ಬೆಂಗಳೂರು: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ-2025ಕ್ಕೆ ಅಂಕಿತ ಹಾಕದಂತೆ (ಒಪ್ಪಿಗೆ ನೀಡದಂತೆ) ಕೋರಿ, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮುಖಂಡರ ನಿಯೋಗವೊಂದು ಸೋಮವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ರಾಜ್ಯಪಾಲರಿಗೆ ಸಲ್ಲಿಸಿದ ಪತ್ರದಲ್ಲಿ, ವಿಎಚ್‌ಪಿ ಕರ್ನಾಟಕ ದಕ್ಷಿಣ ಘಟಕವು ಈ ಮಸೂದೆಯನ್ನು ‘ಅಸಾಂವಿಧಾನಿಕ’ ಎಂದು ಕರೆದಿದೆಯಲ್ಲದೆ, ಅದರಲ್ಲಿರುವ ಕಾನೂನು ಅಸಂಗತತೆಗಳನ್ನು ಎತ್ತಿ ತೋರಿಸಿದೆ. ಈ ಕಾಯಿದೆ ಸಂವಿಧಾನದ ವಿವಿಧ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ.
ಮಸೂದೆಯು ‘ದ್ವೇಷ ಭಾಷಣ’ (ಹೇಟ್ ಸ್ಪೀಚ್) ಎಂದರೆ ಏನು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿಲ್ಲ ಎಂದು ವಿಎಚ್‌ಪಿ ಪತ್ರದಲ್ಲಿ ತಿಳಿಸಿದೆ. ಮಸೂದೆಯಲ್ಲಿನ ಪದದ ವ್ಯಾಖ್ಯಾನದ ಬಗ್ಗೆ ಇರುವ ಅಸ್ಪಷ್ಟತೆಯಿಂದಾಗಿ, ವಿವಿಧ ಏಜೆನ್ಸಿಗಳು ಇದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ತತ್ವಗಳನ್ನೇ ಉಲ್ಲಂಘಿಸುತ್ತದೆ,” ಎಂದು ಪತ್ರದಲ್ಲಿ ತಿಳಿಸಲಾಗಿದ್ದು, ಮಸೂದೆಯ ಜಾರಿಯು ‘ನ್ಯಾಯಸಮ್ಮತ ಭಿನ್ನಾಭಿಪ್ರಾಯ, ಟೀಕೆ ಮತ್ತು ರಾಜಕೀಯ ಭಾಷಣ’ವನ್ನೂ ಅಪರಾಧದ ವ್ಯಾಪ್ತಿಗೆ ತರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
