Saturday, April 27, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್‌ ಸರಕಾರದಲ್ಲಿ ಶೆಟ್ಟರ್‌ಗೂ ಒಂದು ಸ್ಥಾನವಿರಲಿ

ಶೆಟ್ಟರ್ ಅವರನ್ನು ಕೈ ಬಿಡದೆ ಮುಂಬರಲಿರುವ ಖಾತೆ ಹಂಚಿಕೆಯಲ್ಲಿ ಶೆಟ್ಟರ್‌ ಅವರಿಗೂ ಒಂದು ಸ್ಥಾನವಿರುವಂತೆ ಕಾಂಗ್ರೆಸ್‌ ನಾಯಕರು ನೋಡಿಕೊಳ್ಳಬೇಕಿದೆ. ಅಥವಾ ಅವರ ಹಿರಿತನ ಮತ್ತು ರಾಜಕೀಯ ಅನುಭವವನ್ನು ಬಳಸಿಕೊಳ್ಳುತ್ತಾ, ಅವರನ್ನು ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿಸಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಪಕ್ಷದ ಭವಿಷ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು – ಶಿವರಾಜ್ ಮೋತಿ, ಯುವ ಬರಹಗಾರ

ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ, ಶೆಟ್ಟರ್ ತಮ್ಮ ಅಚಲ ನಿರ್ಧಾರದಿಂದಲೇ ಗೆದ್ದಿದ್ದಾರೆ. ಅಂದ್ರೆ ಸ್ವಾಭಿಮಾನವೂ ಕೂಡ ಬಹಳ ಮುಖ್ಯ ಮತ್ತು ಅದು ಗೆದ್ದಿದೆ. ಅವರಿಗೆ  ಚುನಾವಣೆಯಲ್ಲಿ ಸೋಲಾಗಿರಬಹುದು. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಆದರೆ  ಶೆಟ್ಟರ್ ಬಂದಿದ್ದರಿಂದ ಕಾಂಗ್ರೆಸ್ಸಿಗೆ ದೊಡ್ಡ ಲಾಭವಾಗಿದೆಎಂದು ಹೇಳಬಹುದು.

ಬಿಜೆಪಿಯು 7ನೇ ಬಾರಿ ಟಿಕೆಟ್ ನೀಡಲಿಲ್ಲವೆಂದು ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಸೇರಿದ ನಂತರವೂ ನನ್ನ ಕಚೇರಿಯಲ್ಲಿರುವ ಪ್ರಧಾನಿ ಮೋದಿ, ಅಮಿತ್ ಶಾ ಫೋಟೋ ತೆಗೆಯಲ್ಲ ಎಂದಾಗ, ಫಲಿತಾಂಶ ಬಂದ ನಂತರ ಒಂದು ವೇಳೆ ಅವರು ಗೆದ್ದರೂ ಆಪರೇಷನ್ ಕಮಲದಲ್ಲಿ ಮರಳಿಗೂಡಿಗೆ ಹೋದರೆ ಗತಿ ಏನು ಎಂಬ ಸಂಗತಿ ಹಲವರನ್ನು ಕಾಡಿದ್ದನ್ನು ಬದಿಗೆ ಸರಿಸಲಾಗದು.

ಜಗದೀಶ್ ಶೆಟ್ಟರ್ ಆವರು ಹಿರಿಯರು. ಅವರು  ಪ್ರಚಾರ ಮಾಡಿದ್ದರಿಂದಲೇ ಬಹುತೇಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಿದ್ದನ್ನೂ ಅಲ್ಲಗಳೆಯುವಂತಿಲ್ಲ. ಆದರೆ ಅವರು ಸೋಲುವುದು ಅವರಿಗೂ ಗೊತ್ತಿತ್ತು. ಅವರು ನಾನೇನಾದರೂ ಸುಮ್ಮನಿದ್ದರೆ ನನ್ನನ್ನು ಮೂಲೆಗುಂಪು ಮಾಡಿದವರಿಗೆ ಖುರ್ಚಿ ಸಿಗುತ್ತದೆ ಎಂಬುದನ್ನು ಅರಿತು ಬಂಡಾಯವೆದ್ದು, ಪಕ್ಷ ಬಿಟ್ಟು ಲಿಂಗಾಯತ ವೋಟಿನ ಪ್ರಮಾಣ ಕಾಂಗ್ರೆಸ್‌ಗೆ ಹೆಚ್ಚಾಗುವುದಕ್ಕೆ  ಶೆಟ್ಟರ್, ಸವದಿ ಬಹುಮುಖ್ಯರು ಎಂಬುದನ್ನು ಯಾರೂ  ಮರೆಯುವಂತಿಲ್ಲ.

ನಾಗಪುರದಿಂದ ಎಷ್ಟೇ ಟೀಂಗಳು ಬಂದರೂ ನನಗೆ ಏನೂ ಮಾಡೋಕೆ ಆಗಲ್ಲ, ನನ್ನ ಗೆಲುವು ನಿಶ್ಚಿತ ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿದಾಗ ಈ ಚುನಾವಣೆಯಲ್ಲಿ ಗೆಲ್ಲುತ್ತಾರೊ-ಸೋಲುತ್ತಾರೋ ಆದರೆ ಜಗದೀಶ್ ಶೆಟ್ಟರ್ ಅವರು ಇಷ್ಟು ಬಹುಮುಖ್ಯ ವ್ಯಕ್ತಿಯಾಗುತ್ತಾರೆಂದು ಯಾರೂ ಸಹ ಊಹಿಸಿರದ ಸಂಗತಿ ಆಗಿತ್ತು.

ಕಾಂಗ್ರೆಸ್ಸಿನಲ್ಲಿ ಶೆಟ್ಟರ್ ಗೆಲ್ಲಬಾರದೆಂದು ಅದಕ್ಕೆ ತಕ್ಕಂತೆ ರಣತಂತ್ರ ರೂಪಿಸಿದ ಬಿಜೆಪಿಯ ಕಾರ್ಯತಂತ್ರಕ್ಕೆ ಕೊನೆಗೂ ಫಲ ದೊರಕಿತು.  ಪ್ರಜ್ಞಾವಂತ ಜನರಿಗೆ ಶೆಟ್ಟರ್ ಸೋತಿದ್ದು ಬೇಸರ ಮತ್ತು ನಿರಾಶೆಯನ್ನು ಮೂಡಿಸಿದರೂ, ಜನರು ತಮ್ಮ ವಿವೇಚನೆಯನ್ನು ಬಳಸಿ ಮತ ಚಲಾಯಿಸಲಿಲ್ಲ ಎನ್ನುವುದು ಕೂಡ ಇಲ್ಲಿ ಗಮನಾರ್ಹ.

ಎಲ್ಲಕ್ಕಿಂತ ಸ್ವಾಭಿಮಾನ ದೊಡ್ಡದು ಎಂದು ಸಾರಿದ ಶೆಟ್ಟರ್ ಅವರನ್ನು ಕೈ ಬಿಡದೇ, ಮುಂಬರಲಿರುವ ಖಾತೆ ಹಂಚಿಕೆಯಲ್ಲಿ ಶೆಟ್ಟರ್‌ ಅವರಿಗೂ ಒಂದು ಸ್ಥಾನವಿರುವಂತೆ ಕಾಂಗ್ರೆಸ್‌ ನಾಯಕರು ನೋಡಿಕೊಳ್ಳಬೇಕಿದೆ. ಅಥವಾ ಅವರ ಹಿರಿತನ ಮತ್ತು ರಾಜಕೀಯ ಅನುಭವವನ್ನು ಬಳಸಿಕೊಳ್ಳುತ್ತಾ, ಅವರನ್ನು ಲೋಕಸಭಾ ಚುನಾವಣೆಗೆ  ಅಭ್ಯರ್ಥಿಯಾಗಿಸಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಪಕ್ಷದ ಭವಿಷ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು.

ಶಿವರಾಜ್ ಮೋತಿ

ಯುವ ಬರಹಗಾರ

ಇದನ್ನು ಓದಿದ್ದೀರಾ –ಶೆಟ್ಟರ ಹಿಂದುತ್ವ ಕಾಂಗ್ರೆಸ್ ಗೆ ಹೊಂದುತ್ತಾ?

Related Articles

ಇತ್ತೀಚಿನ ಸುದ್ದಿಗಳು