Friday, April 26, 2024

ಸತ್ಯ | ನ್ಯಾಯ |ಧರ್ಮ

ಮೇ ಸಾಹಿತ್ಯ ಮೇಳ | ಅಂಬೇಡ್ಕರ್’ ಚಳವಳಿಯ ಬಿಜಾಪುರದ ಚೇತನ ತುಕಾರಾಮ ಚಂಚಲಕರ

ಇದೇ ಮೇ 27 ಮತ್ತು 28ರಂದು ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ 9ನೆಯ ಮೇ ಸಾಹಿತ್ಯ ಮೇಳ ನಡೆಯಲಿದೆ. ʼಭಾರತೀಯ ಪ್ರಜಾತಂತ್ರ- ಸವಾಲು ಮೀರುವ ದಾರಿಗಳುʼ ಎಂಬ ಥೀಮ್‌ ನ ಹಿನ್ನೆಲೆಯಲ್ಲಿ ಚರ್ಚೆ ಸಂವಾದ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟಕರಲ್ಲಿ ಒಬ್ಬರಾಗಿರುವ ತುಕಾರಾಮ ಚಂಚಲಕರ ಅವರ ಬಗ್ಗೆ ಅನಿಲ ಹೊಸಮನಿ ಅವರು ಬರೆದಿದ್ದಾರೆ.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಪ್ರಾರಂಭಿಸಿದ ವಿಮೋಚನಾ ಚಳವಳಿಗೂ ವಿಜಯಪುರ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಡಾ. ಅಂಬೇಡ್ಕರ್ ಅವರ ಯೋಚನೆಗಳನ್ನು ಸಾಕಾರಗೊಳಿಸಲು ಅವಿರತ ಪ್ರಯತ್ನ ಮಾಡಿದ ಭೂಮಿಯಿದು. ಪೋತೆ ಲಕ್ಕಪ್ಪ, ಶಿವಪ್ಪ ಕಾಂಬಳೆ, ಜಿ.ಎಂ. ಗೌರ ಗುರೂಜಿ, ರೇವಪ್ಪ ಕಾಳೆ, ರಾಮಚಂದ್ರ ಔದಿ, ಅಲ್ಲಪ್ಪ ಔದಿ, ಎಲ್.ಎಸ್. ಮೂಕಿಹಾಳ, ಮಲ್ಲಪ್ಪ ಕೋಟ್ಯಾಳ್ಕರ, ಚಂದ್ರಶೇಖರ ಹೊಸಮನಿ, ಲಚ್ಚಪ್ಪ ಸಂದಿಮನಿ, ಎಲ್.ಕೆ, ಚಂಚಲಕರ, ಇನ್ನೂ ನೂರಾರು ಮುಖಂಡರು ಇಲ್ಲಿ ಅಂಬೇಡ್ಕರ್ ಚಳವಳಿಯನ್ನು ಮುನ್ನಡೆಸಿದವರು. ಈ ಸಾಲಿಗೆ ಸೇರುವ ಇನ್ನೊಂದು ಹೆಸರು ತುಕಾರಾಮ ಚಂಚಲಕರ.

ಮೂಲತಃ ಮಹಾರಾಷ್ಟ್ರದ ಜತ್ತ ತಾಲೂಕಿನ ಗುಡ್ಡಾಪುರ ಆಸಂಗಿಯಲ್ಲಿ ಜೂನ್ 15, 1943ರಂದು ಜನಿಸಿದ, ತುಕಾರಾಮ ಚಂಚಲಕರ ಅವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಖಂಡನಾಳ ಗ್ರಾಮದ ಸರಕಾರಿ ಮರಾಠಿ ಶಾಲೆಯಿಂದ ಪ್ರಾರಂಭಿಸಿ, ನಂತರ ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಅಂದಿನ ವಿಜಾಪುರದಲ್ಲಿ ಪೂರೈಸಿದರು. ವಿದ್ಯಾರ್ಥಿ ದೆಸೆಯಲ್ಲಿ ಮೊದಲು ಕಮ್ಯುನಿಸ್ಟ್ ಪ್ರಭಾವಕ್ಕೊಳಗಾದರು. 1971 ರಲ್ಲಿ ಸಿಪಿಐ ಪಕ್ಷದ ಜಿಲ್ಲಾ ಮಂಡಳಿಯ ಸದಸ್ಯರಾಗಿದ್ದರು. ನಿಧಾನವಾಗಿ ಕಮ್ಯುನಿಷ್ಟ ಸಂಘಟನೆಗಳು ವರ್ಗ ಚಳವಳಿಗೆ ಸೀಮಿತಗೊಂಡು ಭಾರತೀಯ ಕಳಂಕವಾದ ಜಾತಿ ಪದ್ಧತಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಅವರನ್ನು ಕಾಡಿ  ಡಾ. ಅಂಬೇಡ್ಕರ್ ಓದು ಅವರನ್ನು ದಲಿತ ಚಳವಳಿಯತ್ತ ನೂಕಿತು. ಅಂಬೇಡ್ಕರ್ ಪ್ರಭಾವಕ್ಕೆ ಒಳಗಾದ ಅವರು ಸಮುದಾಯ ಏಳ್ಗೆಯನ್ನು ಪ್ರಧಾನ ಸಂಗತಿಯನ್ನಾಗಿ ತೆಗೆದುಕೊಂಡು ದಲಿತ ಚಳುವಳಿ ಬದುಕಿಗೆ  ತಮ್ಮನ್ನು ತೆರೆದುಕೊಂಡರು. 

ದೇವದಾಸಿ ಮತ್ತು ವೇಶ್ಯಾವೃತ್ತಿ ನಿರ್ಮೂಲನ ಸಂಘದ ಅಧ್ಯಕ್ಷರಾಗಿ, ಸಿದ್ಧಾರ್ಥ, ಮಿಲಿಂದ ಬಾಬಾಸಾಹೇಬ ಅಸೋಸಿಯೇಷನ್‌ ಅಧ್ಯಕ್ಷರಾಗಿ, ದಲಿತ ಪ್ಯಾಂಥರ್ ಸಂಘಟನೆಯ ಪ್ರಥಮ ರಾಜ್ಯ ಸಂಚಾಲಕರಾಗಿ ದಲಿತರು ಮತ್ತು ಮಹಿಳೆಯರ ಮತ್ತು ದಲಿತರ ಮೇಲಿನ ಅನ್ಯಾಯ-ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಹೋರಾಟಗಳನ್ನು ನಡೆಸತೊಡಗಿದರು. ಈ ಸಮಯದಲ್ಲಿ ಅವರು ಹಲವು ಬಾರಿ ಮೇಲ್ವರ್ಗದವರ ಮತ್ತು ಪ್ರಭುತ್ವದ ಕೆಂಗಣ್ಣಿಗೂ ಗುರಿಯಾಗಿ ಸಂಕಷ್ಟಗಳನ್ನೂ ಎದುರಿಸಬೇಕಾಯಿತು. ಆದರೂ ಧೃತಿಗೆಡದ ಅವರು ತಮ್ಮ ಹೋರಾಟವನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದರು ಎಂಬುದು ಅವರ ಜೀವನದ ಮೈಲುಗಲ್ಲಿನ ಸಂಗತಿಯಾಗಿದೆ. 

ಶಿಕ್ಷಣ, ಸಂಘಟನೆ, ಹೋರಾಟವೆಂಬ ಬಾಬಾಸಾಹೇಬರ ಮೂಲಮಂತ್ರವನ್ನು ಅನುಸರಿಸಿದ ತುಕಾರಾಮ ಚಂಚಲಕರ ಅವರು 1978-79ರಲ್ಲಿ ಡಾ. ಅಂಬೇಡ್ಕರ್ ಎಜ್ಯುಕೇಶನಲ್ ಅಸೋಸಿಯೇಷನ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಆ ಮೂಲಕ ದಲಿತರಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಲು ದೊಡ್ಡ ಮಟ್ಟದ ಶ್ರಮವನ್ನು ಹಾಕಿದರು. 1984ರಲ್ಲಿ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಪ್ರೌಢಶಾಲೆ ಮತ್ತು 1992ರಲ್ಲಿ ಸಿದ್ಧಾರ್ಥ ಪ್ರಾಥಮಿಕ ಶಾಲೆಗಳನ್ನು ತೆರೆದರು. ತೊರವಿ ರಸ್ತೆಯಲ್ಲಿ 5 ಎಕರೆ ಜಾಗದಲ್ಲಿ ನಿಂತಿರುವ ಪ್ರೌಢಶಾಲೆ ಸುಸಜ್ಜಿತವಾಗಿ ನಡೆಯುತ್ತಿದೆ. 1992ರಲ್ಲಿ ಕರ್ನಾಟಕ ಬುದ್ಧ ಶಿಕ್ಷಣ ಸಮಿತಿ ಸ್ಥಾಪಿಸಿ ಅದರ ಅಡಿಯಲ್ಲಿ ನೆಹರು ನಗರ, ಗ್ಯಾಂಗ ಬಾವಡಿಯಲ್ಲಿ ಸಿದ್ಧಾರ್ಥ ಪ್ರಾಥಮಿಕ ಶಾಲೆಯನ್ನು ಆರಂಭಿಸಿದರು. ಅವರ ಶೈಕ್ಷಣಿಕ ಕಳಕಳಿಯು ಅನೇಕ ದಲಿತ ಮಕ್ಕಳ ಜೀವನದ ದಿಕ್ಕನ್ನೇ ಬದಲಿಸಿದೆ. ಅವರ ಮಾರ್ಗದರ್ಶನದಲ್ಲಿ ದಲಿತ ಸಮುದಾಯದ ಯುವಕರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಿದ್ದು ತುಂಬ ಉತ್ತಮ ಸಂಗತಿಯಾಗಿದೆ. 

ಪ್ರಭುತ್ವದ ಜನವಿರೋಧಿ ನೀತಿಗಳ ವಿರುದ್ಧ ಸೆಟೆದು ನಿಂತ ತುಕಾರಾಮ ಚಂಚಲಕರ ಅವರು, ಅನೇಕ ಜನಪರ ಚಳವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. 1981ರಲ್ಲಿ ಭಾರತ ಬಂದ್ ಪ್ರತಿಭಟನೆಯಲ್ಲಿ  ಭಾಗವಹಿಸಿ ಅನೇಕ ಹೋರಾಟಗಳನ್ನು ಕಟ್ಟಿದರು. ಅದರ ಪ್ರತಿಫಲವಾಗಿ ಅವರು, ಜಿ.ಎಸ್, ಬಾಗಲಕೋಟ, ಬಾಬುರೆಡ್ಡಿ, ತುಂಗಳ, ಎಲ್.ಬಿ. ಲಾಯದಗುಂದಿ, ಎನ್.ಕೆ. ಉಪಾಧ್ಯಾಯ, ಭೀಮ ಕಲಾದಗಿ, ಎಲ್.ಕೆ, ಚಂಚಲಕರ, ಚೆನ್ನಬಸಪ್ಪ ಬಿದರಿ, ಮುಂತಾದ ಹೋರಾಟಗಾರರ ಜೊತೆಯಲ್ಲಿ ಸೆರೆವಾಸವನ್ನು ಅನುಭವಿಸಿದ್ದಾರೆ. ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ವಿರುದ್ಧದ ರೈತ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅವರು 80 ಜನ ರೈತರೊಡಗೂಡಿ ವಿಜಾಪುರದಿಂದ ಬೆಂಗಳೂರು ವರೆಗೆ 18 ದಿವಸಗಳ ಕಾಲ್ನಡಿಗೆ ಜಾಥಾ ನಡೆಸಿ, ರಾಜ್ಯದ ಮೂಲೆಮೂಲೆಯಿಂದ ಬಂದಿದ್ದ ಸಾವಿರಾರು ರೈತರು ಹಮ್ಮಿಕೊಂಡಿದ್ದ ವಿಧಾನಸೌಧ ಮುತ್ತಿಗೆಯಲ್ಲಿ ಪಾಲ್ಗೊಂಡಿದ್ದರು.

ಕ್ರಾಂತಿಕಾರಿ, ದಲಿತ ನಾಯಕ ಬಿ. ಬಸವಲಿಂಗಪ್ಪ ಅವರು ಸ್ಥಾಪಿಸಿದ್ದ ‘ಕರ್ನಾಟಕ ಬುದ್ಧ ಧಮ್ಮ ಸಮಿತಿಯ ಜಿಲ್ಲಾ ಅಧ್ಯಕ್ಷರಾಗಿ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಬೌದ್ಧ ಧಮ್ಮ ಪ್ರಚಾರ ಮತ್ತು ಪ್ರಸಾರದ ಹೊಣೆಯನ್ನು ಹೊತ್ತ ತುಕಾರಾಮ ಚಂಚಲಕರ ಅವರು, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜನ್ಮಶತಾಬ್ದಿ ವರ್ಷ 1991ರ ಜೂನ್ 1ರಂದು ಮಹಾಬೋಧಿ ಸೊಸೈಟಿಯ ಪೂಜ್ಯ ಭಿಕ್ಕು ಆನಂದನಂದನ ಅವರ ಸಾನಿಧ್ಯ ಮತ್ತು ಬಿ. ಬಸವಲಿಂಗಪ್ಪ ಅವರ ನೇತೃತ್ವದಲ್ಲಿ ಬೃಹತ್‌ ಸಾಮೂಹಿಕ ಧರ್ಮಾಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಬಾಬಾಸಾಹೇಬರ ಮೊಮ್ಮಗ ಬಾಳಾಸಾಹೇಬ ಪ್ರಕಾಶ್ ಅಂಬೇಡ್ಕರ್ ಪಾಲ್ಗೊಂಡಿದ್ದರು, ವಿಜಾಪುರದ ಡಾ. ಅಂಬೇಡ್ಕರ್ ಸ್ಟೇಡಿಯಂನಲ್ಲಿ ಒಂದು ಲಕ್ಷ ಜನ ದಲಿತರು ಧರ್ಮ ಬದಲಾವಣೆಗೆ ಕಾದಿದ್ದರು. ಆದರೆ ವಿಪರೀತ ಮಳೆಯ ಕಾರಣಕ್ಕೆ ಈ ಕಾರ್ಯಕ್ರಮ ಕಂದಗಲ್ಲ ರಂಗಮಂದಿರಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ 5,000 ಜನ ದಲಿತರು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಈ ಐತಿಹಾಸಿಕ ಘಟನೆಯು ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿತ್ತು.

ಡಾ. ಅಂಬೇಡ್ಕರ್ ಅವರ ದ್ವಿತೀಯ ಪತ್ನಿ ಡಾ. ಸವಿತಾ ಅಂಬೇಡ್ಕರ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ತುಕಾರಾಮ ಚಂಚಲಕರ ಅವರು, ಮೊದಲ ಬಾರಿಗೆ ವಿಜಾಪುರಕ್ಕೆ ಅವರನ್ನು ಕರೆಸಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಿದ್ದಲ್ಲದೆ, ಅವರೊಂದಿಗೆ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ರಾಜ್ಯಗಳಲ್ಲಿ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಅರಿವಿನ ಯಾನ ಕೈಗೊಂಡಿದ್ದರು, ರಾಮದಾಸ ಅಠವಲೆ ನೇತೃತ್ವದ ಆರ್‌.ಪಿ.ಐ. ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಬಿ. ಬಸವಲಿಂಗಪ್ಪ ಸಾರಥ್ಯದಲ್ಲಿ ದಲಿತರಿಗೆ ರಾಜಕೀಯ ಮತ್ತು ಧಾರ್ಮಿಕ ಹಕ್ಕುಗಳನ್ನು ಕೊಡಿಸುವುದಕ್ಕಾಗಿ ನೂರಾರು ಜಾಗೃತಿ ಮತ್ತು ಹೋರಾಟಗಳಲ್ಲಿ ಭಾಗಿಯಾಗಿರುವ ಜಿಲ್ಲೆಯ ಹಿರಿಯ ಅಂಬೇಡ್ಕರವಾದಿ ಅವರು. ದಲಿತ ಚಳವಳಿಯ ಈ ಹಿರಿಯ ಜೀವ ಇಂದಿಗೂ ಹೋರಾಟದ ಚೈತನ್ಯ ಉಳಿಸಿಕೊಂಡಿದೆ.

ಇಂಥ ಚೇತನ ಮೇ 27 ಮತ್ತು 28ರಂದು ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ 9ನೆಯ ಮೇ ಸಾಹಿತ್ಯ ಮೇಳದ ಉದ್ಘಾಟಕರಲ್ಲಿ ಒಬ್ಬರಾಗಿ ಭಾಗಿಯಾಗಲಿದ್ದಾರೆ. ತಮ್ಮ 80 ನೆಯ ವಯಸ್ಸಿನಲ್ಲಿಯೂ ಉತ್ಸಾಹದ ಚಿಲುಮೆಯಾಗಿರುವ ಅವರು ಇಂದಿನ ಪೀಳಿಗೆಗೆ ಪ್ರೇರಣೆಯಾಗಲಿದ್ದಾರೆ.

ಅನಿಲ ಹೊಸಮನಿ

ಇದನ್ನೂ ಓದಿ-ಭಾಗ್ಯಜ್ಯೋತಿ ಹಿರೇಮಠ ಗೆ ವಿಭಾ ಸಾಹಿತ್ಯ ಪ್ರಶಸ್ತಿ

Related Articles

ಇತ್ತೀಚಿನ ಸುದ್ದಿಗಳು