Friday, June 14, 2024

ಸತ್ಯ | ನ್ಯಾಯ |ಧರ್ಮ

ವೈದಿಕರ ವಂಚನೆಗೆ ಮತ್ತೆ ಮತ್ತೆ ಸಿಲುಕಬೇಡಿ

ವೈದಿಕ ವೈರಸ್ಸಿನ ಮಹಾರೋಗದ ಸೂಕ್ಷ್ಮವನ್ನು ನಾವು ನಮ್ಮ ಜನರಿಗೆ ತಿಳಿಸಬೇಕಾಗಿದೆ. ಅದು ಸದ್ದಿಲ್ಲದಂತೆ ಹರಡಿ ಈ ದೇಶದ ತಳ ಸಮುದಾಯಗಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಿದೆ. ಈ ಮಾತುಗಳು ಪುನರಾವರ್ತನೆಯಾದಂತೆ ಕಂಡರೂ ಪರವಾಗಿಲ್ಲ. ಇದನ್ನು ಮತ್ತೆ ಮತ್ತೆ ನಾವು ಹೊಸ ಕಾಲದ ಶೂದ್ರ ತರುಣ ತರುಣಿಯರ ಕಿವಿ ಮುಟ್ಟುವಂತೆ, ಮನ ಮುಟ್ಟುವಂತೆ ಸಾರಿ ಸಾರಿ ಹೇಳಬೇಕಾಗುತ್ತದೆ – ಎಲ್‌ ಎನ್‌ ಮುಕುಂದ್‌ ರಾಜ್

ಅಂತೂ ಚುನಾವಣೆ ಮುಗಿಯಿತು. ಕರ್ನಾಟಕದ  ಮಹಾಜನತೆ ನಾವು ನಿರೀಕ್ಷಿಸಿದಂತೆಯೆ ಫಲಿತಾಂಶ ಕೊಟ್ಟರು. ಹಾಗೆಂದು ನಿರಂಬಳವಾಗಿ ಕೈಕಟ್ಟಿ ಕೂರುವಂತಿಲ್ಲ. 2024ರ ಪಾರ್ಲಿಮೆಂಟ್ ಚುನಾವಣೆಯವರೆಗೂ ನಾವು ಎಲ್ಲ ಕಡೆ ತಿರುಗಾಡಬೇಕು. ಮತ್ತೆ ಮಲಗಬಹುದಾದ ಪ್ರಜ್ಞಾವಂತ ಮತದಾರರನ್ನು ಎಚ್ಚರಿಸುತ್ತಲೇ ಇರಬೇಕು. 

ದೇಶದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ವೈದಿಕ ಪುರೋಹಿತಶಾಹಿ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಬರೆಯುತ್ತಿದ್ದೇನೆ. ನಾನು ಬರೆದ ಪದ್ಯಗಳಲ್ಲಿ, ನಾಟಕಗಳಲ್ಲಿ ಈ ಸಂಗತಿಗಳು ಮೇಲಿಂದ ಮೇಲೆ ಪ್ರಸ್ತಾಪವಾಗುತ್ತಿದ್ದವು. ನಾನು ಮಾತ್ರವಲ್ಲ ಪಂಪನಿಂದ ಮೊದಲ್ಗೊಂಡು ಕುವೆಂಪು ಅವರ ತನಕ, ತೀರ ಈಚೆಗೆ ಬರೆಯುತ್ತಿರುವ ಯುವ ಲೇಖಕರು ಸೇರಿದಂತೆ ಯಾರ ಸಾಹಿತ್ಯವನ್ನಾದರೂ ಗಂಭೀರವಾಗಿ ಓದಿದರೆ ಪುರೋಹಿತಶಾಹಿಗಳ ಉಪಟಳವನ್ನು ಅರ್ಥ ಮಾಡಿಕೊಳ್ಳಬಹುದು. ಬಹುತೇಕ ಕನ್ನಡ ಲೇಖಕರು ಪುರೋಹಿತ ಶಾಹಿಯ ದುಷ್ಟತನದ ಮೇಲೆ ಬೆಳಕು ಚೆಲ್ಲಿದ್ದಾರೆ. 12ನೇ ಶತಮಾನದ ಶಿವಶರಣರಂತು ಅವರ ವಿರುದ್ಧ ಬಹುದೊಡ್ಡ ಪ್ರತಿಭಟನೆ ರೂಪಿಸಿದ್ದರು. ಕಳೆದ 25 ವರ್ಷಗಳಿಂದ ಇದನ್ನೆಲ್ಲ ಸ್ಪಷ್ಟವಾಗಿ ಬಿಡಿಸಿ ಬಿಡಿಸಿ ಹೇಳುತ್ತಿದ್ದೇನೆ. ‌

ಕಳೆದ 70 ವರ್ಷಗಳಿಂದ ಈ ದೇಶದ ದಲಿತ, ಶೂದ್ರ ಹಾಗೂ ಮಹಿಳಾ ಸಮೂಹಗಳು ಸ್ವಾತಂತ್ರ್ಯ ಹಾಗೂ ಸಮಾನತೆ ಪಡೆದು, ನೆಮ್ಮದಿಯ ಬದುಕು ಕಟ್ಟಿಕೊಂಡವು. ಸಾವಿರಾರು ವರ್ಷಗಳಿಂದ ಅನುಭವಿಸಿದ್ದ ನರಕ ಯಾತನೆ ಕೊನೆಗೊಂಡಿತ್ತು. ವಿದ್ಯೆ, ಉದ್ಯೋಗ, ಅಲಂಕಾರಗಳನ್ನು ಶೋಷಿತ ಸಮುದಾಯಗಳಿಗೆ ಸೇರಿದ ಜನ ಪಡೆದರು. ಶ್ರಮ ಜೀವಿಗಳಿಗೆ ಸುಖ, ಸಂತೋಷ, ಸ್ವಾತಂತ್ರ್ಯ ಸಿಕ್ಕರೆ; ಪ್ರಜೆಗಳೆಲ್ಲ ನೆಮ್ಮದಿಯಾಗಿದ್ದರೆ ಮೇಲ್ಜಾತಿಯ ವೈದಿಕರಿಗೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತೆ ಸಂಕಟ ಉಂಟಾಗುತ್ತದೆ. ತಾವು ಮಾತ್ರ ಸುಖವಾಗಿರಬೇಕು. ಇತರರು ಸದಾ ಕಾಲವೂ ಕಡು ಕಷ್ಟದಲ್ಲಿಯೇ ಇರಬೇಕೆಂಬುದೇ ಪುರೋಹಿತ ಶಾಹಿಗಳ ಅಂತರಂಗದ ಆಸೆ. ನೆಮ್ಮದಿಯಾಗಿದ್ದ ದೇಶದ ಪ್ರಜೆಗಳ ನಡುವೆ ದ್ವೇಷ ಭಾವನೆಯನ್ನು ಸೃಷ್ಟಿಸಿದರು. ಕೆಳ ಜಾತಿಗೆ ಸೇರಿದ ತರುಣರ ಎದೆಯಲ್ಲಿ ಹಿಂದುತ್ವದ ಭ್ರಮೆಯನ್ನು ಹುಟ್ಟು ಹಾಕಿದರು. ಮುಸಲ್ಮಾನ ಎನ್ನುವ ಬೆದರು ಬೊಂಬೆಯನ್ನು ಎದುರಿಗೆ ಇಟ್ಟು ಈ ಹುಡುಗರ ತಲೆಕೆಡಿಸಿದರು. ಕಳೆದ ಹಲವಾರು ವರ್ಷಗಳಿಂದ ಸಾವಿರಾರು ಶೂದ್ರ, ಮುಸಲ್ಮಾನ ಹಾಗೂ ದಲಿತ ತರುಣರ ಕಗ್ಗೊಲೆಗಳಾದವು. ದೇಶದಲ್ಲಿ ಕೋಮು ದ್ವೇಷವನ್ನು ಸೃಷ್ಟಿಸುವ ಮೂಲಕ ವೈದಿಕರು ಅಧಿಕಾರದ ಗದ್ದುಗೆಗಳಲ್ಲಿ ವಿರಾಜಮಾನರಾದರು. 

ಬ್ರಾಹ್ಮಣರಿಗೆ ಅಧಿಕಾರ ತಂದು ಕೊಡುವಲ್ಲಿ ತಮ್ಮ ಇಡೀ ಬದುಕನ್ನು ಗಂಧದ ಕೊರಡಿನಂತೆ ತೇದ ಶೂದ್ರ ನಾಯಕರನ್ನು ಬದಿಗೊತ್ತುತ್ತಾ ಹೋದರು. ಕೇಂದ್ರದಲ್ಲಿ ಅಡ್ವಾನಿ, ಉಮಾ ಭಾರತಿ ಮುಂತಾದ ಹಿರಿಯ ನಾಯಕರನ್ನು ಮನೆಯಲ್ಲಿಯೇ ಕೂಡಿ ಹಾಕಿದರು. ಕರ್ನಾಟಕದಲ್ಲಿ ಎ.ಕೆ. ಸುಬ್ಬಯ್ಯ, ಬಿ.ಬಿ. ಶಿವಪ್ಪ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸೋಮಣ್ಣ ಮುಂತಾದ ನಾಯಕರನ್ನು ದಿಗ್ಬಂಧನದಲ್ಲಿ ಇಟ್ಟಂತೆ ಕಟ್ಟಿ ಹಾಕಿದರು. ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಬಲಿಷ್ಠ ವ್ಯಕ್ತಿಗಳಂತೆ ಕಾಣುತ್ತಿರುವ ನರೇಂದ್ರ ಮೋದಿ ಹಾಗೂ ಅಮಿತ್ ಶಾ; ರಾಜ್ಯದಲ್ಲಿ ಶ್ರೀನಿವಾಸಪ್ರಸಾದ್, ಚಲವಾದಿ ನಾರಾಯಣ ಸ್ವಾಮಿ, ಅಶೋಕ್, ಅಶ್ವತ್ಥನಾರಾಯಣ, ಶೋಭಾ ಕರಂದ್ಲಾಜೆ ಮುಂತಾದ ಶೂದ್ರ ಮುಂದಾಳುಗಳ ಕಥೆ ಇದಕ್ಕಿಂತ ಭಿನ್ನವಾಗಿ ಏನು ಇರುವುದಿಲ್ಲ. ಹುಸಿ ದೇಶಪ್ರೇಮ ಹಾಗೂ ತನ್ನದಲ್ಲದ ಧರ್ಮದ ವ್ಯಾಮೋಹಕ್ಕೆ ಬಲಿಯಾದ ನಮ್ಮ ಶೂದ್ರರು ಬ್ರಾಹ್ಮಣರ ಅಧಿಕಾರಕ್ಕೆ ಮೆಟ್ಟಿಲುಗಳಾದರು. ಇದು ವಿಪರ್ಯಾಸ. 

ಮಳೆ ಬೆಳೆ ಸಮೃದ್ಧವಾಗಿ ಆಗಿ, ದೇಶವೆಲ್ಲ ಸುಭಿಕ್ಷವಾಗಿ, ಪ್ರಜೆಗಳು ನೆಮ್ಮದಿಯಾಗಿದ್ದಾಗ ಪುರೋಹಿತರ ನೆಮ್ಮದಿ ಕೆಡುತ್ತದೆ. ಕವಿ ಮಿತ್ರನೊಬ್ಬ ಎಲ್ಲೋ ಪ್ರಸ್ತಾಪಿಸಿದ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿನ ಎರಡು ಪ್ರಸಂಗಗಳನ್ನು ನೆನಪಿಸುತ್ತೇನೆ. ಹದಿನಾಲ್ಕು ವರ್ಷ ವನವಾಸ ಪೂರೈಸಿ, ದುಷ್ಟ ರಾಕ್ಷಸರನ್ನೆಲ್ಲಾ ಸಂಹಾರ ಮಾಡಿ, ಅಯೋಧ್ಯೆಗೆ ಹಿಂದಿರುಗಿದ ಶ್ರೀರಾಮಚಂದ್ರ ದೊರೆಯಾಗಿ ಸಿಂಹಾಸನ ಏರುತ್ತಾನೆ. ಎಷ್ಟೇ ಆಗಲಿ ರಾಮರಾಜ್ಯ. ಮಳೆ ಬೆಳೆ ಎಲ್ಲಾ ಆಗಿ, ಪ್ರಜೆಗಳು ಕ್ಷೇಮದಿಂದ ಇರುತ್ತಾರೆ. ದೇಶದ ಸುಭಿಕ್ಷ ವಾತಾವರಣವನ್ನು ಕಂಡು ಅಯೋಧ್ಯೆಯ ಪುರೋಹಿತರಿಗೆ ಸುಮ್ಮನೇ ಇರಲು ಸಾಧ್ಯವಾಗುವುದಿಲ್ಲ. ಎಲ್ಲರೂ ಸುಖವಾಗಿ ಇದ್ದುಬಿಟ್ಟರೆ ತಮ್ಮ ಹೊಟ್ಟೆಪಾಡು ನಡೆಯುವುದಿಲ್ಲ ಎಂದು ಭಾವಿಸಿದ ಆ ಪುರೋಹಿತ ವರ್ಗ, ರಾಮನ ಬಳಿಗೆ ಧಾವಿಸಿ ಬರುತ್ತದೆ. “ರಾಮಚಂದ್ರ  ಪ್ರಭುಗಳೇ ತಾವು ದೇಶದ ಹಿತಕ್ಕಾಗಿ ಈ ಕೂಡಲೇ ಅಶ್ವಮೇಧ ಯಾಗವನ್ನು ಮಾಡಬೇಕು” ಎಂದು ರಾಜಾ ರಾಮನ ಕಿವಿ ಚುಚ್ಚುತ್ತಾರೆ. ಎಷ್ಟೇ ಆಗಲಿ ಪುರೋಹಿತರು, ಅವರ ಮಾತನ್ನು ತೆಗೆದು ಹಾಕಲು ಸಾಧ್ಯವೇ! ಶ್ರೀರಾಮ ಅವರ ಮಾತಿನಂತೆ ಅಶ್ವಮೇಧ ಯಾಗ ಮಾಡುತ್ತಾನೆ. ಅದರಿಂದ ಆದ ಸಾವು ನೋವುಗಳಿಗೆ ಲೆಕ್ಕವೇ ಇಲ್ಲ. 

ಜೈಮಿನಿ ಭಾರತದಲ್ಲಿ ಉಲ್ಲೇಖಿಸಲಾದ ಮಹಾಭಾರತದಲ್ಲೂ ಇದೇ ಮಾದರಿಯ ಡಿಟೋ ಡಿಟೋ ಕಥೆ ಇದೆ. ಕೌರವ ಪಕ್ಷವೆಲ್ಲ ಸೋತು ಹೋಗಿದೆ. ಧರ್ಮರಾಯನ ಧರ್ಮರಾಜ್ಯ ಪ್ರಾರಂಭವಾಗಿದೆ. ಧರ್ಮರಾಯನ ಆಡಳಿತದಲ್ಲಿ ಎಲ್ಲಾ ಪ್ರಜೆಗಳು ಸುಕ್ಷೇಮವಾಗಿ ಇರುತ್ತಾರೆ. ಮಳೆ ಬೆಳೆಗೂ ಕೊರತೆ ಇರುವುದಿಲ್ಲ. ನ್ಯಾಯ ನೀತಿಯು ಇರುತ್ತದೆ. ಜನರ ನೆಮ್ಮದಿಯ ವಾತಾವರಣವನ್ನು ಕಂಡ ಪುರೋಹಿತರಿಗೆ ತಲ್ಲಣ ಉಂಟಾಗುತ್ತದೆ. ಏನಾದರೂ ಮಾಡಿ ನೆಮ್ಮದಿಯನ್ನು ಕೆಡಿಸಬೇಕು ಎನ್ನುವ ಉದ್ದೇಶದಿಂದ ಪುರೋಹಿತರೆಲ್ಲ ಒಟ್ಟಾಗಿ ಹೋಗಿ ಧರ್ಮರಾಯನಿಗೆ ಅಶ್ವಮೇಧ ಯಾಗ ಮಾಡುವಂತೆ ಉಪದೇಶ ನೀಡುತ್ತಾರೆ. ಅಶ್ವಮೇಧ ಯಜ್ಞ ಮಾಡದಿದ್ದರೆ ಇಡೀ ದೇಶ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಬೆದರಿಕೆ ಒಡ್ಡುತ್ತಾರೆ. ಈ ಮಾತು ಕೇಳಿ ಬೆಚ್ಚಿದ ಧರ್ಮರಾಯ ಕೂಡ ಅಶ್ವಮೇಧ ಮಾಡುತ್ತಾನೆ. ಇದರ ಕೆಟ್ಟ ಪರಿಣಾಮದಿಂದಾಗಿ ಸಾವಿರಾರು ಜನ, ತಮ್ಮ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಈ ಎರಡು ಪ್ರಸಂಗಗಳ ಒಟ್ಟು ಸಾರಾಂಶವೇನೆಂದರೆ ನಾನು ಮೊದಲಿಗೆ ಹೇಳಿದಂತೆ, ದೇಶ ಹಾಗೂ ದೇಶದ ಪ್ರಜೆಗಳು ನೆಮ್ಮದಿಯಿಂದ ಇದ್ದರೆ ಪುರೋಹಿತರ ನಿದ್ದೆ ಕೆಡುತ್ತದೆ. ದೇಶವನ್ನು ಹಾಳು ಮಾಡಲು ಅವರು ಯಾವುದಾದರೂ ಕುತಂತ್ರ ರೂಪಿಸುತ್ತಾರೆ. ಈಗ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಇದೇ ಮಾದರಿಯ ಬ್ರಹ್ಮಪುತ್ರರ ಕುತಂತ್ರದ ರಾಜಕಾರಣ. ಅಧಿಕಾರ ಲಾಲಸೆಯ ತಮ್ಮ ಸ್ವಾರ್ಥದ ಬೇಳೆಯನ್ನು ಬೇಯಿಸಿಕೊಳ್ಳಲು ಇಸ್ಲಾಂ ಧರ್ಮದ ಬೆದರು ಗೊಂಬೆಯನ್ನು ಮುಗ್ಧ ಹಿಂದುಗಳ ಎದುರು ಇಟ್ಟು, ಇಡೀ ದೇಶವನ್ನೇ ನಾಶ ಮಾಡಲು ಹೊರಟಿದ್ದಾರೆ.

ಈ ವೈದಿಕ ವೈರಸ್ಸಿನ ಮಹಾರೋಗದ ಸೂಕ್ಷ್ಮವನ್ನು ನಾವು ನಮ್ಮ ಜನರಿಗೆ ತಿಳಿಸಬೇಕಾಗಿದೆ. ಅದು ಸದ್ದಿಲ್ಲದಂತೆ ಹರಡಿ ಈ ದೇಶದ ತಳ ಸಮುದಾಯಗಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಿದೆ. ಈ ಮಾತುಗಳು ಪುನರಾವರ್ತನೆಯಾದಂತೆ ಕಂಡರೂ ಪರವಾಗಿಲ್ಲ. ಇದನ್ನು ಮತ್ತೆ ಮತ್ತೆ ನಾವು ಹೊಸ ಕಾಲದ ಶೂದ್ರ ತರುಣ ತರುಣಿಯರ ಕಿವಿ ಮುಟ್ಟುವಂತೆ, ಮನ ಮುಟ್ಟುವಂತೆ ಸಾರಿ ಸಾರಿ ಹೇಳಬೇಕಾಗುತ್ತದೆ.

ಎಲ್.ಎನ್. ಮುಕುಂದರಾಜ್

ಹಿರಿಯ ಲೇಖಕರು

ಇದನ್ನೂ ಓದಿ-https://peepalmedia.com/if-bjp-wins-karnataka-will-fall-under-rsss-arms/ ಬಿಜೆಪಿ ಗೆದ್ದರೆ ಆರ್‌ ಎಸ್‌ ಎಸ್‌ ತೆಕ್ಕೆಗೆ

ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಾಶ : ಜೆ ಎನ್‌ ಯುವಿನ ಉದಾಹರಣೆ

Related Articles

ಇತ್ತೀಚಿನ ಸುದ್ದಿಗಳು