ನಾನು ಪ್ರಧಾನಿ ಮೋದಿಯ ಅತಿ ದೊಡ್ಡ ಅಭಿಮಾನಿ: ಭಾರತ ಮಂಟಪದ ಕಾರ್ಯಕ್ರಮದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋನ್ ಲೈವ್ ಸಂದೇಶ

ಅಮೆರಿಕದ ಸ್ವಾತಂತ್ರ್ಯದ 250ನೇ ವರ್ಷಾಚರಣೆಯ ಅಂಗವಾಗಿ ರವಿವಾರ ರಾತ್ರಿ ಹೊಸದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ “ಅತ್ಯಾಪ್ತ” ಸ್ನೇಹಿತ ಎಂದು ಬಣ್ಣಿಸುವುದರ ಜೊತೆಗೆ, ಭಾರತವು ಶೇಕಡಾ 100 ರಷ್ಟು ನನ್ನನ್ನು ನಂಬಬಹುದು ಎಂದು ಭರವಸೆ ನೀಡಿದ್ದಾರೆ.

ಭಾರತ ಮಂಟಪದಲ್ಲಿ ನಡೆದ ಈ ಭವ್ಯ ಕಾರ್ಯಕ್ರಮದಲ್ಲಿ ಭಾರತದ ವಿದೇಶಾಂಗ ವ್ಯವಸ್ಥೆಯ ಮುಖ್ಯಸ್ಥರಾದ ಎಸ್. ಜೈಶಂಕರ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಮತ್ತು ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಲೈವ್ ಸಂಗೀತ ಕಚೇರಿ ಆಯೋಜಿತವಾಗಿತ್ತು.

ವೇದಿಕೆಯ ಮೇಲಿದ್ದ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಅವರಿಗೆ ದೂರವಾಣಿ ಕರೆ ಮಾಡಿದ ಅಧ್ಯಕ್ಷ ಟ್ರಂಪ್, ರಾಯಭಾರಿಯು ತಮ್ಮ ಫೋನ್ ಅನ್ನು ಮೈಕ್ರೋಫೋನ್ ಹತ್ತಿರ ಹಿಡಿದಾಗ ಸಭೆಯಲ್ಲಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. “ನಾನು ಭಾರತದ ಎಲ್ಲ ಜನರಿಗೆ ನಮಸ್ಕರಿಸಲು ಬಯಸುತ್ತೇನೆ. ನನಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದರೆ ಸಾಟಿಯಿಲ್ಲದ ಗೌರವವಿದೆ. ಮೋದಿ ಅದ್ಭುತ ನಾಯಕ ಮತ್ತು ಅವರು ನನ್ನ ಆತ್ಮೀಯ ಸ್ನೇಹಿತ” ಎಂದು ಟ್ರಂಪ್ ಹೇಳಿದರು. ಮುಂದುವರಿದು ಮಾತನಾಡಿದ ಅವರು, “ನಾನು ಪ್ರಧಾನಿ ಮೋದಿ ಅವರ ಅತಿ ದೊಡ್ಡ ಅಭಿಮಾನಿ” ಎಂದು ಮುಕ್ತವಾಗಿ ಒಪ್ಪಿಕೊಂಡರು.

“ಅಮೆರಿಕ ಇತಿಹಾಸದಲ್ಲೇ ಭಾರತದೊಂದಿಗೆ ಇಷ್ಟೊಂದು ನಿಕಟ ಸಂಬಂಧವನ್ನು ನಾವು ಹೊಂದಿರಲಿಲ್ಲ. ಭಾರತ ದೇಶ ಮತ್ತು ಅಲ್ಲಿನ ಸರ್ಕಾರವು ಯಾವುದೇ ಸಂದರ್ಭದಲ್ಲೂ ನನ್ನನ್ನು ಹಾಗೂ ನಮ್ಮ ದೇಶವನ್ನು ಶೇಕಡಾ 100 ರಷ್ಟು ನಂಬಬಹುದು. ಭಾರತಕ್ಕೆ ಯಾವುದೇ ಸಹಾಯದ ಅಗತ್ಯವಿದ್ದರೂ ಅವರು ಯಾರಿಗೆ ಕರೆ ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ – ಅವರು ನೇರವಾಗಿ ಇಲ್ಲಿಗೇ ಕರೆ ಮಾಡಬಹುದು” ಎಂದು ಟ್ರಂಪ್ ಭಾರತಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದರು. ಇದೇ ವೇಳೆ ಅಮೆರಿಕದ ಆರ್ಥಿಕತೆಯು ಅತ್ಯಂತ ಬಲಿಷ್ಠವಾಗಿದ್ದು, ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು.

ತಮ್ಮ ಭಾಷಣದ ಕೊನೆಯಲ್ಲಿ ಮಾರ್ಕೊ ರೂಬಿಯೋ ಅವರನ್ನು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ವಿದೇಶಾಂಗ ಕಾರ್ಯದರ್ಶಿ ಎಂದು ಬಣ್ಣಿಸಿದ ಟ್ರಂಪ್, “ನನ್ನ ಪರವಾಗಿ ಪ್ರಧಾನಿ ಮೋದಿಯವರಿಗೆ ಶುಭಾಶಯ ತಿಳಿಸಿ ಮತ್ತು ನಾನು ಅವರ ದೊಡ್ಡ ಅಭಿಮಾನಿ ಎಂಬುದನ್ನು ಮತ್ತೊಮ್ಮೆ ನೆನಪಿಸಿ” ಎಂದು ರಾಯಭಾರಿಗೆ ಸೂಚಿಸಿದರು. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಕೂಡ ಭಾರತವನ್ನು ಅಮೆರಿಕದ ಅತ್ಯಂತ ಪ್ರಮುಖ ಮತ್ತು ಆಯಕಟ್ಟಿನ ಪಾಲುದಾರ ದೇಶ ಎಂದು ಕರೆದರು.

ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಅಮೆರಿಕದ ಸ್ವಾತಂತ್ರ್ಯ ಘೋಷಣೆಯು ಆಧುನಿಕ ಜಗತ್ತನ್ನು ರೂಪಿಸಿದ ವೈಯಕ್ತಿಕ ಸ್ವಾತಂತ್ರ್ಯ, ಕಾನೂನಿನ ಆಡಳಿತ ಮತ್ತು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದೆ ಎಂದು ಶ್ಲಾಘಿಸಿದರು. ಭಾರತದ ಸಂವಿಧಾನ ಶಿಲ್ಪಿಗಳು ಕೂಡ ಸಂವಿಧಾನ ರಚನೆಯ ಸಂದರ್ಭದಲ್ಲಿ ಅಮೆರಿಕದ ಸ್ವಾತಂತ್ರ್ಯ ಚಳವಳಿಯ ಅನುಭವಗಳನ್ನು ಗಮನದಲ್ಲಿಟ್ಟುಕೊಂಡಿದ್ದರು ಎಂಬುದನ್ನು ಅವರು ನೆನಪಿಸಿದರು.

ಪ್ರಸ್ತುತ ಜಗತ್ತು ಒಂದು ದೊಡ್ಡ ಪರಿವರ್ತನೆಯ ಹಂತದ ಮೂಲಕ ಹಾದುಹೋಗುತ್ತಿದ್ದು, ಜಾಗತಿಕ ಆರ್ಥಿಕತೆಯನ್ನು ಅಪಾಯದಿಂದ ಮುಕ್ತಗೊಳಿಸಲು ಮತ್ತು ಜಗತ್ತಿಗೆ ಹೆಚ್ಚಿನ ಪರ್ಯಾಯ ಮಾರ್ಗಗಳನ್ನು ಒದಗಿಸಲು ಭಾರತ-ಅಮೆರಿಕ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಜೈಶಂಕರ್ ಪ್ರತಿಪಾದಿಸಿದರು.

ಇದೇ ಸಂದರ್ಭದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ನಂತರ ಎ.ಆರ್. ರೆಹಮಾನ್ ಅವರು ಹಾಡಿದ “ದಿಲ್ ಸೇ”, “ಮಾ ತುಝೆ ಸಲಾಮ್” ಮತ್ತು “ತೇರೆ ಬಿನಾ” ಹಾಡುಗಳಿಗೆ ಇಡೀ ಸಭೆ ಮಂತ್ರಮುಗ್ಧವಾಯಿತು. ಕೊನೆಯಲ್ಲಿ ಅಮೆರಿಕದ ಪ್ರಸಿದ್ಧ ಮ್ಯೂಸಿಕ್ ಬ್ಯಾಂಡ್ ‘ವಿಲೇಜ್ ಪೀಪಲ್’ ಪ್ರದರ್ಶನದೊಂದಿಗೆ ಸಾಂಸ್ಕೃತಿಕ ಸಂಜೆ ಮುಕ್ತಾಯಗೊಂಡಿತು

Related Articles

ಇತ್ತೀಚಿನ ಸುದ್ದಿಗಳು