಶಿಫಾರಸ್ಸನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

ಅ.10ರಂದು ಸ್ಟಾಲಿನ್‌ ತಾವು ಮಾಡಿದ್ದ ಸರಣಿ ಟ್ವೀಟ್‌ ನಲ್ಲಿ ಹಿಂದಿ ಹೇರಿಕೆ ಪ್ರಯತ್ನದ ವಿರುದ್ಧ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದರು. ಅವರು ತಮ್ಮ ಟ್ವೀಟ್‌ ನಲ್ಲಿ ʼಭಾರತದ ಭಾಷಾ ವೈವಿದ್ಯತೆಯನ್ನು ಕಡೆಗಣಿಸಿ ಹಿಂದಿ ಹೇರಿಕೆ ಮಾಡಲು ಕೇಂದ್ರದ ಬಿಜೆಪಿ ಸರ್ಕಾರ ತೀವ್ರ ರೀತಿಯಲ್ಲಿ ನಡೆಸುತ್ತಿರುವ ಪ್ರಯತ್ನ ಆತಂಕದ ಮಟ್ಟ ತಲುಪಿದೆ. ಅಧಿಕೃತ ಭಾಷೆ ಕುರಿತ ಸಂಸದೀಯ ಸಮಿತಿಯ ವರದಿಯ 11ನೆಯ ಸಂಪುಟದ ಪ್ರಸ್ತಾವಗಳು ಭಾರತದ ಆತ್ಮದ ಮೇಲೆ ನಡೆಸಿರುವ ನೇರವಾದ ಪ್ರಹಾರವಾಗಿʼ ಎಂದು ಬರೆದಿದ್ದರು. ಮುಂದುವರೆದು, ʼಹಿಂದಿ ಹೇರಿಕೆ ಮಾಡಿದ್ದೇ ಆದಲ್ಲಿ ಹಿಂದಿ ಮಾತನಾಡದ ವಿಶಾಲ ಜನಮೂಹವು ಎರಡನೆಯ ದರ್ಜೆಯ ನಾಗರಿಕರಾಗುತ್ತಾರೆ. ಹಿಂದಿ ಹೇರಿಕೆ ನಡೆಸುವುದು ಭಾರತದ ಸಮಗ್ರತೆಗೆ ವಿರುದ್ಧವಾದ ನಡೆ. ಆಳುವ ಬಿಜೆಪಿ ಸರ್ಕಾರವು ಹಿಂದೆ ನಡೆದ ಹಿಂದಿ ವಿರೋಧಿ ಚಳವಳಿಗಳಿಂದ ಪಾಠ ಕಲಿಯುವುದು ಒಳ್ಳೆಯದುʼ ಎಂದು ಸಹ ಬಿಜೆಪಿ ಸರ್ಕಾರವನ್ನು ಎಚ್ಚರಿಸಿದ್ದರು.

ಅದೇ ರೀತಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹ ಅ.12ರಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಹಿಂದಿಯನ್ನು ಹೇರಲು ನಡೆಸುತ್ತಿರುವ ಪ್ರಯತ್ನಗಳನ್ನು ʼಒಪ್ಪಲಸಾಧ್ಯʼ ಎಂದಿದ್ದರು. ಕೇಂದ್ರ ಸರ್ಕಾರದ ಸೇವೆಗಳ ಪರೀಕ್ಷೆಗಳ ಮಾಧ್ಯಮವನ್ನು ಹಿಂದಿಯನ್ನಾಗಿಸುವ ಮತ್ತು ಐಐಟಿ, ಐಐಎಂಗಳಲ್ಲಿ ಅಧ್ಯಯನ ಭಾಷೆಯನ್ನು ಹಿಂದಿಯನ್ನಾಗಿಸುವ ಅಧಿಕೃತ ಭಾಷಾ ಸಂಸದೀಯ ಸಮಿತಿಯ ಪ್ರಸ್ತಾಪಗಳನ್ನು ಕೇರಳ ಸರ್ಕಾರ ಒಪ್ಪಲು ಸಾದ್ಯವೇ ಇಲ್ಲ ಎಂದು ತಿಳಿಸಿದ್ದರು.

ಇನ್ನೂ ತೆಲಂಗಾಣ ಮಾಹಿತಿ ತಂತ್ರಜ್ಞಾನ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಕೆ.ಟಿ.ರಾಮರಾವ್ ಅವರು ಕೂಡ ಹಿಂದಿ ಹೇರಿಕೆ ವಿರೋಧಿಸಿ ನರೇಂದ್ರ ಮೋದಿಯವರಿಗೆ ಪತ್ರ ಬೆರಿದಿದ್ದು, ಶಿಫಾರಸು ಸಂವಿಧಾನ ಬಾಹಿರವಾಗಿದ್ದು, ಕೂಡಲೇ ಹಿಂಪಡೆಯಬೇಕು ಎಂದು ರಾಮರಾವ್ ಒತ್ತಾಯಿಸಿದ್ದರು. ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ, ಪ್ರಸ್ತುತವಾಗಿ ಪರೋಕ್ಷವಾಗಿ ಹಿಂದಿ ಹೇರಿಕೆಯು ಕೋಟ್ಯಂತರ ಯುವಕರ ಜೀವನವನ್ನು ಹೇಗೆ ಹಾಳುಮಾಡುತ್ತಿದೆ ಎಂಬುದರ ಕುರಿತು ವಿವರಿಸಲಾಗಿದ್ದು, ಕೇಂದ್ರೀಯ ಉದ್ಯೋಗಗಳಿಗೆ ನೀಡುವ ಅರ್ಹತಾ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಶ್ನೆಗಳು ಇರುವುದರಿಂದ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅಮಿತ್‌ ಶಾ ಸಮಿತಿ ನೀಡಿರುವ ಶಿಪಾರಸು ʼಪ್ರಸ್ತುತ ಮತ್ತು ಭವಿಷ್ಯದʼ ಪೀಳಿಗೆಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದರು.

ಕರ್ನಾಟಕಲ್ಲಿ ಇರುವ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ಜವಾಬ್ದಾರಿ ಸರ್ಕಾರವೇ ಆಗಿದ್ದಿದ್ದರೆ ಈ ವಿಷಯಗಳ ಕುರಿತು ತುಟಿ ಬಿಚ್ಚದೇ ಕುಳಿತುಕೊಳ್ಳಲು ಸಾಧ್ಯವಿತ್ತೆ? ಅಮಿತ್‌ಷಾ ನೀತಿ ಕನ್ನಡಿಗರಿಗೆ ಎಂತಹ ಮಾರಕ ನೀತಿ ಎಂಬುದು ತಿಳಿಯಲಾರದ ದಡ್ಡರೇ ನಮ್ಮ ಮುಖ್ಯಮಂತ್ರಿ?

ಹಿಂದಿಯ ಗುಲಾಮಗಿರಿಗೆ ತಳ್ಳುವ ಕೇಂದ್ರದ ಈ ನಡೆ ಕನ್ನಡಿಗರಿಗೆ ದೊಡ್ಡ ಅನ್ಯಾಯವಲ್ಲವೇ? ಲಕ್ಷಾಂತರ ಉದ್ಯೋಗಗಳಿಂದ ಕನ್ನಡಿಗರನ್ನು ಕೇವಲ ಭಾಷೆಯ ಕಾರಣಕ್ಕಾಗಿ ವಂಚಿಸುತ್ತಿರುವ ಇಂತಹ ಹುನ್ನಾರಗಳ ಬಗ್ಗೆ ಒಂದು ಸರ್ಕಾರವಾಗಿ ಯಾವುದೇ ನಿಲುವು ತಳೆಯದಿದ್ದರೆ ಅದಕ್ಕಿಂತ ಜನದ್ರೋಹ ಯಾವುದಿದೆ?

Related Articles

ಇತ್ತೀಚಿನ ಸುದ್ದಿಗಳು